Home ನಮ್ಮ ಜಿಲ್ಲೆ ಬೆಂಗಳೂರು ಕೋರ್ಟ್ ಆದೇಶಕ್ಕೂ ಕಿಮ್ಮತ್ತು ನೀಡದ ಮದರಸಾ ಸಿಬ್ಬಂದಿ, ಕೊಲೆ ಬೆದರಿಕೆ!

ಕೋರ್ಟ್ ಆದೇಶಕ್ಕೂ ಕಿಮ್ಮತ್ತು ನೀಡದ ಮದರಸಾ ಸಿಬ್ಬಂದಿ, ಕೊಲೆ ಬೆದರಿಕೆ!

0

ಬೆಂಗಳೂರು: ನ್ಯಾಯಾಲಯದ ಆದೇಶವಿದ್ದರೂ ಅದನ್ನು ಧಿಕ್ಕರಿಸಿ, ತಮ್ಮ ಪಿತ್ರಾರ್ಜಿತ ಆಸ್ತಿಯನ್ನು ಸ್ವಚ್ಛಗೊಳಿಸಲು ಹೋದ ದಂಪತಿ ಹಾಗೂ ಮಹಿಳಾ ಕಾರ್ಮಿಕರ ಮೇಲೆ ಶಾಲಾ ಸಿಬ್ಬಂದಿ ಹಲ್ಲೆ ನಡೆಸಿ, ಕೊಲೆ ಬೆದರಿಕೆ ಹಾಕಿರುವ ಗಂಭೀರ ಘಟನೆ ಬೆಂಗಳೂರಿನ ಥಣಿಸಂದ್ರದಲ್ಲಿ ನಡೆದಿದೆ.

ಈ ಸಂಬಂಧ ಸಂತ್ರಸ್ತ ಕುಟುಂಬವು ಕೊತ್ತನೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ತಮ್ಮ ಜೀವ ಮತ್ತು ಆಸ್ತಿಗೆ ರಕ್ಷಣೆ ನೀಡುವಂತೆ ಮನವಿ ಮಾಡಿದೆ.

ಘಟನೆಯ ವಿವರ: ಹೊಮ್ಮೆದೇವನಹಳ್ಳಿಯ ನಿವಾಸಿ ಮಶಿಹಾ ಅಹಮದ್ ಎಂಬುವವರಿಗೆ ಥಣಿಸಂದ್ರದಲ್ಲಿ ಪಿತ್ರಾರ್ಜಿತ ಆಸ್ತಿ ಇದೆ. ಈ ಜಾಗದಲ್ಲಿ ಸಾಮರ್ ಇಂಟರ್‌ನ್ಯಾಷನಲ್ ಶಾಲೆ ಮತ್ತು ಮದರಸಾವೊಂದು ಕಾರ್ಯನಿರ್ವಹಿಸುತ್ತಿದ್ದು, ಆಸ್ತಿಯ ಮಾಲೀಕತ್ವದ ಬಗ್ಗೆ ವಿವಾದವಿದೆ.

ಆದರೆ, ನ್ಯಾಯಾಲಯವು (ಕೇಸ್ ನಂ: 25479/2023) ಅಹಮದ್ ಅವರಿಗೆ ತಮ್ಮ ಜಾಗವನ್ನು ಪ್ರವೇಶಿಸಲು ಮತ್ತು ಸ್ವಚ್ಛವಾಗಿಟ್ಟುಕೊಳ್ಳಲು ಯಾವುದೇ ಅಡ್ಡಿಪಡಿಸಬಾರದು ಎಂದು ಸ್ಪಷ್ಟ ಆದೇಶ ನೀಡಿದೆ.

ಈ ಆದೇಶದ ಅನ್ವಯ, ಸೋಮವಾರ ಬೆಳಿಗ್ಗೆ ಮಶಿಹಾ ಅಹಮದ್, ತಮ್ಮ ಪತ್ನಿ ಜುನೇರಾ ಮತ್ತು ಕೆಲವು ಮಹಿಳಾ ಕಾರ್ಮಿಕರೊಂದಿಗೆ ಜಾಗವನ್ನು ಸ್ವಚ್ಛಗೊಳಿಸಲು ತೆರಳಿದ್ದಾರೆ. ಈ ಸಂದರ್ಭದಲ್ಲಿ, ಶಾಲೆಯ ಪ್ರಾಂಶುಪಾಲ ಖಾಲಿದ್ ಮುಷರಫ್, ಇತರ ಸಿಬ್ಬಂದಿ ಮತ್ತು ಮದರಸಾದ ಹುಡುಗರು ಏಕಾಏಕಿ ಸ್ಥಳಕ್ಕೆ ಬಂದು ದಂಪತಿಯನ್ನು ತಳ್ಳಿ, ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ.

ಅಷ್ಟೇ ಅಲ್ಲದೆ, ಅವರ ಅಡುಗೆ ಪಾತ್ರೆಗಳನ್ನು ಹೊರಗೆಸೆದು, “ಇಲ್ಲಿಗೆ ಬಂದರೆ ಕೊಲೆ ಮಾಡುತ್ತೇವೆ” ಎಂದು ಜೀವ ಬೆದರಿಕೆ ಹಾಕಿದ್ದಾರೆ ಎಂದು ಅಹಮದ್ ತಮ್ಮ ದೂರಿನಲ್ಲಿ ಆರೋಪಿಸಿದ್ದಾರೆ.

ಆರು ತಿಂಗಳಿನಿಂದ ನಿರಂತರ ಕಿರುಕುಳ: ಇದೇ ರೀತಿಯ ಕಿರುಕುಳ ಕಳೆದ ಆರು ತಿಂಗಳುಗಳಿಂದ ನಡೆಯುತ್ತಿದೆ ಎಂದು ಸಂತ್ರಸ್ತರು ಆರೋಪಿಸಿದ್ದಾರೆ. ಈ ಹಿಂದೆ 2024ರ ಜೂನ್ 14ರಂದು ಸಹ ಇದೇ ವಿಷಯವಾಗಿ ಕೊತ್ತನೂರು ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿತ್ತು.

ಆದರೂ, ಶಾಲಾ ಆಡಳಿತ ಮಂಡಳಿಯ ದೌರ್ಜನ್ಯ ನಿಂತಿಲ್ಲ. ಘಟನೆಯ ಸಂದರ್ಭದಲ್ಲಿ ಸ್ಥಳಕ್ಕೆ ಪೊಲೀಸರು ಆಗಮಿಸಿ, ಮಹಿಳಾ ಕಾರ್ಮಿಕರನ್ನು ರಕ್ಷಿಸಿದ್ದಾರೆ ಎಂದು ತಿಳಿದುಬಂದಿದೆ.

ಶಾಲೆಯವರು ನ್ಯಾಯಾಲಯದಲ್ಲಿ ತಮ್ಮ ಮಾಲೀಕತ್ವವನ್ನು ಸಾಬೀತುಪಡಿಸಲು ‘ಡಿಕ್ಲರೇಷನ್ ಸೂಟ್’ ದಾಖಲಿಸಿದ್ದರೂ, ಈವರೆಗೆ ಅವರ ಪರವಾಗಿ ಯಾವುದೇ ಆದೇಶ ಬಂದಿಲ್ಲ. ಹೀಗಿದ್ದರೂ, ಕಾನೂನನ್ನು ಕೈಗೆತ್ತಿಕೊಂಡು ದೈಹಿಕ ಹಲ್ಲೆ ಮತ್ತು ಬೆದರಿಕೆ ಹಾಕುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ಸದ್ಯ ಕೊತ್ತನೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

NO COMMENTS

LEAVE A REPLY

Please enter your comment!
Please enter your name here

Exit mobile version