ಬಳ್ಳಾರಿ: ಬಳ್ಳಾರಿ ಜಿಲ್ಲೆಯ ಕೈಗಾರಿಕಾ ಅಭಿವೃದ್ಧಿಗೆ ಹೊಸ ದಿಕ್ಕು ತೋರಲಿರುವ ಜೀನ್ಸ್ ಪಾರ್ಕ್ ಯೋಜನೆಗೆ ಶೀಘ್ರದಲ್ಲೇ ಚಾಲನೆ ದೊರಕಲಿದ್ದು, ಈ ಯೋಜನೆಯನ್ನು ಲೋಕಸಭೆಯ ಪ್ರತಿಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಅಧಿಕೃತವಾಗಿ ಆರಂಭಿಸುವ ಸಾಧ್ಯತೆ ಇದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ ಪಾಟೀಲ್ ತಿಳಿಸಿದ್ದಾರೆ.
ಸಾಮಾಜಿಕ ಜಾಲತಾಣದ ಮೂಲಕ ಮಾಹಿತಿ ಹಂಚಿಕೊಂಡಿರುವ ಸಚಿವರು, ಬಳ್ಳಾರಿಯನ್ನು ಕನ್ನಡ ನಾಡಿನ ಟೆಕ್ಸ್ ಟೈಲ್ ಹಬ್ ಆಗಿ ರೂಪಿಸುವುದು ಈ ಮಹತ್ವಾಕಾಂಕ್ಷೆಯ ಯೋಜನೆಯ ಮುಖ್ಯ ಗುರಿಯಾಗಿದೆ ಎಂದು ತಿಳಿಸಿದ್ದಾರೆ. ಈ ಪ್ರಾಜೆಕ್ಟ್‌ನ ಮೂಲ ಆಲೋಚನೆ ರಾಹುಲ್ ಗಾಂಧಿ ಅವರ ದೃಷ್ಟಿಕೋನದಿಂದ ಮೂಡಿ ಬಂದಿದೆ ಎಂಬುದು ಮಾಹಿತಿ.
158 ಎಕರೆ ಭೂ ಸ್ವಾಧೀನ ಪೂರ್ಣ: ಜೀನ್ಸ್ ಪಾರ್ಕ್ ಯೋಜನೆಯ ಮೊದಲ ಹಂತವಾಗಿ 158 ಎಕರೆ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುವ ಕಾರ್ಯ ಈಗಾಗಲೇ ಪೂರ್ಣಗೊಂಡಿದೆ. ಮುಂದಿನ ಹಂತದಲ್ಲಿ ಹೆಚ್ಚುವರಿ 400 ಎಕರೆ ಭೂಮಿ ಸ್ವಾಧೀನಪಡಿಸಿಕೊಳ್ಳುವ ಪ್ರಕ್ರಿಯೆ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಪಾರ್ಕ್ ನಿರ್ಮಾಣದಿಂದ ಸಾವಿರಾರು ಜನರಿಗೆ ಉದ್ಯೋಗಾವಕಾಶ ಸೃಷ್ಟಿಯಾಗುವ ನಿರೀಕ್ಷೆ ಇದೆ. ಬಳ್ಳಾರಿಯ ಖನಿಜಾಧಾರಿತ ಆರ್ಥಿಕತೆಗೆ ಪರ್ಯಾಯವಾಗಿ ವಸ್ತ್ರೋದ್ಯಮವನ್ನು ಅಭಿವೃದ್ಧಿಪಡಿಸುವುದು ಸರ್ಕಾರದ ಗುರಿಯಾಗಿದೆ. ಕೈಗಾರಿಕಾ ವಲಯ, ಮೂಲಸೌಕರ್ಯ ಅಭಿವೃದ್ಧಿಯಾಗುವುದು ಅಲ್ಲದೆ ಈ ಯೋಜನೆಯಡಿ ಜೀನ್ಸ್ ಉತ್ಪಾದನಾ ಘಟಕಗಳು ಹಾಗೂ ವಾಶಿಂಗ್ ಮತ್ತು ಫಿನಿಶಿಂಗ್ ಯುನಿಟ್‌ಗಳು ಮತ್ತು ರಫ್ತು ವಲಯಗಳ ಜೊತೆಗೆ ತರಬೇತಿ ಮತ್ತು ಕೌಶಲ್ಯಾಭಿವೃದ್ಧಿ ಕೇಂದ್ರಗಳು ಹಾಗೂ ಉದ್ಯಮಶೀಲತೆಗೆ ಬೆಂಬಲಿಸುವ ವ್ಯವಸ್ಥೆಗಳು ನಿರ್ಮಿಸಲ್ಪಡಲಿವೆ ಎಂದು ಸಚಿವಾಲಯ ಮೂಲಗಳು ತಿಳಿಸುತ್ತಿವೆ.
ಸ್ಥಳೀಯ ಉದ್ಯಮಗಳು ಮತ್ತು ಯುವಕರಿಗೆ ಭರವಸೆ: ಈ ಜೀನ್ಸ್ ಪಾರ್ಕ್ ನಿರ್ಮಾಣದಿಂದ ಬಳ್ಳಾರಿ ಟೆಕ್ಸ್ ಟೈಲ್ ಕ್ಷೇತ್ರಕ್ಕೆ ರಾಷ್ಟ್ರೀಯ ಮಟ್ಟದ ಗುರುತು ಸಿಗಲಿದ್ದು. ಸ್ಥಳೀಯ ಉದ್ಯಮಿಗಳಿಗೆ ಹೂಡಿಕೆ ಅವಕಾಶ ದೊರೆಯಲಿದೆ. ಯುವಕರಿಗೆ ದೊಡ್ಡ ಮಟ್ಟದ ಉದ್ಯೋಗಾವಕಾಶ ಹಾಗೂ ಎಕ್ಸ್‌ಪೋರ್ಟ್ ಆಧಾರಿತ ಮಾರುಕಟ್ಟೆಗೆ ದಾರಿ ತೆರೆಯಲಿವೆ ಎಂದು ಸಚಿವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಶೀಘ್ರ ಉದ್ಘಾಟನೆ: ಈ ಯೋಜನೆಗೆ ಶೀಘ್ರದಲ್ಲೇ ರಾಹುಲ್ ಗಾಂಧಿ ಚಾಲನೆ ನೀಡಲಿದ್ದು, ದಿನಾಂಕವನ್ನು ಶೀಘ್ರದಲ್ಲೇ ರಾಜಕೀಯ ಮತ್ತು ಆಡಳಿತ ವರ್ಗ ಪ್ರಕಟಿಸುವ ನಿರೀಕ್ಷೆಯಿದೆ.


























