DK Shivakumar: “ನಾನು ಪಕ್ಷದ ಸಿಪಾಯಿ, ಬ್ಲಾಕ್ ಮೇಲ್ ರಾಜಕಾರಣಿಯಲ್ಲ!”

0
36

DK Shivakumar: ರಾಜ್ಯ ಕಾಂಗ್ರೆಸ್‌ನಲ್ಲಿ ಮುಖ್ಯಮಂತ್ರಿ ನಾಯಕತ್ವ ಬದಲಾವಣೆಯ ಚರ್ಚೆಗಳು ತೀವ್ರಗೊಳ್ಳುತ್ತಿರುವ ಬೆನ್ನಲ್ಲೇ, ದೆಹಲಿಯಲ್ಲಿ ಹೈಕಮಾಂಡ್ ನಾಯಕರನ್ನು ಭೇಟಿಯಾಗಿರುವ ಉಪಮುಖ್ಯಮಂತ್ರಿ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ತಮ್ಮ ವಿರುದ್ಧ ಹಬ್ಬಿರುವ ಎಲ್ಲಾ ವದಂತಿಗಳಿಗೆ ಖಡಕ್ ಉತ್ತರ ನೀಡಿದ್ದಾರೆ.

“ನಾನು ಪಕ್ಷದ ಶಿಸ್ತಿನ ಸಿಪಾಯಿ, ಹಗಲು-ರಾತ್ರಿ ದುಡಿದು ಪಕ್ಷ ಕಟ್ಟಿದ್ದೇನೆ. ಎಂದಿಗೂ ಕಾಂಗ್ರೆಸ್ ಪಕ್ಷಕ್ಕೆ ಬ್ಲಾಕ್ ಮೇಲ್ ಮಾಡುವವನು ನಾನಲ್ಲ,” ಎಂದು ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ.

ರಾಜೀನಾಮೆ ವದಂತಿಗೆ ಬ್ರೇಕ್: ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿರುವ ಬಗ್ಗೆ ದೆಹಲಿಯಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, “ನನ್ನ ಮಾನಸಿಕ, ದೈಹಿಕ ಮತ್ತು ರಾಜಕೀಯ ಆರೋಗ್ಯ ಎಲ್ಲವೂ ಚೆನ್ನಾಗಿದೆ. ನಾನೇಕೆ ರಾಜೀನಾಮೆ ನೀಡಲಿ? ಈಗ ಅಂತಹ ಯಾವುದೇ ಸಂದರ್ಭ ಬಂದಿಲ್ಲ,” ಎಂದು ಹೇಳುವ ಮೂಲಕ ಎಲ್ಲಾ ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ.

“ನನ್ನ ದೆಹಲಿ ಭೇಟಿಗೆ ರಾಜಕೀಯ ಬಣ್ಣ ಬಳಿಯುವುದು ಬೇಡ. ನಾನು ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿಯಾಗುತ್ತಿದ್ದೇನೆ. ಡಿಸೆಂಬರ್ ಒಳಗೆ ರಾಜ್ಯದಲ್ಲಿ ನೂರು ಕಾಂಗ್ರೆಸ್ ಕಚೇರಿಗಳಿಗೆ ಶಂಕುಸ್ಥಾಪನೆ ಮಾಡಬೇಕಿದೆ.

‘ಗಾಂಧಿ ಭಾರತ’ ಎಂಬ ಪುಸ್ತಕದ ಬಿಡುಗಡೆಗೆ ದಿನಾಂಕ ನಿಗದಿಪಡಿಸಬೇಕು. ಕಾಂಗ್ರೆಸ್ ಸಂಸ್ಥಾಪನಾ ದಿನವನ್ನು ಆಚರಿಸಬೇಕು. ಇದೆಲ್ಲವನ್ನೂ ಮಾಡಬೇಕಾದವನು ನಾನೇ ಅಲ್ಲವೇ?” ಎಂದು ಅವರು ತಮ್ಮ ಭೇಟಿಯ ಉದ್ದೇಶವನ್ನು ವಿವರಿಸಿದರು.

ಸಂಪುಟ ಪುನಾರಚನೆ ಮುಖ್ಯಮಂತ್ರಿಗಳಿಗೆ ಬಿಟ್ಟ ವಿಚಾರ: ಸಚಿವ ಸಂಪುಟ ಪುನಾರಚನೆಯ ಬಗ್ಗೆ ಕೇಳಿದ ಪ್ರಶ್ನೆಗೆ ಅತ್ಯಂತ ಜಾಣ್ಮೆಯಿಂದ ಉತ್ತರಿಸಿದ ಅವರು, “ಅದೆಲ್ಲವೂ ಮಾನ್ಯ ಮುಖ್ಯಮಂತ್ರಿಗಳಿಗೆ ಬಿಟ್ಟ ವಿಚಾರ. ಅವರು ಹೈಕಮಾಂಡ್ ಜೊತೆ ಚರ್ಚಿಸುತ್ತಾರೆ. ನನ್ನನ್ನು ಕರೆದರೆ ನಾನು ಹೋಗುತ್ತೇನೆ. ನಾನು ಬಂದಿರುವುದು ಕೇವಲ ಪಕ್ಷದ ಕಚೇರಿಗಳ ಶಂಕುಸ್ಥಾಪನೆಗೆ ದಿನಾಂಕ ಕೇಳಲು,” ಎಂದು ಸ್ಪಷ್ಟಪಡಿಸಿದರು.

ನೂರು ಕಚೇರಿ ನಿರ್ಮಾಣದ ಗುರಿ: ಪಕ್ಷ ಸಂಘಟನೆಯ ಬಗ್ಗೆ ಮಾತನಾಡಿದ ಅವರು, “ನೂರು ಕಚೇರಿಗಳನ್ನು ನಿರ್ಮಿಸುವುದು ನಮ್ಮ ಗುರಿ. ಈಗಾಗಲೇ 75-80 ಕಡೆಗಳಲ್ಲಿ ಜಾಗ ಸಿದ್ಧವಾಗಿದೆ. ಬೆಂಗಳೂರಿನ ಕಚೇರಿಯ ಕಟ್ಟಡ ನಕ್ಷೆ ಅನುಮೋದನೆಗೆ ನಾನೇ 2.30 ಕೋಟಿ ರೂಪಾಯಿ ಪಾವತಿಸುತ್ತಿದ್ದೇನೆ. ಪಕ್ಷ ಎಲ್ಲಿಯವರೆಗೆ ಈ ಸ್ಥಾನದಲ್ಲಿ ಕೆಲಸ ಮಾಡಲು ಹೇಳುತ್ತದೆಯೋ, ಅಲ್ಲಿಯವರೆಗೆ ನಾನು ಶಿಸ್ತಿನ ಸಿಪಾಯಿಯಂತೆ ಕೆಲಸ ಮಾಡುತ್ತೇನೆ,” ಎಂದು ಹೇಳಿದರು.

Previous article6 ತಿಂಗಳು ಚೆನ್ನಾಗಿತ್ತು “ಬಯಸಿದಾಗ ದೂರ, ಹೋದಾಗ ಹತ್ತಿರ”: ನಟಿಯ ಕಣ್ಣೀರ ಕಥೆ!
Next articleಭಾರತೀಯ ವಿದ್ಯಾರ್ಥಿಗಳಿಗೆ ರಷ್ಯಾದಲ್ಲಿ ಉಚಿತ ಶಿಕ್ಷಣ

LEAVE A REPLY

Please enter your comment!
Please enter your name here