ಬಾಗಲಕೋಟೆ(ಕುಳಗೇರಿ ಕ್ರಾಸ್): ಗ್ರಾಮದ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ದಟ್ಟನೆಯಿಂದ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಬಾರಿ ವಾಹನ ಜಮಾಯಿಸಿ ಸುಮಾರು ಮೂರ್ನಾಲ್ಕು ಗಂಟೆ ಟ್ರಾಫಿಕ್ ಜಾಮ್ ಉಂಟಾಗಿ ಆಂಬ್ಯುಲೆನ್ಸ್ ಸಹ ಪರದಾಡಿದ ಘಟನೆ ಬುಧವಾರ ಸಂಜೆ ನಡೆಯಿತು.
ಗ್ರಾಮದ ಸಂಗೊಳ್ಳಿ ರಾಯಣ್ಣ ವೃತ್ತದಿಂದ ನಾಲ್ಕೈದು ಕಿಮೀ ದೂರದ ವರೆಗೂ ಟ್ರಾಫಿಕ್ ಜಾಮ್ ಉಂಟಾಗಿ ವಾಹನ ಸವಾರರು ಪರದಾಡಿದರು. ಮೇಲಿಂದ ಮೇಲೆ ಈ ರೀತಿ ಟ್ರಾಫಿಕ್ ಸಮಸ್ಯೆ ಉಂಟಾಗುತ್ತದೆ. ಈ ಟ್ರಾಫಿಕ್ ಸಮಸ್ಯೆ ಜನಪ್ರತಿನಿಧಿಗಳಿಗೆ ಅಷ್ಟೇ ಏಕೆ ಪೊಲೀಸ್ ಅಧಿಕಾರಿಗಳಿಗೂ ಅನುಭವವಾಗಿದೆ. ವಿಪರ್ಯಾಸ ಎಂದರೆ ಸಂಬಂಧಿಸಿದ ಅಧಿಕಾರಿಗಳು ಜನಪ್ರತಿನಿಧಿಗಳು ಮಾತ್ರ ತಲೆಕೆಡಿಸಿಕೊಳ್ಳದೆ ಕಂಡು ಕಾಣದಂತೆ ಇರುತ್ತಾರೆ.
ಗ್ರಾಮದ ಬಸ್ ನಿಲ್ದಾಣ ಸೇರಿದಂತೆ ಪ್ರಮುಖ ಸ್ಥಳಗಳಲ್ಲಿ ಇಕ್ಕಟ್ಟಾದ ರಸ್ತೆ ಇರುವುದರಿಂದ ಗ್ರಾಮದಲ್ಲಿ ಸಾಕಷ್ಟು ಟ್ರಾಫಿಕ್ ಜಾಮ್ ಉಂಟಾಗುತ್ತಿದೆ. ಈ ಹೆದ್ದಾರಿಯಲ್ಲಿ ಗಂಟೆಗೆ ನೂರಾರು ವಾಹನಗಳು ಓಡಾಡುವುದರಿಂದ ಬಾರಿ ಟ್ರಾಫಿಕ್ ಉಂಟಾಗುತ್ತದೆ.
ಗ್ರಾಮದ ಪೊಲೀಸ್ ಉಪಠಾಣೆಯಲ್ಲಿ ಬೆರಳೆಣಿಕೆಯಷ್ಟು ಪೊಲೀಸ್ ಸಿಬ್ಬಂದಿ ಇರದ ಕಾರಣ ನಿತ್ಯ ಟ್ರಾಫಿಕ್ ಸಮಸ್ಯೆ ಬಗೆಹರಿಸಲು ಓರ್ವ ಸಿಬ್ಬಂದಿಗೆ ಸಾಧ್ಯವಾಗುತ್ತಿಲ್ಲ. ಸಾರ್ವಜನಿಕರೇ ಟ್ರಾಫಿಕ್ ಸಮಸ್ಯೆ ಬಗೆಹರಿಸಿಕೊಳ್ಳುವ ಸ್ಥಿತಿ ಬಂದೊದಗಿದೆ.
























