ಹ್ಯಾಕರ್‌ಗಳ ಕಾಟದಿಂದ ಕರ್ನಾಟಕದ ಮಾಜಿ ಮುಖ್ಯಮಂತ್ರಿ, ಕೇಂದ್ರದ ಮಾಜಿ ಸಚಿವ ಡಿ.ವಿ.ಸದಾನಂದ ಗೌಡ ಹಣ ಕಳೆದುಕೊಂಡಿದ್ದಾರೆ.
ಡಿ.ವಿ.ಸದಾನಂದ ಗೌಡರ ಮೂರು ಬ್ಯಾಂಕ್ ಖಾತೆಗಳನ್ನು ಹ್ಯಾಕ್ ಮಾಡಲಾಗಿದ್ದು ತಲಾ 1 ಲಕ್ಷದಂತೆ 3 ಲಕ್ಷ ರೂ.ಗಳ ವಂಚನೆ ನಡೆಸಲಾಗಿದೆ.
ಈ ಕುರಿತು ಸ್ವತಃ ಡಿ.ವಿ.ಸದಾನಂದ ಗೌಡರು ಮಾಹಿತಿ ನೀಡಿದ್ದಾರೆ,”ಮಂಗಳವಾರ ನನ್ನ 3 ಬ್ಯಾಂಕ್ ಖಾತೆಗಳನ್ನು ಹ್ಯಾಕ್ ಮಾಡಲಾಗಿದೆ” ಎಂದು ಹೇಳಿದ್ದಾರೆ.
ಹೆಚ್‌ಡಿಎಫ್‌ಸಿ, ಎಸ್‌ಬಿಐ ಮತ್ತು ಆಕ್ಸಿಸ್ ಬ್ಯಾಂಕ್ ಖಾತೆಗಳನ್ನು ಹ್ಯಾಕ್ ಮಾಡಿರುವ ಸೈಬರ್ ವಂಚಕರು ತಲಾ 1 ಲಕ್ಷದಂತೆ ಮೂರು ಲಕ್ಷ ರೂ. ಹಣ ಎಗರಿಸಿದ್ದಾರೆ.
ಯುಪಿಐ ಮೂಲಕ ಈ ಹಣ ವರ್ಗಾವಣೆ ನಡೆದಿದೆ. ಈ ಕುರಿತು ದೂರು ನೀಡುತ್ತೇನೆ ಎಂದು ಡಿ.ವಿ.ಸದಾನಂದ ಗೌಡ ಹೇಳಿದ್ದಾರೆ. ಈ ಮೂಲಕ ಬೆಂಗಳೂರು ನಗರದಲ್ಲಿ ಗಣ್ಯರನ್ನು ಸೈಬರ್ ವಂಚಕರು ಟಾರ್ಗೆಟ್ ಮಾಡುತ್ತಿದ್ದಾರೆ ಎಂಬುದು ತಿಳಿದುಬಂದಿದೆ.
ಸೋಮವಾರ ನಟ, ನಿರ್ದೇಶಕ ಉಪೇಂದ್ರ, ಅವರ ಪತ್ನಿ ಪ್ರಿಯಾಂಕಾ ಉಪೇಂದ್ರ ಹ್ಯಾಕರ್‌ಗಳ ಕೈಗೆ ಸಿಕ್ಕಿಬಿದ್ದಿದ್ದರು. ಉಪೇಂದ್ರ ಪುತ್ರನ ಪೋನ್ ಸಹ ಹ್ಯಾಕ್ ಮಾಡಿ ಹಣವನ್ನು ಕಳವು ಮಾಡಲಾಗಿತ್ತು.
ಕರ್ನಾಟಕದ ಪೊಲೀಸರು ಸೈಬರ್ ಕ್ರೈಂ ಬಗ್ಗೆ ಜನರಲ್ಲಿ ಜಾಗೃತಿಯನ್ನು ಮೂಡಿಸುತ್ತಲೇ ಇದ್ದಾರೆ. ಆದರೆ ಸೈಬರ್ ಕ್ರೈಂ ಪ್ರಕರಣಗಳು ನಡೆಯುತ್ತಲೇ ಇವೆ. ವಿವಿಧ ಮಾದರಿಯಲ್ಲಿ ಹ್ಯಾಕರ್‌ಗಳು ಜನರ ಹಣವನ್ನು ಎಗರಿಸುತ್ತಿದ್ದಾರೆ.
ಸೈಬರ್ ಕ್ರೈಂ ಬಗ್ಗೆ ಜಾಗೃತಿ: ಇತ್ತೀಚೆಗೆ ಸೈಬರ್ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಈ ಬಗ್ಗೆ ಸಾರ್ವಜನಿಕರಿಗೆ ಜಾಗೃತಿ ಮೂಡಿಸಲಾಗುತ್ತಿದೆ. ನನಗೆ ಸೈಬರ್ ಕ್ರೈಂ ಜಾಗೃತಿ ಇದೆ ನಾನು ಸೈಬರ್ ಮೋಸಕ್ಕೆ ಒಳಗಾಗುವುದಿಲ್ಲ ಮತ್ತು ನೀವು ಸೈಬರ್ ಅಪರಾಧಕ್ಕೆ ಒಳಗಾಗಿದ್ದರೆ, ತಕ್ಷಣ 24*7 ಸಹಾಯವಾಣಿ ಸಂಖ್ಯೆ 1930 ಗೆ ಕರೆ ಮಾಡಿ ಎಂಬ ಸಂದೇಶವನ್ನು ಜನರಿಗೆ ನೀಡಲಾಗುತ್ತಿದೆ.
ಜುಲೈನಲ್ಲಿ ಬೆಂಗಳೂರು ನಗರದಲ್ಲಿ ಸೈಬರ್ ಕ್ರೈಂ ಪ್ರಕರಣವೊಂದು ಬೆಳಕಿಗೆ ಬಂದಿತ್ತು. ನಕಲಿ ಕಂಪನಿಗಳನ್ನು ಸೃಷ್ಟಿಸಿ, ಹಣದ ಆಮಿಷ ಒಡ್ಡುವ ಮೂಲಕ ಜನರನ್ನು ಆಕರ್ಷಿಸಿ 357 ನಕಲಿ ಬ್ಯಾಂಕ್ ಖಾತೆಗಳನ್ನು ತೆರೆದಿದ್ದ ನಾಲ್ವರನ್ನು ಬಂಧಿಸಿದ್ದರು.
ಈ ಖಾತೆಗಳನ್ನು ವಂಚಕರಿಗೆ ಮಾರಾಟ ಮಾಡಲಾಗಿದ್ದು, ಈ ಮೂಲಕ ಭಾರತದಾದ್ಯಂತ ಕೋಟ್ಯಂತರ ರೂಪಾಯಿಗಳ ಸೈಬರ್ ಹಣಕಾಸು ವಂಚನೆ ಮಾಡಲಾಗಿತ್ತು. ಇದಕ್ಕೆ ಸಂಬಂಧಿಸಿದಂತೆ 100ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿದ್ದವು. ತನಿಖೆಯ ಭಾಗವಾಗಿ ಹಲವಾರು ಬ್ಯಾಂಕ್ ಸಿಬ್ಬಂದಿಗಳನ್ನು ವಿಚಾರಿಸಲಾಗಿತ್ತು.