BMTC. ಬಿಬಿಎಂಪಿಯಿಂದ ಗ್ರೇಟರ್ ಬೆಂಗಳೂರು ಪ್ರಾಧಿಕಾರ ರಚನೆಯಾಗಿ 5 ಪಾಲಿಕೆಗಳಾದ ಬೆನ್ನಲ್ಲೇ ಬಿಎಂಟಿಸಿ ಬಸ್ ಸಂಚಾರವನ್ನು ವಿಸ್ತರಿಸಿಸುವ ಬಗ್ಗೆ ಬೇಡಿಕೆ ಬಂದಿದೆ. ಈ ಹಿನ್ನೆಲೆಯಲ್ಲಿ ಈಗಾಗಲೇ ನೆಲಮಂಗಲ, ಹೊಸಕೋಟೆ ಹಾಗೂ ಸೋಲೂರು ಭಾಗಕ್ಕೆ ಬಿಎಂಟಿಸಿ ಬಸ್‌ಗಳು ಸಂಚರಿಸುತ್ತಿದೆ. ಮುಂದಿನ ಒಂದು ತಿಂಗಳಲ್ಲಿ ರಾಮನಗರ, ಕನಕಪುರ, ಮಾಗಡಿ ಸೇರಿದಂತೆ ಮತ್ತಷ್ಟು ಪ್ರದೇಶಗಳಿಗೆ ವಿಸ್ತರಿಸಲಾಗುವುದು ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ತಿಳಿಸಿದ್ದಾರೆ.
ಮಂಡಳಿ ಸಭೆಯಲ್ಲಿ ತೀರ್ಮಾನ: ಬಿಬಿಎಂಪಿ ವ್ಯಾಪ್ತಿಯಲ್ಲಿ ಈ ಹಿಂದೆ 25 ಕಿ.ಮೀ. ಅಂತರದಲ್ಲಿ ಬಿಎಂಟಿಸಿ ಬಸ್‌ಗಳು ಸಂಚರಿಸುತ್ತಿದ್ದವು. ಇದೀಗ ಗ್ರೇಟರ್ ಬೆಂಗಳೂರು ಬಳಿಕ ವ್ಯಾಪ್ತಿ ವಿಸ್ತರಿಸಲ್ಪಟ್ಟಿದೆ. ರಾಮನಗರ, ಕನಕಪುರ, ಮಾಗಡಿ, ಚನ್ನಪಟ್ಟಣ, ದಾಬಸ್ ಪೇಟೆ, ದೇವನಹಳ್ಳಿ, ಮೊದಲಾದ ಪ್ರದೇಶಗಳಿಗೆ ಬಿಎಂಟಿಸಿ ಬಸ್ ಓಡಿಸುವಂತೆ ಬೇಡಿಕೆ ಕೇಳಿ ಬರುತ್ತಿದೆ.
ಈ ಬಗ್ಗೆ ಸಾರಿಗೆ ಮಂಡಳಿ ಸಭೆಯಲ್ಲಿ ಚರ್ಚಿಸಿ ಬಸ್ ಓಡಿಸಲು ತೀರ್ಮಾನಿಸಲಾಗಿದೆ. ಶೀಘ್ರವೇ ನೋಟಿಫಿಕೇಶನ್ ಹೊರಬೀಳಲಿದೆ. ನಂತರ ಆಕ್ಷೇಪಣೆ ಆಹ್ವಾನಿಸಿ ಪರಿಶೀಲಿಸಿದ ಬಳಿಕ ಇನ್ನು ಒಂದು ತಿಂಗಳೊಳಗೆ ಈ ಎಲ್ಲ ಭಾಗಕ್ಕೂ ಬಿಎಂಟಿಸಿ ಬಸ್‌ಗಳು ಸಂಚರಿಸಲಿವೆ ಎಂದು ಸಚಿವರು ಹೇಳಿದರು.
5 ಲಕ್ಷ ಹೆಚ್ಚುವರಿ ಪ್ರಯಾಣಿಕರು: ಪ್ರಸ್ತುತ ಬಿಎಂಟಿಸಿಯಲ್ಲಿ ನಿತ್ಯವೂ 45 ಲಕ್ಷ ಜನರು ಪ್ರಯಾಣಿಸುತ್ತಿದ್ದಾರೆ. 25 ರಿಂದ 40 ಕಿಮೀ ವಿಸ್ತರಣೆಯಾದ ಬಳಿಕ ಈ ಸಂಖ್ಯೆ 5 ರಿಂದ 8 ಲಕ್ಷ ಹೆಚ್ಚಾಗಬಹುದು ಎಂಬ ನಿರೀಕ್ಷೆ ಇದೆ. ಸದ್ಯಕ್ಕೆ ಬಿಎಂಟಿಸಿಯಲ್ಲಿ ಬಸ್‌ಗಳ ಕೊರತೆಯಿಲ್ಲ ಕೇಂದ್ರದಿಂದ 4500 ಎಲೆಕ್ಟ್ರಿಕ್ ಬಸ್‌ಗಳನ್ನು ಒದಗಿಸಲಾಗುತ್ತಿದೆ. ಇದಕ್ಕೆ ಟಾಟಾ, ಅಶೋಕ್ ಲೈಲೆಂಡ್ ಅಥವಾ ನೆಕ್ಸಸ್ ಬಿಡ್ ಹಾಕಬಹುದು. ಈ ಬಸ್‌ಗಳ ಚಾಲಕರು ಮತ್ತು ನಿರ್ವಹಣೆ ಖಾಸಗಿಯವರದ್ದಾಗಿರುತ್ತದೆ. ಕಂಡಕ್ಟರ್ ಮಾತ್ರ ಬಿಎಂಟಿಸಿಯವರಾಗಿರುತ್ತಾರೆ.
ಒಂದು ಕಿಮೀಗೆ ಇಷ್ಟು ಹಣ ಎಂದು ಬಾಡಿಗೆ ಆಧಾರದಲ್ಲಿ ಬಸ್ ಒಡಲಿವೆ ಎಂದರು. ಬಿಎಂಟಿಸಿಯಲ್ಲಿ ಚಾಲಕರ ಕೊರತೆಯೂ ಇಲ್ಲ. ಇತ್ತೀಚೆಗಷ್ಟೆ 2500 ಚಾಲಕರ ನೇಮಕ ಮಾಡಿಕೊಳ್ಳಲಾಗಿದೆ. ಅಗತ್ಯವಿದ್ದರೆ ಇನ್ನಷ್ಟು ಚಾಲಕರನ್ನು ನೇಮಕ ಮಾಡಿಕೊಳ್ಳುತ್ತೇವೆ ಎಂದು ಸಚಿವರು ಹೇಳಿದ್ದಾರೆ.
ಮೆಟ್ರೋ ಲಿಂಕ್ ಬಸ್‌ಗಳನ್ನು ಅವರ ಬೇಡಿಕೆಯಂತೆ ಒದಗಿಸುತ್ತಿದ್ದೇವೆ ಎಂದ ಸಚಿವರು, ರಸ್ತೆಗುಂಡಿಗಳಿಂದ ನಮ್ಮ ಬಸ್‌ಗಳ ಸಂಚಾರಕ್ಕೂ ತೊಂದರೆಯಾಗುತ್ತಿದೆ. ಈ ಬಗ್ಗೆ ಪಾಲಿಕೆ ಕೂಡಲೇ ಗಮನಹರಿಸಿ ದುರಸ್ತಿಗೆ ಮುಂದಾಗುವಂತೆ ಸಚಿವವರು ಸೂಚಿಸಿದರು.