ಹುಬ್ಬಳ್ಳಿ: ಆಂತರಿಕ ಸಂಘರ್ಷದಿಂದ ರಾಜ್ಯ ಕಾಂಗ್ರೆಸ್ ಸರ್ಕಾರ ಪತನವಾಗುವ ಕಾಲ ಸನ್ನಿಹಿತವಾಗಿದೆ. ನಾವು ಯಾವುದೇ ರೀತಿ ಆಪರೇಶನ್ ಕಮಲ ಮಾಡಲ್ಲ. ಆದರೆ ಸ್ವಲ್ಪ ದಿನ ಕಾದು ನೋಡಿ. ಅವರವರ ಕಚ್ಚಾಟದಲ್ಲಿಯೇ ಸರ್ಕಾರ ಬಿದ್ದು ಹೋಗಲಿದೆ ಎಂದು ಮಾಜಿ ಸಚಿವ ಮುರುಗೇಶ ನಿರಾಣಿ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಕಾಂಗ್ರೆಸ್ ನೇತೃತ್ವದ ಈ ಸರ್ಕಾರ ಐದು ವರ್ಷ ಇರಲಿ ಎಂದು ನಾವು ಎಂದುಕೊಳ್ಳುತ್ತೇವೆ. ಆದರೆ, ರಾಜ್ಯದ ಕಾಂಗ್ರೆಸ್‌ನಲ್ಲಿಯೇ ಅಲಾಯೆನ್ಸ್ ಸರ್ಕಾರ ಇದೆ. ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್, ಪ್ರಿಯಾಂಕ ಖರ್ಗೆ, ಗೃಹ ಸಚಿವ ಡಾ.ಜಿ.ಪರಮೇಶ್ವರ ಎಂದು ತಂಡಗಳಾಗಿ ಅಲಾಯನ್ಸ್ ಇವೆ. ಹೀಗಾಗಿ, ಈ ಸರ್ಕಾರ ಬಹಳ ದಿನ ಇರುವುದು ಕಷ್ಟ ಎಂದು ಭವಿಷ್ಯ ನುಡಿದರು.
ಸಿದ್ದರಾಮಯ್ಯ ಬಿಟ್ಟಿ ಭಾಗ್ಯ ಕೊಟ್ಟು ಅಧಿಕಾರ ಪಡೆದಿದ್ದಾರೆ. ಇದೀಗ ರಾಜ್ಯದಲ್ಲಿ ಅಭಿವೃದ್ಧಿ ಕಾಮಗಾರಿ ಬಂದ್ ಮಾಡಿದ್ದಾರೆ. ಆದರೆ, ಭ್ರಷ್ಟಾಚಾರ ಮಾತ್ರ ನಡೆಯುತ್ತಿದೆ ಎಂದು ಮುರುಗೇಶ ನಿರಾಣಿ ಆರೋಪಿಸಿದರು.