ಬೆಳಗಾವಿ: ಕೂಡಲಸಂಗಮ ಪೀಠವೇ ಬೇರೆ, ಟ್ರಸ್ಟ್ ಬೇರೆ. ಟ್ರಸ್ಟ್ ಕೆಲವು ಕುಟುಂಬಗಳಿಗೆ ಮಾತ್ರ ಸೀಮಿತವಾಗಿದೆ. ಸಮಾಜಕ್ಕೆ ದ್ರೋಹ ಬಗೆದವರು, ಜೋಳಿಗೆ ದುಡ್ಡು ತಿಂದವರು ಉದ್ಧಾರವಾದದ್ದು, ಇತಿಹಾಸದಲ್ಲಿ ಇಲ್ಲ ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ ವಾಗ್ದಾಳಿ ನಡೆಸಿದ್ದಾರೆ.
ರಾಮದುರ್ಗ ತಾಲೂಕು ಕುನ್ನಾಳ ಗ್ರಾಮದ ಲಿಂಗಾಯತ ಪಂಚಮಸಾಲಿ ಸಮಾಜ ಹಾಗೂ ಕೇಸರಿ ಯುವ ಪಡೆಯ ನೇತೃತ್ವದಲ್ಲಿ ರವಿವಾರ ವೀರರಾಣಿ ಕಿತ್ತೂರ ಚೆನ್ನಮ್ಮಾಜಿ ಮೂರ್ತಿ ಅನಾವರಣಗೊಳಿಸಿ ಸಮಾರಂಭದಲ್ಲಿ ಮಾತನಾಡಿದ ಅವರು, ಸಿಡಿ ಇವೆ ದಾಖಲೆ ಇವೆ ಎಂದು ಹೇಳುವವರು ತಾಕತ್ತು ಇದ್ದರೆ ಬಹಿರಂಗ ಮಾಡಲಿ, ಸಮಾಜಕ್ಕೆ ದ್ರೋಹ ಬಗೆದ ಕಾಶಪ್ಪನವರ ಇನ್ನೆರಡೂವರೆ ವರ್ಷದಲ್ಲಿ ಮಾಜಿ ಆಗುವುದು ಖಂಡಿತ ಎಂದರು.
ಬಿಜೆಪಿ ಸರಕಾರದ ಅವಧಿಯಲ್ಲಿ ಪಂಚಮಸಾಲಿ ಸಮಾಜ ಬಾಂಧವರು ಸೇರಿ ಉಳಿದ ಎಲ್ಲಾ 2ಎ ಮೀಸಲಾತಿ ಇಲ್ಲದ ಲಿಂಗಾಯತರಿಗೆ ಶೇ. 7ರಷ್ಟು ಮೀಸಲಾತಿ ನೀಡಿ, 2ಸಿ ಮೀಸಲಾತಿ ಘೋಷಣೆ ಮಾಡಿತ್ತು. ಅದನ್ನು ಸದ್ಯದ ಸರಕಾರ ಅನುಷ್ಠಾನಕ್ಕೆ ತಂದಿಲ್ಲ. ಮೀಸಲಾತಿ ಹೋರಾಟಕ್ಕೆ ಬಸವಜಯ ಮೃತ್ಯುಂಜಯ ಸ್ವಾಮೀಜಿ ಬದ್ಧರಿದ್ದಾರೆ. ಅವರಿಗೆ ನಾವೆಲ್ಲರೂ ಕೈ ಜೋಡಿಸಬೇಕು ಎಂದರು.