ಬೆಂಗಳೂರು: 50 ಪ್ರಯಾಣಿಕರಿದ್ದ ಬಿಎಂಟಿಸಿ ಬಸ್‌ಗೆ ಬೆಂಕಿ

0
25

ಬೆಂಗಳೂರು: ರಾಜಧಾನಿ ಬೆಂಗಳೂರಿನ ಎಚ್‌ಎಎಲ್ ಬಳಿ ಸೋಮವಾರ ಬೆಳಗ್ಗೆ ಕೆಂಪೇಗೌಡ ಬಸ್ ನಿಲ್ದಾಣದಿಂದ ಕಾಡುಗೋಡಿಗೆ ತೆರಳುತ್ತಿದ್ದ ಬಿಎಂಟಿಸಿ ಬಸ್‌ನಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡು ಸಂಪೂರ್ಣವಾಗಿ ಸುಟ್ಟು ಕರಕಲಾಗಿದೆ. ಆದರೆ, ಬಸ್ ಚಾಲಕ ಮತ್ತು ನಿರ್ವಾಹಕರ ಸಮಯಪ್ರಜ್ಞೆಯಿಂದ ಬಸ್‌ನಲ್ಲಿದ್ದ ಸುಮಾರು 50 ಪ್ರಯಾಣಿಕರು ಯಾವುದೇ ಪ್ರಾಣಾಪಾಯವಿಲ್ಲದೆ ಪಾರಾಗಿದ್ದಾರೆ.

ಈ ಘಟನೆ ಬಿಎಂಟಿಸಿ ಬಸ್‌ಗಳ ನಿರ್ವಹಣೆ ಮತ್ತು ಸುರಕ್ಷತೆಯ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಬೆಳಗ್ಗೆ 5:10 ರ ಸುಮಾರಿಗೆ ಘಟನೆ ನಡೆದಿದೆ. ಬಿಎಸ್‌ 4 ಮಾದರಿಯ ಸುಮಾರು 3 ರಿಂದ 4 ವರ್ಷ ಹಳೆಯ ಬಸ್ ಇದಾಗಿದೆ.

ಎಚ್‌.ಎ.ಎಲ್ ಬಸ್ ನಿಲ್ದಾಣದ ಬಳಿ ತಲುಪುತ್ತಿದ್ದಂತೆ ಎಂಜಿನ್ ವಿಭಾಗದಿಂದ ಹೊಗೆ ಕಾಣಿಸಿಕೊಂಡಿದೆ. ತಕ್ಷಣವೇ ಅಪಾಯವನ್ನು ಅರಿತ ಚಾಲಕ ಜಯಚಂದ್ರ ಮತ್ತು ನಿರ್ವಾಹಕ ಚೌಡಪ್ಪ ಅವರು ಬಸ್ ಅನ್ನು ನಿಲ್ಲಿಸಿ, ಕ್ಷಣಮಾತ್ರದಲ್ಲಿ ಎಲ್ಲ ಪ್ರಯಾಣಿಕರನ್ನು ಕೆಳಗಿಳಿಯಲು ಸೂಚಿಸಿದ್ದಾರೆ. ಪ್ರಯಾಣಿಕರು ಸುರಕ್ಷಿತವಾಗಿ ಕೆಳಗಿಳಿಯುತ್ತಿದ್ದಂತೆ ಇಡೀ ಬಸ್ಸಿಗೆ ಬೆಂಕಿ ವ್ಯಾಪಿಸಿದೆ.

ಚಾಲಕ, ನಿರ್ವಾಹಕರ ಸಮಯಪ್ರಜ್ಞೆ: ಚಾಲಕ ಮತ್ತು ನಿರ್ವಾಹಕರ ಸಮಯಪ್ರಜ್ಞೆಯಿಂದಾಗಿ ಬಸ್‌ನಲ್ಲಿದ್ದ ಎಲ್ಲ 50 ಪ್ರಯಾಣಿಕರು ಸುರಕ್ಷಿತವಾಗಿ ಪಾರಾಗಿದ್ದಾರೆ. ಯಾವುದೇ ಗಾಯಗಳ ಬಗ್ಗೆ ವರದಿಯಾಗಿಲ್ಲ. ಇದು ನಿಜಕ್ಕೂ ಅದೃಷ್ಟದ ಸಂಗತಿ ಎಂದು ಸ್ಥಳೀಯರು ಅಭಿಪ್ರಾಯಪಟ್ಟಿದ್ದಾರೆ. ಬಸ್ ಸಿಬ್ಬಂದಿ ತಕ್ಷಣವೇ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದು, ಅಗ್ನಿಶಾಮಕ ಸಿಬ್ಬಂದಿ ಕೂಡಲೇ ಸ್ಥಳಕ್ಕೆ ಧಾವಿಸಿದ್ದಾರೆ. ಆದರೆ, ಅಗ್ನಿಶಾಮಕ ದಳದವರು ಬೆಂಕಿ ನಂದಿಸುವಷ್ಟರಲ್ಲಿ ಬಸ್ ಸಂಪೂರ್ಣವಾಗಿ ಸುಟ್ಟು ಕರಕಲಾಗಿತ್ತು.

ಘಟನೆಯ ಬಗ್ಗೆ ಬಿಎಂಟಿಸಿ ಮುಖ್ಯಸ್ಥ ಮೆಕ್ಯಾನಿಕಲ್ ಇಂಜಿನಿಯರ್ ನೇತೃತ್ವದ ತಂಡ ಸ್ಥಳಕ್ಕೆ ಭೇಟಿ ನೀಡಿದ್ದು, ಬೆಂಕಿ ಕಾಣಿಸಿಕೊಳ್ಳಲು ನಿಖರ ಕಾರಣವೇನು? ಎನ್ನುವುದನ್ನು ಪತ್ತೆಹಚ್ಚಲು ತನಿಖೆ ಆರಂಭಿಸಿದೆ. ಪ್ರಾಥಮಿಕ ವರದಿಗಳ ಪ್ರಕಾರ, ಎಂಜಿನ್ ವಿಭಾಗದಲ್ಲಿ ಬೆಂಕಿ ಪ್ರಾರಂಭವಾಗಿದೆ ಎಂದು ಹೇಳಲಾಗುತ್ತಿದೆ.

ಬಿಎಂಟಿಸಿ ನಿರ್ವಹಣೆಯ ಬಗ್ಗೆ ಅನುಮಾನಗಳು: ಈ ಘಟನೆಯು ಬಿಎಂಟಿಸಿ ಬಸ್‌ಗಳ ನಿರ್ವಹಣೆ ಮತ್ತು ಸುರಕ್ಷತಾ ಮಾನದಂಡಗಳ ಬಗ್ಗೆ ಸಾರ್ವಜನಿಕರಲ್ಲಿ ತೀವ್ರ ಆತಂಕವನ್ನು ಮೂಡಿಸಿದೆ. ಎರಡು ವರ್ಷಗಳ ಹಿಂದೆ 860 ಬಿಎಸ್‌ 4 ಬಸ್‌ಗಳನ್ನು ಸೇರ್ಪಡೆಗೊಳಿಸಲಾಗಿದ್ದರೂ, ಇಂತಹ ಘಟನೆಗಳು ಮರುಕಳಿಸುವುದು ಬಸ್‌ಗಳ ನಿಯಮಿತ ತಪಾಸಣೆ ಮತ್ತು ನಿರ್ವಹಣೆಯ ಕೊರತೆಯನ್ನು ಎತ್ತಿ ತೋರಿಸುತ್ತದೆ.

ಪ್ರಯಾಣಿಕರ ಸುರಕ್ಷತೆಗಾಗಿ ಬಿಎಂಟಿಸಿ ಕೂಡಲೇ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ. ಇಂತಹ ದುರಂತಗಳು ಮರುಕಳಿಸದಂತೆ ತಡೆಯಲು ಬಿಎಂಟಿಸಿ ಬಸ್‌ಗಳಲ್ಲಿ ಅಗ್ನಿ ಸುರಕ್ಷತಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವುದು, ಬಸ್‌ಗಳ ನಿಯಮಿತ ತಾಂತ್ರಿಕ ತಪಾಸಣೆ ನಡೆಸುವುದು ಮತ್ತು ಹಳೆಯ ಬಸ್‌ಗಳನ್ನು ಹಂತ ಹಂತವಾಗಿ ಬದಲಾಯಿಸುವುದು ಅನಿವಾರ್ಯವಾಗಿದೆ. ಪ್ರಯಾಣಿಕರ ಸುರಕ್ಷತೆಗೆ ಆದ್ಯತೆ ನೀಡುವುದು ಬಿಎಂಟಿಸಿಯ ಮುಖ್ಯ ಜವಾಬ್ದಾರಿಯಾಗಿದೆ.

Previous articleರೇಣುಕಾಸ್ವಾಮಿ ಪತ್ನಿ ಸಹನಾಗೆ ಸರ್ಕಾರಿ ಕೆಲಸ
Next articleಮಂಗಳೂರು: ಸೌದಿಯಲ್ಲಿ ಅಪಘಾತ, ಉಳ್ಳಾಲದ ಯುವಕ ಸಾವು

LEAVE A REPLY

Please enter your comment!
Please enter your name here