ಕಿತ್ತೂರು ಉತ್ಸವ-2025: ದಿನಾಂಕ ಘೋಷಣೆ, 5 ಕೋಟಿ ಅನುದಾನಕ್ಕೆ ಪ್ರಸ್ತಾವನೆ

0
63

“ಕಿತ್ತೂರು ಉತ್ಸವ-2025 ಅನ್ನು ಅದ್ದೂರಿಯಾಗಿ ಆಚರಿಸಲಾಗುವುದು. ಈ ಬಾರಿ ಕಿತ್ತೂರು ಉತ್ಸವವನ್ನು ಮಾದರಿ ರೀತಿಯಲ್ಲಿ ಆಚರಿಸುವ ಯೋಜನೆಯಿದ್ದು, ಜನರು ಎಲ್ಲ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು” ಎಂದು ಲೋಕೋಪಯೋಗಿ ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಕರೆ ನೀಡಿದರು.

ಬೆಳಗಾವಿ ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಿತ್ತೂರಿನ ವೀರಭದ್ರೇಶ್ವರ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ ಕಿತ್ತೂರು ಉತ್ಸವ-2025ರ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. “ಉತ್ಸವದಲ್ಲಿ ಸ್ಥಳೀಯರಿಗೆ ಅವಕಾಶ ಕಲ್ಪಿಸಿ, ಕಿತ್ತೂರಿನ ಸ್ಮಾರಕಗಳ ಸುಧಾರಣೆಗೊಳಿಸಿ, ದೀಪಾಲಂಕಾರ, ಸೇತುವೆ ಸ್ವಚ್ಛತೆ, ಬಸ್ ನಿಲ್ದಾಣದ ದುರಸ್ಥಿ ಕಾಮಗಾರಿ ಕೈಗೊಳ್ಳಲಾಗುವುದು‌. ಹೊಸ ಸಾಹಿತಿಗಳು, ಸ್ಥಳೀಯ ಕಲಾವಿದರಿಗೆ ಹೆಚ್ಚಿನ ಅವಕಾಶ ನೀಡುವ ಉದ್ದೇಶದಿಂದ ಕಾರ್ಯಕ್ರಮದಲ್ಲಿ ಬದಲಾವಣೆಗೆ ತಿಳಿಸಲಾಗಿದ್ದು, ಕಿತ್ತೂರು ಉತ್ಸವ ಮಾದರಿ ಉತ್ಸವವನ್ನಾಗಿಸುವ ನಿಟ್ಟಿನಲ್ಲಿ ಸಾರ್ವಜನಿಕರು ಸಹಕರಿಸಬೇಕು” ಎಂದರು.

“ಲೋಪದೋಷಗಳನ್ನು ಸರಿಪಡಿಸಿ ಕಾರ್ಯಕ್ರಮಗಳನ್ನು ಏರ್ಪಡಿಸಲಾಗುವುದು. ವಿವಿಧ ಸಮಾನಾಂತರ ವೇದಿಕೆ ಕಾರ್ಯಕ್ರಮಗಳಿಗೆ ಜನರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮಗಳನ್ನು ಯಶಸ್ವಿಗೊಳಿಸುವಂತೆ” ಸಚಿವ ಸತೀಶ ಜಾರಕಿಹೊಳಿ ಹೇಳಿದರು.

ಕಿತ್ತೂರು ಶಾಸಕ ಬಾಬಾಸಾಹೇಬ ಪಾಟೀಲ ಮಾತನಾಡಿ, “ವೀರ ರಾಣಿ‌ ಕಿತ್ತೂರು ಚನ್ನಮ್ಮಳ ವೀರ ಜ್ಯೋತಿ ಮೆರವಣಿಗೆಯಲ್ಲಿ ರೂಪಕ ವಾಹನಗಳ ಬದಲಾವಣೆ ಮಾಡುವ ಕುರಿತು ಸಾಧ್ಯವಾದಷ್ಟು ಪ್ರಯತ್ನಿಸಲಾಗುವುದು. ವಿಚಾರ ಸಂಕೀರ್ಣ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳನ್ನು ಆಹ್ವಾನಿಸಲಾಗುವುದು. ಇತಿಹಾಸವನ್ನು ಹೊರ ತರುವ ನಿಟ್ಟಿನಲ್ಲಿ ಕಿತ್ತೂರು ಇತಿಹಾಸದ ಪುಸ್ತಕ, ಕೈಪಿಡಿಗಳನ್ನು ಬಿಡುಗಡೆ ಮಾಡಲಾಗುವುದು” ಎಂದರು.

“ಕಳೆದಬಾರಿ ಕಲಾವಿದರಿಗೆ ಹೆಚ್ಚು ಅವಕಾಶ ಸಿಗದ ಕಾರಣ ಈ ವರ್ಷದ ಉತ್ಸವದಲ್ಲಿ ಹೆಚ್ಚಿನ ಕಲಾವಿದರು ಭಾಗವಹಿಸಲು ಆಹ್ವಾನಿಸುವಂತೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅಧಿಕಾರಿಗಳಿಗೆ ತಿಳಿಸಲಾಗುವುದು. ಕಿತ್ತೂರಿಗೆ ಹೊಸ ಬಸ್‌ಗಳು ಶೀಘ್ರದಲ್ಲೇ ಬರಲಿದ್ದು, ಇದರಿಂದ ಜನರಿಗೆ ಅನುಕೂಲವಾಗಲಿದೆ” ಎಂದು ತಿಳಿಸಿದರು.

ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಮಾತನಾಡಿ, “ಕಳೆದ ವರ್ಷ ಸಾರ್ವಜನಿಕರ ಸಲಹೆ ಪಡೆದು ಅವರ ಅನಿಸಿಕೆಯಂತೆ ಸಮಿತಿಗಳನ್ನು ರಚಿಸಿ ಉತ್ಸವಕ್ಕೆ ತಯಾರಿ ಮಾಡಿಕೊಳ್ಳಲಾಗಿತ್ತು. ಸರಿಸುಮಾರು 4 ಲಕ್ಷ ಜನರು ಕಳೆದ ವರ್ಷ ಉತ್ಸವದಲ್ಲಿ ಪಾಲ್ಗೊಂಡು ಕಿತ್ತೂರು ಉತ್ಸವ ದೊಡ್ಡ ಮಟ್ಟದಲ್ಲಿ ಯಶಸ್ವಿಯಾಗಿತ್ತು” ಎಂದರು.

ಕಿತ್ತೂರು ಕಲ್ಮಠದ ಮಡಿವಾಳ ರಾಜಯೋಗೀಂದ್ತ ಮಹಾಸ್ವಾಮಿಗಳು ಮಾತನಾಡಿ, “ರಾಜ್ಯ ಸರ್ಕಾರ ಈ ಬಾರಿಯ ಕಿತ್ತೂರು ಉತ್ಸವವನ್ನು ಅತಿ ವಿಜೃಂಭಣೆಯಿಂದ ಆಚರಿಸಲು ಕಾಳಜಿವಹಿಸಿ ಕಾರ್ಯಕ್ರಮಗಳನ್ನು ಏರ್ಪಡಿಸಬೇಕು. ಸಾರ್ವಜನಿರು ಕೂಡ ಕಾರ್ಯಕ್ರಮಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಎಲ್ಲ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಮೂಲಕ ಉತ್ಸವವನ್ನು ಯಶಸ್ವಿಗೊಳಿಸಬೇಕು” ಎಂದು ತಿಳಿಸಿದರು.

5 ಕೋಟಿ ಅನುದಾನ: “ಪ್ರತಿ ವರ್ಷ ಜಿಲ್ಲಾಡಳಿತದಿಂದ ಕಿತ್ತೂರು ಉತ್ಸವ ಅದ್ದೂರಿಯಾಗಿ ನಡೆಯಲಿದ್ದು, ಅದಕ್ಕೆ ಅವಶ್ಯವಿರುವ ಪೂರ್ವ ತಯಾರಿ ಮಾಡಿಕೊಳ್ಳಲಾಗುತ್ತದೆ. ಕಳೆದ ವರ್ಷ ಕಿತ್ತೂರು ಉತ್ಸವಕ್ಕೆ 5 ಕೋಟಿ ಅನುದಾನ ನೀಡಲಾಗಿತ್ತು ಅದೇ ರೀತಿಯಲ್ಲಿ 2025ರಲ್ಲಿ ಕಿತ್ತೂರು ಉತ್ಸವಕ್ಕೆ 5 ಕೋಟಿ ಅನುದಾನ ಬಿಡುಗಡೆ ಮಾಡುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ” ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಪ ನಿರ್ದೇಶಕಿ ವಿದ್ಯಾವತಿ ಭಜಂತ್ರಿ ಹೇಳಿದರು.

ಜನರ ಸಲಹೆಗಳು

  • ಕಳೆದ ವರ್ಷದಂತೆ ವೀರಜ್ಯೋತಿಯು ರಾಜ್ಯದಾದ್ಯಂತ ಸಂಚರಿಸಲು ಕ್ರಮ ಕೈಗೊಳ್ಳಬೇಕು. ಉತ್ಸವದ ಸಂದರ್ಭದಲ್ಲಿ ಚರಂಡಿ ಸ್ವಚ್ಛತೆ, ವಿದ್ಯುತ್ ಮತ್ತು ಕುಡಿಯುವ ನೀರು ಸೇರಿದಂತೆ ಅಗತ್ಯ ಮೂಲಸೌಕರ್ಯಗಳನ್ನು ಒದಗಿಸಬೇಕು.
  • ಕಿತ್ತೂರು ಉತ್ಸವಕ್ಕೆ ಸಂಬಂಧಿಸಿದ ಎಲ್ಲ ಕಾಮಗಾರಿಗಳನ್ನು ನಿಯಮಾನುಸಾರ ಟೆಂಡರ್ ಆಹ್ವಾನಿಸಿ, ಉತ್ಸವದ ತಯಾರಿ ಮಾಡಿಕೊಳ್ಳಬೇಕು.
  • ಗುತ್ತಿಗೆದಾರರಿಗೆ ಸಕಾಲದಲ್ಲಿ ಬಿಲ್ ಪಾವತಿಸಬೇಕು. ಕಿತ್ತೂರು ಬಸ್ ನಿಲ್ದಾಣದಲ್ಲಿ ಬಸ್ ಸಂಚಾರ ಇಲ್ಲದ ಕಾರಣ ಶಾಲಾ ಮಕ್ಕಳಿಗೆ ತೊಂದರೆ ತೊಂದರೆಯಾಗುತ್ತಿದೆ ಹಾಗಾಗಿ ಬಸ್ ವ್ಯವಸ್ಥೆ ಕಲ್ಪಿಸಬೇಕು. ಉತ್ಸವದ ಸಂದರ್ಭದಲ್ಲಿ ರಸ್ತೆ ಬದಿಯ ಸಿಸಿ ಟಿವಿಗಳು ಸರಿಯಾಗಿ ಕೆಲಸ ಮಾಡುವಂತೆ ನೋಡಿಕೊಳ್ಳಬೇಕು.
  • ಕಿತ್ತೂರು ತಾಲೂಕು ಘೋಷಣೆಯಾಗಿ ವರ್ಷಗಳೇ ಕಳೆದಿವೆ ಆದರೂ ಸಹ ತಾಲೂಕಿಗೆ ಸಾಕಷ್ಟು ಕಚೇರಿಗಳು ಸ್ಥಳಾಂತರವಾಗದೆ ಬೈಲಹೊಂಗಲ ತಾಲೂಕಿನಲ್ಲಿವೆ. ಕಿತ್ತೂರಿನ ಸಾರ್ವಜನಿಕರಿಗೆ ದಿನನಿತ್ಯ ಕಚೇರಿ ವ್ಯವಹಾರಕ್ಕೆ ತೊಂದರೆಯಾಗುತ್ತಿರುವ ಕಾರಣ ಕಚೇರಿಗಳನ್ನು ಕಿತ್ತೂರಿಗೆ ಸ್ಥಳಾಂತರಿಸಬೇಕು.
Previous articleಮೈಸೂರು: ದಸರಾ ವಸ್ತುಪ್ರದರ್ಶನ ಬಳಿ ರೌಡಿಶೀಟರ್ ಬರ್ಬರ ಹತ್ಯೆ,  ಸೇಡಿನ ಕೊಲೆಯೇ?
Next articleಧರ್ಮಸ್ಥಳಕ್ಕೆ ಮತ್ತೆ ಬಂದರು ಸುಜಾತಾ ಭಟ್: ದೂರಿಗಲ್ಲ, ಕ್ಷಮೆಗಾಗಿ

LEAVE A REPLY

Please enter your comment!
Please enter your name here