ಡಿ. 8ರಿಂದ ಚಳಿಗಾಲ ಅಧಿವೇಶನ: ಸಭಾಪತಿಗಳಿಂದ ಸಿದ್ಧತೆ ಪರಿಶೀಲನೆ

0
32

ಬೆಳಗಾವಿ: ವಿಧಾನಮಂಡಲದ ಚಳಿಗಾಲ ಅಧಿವೇಶನ ಬೆಳಗಾವಿಯಲ್ಲಿ ಡಿ. 8ರಿಂದ ಜರುಗಲಿದ್ದು, ಈ ಸಂದರ್ಭದಲ್ಲಿ ಯಾವುದೇ ಲೋಪಗಳಿಗೆ ಆಸ್ಪದ ನೀಡದಂತೆ ಅಧಿಕಾರಿಗಳು ತಮ್ಮ ಜವಾಬ್ದಾರಿಯನ್ನು ಸಮರ್ಪಕವಾಗಿ ನಿರ್ವಹಿಸಿ ಯಶಸ್ವಿಗೊಳಿಸಬೇಕು ಎಂದು ವಿಧಾನಸಭೆ ಸಭಾಧ್ಯಕ್ಷ ಯು.ಟಿ. ಖಾದರ್ ಫರೀದ್ ಅವರು ಸೂಚಿಸಿದರು.

ಸುವರ್ಣ ವಿಧಾನಸೌಧದಲ್ಲಿ ಬುಧವಾರ ಚಳಿಗಾಲ ಆಧಿವೇಶನ ಪೂರ್ವ ಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಡಿ. 8ರಿಂದ 20 ರವರೆಗೆ ಜರುಗಲಿರುವ ಅಧಿವೇಶನದ ಸಂದರ್ಭದಲ್ಲಿ ಎದುರಾಗುವ ಯಾವುದೇ ತೆರನಾದ ಸಮಸ್ಯೆಗಳನ್ನು ಕೂಡಲೇ ಸಂಬಂಧಿತರ ಗಮನಕ್ಕೆ ತರುವುದರ ಮೂಲಕ ಸಮಸ್ಯೆ ಪರಿಹರಿಸಿಕೊಳ್ಳಬೇಕು. ದೂರಸಂಪರ್ಕ ಹಾಗೂ ನೆಟ್‌ವರ್ಕ್ ಸಮಸ್ಯೆಗಳು ತಲೆದೋರದಂತೆ ನಿಗಾವಹಿಸಬೇಕು. ಅಗತ್ಯವಿರುವ ಗಣಕ ಯಂತ್ರ ಸೇರಿದಂತೆ ಇತರೆ ವ್ಯವಸ್ಥೆ ಮಾಡಿಕೊಳ್ಳಬೇಕು ಎಂದು ಸೂಚಿಸಿದರು.

ಅಧಿವೇಶನ ಸಂದರ್ಭದಲ್ಲಿ ಪ್ರತಿಭಟನಕಾರರಿಗೆ ಸೂಕ್ತ ಸ್ಥಳಾವಕಾಶ ಗುರುತಿಸುವುದರ ಜೊತೆಗೆ ಪ್ರತಿಭಟನಾ ಸ್ಥಳದಲ್ಲಿ ಅಗತ್ಯ ಸೌಲಭ್ಯ ಹಾಗೂ ಸೂಕ್ತ ಪೋಲಿಸ್ ಭದ್ರತೆ ಒದಗಿಸಲು ಕ್ರಮ ವಹಿಸಲು ತಿಳಿಸಿದರು.

ಸಾರ್ವಜನಿಕರಿಗೆ ಮಾಹಿತಿ ಕೇಂದ್ರ: ಸುವರ್ಣ ವಿಧಾನಸೌಧದಲ್ಲಿ ಸೂಕ್ತ ಭದ್ರತೆ ಹಾಗೂ ಸುಗಮ ಸಂಚಾರಕ್ಕೆ ಸೂಕ್ತ ವ್ಯವಸ್ಥೆ ಮಾಡಿಕೊಳ್ಳಬೇಕು. ಅಧಿವೇಶನ ಸಂದರ್ಭದಲ್ಲಿ ಆಗಮಿಸುವ ಸಾರ್ವಜನಿಕರಿಗೆ ಅನುಕೂಲವಾಗುವಂತೆ ಸಹಾಯವಾಣಿ ಕೇಂದ್ರ ಸ್ಥಾಪಿಸಬೇಕು ಎಂದು ಸಭಾಧ್ಯಕ್ಷ ಖಾದರ್ ಫರೀದ್ ಸೂಚಿಸಿದರು.

ಕಳೆದ ಬಾರಿಯಂತೆ ಈ ಬಾರಿಯೂ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಬೇಕು. ಸುವರ್ಣ ವಿಧಾನಸೌಧದ ಆವರಣದಲ್ಲಿ ಕಳೆದ ಬಾರಿ ಶಾಸಕರು ಸಸಿ ನೆಟ್ಟಿದ್ದು, ಈ ಬಾರಿಯೂ ಪ್ರತಿ ಶಾಸಕರಿಂದ ಸಸಿ ನೆಡಲು ಸೂಕ್ತ ವ್ಯವಸ್ಥೆ ಮಾಡಿಕೊಳ್ಳಲು ತಿಳಿಸಿದರು.

ಪಾಸ್ ವಿತರಣೆಗೆ ಸಂಬಂಧಿಸಿದಂತೆ ಪೊಲೀಸ್ ಇಲಾಖೆಯೊಂದಿಗೆ ಸಮನ್ವಯ ಸಾಧಿಸಬೇಕು. ಕಲಾಪಗಳ ವೀಕ್ಷಣೆಗೆ ಆಗಮಿಸುವ ಸಾರ್ವಜನಿಕರಿಗೆ, ಶಾಲಾ ಮಕ್ಕಳಿಗೆ ಕಲಾಪಗಳ ವೀಕ್ಷಣೆಗೆ ಸೂಕ್ತ ಸಮಯ ನಿಗದಿಪಡಿಸಬೇಕು. ವಿಧಾನ ಮಂಡಲದ ಕಾರ್ಯಕಲಾಪಗಳ ವೀಕ್ಷಣೆಗೆ ಆಗಮಿಸುವ ಶಾಲಾ, ಕಾಲೇಜು ವಿದ್ಯಾರ್ಥಿಗಳ ಜೊತೆಗೆ ಪೌರ ಕಾರ್ಮಿಕರರು, ಲಿಂಗತ್ವ ಅಲ್ಪಸಂಖ್ಯಾತರಿಗೆ ಹಾಗೂ ಮಹಿಳೆಯರಿಗಾಗಿ ಅವಕಾಶ ಕಲ್ಪಿಸಲು ಚಿಂತಿಸಲಾಗಿದ್ದು ಈ ಕುರಿತು ಅಗತ್ಯ ವ್ಯವಸ್ಥೆ ಮಾಡಲು ತಿಳಿಸಿದರು.

ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಮಾತನಾಡಿ, ಚಳಿಗಾಲ ಅಧಿವೇಶನಕ್ಕೆ ಆಗಮಿಸುವ ಸಚಿವರು, ಶಾಸಕರುಗಳಿಗೆ, ಸಚಿವಾಲಯದ ಅಧಿಕಾರಿ, ಸಿಬ್ಬಂದಿ ಹಾಗೂ ಮಾರ್ಷಲ್‌ಗಳಿಗೆ ಸೂಕ್ತ ಸಾರಿಗೆ ಹಾಗೂ ವಸತಿ ವ್ಯವಸ್ಥೆ ಕಲ್ಪಿಸಬೇಕು. ಅಧಿವೇಶನ ಸಂದರ್ಭದಲ್ಲಿ ಸಚಿವರು, ಶಾಸಕರು ತಂಗುವ ಹೋಟೆಲ್‌ಗಳಲ್ಲಿ ತಜ್ಞ ವೈದ್ಯರ ತಂಡನಿಯೋಜಿಸಬೇಕು. ಅದೇ ರೀತಿ ಸುವರ್ಣ ವಿಧಾನ ಸೌಧದಲ್ಲಿಯೂ ಸಹ ವೈದ್ಯರ ತಂಡವನ್ನು ಸುಸಜ್ಜಿತ ಆಂಬ್ಯುಲೆನ್ಸ್‌ನೊಂದಿಗೆ ನಿಯೋಜಿಸಲು ತಿಳಿಸಿದರು.

ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಮತ್ತು ಪೋಲಿಸ್ ಆಯುಕ್ತ ಭೋರಸೆ ಗುಲಾಬರಾವ್ ಭೂಷಣ ಅವರು ಅಧಿವೇಶನಕ್ಕೆ ಸಂಬಂಧಿಸಿದಂತೆ ಕೈಗೊಳ್ಳಲಾದ ಪೂರ್ವ ತಯಾರಿ ಕುರಿತು ವಿವರಿಸಿದರು.

ಇದೇ ಸಂದರ್ಭದಲ್ಲಿ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರು ರಾಷ್ಟ್ರೀಯ ಐಕ್ಯತಾ ಪ್ರಮಾಣ ವಚನ ಬೋಧಿಸಿದರು. ತದ ನಂತರ ವಿಧಾನಸಭೆ, ವಿಧಾನಪರಿಷತ್ ಸಭಾಂಗಣ, ಸೆಂಟ್ರಲ್ ಹಾಲ್, ಬ್ಯಾಂಕ್ವೆಟ್ ಹಾಲ್ ಮತ್ತಿತರ ಸ್ಥಳಗಳನ್ನು ವಿಧಾನಸಭಾಧ್ಯಕ್ಷರು, ಸಭಾಪತಿಯವರು ಪರಿಶೀಲಿಸಿ, ಧ್ವನಿ ವ್ಯವಸ್ಥೆ, ಸ್ವಚ್ಛತೆ ಸೇರಿದಂತೆ ಸೂಕ್ತ ಸಿದ್ಧತೆಗಳನ್ನು ಮಾಡಿಕೊಳ್ಳುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

Previous article28ರಂದು ಪ್ರಧಾನಿಯಿಂದ 77 ಅಡಿ ರಾಮನ ಮೂರ್ತಿ ಅನಾವರಣ
Next articleಶಾಸಕರು, ಡಿಸಿ ಮನೆ ಮುಂದೆ ಮೆಕ್ಕೆಜೋಳ ಸುರಿಯಿರಿ: ದಿಂಗಾಲೇಶ್ವರ ಶ್ರೀ

LEAVE A REPLY

Please enter your comment!
Please enter your name here