BDA Flat: ಬೆಂಗಳೂರಲ್ಲಿ ಮನೆ ಕೊಳ್ಳುವವರಿಗೆ ಗುಡ್ ನ್ಯೂಸ್, ಬಿಡಿಎ ಫ್ಲಾಟ್ ಮೇಳ

0
79

ಬೆಂಗಳೂರು: ಬೆಂಗಳೂರು ನಗರದಲ್ಲಿ ಮನೆ ಕೊಳ್ಳುವವರಿಗೆ ಗುಡ್ ನ್ಯೂಸ್. ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಫ್ಲಾಟ್ ಮೇಳವನ್ನು ಆಯೋಜಿಸಿದೆ. ಫ್ಲಾಟ್ ಇಷ್ಟವಾದರೆ ಪೂರ್ಣ ಹಣ ಪಾವತಿ ಮಾಡಿದರೆ 5 ದಿನಗಳಲ್ಲಿ ಅವುಗಳನ್ನು ಜನರ ಹೆಸರಿಗೆ ನೋಂದಣಿ ಮಾಡಿಕೊಡಲು ಸಹ ಬಿಡಿಎ ಸಿದ್ಧತೆಯನ್ನು ನಡೆಸಿದೆ.

ನಮ್ಮ ಬೆಂಗಳೂರು ನಗರದಲ್ಲಿ ಸ್ವಂತ ಮನೆ ಹೊಂದುವ ನಿಮ್ಮ ಕನಸನ್ನು ನನಸು ಮಾಡಿಕೊಳ್ಳಲು ಇದೊಂದು ಸುವರ್ಣಾವಕಾಶ ಎಂದು ಬಿಡಿಎ ಫ್ಲಾಟ್‌ ಮೇಳದ ಜಾಹೀರಾತಿನಲ್ಲಿ ಹೇಳಿದೆ.

ಬಿಡಿಎ ವತಿಯಿಂದ ಆಗಸ್ಟ್ 30ರಂದು ಬೆಳಗ್ಗೆ 9 ರಿಂದ ಸಂಜೆ 5 ಗಂಟೆಯ ತನಕ ಕಣಿಮಿಣಿಕೆ ವಸತಿ ಸಮುಚ್ಚಯದ ಬಳಿ ಫ್ಲಾಟ್ ಮೇಳವನ್ನು ಆಯೋಜಿಸಲಾಗಿದೆ. ಜನರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು, ಮೇಳದ ಉಪಯೋಗ ಪಡೆದುಕೊಳ್ಳಬಹುದು.

ಆಧುನಿಕ ತಂತ್ರಜ್ಞಾನದಿಂದ ನಿರ್ಮಿತವಾದ, ಹಸಿರು ಪರಿಸರ ಹೊಂದಿರುವ, ಶಿಕ್ಷಣ ಸಂಸ್ಥೆಗಳಿಗೆ ಉತ್ತಮ ಸಂಪರ್ಕ ಮತ್ತು ಇತರ ಹಲವು ಸೌಕರ್ಯಗಳನ್ನು ಒಳಗೊಂಡಿರುವ ಈ ವಸತಿ ಸಮುಚ್ಚಯಗಳು ಮಾರಾಟಕ್ಕೆ ಲಭ್ಯವಿದೆ.

ಫ್ಲಾಟ್ ವಿವರಗಳು: ⁠ಕೊಮ್ಮಘಟ್ಟ (ಎನ್.ಪಿ.ಕೆ.ಎಲ್) ಹಂತ-1 (3 BHK), ⁠ಕೊಮ್ಮಘಟ್ಟ (ಎನ್.ಪಿ.ಕೆ.ಎಲ್) ಹಂತ-2 (2 BHK), ⁠ಹುಣ್ಣಿಗೆರೆ ವಿಲ್ಲಾ (3&4 BHK), ⁠ಆಲೂರು ಹಂತ-1 (1 BHK), ಗುಂಜೂರು ಹಂತ-1 (1 BHK), ⁠ಕಣಿಮಿಣಿಕೆ ಹಂತ-2 (2 BHK) ಮತ್ತು ⁠ಕಣಿಮಿಣಿಕೆ ಹಂತ-5 (3 BHK)ಯಲ್ಲಿರುವ ಫ್ಲಾಟ್‌ಗಳನ್ನು ಮಾರಾಟ ಮಾಡಲಾಗುತ್ತದೆ.

ಫ್ಲಾಟ್‌ನ ಪೂರ್ಣಮೊತ್ತವನ್ನು ಪಾವತಿಸಿ, 26QB, 16B ಸಲ್ಲಿಸಿದ್ದಲ್ಲಿ,5 ಕೆಲಸದ ದಿನಗಳಲ್ಲಿ ಸದರಿ ಫ್ಲಾಟ್‌ ಅನ್ನು ನೋಂದಣಿ ಮಾಡಿಕೊಡಲಾಗುತ್ತದೆ ಎಂದು ಬಿಡಿಎ ಹೇಳಿದೆ. ಬ್ಯಾಂಕುಗಳಿಂದ ಸಾಲ ಸೌಲಭ್ಯದ ವ್ಯವಸ್ಥೆಯೂ ಇದೆ ಎಂದು ತಿಳಿಸಿದೆ.

50 ಎಕರೆಯಷ್ಟು ವಿಸ್ತಾರವಾದ ಪ್ರದೇಶದಲ್ಲಿ ಫೇಸ್‌ 1,2,3,4 ಮತ್ತು 5ಅನ್ನು ಆಧುನಿಕ ತಂತ್ರಜ್ಞಾನದಲ್ಲಿ ನಿರ್ಮಾಣ ಮಾಡಲಾಗಿದೆ. ಈ ಫ್ಲಾಟ್‌ಗಳ ಹತ್ತಿರ ನಾರಾಯಣ ಗುರು ವಿಶ್ವವಿದ್ಯಾಲಯ ಕ್ರೈಸ್ಟ್ ವಿಶ್ವವಿದ್ಯಾಲಯ ಮತ್ತು ಡೆಲ್ಲಿ ಪಬ್ಲಿಕ್ ಸ್ಕೂಲ್‌ಗಳಿವೆ.

ಈ ಫ್ಲಾಟ್‌ಗಳಿಗೆ ಬೆಂಗಳೂರು-ಮೈಸೂರು ಹೆದ್ದಾರಿಯಿಂದ 1 ಕಿ.ಮೀ., ಚಲ್ಲಘಟ್ಟ ಮೆಟ್ರೋ ನಿಲ್ದಾಣದಿಂದ 3 ಕಿ.ಮೀ., ಹೆಜ್ಜಾಲ ರೈಲು ನಿಲ್ದಾಣಕ್ಕೆ 2 ಕಿ.ಮೀ. ದೂರವಿದೆ. ಹೆಜ್ಜಾಲ ಟೋಲ್ ಬಳಿ ನಮ್ಮ ಮೆಟ್ರೋ ನಿಲ್ದಾಣದ ಪ್ರಸ್ತಾಪವೂ ಇದೆ. ಜ್ಯುಡಿಷಿಯಲ್ ಲೇಔಟ್ ಮೂಲಕ ಬಿಎಂ ಎಕ್ಸ್‌ಪ್ರೆಸ್ ವೇ ಸಂಪರ್ಕ ಸಾಧ್ಯ.

ನಿಮ್ಮ ನೆಚ್ಚಿನ ಫ್ಲಾಟ್ ಅನ್ನು ಬುಕ್ ಮಾಡಲು ಅಥವಾ ಖರೀದಿಸಲು ಈ ಮೇಳದಲ್ಲಿ ತಪ್ಪದೇ ಭಾಗವಹಿಸಿ.ಹೆಚ್ಚಿನ ಮಾಹಿತಿಗಾಗಿ ಬಿಡಿಎ ವೆಬ್‌ಸೈಟ್ https://housing.bdabangalore.org ಗೆ ಭೇಟಿ ನೀಡಬಹುದು.

ಉತ್ತಮ ಸ್ಪಂದನೆ: ಬಿಡಿಎ ಆಯೋಜನೆ ಮಾಡುವ ಫ್ಲಾಟ್ ಮೇಳಕ್ಕೆ ಭಾರೀ ಸ್ಪಂದನೆ ಸಿಗುತ್ತಿದೆ. ಮೇ ತಿಂಗಳಿನಲ್ಲಿ ಕೊಮ್ಮಘಟ್ಟ ವಸತಿ ಸಮುಚ್ಛಯದಲ್ಲಿ ಆಯೋಜಿಸಿದ್ದ ಫ್ಲಾಟ್ ಮೇಳದಲ್ಲಿ ನೂರಾರು ಜನರು ಉತ್ಸಾಹದಿಂದ ಪಾಲ್ಗೊಂಡಿದ್ದರು.

ಸುಮಾರು 700ಕ್ಕೂ ಹೆಚ್ಚು ಜನರು ಭಾಗವಹಿಸಿ 200 ಫ್ಲಾಟ್‌ಗಳನ್ನು ಖರೀದಿಸಿದ್ದರು. ಇದರಲ್ಲಿ 75 ಜನರು ಫ್ಲಾಟ್ ಪ್ರಾರಂಭಿಕ ಠೇವಣಿಯನ್ನು ಸ್ಥಳದಲ್ಲಿಯೇ ಪಾವತಿಸಿ, ಹಂಚಿಕೆ ಪತ್ರವನ್ನು ಪಡೆದಿದ್ದರು. ಸುಮಾರು 125 ಮಂದಿ ಫ್ಲಾಟ್ ಅನ್ನು ಮುಂಗಡವಾಗಿ ಕಾಯ್ದಿರಿಸಿದ್ದರು.

ಕೊಮ್ಮಘಟ್ಟದಲ್ಲಿ 75 ಫ್ಲಾಟ್, ಕಣಿಮಿಣಿಕೆಯಲ್ಲಿ 20 ಫ್ಲಾಟ್, ಹುಣ್ಣಿಗೆರೆ ವಿಲ್ಲಾ 1 ಫ್ಲಾಟ್, ಕೋನದಾಸಪುರದಲ್ಲಿ 6 ಫ್ಲಾಟ್‌ಗಳು ಫ್ಲಾಟ್ ಮೇಳದಲ್ಲಿ ಮಾರಾಟವಾಗಿದ್ದವು.

ಈ ಫ್ಲಾಟ್‌ ಮೇಳದಲ್ಲಿ ಕೆನರಾ ಬ್ಯಾಂಕ್, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಹೆಚ್.ಡಿ.ಎಫ್.ಸಿ. ಬ್ಯಾಂಕ್ ಮತ್ತು ಪಂಜಾಬ್ ನ್ಯಾಷನಲ್ ಬ್ಯಾಂಕ್‌ಗಳ ಪ್ರತಿನಿಧಿಗಳು ಪಾಲ್ಗೊಂಡಿದ್ದರು.

Previous articleಆರೋಗ್ಯ, ಶಿಕ್ಷಣ ವ್ಯಾಪಾರೀಕರಣವಾಗಿದೆ: ಮೋಹನ್ ಭಾಗವತ್
Next articleಅಡಿಕೆ ಬೆಳೆಗಾರರಿಗೆ ನೆಮ್ಮದಿಯ ಸುದ್ದಿ ಕೊಟ್ಟ ಕೇಂದ್ರ ಸರ್ಕಾರ

LEAVE A REPLY

Please enter your comment!
Please enter your name here