“ಶಾಲೆಯ ಅಂಗಳದಲ್ಲಿ ತಾರಾಲಯ” ಯೋಜನೆಗೆ ಸಿಎಂ ಚಾಲನೆ

0
42

ಬೆಂಗಳೂರು: ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ವಿಶ್ವಮಟ್ಟದ ವಿಜ್ಞಾನ ಶಿಕ್ಷಣವನ್ನು ತಲುಪಿಸುವ ಮಹತ್ವಾಕಾಂಕ್ಷಿ “ಶಾಲೆಯ ಅಂಗಳದಲ್ಲಿ ತಾರಾಲಯ” ಡಿಜಿಟಲ್ ಮೊಬೈಲ್ ಪ್ಲಾನೆಟೇರಿಯಂ ಯೋಜನೆಗೆ ಇಂದು ವಿಧಾನಸೌಧದ ಆವರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಸಿರು ನಿಶಾನೆ ತೋರಿಸುವ ಮೂಲಕ ವಿಧ್ಯುಕ್ತವಾಗಿ ಚಾಲನೆ ನೀಡಿದರು.

ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಮುಖ್ಯಮಂತ್ರಿಗಳು, “ಗ್ರಾಮೀಣ ಭಾಗದ ವಿದ್ಯಾರ್ಥಿಗಳಲ್ಲಿ ಖಗೋಳ ವಿಜ್ಞಾನದ ಕೌತುಕವನ್ನು ಬಿತ್ತಿ, ವಿಜ್ಞಾನ ಕಲಿಕೆಯಲ್ಲಿ ಕ್ರಾಂತಿಕಾರಿ ಬದಲಾವಣೆ ತರುವುದು ನಮ್ಮ ಸರ್ಕಾರದ ಪ್ರಮುಖ ಗುರಿಯಾಗಿದೆ. ಈ ಯೋಜನೆ ಈಗಾಗಲೇ 17 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ತಲುಪಿದ್ದು, ಈ ಸಾಧನೆ ಹೆಮ್ಮೆಯ ವಿಷಯ,” ಎಂದು ತಿಳಿಸಿದರು.

ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರಾದ ಎನ್.ಎಸ್. ಬೋಸರಾಜು ಮಾತನಾಡಿ, “ನಮ್ಮ ಸರ್ಕಾರವು ವಿಜ್ಞಾನ ಶಿಕ್ಷಣಕ್ಕೆ ದೃಢವಾಗಿ ಬದ್ಧವಾಗಿದೆ. ಈ ಯೋಜನೆಗೆ ಹೊಸ ಚೈತನ್ಯ ಮತ್ತು ಸುಧಾರಿತ ತಂತ್ರಜ್ಞಾನದ ಸ್ಪರ್ಶ ನೀಡಲಾಗಿದೆ. ಪ್ರಸ್ತುತ ಕೆಲವೇ ಜಿಲ್ಲೆಗಳಿಗೆ ಸೀಮಿತವಾಗಿರುವ ಈ ಮಹತ್ವದ ಸೇವೆಯನ್ನು ಮುಂದಿನ ದಿನಗಳಲ್ಲಿ ರಾಜ್ಯದ ಪ್ರತಿಯೊಂದು ಜಿಲ್ಲೆಯ ಮಕ್ಕಳಿಗೆ ತಲುಪುವಂತೆ ವಿಸ್ತರಿಸಲು ಶೀಘ್ರದಲ್ಲಿ ಕ್ರಮ ಕೈಗೊಳ್ಳಲಾಗುವುದು” ಎಂದು ಘೋಷಿಸಿದರು.

ಕಾರ್ಯಕ್ರಮದಲ್ಲಿ ಐಟಿ & ಬಿಟಿ ಸಚಿವರಾದ ಪ್ರಿಯಾಂಕ ಖರ್ಗೆ, ಇಲಾಖೆ ಕಾರ್ಯದರ್ಶಿಗಳಾದ ಎನ್ ಮಂಜುಳಾ, ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಉತ್ತೇಜನ ಸಂಘದ ವ್ಯವಸ್ಥಾಪಕ ನಿರ್ದೇಶಕರಾದ ಸದಾಶಿವ ಪ್ರಭು ಉಪಸ್ಥಿತರಿದ್ದರು.

ಏನಿದು ಯೋಜನೆ?: ನಗರಗಳಿಗೆ ಸೀಮಿತವಾಗಿದ್ದ ಪ್ಲಾನೆಟೇರಿಯಂ ಅನುಭವದಿಂದ ಗ್ರಾಮೀಣ ವಿದ್ಯಾರ್ಥಿಗಳು ವಂಚಿತರಾಗಬಾರದು ಎಂಬ ಉದ್ದೇಶದಿಂದ ಈ ಯೋಜನೆ ರೂಪಿತವಾಗಿದೆ. ಸುಸಜ್ಜಿತ ವಾಹನಗಳಲ್ಲಿ 5 ಮೀಟರ್ ಗಾತ್ರದ ಗುಂಬಜ್ (Dome), 360-ಡಿಗ್ರಿ ಫಿಶ್‌ ಐ ಲೆನ್ಸ್ ಪ್ರೊಜೆಕ್ಟರ್, ಹವಾ ನಿಯಂತ್ರಣ ವ್ಯವಸ್ಥೆ ಮತ್ತು ಅತ್ಯಾಧುನಿಕ ಧ್ವನಿವರ್ಧಕಗಳನ್ನು ಅಳವಡಿಸಲಾಗಿರುತ್ತದೆ. ಮಕ್ಕಳು ಶಾಲೆಯ ಅಂಗಳದಲ್ಲೇ ಕುಳಿತು ಬ್ರಹ್ಮಾಂಡದ ಅದ್ಭುತಗಳನ್ನು ವೀಕ್ಷಿಸುವ ಅಪರೂಪದ ಅವಕಾಶವನ್ನು ಇದು ಕಲ್ಪಿಸಲಿದೆ.

Previous articleದಾಂಡೇಲಿ – ಅಳ್ನಾವರ ರೈಲು ಆಗ್ರಹಿಸಿ ರೈಲು ತಡೆದು ಪ್ರತಿಭಟನೆ
Next articleಭಾರತದ ಮಾರುಕಟ್ಟೆಗೆ ಲಗ್ಗೆ ಇಟ್ಟ ಮಹೀಂದ್ರಾ XEV 9S: ಬೃಹತ್ ಎಲೆಕ್ಟ್ರಿಕ್ ಎಸ್ಯುವಿಯ ಬೆಲೆ, ವೈಶಿಷ್ಟ್ಯಗಳ ಮಾಹಿತಿ ಇಲ್ಲಿದೆ

LEAVE A REPLY

Please enter your comment!
Please enter your name here