ಬೆಂಗಳೂರಿನ ಹೃದಯಭಾಗಕ್ಕೆ 58 ಕೋಟಿಯ ಮೇಜರ್ ಸರ್ಜರಿ: ಈ 5 ಏರಿಯಾಗಳ ಚಿತ್ರಣ ಬದಲು!

0
20

ಬೆಂಗಳೂರು: ರಾಜಧಾನಿಯ ಅತ್ಯಂತ ಜನನಿಬಿಡ ಮತ್ತು ವಾಣಿಜ್ಯ ಚಟುವಟಿಕೆಗಳ ತಾಣವಾದ ಚಿಕ್ಕಪೇಟೆ ಹಾಗೂ ಗಾಂಧಿನಗರದ ಚಿತ್ರಣವನ್ನು ಸಂಪೂರ್ಣವಾಗಿ ಬದಲಿಸಲು ರಾಜ್ಯ ಸರ್ಕಾರ ಬೃಹತ್ ಯೋಜನೆಗೆ ಅನುಮೋದನೆ ನೀಡಿದೆ.

ಒಟ್ಟು ರೂ. 58.44 ಕೋಟಿ ವೆಚ್ಚದಲ್ಲಿ ಈ ಪ್ರದೇಶದ ಪ್ರಮುಖ ರಸ್ತೆಗಳಿಗೆ ವೈಟ್ ಟಾಪಿಂಗ್ ಅಳವಡಿಸಿ, ಸಮಗ್ರವಾಗಿ ಅಭಿವೃದ್ಧಿಪಡಿಸಲು ಯೋಜನೆ ರೂಪಿಸಲಾಗಿದೆ.

ಯಾಕಾಗಿ ಈ ಯೋಜನೆ ಅನಿವಾರ್ಯ?: ಗಾಂಧಿನಗರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಚಿಕ್ಕಪೇಟೆ, ಅವೆನ್ಯೂ ರಸ್ತೆ, ಕಾಟನ್‌ಪೇಟೆಯಂತಹ ಪ್ರದೇಶಗಳು ಬೆಂಗಳೂರಿನ ವ್ಯಾಪಾರ-ವಹಿವಾಟಿನ ಕೇಂದ್ರಬಿಂದು. ಇಕ್ಕಟ್ಟಾದ ರಸ್ತೆಗಳು, ಹಗಲು-ರಾತ್ರಿ ಎನ್ನದೆ ನಿರಂತರ ವಾಹನ ದಟ್ಟಣೆ ಹಾಗೂ ಜನಸಂದಣಿ ಇಲ್ಲಿನ ಪ್ರಮುಖ ಸಮಸ್ಯೆಯಾಗಿದೆ.

ಇದಕ್ಕೆ ಪೂರಕವಾಗಿ, ನಗರದ ಮುಖ್ಯ ರೈಲು ನಿಲ್ದಾಣ, ಮೆಜೆಸ್ಟಿಕ್ ಬಸ್ ನಿಲ್ದಾಣ ಮತ್ತು ಮೆಟ್ರೋ ನಿಲ್ದಾಣಗಳು ಸಮೀಪದಲ್ಲಿಯೇ ಇರುವುದರಿಂದ ವಾಹನಗಳ ಒತ್ತಡ ಮತ್ತಷ್ಟು ಹೆಚ್ಚಾಗಿದೆ. ಈ ಎಲ್ಲಾ ಕಾರಣಗಳಿಂದಾಗಿ ಇಲ್ಲಿನ ರಸ್ತೆಗಳ ಅಭಿವೃದ್ಧಿ ಅತ್ಯಂತ ಅನಿವಾರ್ಯವಾಗಿತ್ತು.

ಯೋಜನೆಯ ಸ್ವರೂಪವೇನು?: ಈ ಯೋಜನೆಯಡಿಯಲ್ಲಿ ಒಟ್ಟು 5.57 ಕಿಲೋಮೀಟರ್ ಉದ್ದದ ರಸ್ತೆಗಳನ್ನು ಅಭಿವೃದ್ಧಿಪಡಿಸಲಾಗುವುದು. ಇದು ಕೇವಲ ರಸ್ತೆಗೆ ಹೊಸ ಸ್ತರವನ್ನು ಹಾಕುವ ಕಾಮಗಾರಿಯಲ್ಲ, ಬದಲಾಗಿ ಇದೊಂದು ಸಮಗ್ರ ಅಭಿವೃದ್ಧಿ ಯೋಜನೆಯಾಗಿದೆ.

ವೈಟ್ ಟಾಪಿಂಗ್: ದೀರ್ಘಕಾಲ ಬಾಳಿಕೆ ಬರುವ ಮತ್ತು ಗುಂಡಿಮುಕ್ತ ಸಂಚಾರಕ್ಕೆ ಅನುಕೂಲವಾಗುವ ಕಾಂಕ್ರೀಟ್ ರಸ್ತೆ (ವೈಟ್ ಟಾಪಿಂಗ್) ನಿರ್ಮಿಸಲಾಗುತ್ತದೆ.

ಯುಟಿಲಿಟಿ ಡಕ್ಟ್: ರಸ್ತೆಯ ಎರಡೂ ಬದಿಗಳಲ್ಲಿ ಯುಟಿಲಿಟಿ ಡಕ್ಟ್‌ಗಳನ್ನು (ಕೇಬಲ್‌ ಅಳವಡಿಸಲು ಪ್ರತ್ತೇಕ ಮಾರ್ಗ) ನಿರ್ಮಿಸಲಾಗುತ್ತದೆ. ಇದರಿಂದ ಭವಿಷ್ಯದಲ್ಲಿ ಓಎಫ್‌ಸಿ ಕೇಬಲ್, ನೀರಿನ ಪೈಪ್‌ಲೈನ್ ಅಥವಾ ಇತರೆ ಕಾಮಗಾರಿಗಳಿಗೆ ಪದೇ ಪದೇ ರಸ್ತೆ ಅಗೆಯುವುದನ್ನು ಸಂಪೂರ್ಣವಾಗಿ ತಪ್ಪಿಸಬಹುದು.

ಚರಂಡಿ ವ್ಯವಸ್ಥೆ: ರಸ್ತೆಯ ಮಧ್ಯಭಾಗದಲ್ಲಿ ಮಳೆ ನೀರು ಮತ್ತು ಒಳಚರಂಡಿಗಾಗಿ ಹೊಸ ಪೈಪ್‌ಲೈನ್‌ಗಳನ್ನು ಅಳವಡಿಸಲಾಗುತ್ತದೆ.

ಯಾವೆಲ್ಲಾ ಪ್ರದೇಶಗಳಿಗೆ ಲಾಭ?: ಈ ಯೋಜನೆಯಿಂದ ಮುಖ್ಯವಾಗಿ ಚಿಕ್ಕಪೇಟೆ, ಗಾಂಧಿನಗರ, ಅವೆನ್ಯೂ ರಸ್ತೆ, ಕಾಟನ್‌ಪೇಟೆ ರಸ್ತೆ ಮತ್ತು ರೇಸ್ ಕೋರ್ಸ್ ರಸ್ತೆ ಸೇರಿದಂತೆ ಸುತ್ತಮುತ್ತಲಿನ ಹಲವು ಪ್ರದೇಶಗಳಿಗೆ ನೇರ ಲಾಭವಾಗಲಿದೆ.

ಸುಗಮ ಸಂಚಾರ ವ್ಯವಸ್ಥೆ ಕಲ್ಪಿಸುವುದರ ಜೊತೆಗೆ, ವ್ಯವಸ್ಥಿತ ಟ್ರಾಫಿಕ್ ನಿರ್ವಹಣಾ ನಿಯಮಗಳನ್ನು ಅಳವಡಿಸಲಾಗುವುದು. ಇದರಿಂದ ವ್ಯಾಪಾರಿಗಳು, ಗ್ರಾಹಕರು ಮತ್ತು ಸಾಮಾನ್ಯ ಪ್ರಯಾಣಿಕರ ಸಮಯ ಉಳಿತಾಯವಾಗಲಿದ್ದು, ಬೆಂಗಳೂರಿನ ಹೃದಯಭಾಗದ ಸಂಚಾರ ದಟ್ಟಣೆಗೆ ಶಾಶ್ವತ ಪರಿಹಾರ ಸಿಗುವ ನಿರೀಕ್ಷೆಯಿದೆ.

Previous articleಗೃಹಲಕ್ಷ್ಮಿ 2 ಸಾವಿರ ಜೊತೆಗೆ ಸ್ವ ಉದ್ಯೋಗಕ್ಕೆ ದಾರಿ! ಇಲ್ಲಿದೆ ಮಾಹಿತಿ
Next articleಚಿತ್ರದುರ್ಗ: ಅಜ್ಜಿಗೆ ಫೋನ್ ಮಾಡಿದ್ದಕ್ಕೆ ವಿದ್ಯಾರ್ಥಿಗೆ ಒದೆ, ವಿಡಿಯೋ ವೈರಲ್!

LEAVE A REPLY

Please enter your comment!
Please enter your name here