ಬೆಂಗಳೂರು: ಸಿಲಿಕಾನ್ ಸಿಟಿಯನ್ನು ಬೆಚ್ಚಿಬೀಳಿಸಿದ 7.11 ಕೋಟಿ ರೂಪಾಯಿ ಎಟಿಎಂ ವಾಹನ ದರೋಡೆ ಪ್ರಕರಣವು, ಪೊಲೀಸರ ತನಿಖೆ ಮುಂದುವರಿದಂತೆ ಮತ್ತಷ್ಟು ಕುತೂಹಲಕಾರಿ ತಿರುವುಗಳನ್ನು ಪಡೆದುಕೊಳ್ಳುತ್ತಿದೆ.
ಖದೀಮರು ರೂಪಿಸಿದ್ದ ಪ್ಲ್ಯಾನ್, ಪೊಲೀಸರನ್ನು ಗೊಂದಲಕ್ಕೀಡು ಮಾಡಿದ ರೀತಿ ಮತ್ತು ಸಾಕ್ಷ್ಯಗಳನ್ನು ನಾಶಪಡಿಸಿದ ವಿಧಾನವನ್ನು ನೋಡಿದರೆ, ಇದು ಯಾವುದೋ ವೆಬ್ ಸೀರೀಸ್‌ನಿಂದ ಪ್ರೇರಿತವಾದ ದರೋಡೆಯೇ ಎಂಬ ಬಲವಾದ ಶಂಕೆ ಇದೀಗ ತನಿಖಾಧಿಕಾರಿಗಳನ್ನು ಕಾಡುತ್ತಿದೆ.
ಪೊಲೀಸರನ್ನೇ ಕನ್ಫ್ಯೂಸ್ ಮಾಡಿದ ‘ಬಾರ್ಡರ್ ಪ್ಲ್ಯಾನ್’!: ದರೋಡೆಕೋರರ ಸ್ಕೆಚ್ ಎಷ್ಟೊಂದು ವ್ಯವಸ್ಥಿತವಾಗಿತ್ತು ಎಂದರೆ, ಅವರು ಕೃತ್ಯ ಎಸಗಿದ ಸ್ಥಳ ಮತ್ತು ವಾಹನವನ್ನು ಬಿಟ್ಟುಹೋದ ಜಾಗವನ್ನು ಅತ್ಯಂತ ಚಾಣಾಕ್ಷತನದಿಂದ ಆಯ್ಕೆ ಮಾಡಿದ್ದರು.
ದರೋಡೆ ಮಾಡಿದ ನಂತರ, ಸಿಎಂಎಸ್ ವಾಹನವನ್ನು ಡೇರಿ ಸರ್ಕಲ್ ಫ್ಲೈಓವರ್ ಮೇಲೆ ಬಿಟ್ಟು ಹೋಗಿದ್ದರು. ಈ ಸ್ಥಳವು ಒಂದಲ್ಲ, ಎರಡಲ್ಲ, ಮೂರು ಪೊಲೀಸ್ ಠಾಣೆಗಳ (ಆಡುಗೋಡಿ, ಸುದ್ದಗುಂಟೆಪಾಳ್ಯ, ಸಿದ್ದಾಪುರ) ಸರಹದ್ದಿನ ಗಡಿಭಾಗವಾಗಿದೆ!
ಪೊಲೀಸರು ತಮ್ಮ ಠಾಣೆಯ ವ್ಯಾಪ್ತಿಯ ಆಧಾರದ ಮೇಲೆ ಕೆಲಸ ಮಾಡುತ್ತಾರೆ ಎಂಬ ಅಂಶವನ್ನು ಅರಿತಿದ್ದ ಖದೀಮರು, ಘಟನೆ ಯಾವ ಠಾಣೆಯ ವ್ಯಾಪ್ತಿಗೆ ಬರುತ್ತದೆ ಎಂಬ ಗೊಂದಲವನ್ನು ಸೃಷ್ಟಿಸಿ, ತಾವು ಪರಾರಿಯಾಗಲು ಸಮಯ ಗಿಟ್ಟಿಸಿಕೊಳ್ಳುವ ‘ವೆಬ್ ಸೀರೀಸ್’ ಮಾದರಿಯ ಪ್ಲ್ಯಾನ್ ಮಾಡಿದ್ದರೇ ಎಂಬ ಆಯಾಮದಲ್ಲಿಯೂ ಇದೀಗ ತನಿಖೆ ನಡೆಯುತ್ತಿದೆ.
ಪರಪ್ಪನ ಅಗ್ರಹಾರ ಜೈಲಿಗೂ ತಟ್ಟಿದ ತನಿಖೆಯ ಬಿಸಿ: ಈ ಬೃಹತ್ ದರೋಡೆಯ ಸಂಚು, ಪರಪ್ಪನ ಅಗ್ರಹಾರ ಜೈಲಿನೊಳಗೆ ರೂಪಿತವಾಗಿರುವ ಸಾಧ್ಯತೆಯನ್ನೂ ಪೊಲೀಸರು ತಳ್ಳಿಹಾಕಿಲ್ಲ. ಈ ಹಿನ್ನೆಲೆಯಲ್ಲಿ, ಇನ್ಸ್‌ಪೆಕ್ಟರ್ ನೇತೃತ್ವದ ತನಿಖಾ ತಂಡವು ಪರಪ್ಪನ ಅಗ್ರಹಾರ ಜೈಲಿಗೆ ಭೇಟಿ ನೀಡಿ, ಪರಿಶೀಲನೆ ನಡೆಸಿದೆ. ಜೈಲಿನೊಳಗೆ ಇರುವ ಕುಖ್ಯಾತ ದರೋಡೆಕೋರರಿಗೂ ಮತ್ತು ಈ ಗ್ಯಾಂಗ್‌ಗೂ ಏನಾದರೂ ಸಂಪರ್ಕವಿದೆಯೇ ಎಂಬ ಬಗ್ಗೆಯೂ ಮಾಹಿತಿ ಕಲೆಹಾಕಲಾಗುತ್ತಿದೆ.
20ಕ್ಕೂ ಹೆಚ್ಚು ಜನರ ವಿಚಾರಣೆ, ಇನ್ನೂ ಸಿಗದ ಸುಳಿವು: ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಈಗಾಗಲೇ 20ಕ್ಕೂ ಹೆಚ್ಚು ಜನರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಸಿಎಂಎಸ್ ಮತ್ತು ಬ್ಯಾಂಕ್ ಸಿಬ್ಬಂದಿಯನ್ನು ಹಲವು ಬಾರಿ ಡ್ರಿಲ್ ಮಾಡಿ, ಘಟನೆಯ ಟೈಮ್‌ಲೈನ್ ಅನ್ನು ತಾಳೆ ಹಾಕಿ ಪ್ರಶ್ನಿಸಲಾಗುತ್ತಿದೆ.
50ಕ್ಕೂ ಹೆಚ್ಚು ಪೊಲೀಸರ ತಂಡಗಳು ಆರೋಪಿಗಳ ಪತ್ತೆಗಾಗಿ ಹಗಲಿರುಳು ಶ್ರಮಿಸುತ್ತಿದ್ದು, ತಮಿಳುನಾಡು ಗಡಿಭಾಗ ಮತ್ತು ಹೊಸಕೋಟೆಯಂತಹ ಪ್ರದೇಶಗಳಲ್ಲಿ ತೀವ್ರ ಶೋಧ ನಡೆಸಲಾಗುತ್ತಿದೆ.ಆದರೆ ಇಷ್ಟೆಲ್ಲಾ ಪ್ರಯತ್ನಗಳ ನಡುವೆಯೂ, ಆರೋಪಿಗಳ ಬಗ್ಗೆ ಇದುವರೆಗೂ ಯಾವುದೇ ಖಚಿತವಾದ ಸುಳಿವು ಸಿಕ್ಕಿಲ್ಲ.
ಖದೀಮರ ಈ ಚಾಣಾಕ್ಷತನ, ಇದೊಂದು ಸಾಮಾನ್ಯ ದರೋಡೆಯಲ್ಲ, ಬದಲಾಗಿ ಅತ್ಯಂತ ಬುದ್ಧಿವಂತಿಕೆಯಿಂದ ರೂಪಿಸಿದ ಒಂದು ‘ಹೈ-ಟೆಕ್’ ರಾಬರಿ ಎಂಬುದನ್ನು ಸಾಬೀತುಪಡಿಸಿದೆ.


























