ಬಾಗಲಕೋಟೆ: ರಾಜ್ಯ ಸರ್ಕಾರದ ಗ್ಯಾರಂಟಿಗಳ ಮಧ್ಯ ಗೋವುಗಳ ಬದುಕಿನ ಗ್ಯಾರಂಟಿ ಉಳಿಸಬೇಕಿತ್ತು. ಬದಲಾಗಿ ಮತಾಂತರ ಹಾಗು ಗೋ ಹತ್ಯೆ ಕಾಯ್ದೆಯಿಂದ ಬಹುಸಂಖ್ಯಾತ ಹಿಂದುಗಳಿಗೆ ಅವಮಾನ ಮಾಡಿದ್ದಲ್ಲದೆ, ಬ್ರಿಟಿಷರ ಬೆಂಬಲದೊಂದಿಗೆ ಇಂದಿಗೂ ನಡೆಸುತ್ತಿರುವ ರಾಜಕಾರಣ ಖಂಡನೀಯವೆಂದು ಯುವ ಬ್ರಿಗೇಡ್‌ನ ಸೂಲಿಬೆಲೆ ಚಕ್ರವರ್ತಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಗುಡುಗಿದರು.
ಬನಹಟ್ಟಿಯ ಈಶ್ವರಲಿಂಗ ಮೈದಾನದಲ್ಲಿ ಜರುಗಿದ `ನಮ್ಮ ಬದುಕಿಗೂ ಗ್ಯಾರಂಟಿ ಕೊಡಿ’ ಕಾರ್ಯಕ್ರಮದಲ್ಲಿ ಗೋರಕ್ಷತೆ ಕುರಿತು ಮಾತನಾಡುವ ಸಂದರ್ಭ, ಹಿಂದೂಗಳ ವಿರುದ್ಧ ಕಾಯ್ದೆ ತರುವ ಮೂಲಕ ಮೂಲ ಸಿದ್ಧಾಂತಗಳ ಮೇಲೆ ಕೊಡಲಿಯೇಟು ನೀಡುತ್ತಿರುವದನ್ನು ಸಹಿಸುವದಿಲ್ಲವೆಂದರು.
ಸಾವರ್ಕರ್, ಭಗತ್‌ಸಿಂಗ್‌ರ ಪಠ್ಯ ತೆಗೆಯಲು ಅವರೇನು ಭಯೋತ್ಪಾದಕರಾ? ಹಿಂದೂ ಧರ್ಮದ ಮೇಲಿನ ಅವಮಾನ ನಿಲ್ಲಿಸಬೇಕಿದೆ. ದೇಶ ವಿಭಜನೆಗೆ ಗೋ ಹತ್ಯೆ ನಡೆಸುತ್ತ, ಉಚಿತಗಳ ಮಧ್ಯದಲ್ಲಿ ಜನರ ಬಾಯಿ ಮುಚ್ಚಿಸುವ ಕುತಂತ್ರ ಸರ್ಕಾರದಿಂದ ನಡೆಯುತ್ತಿದೆ. ಇವೆಲ್ಲದರ ವಿರುದ್ಧ ಬೃಹತ್ ಪ್ರಮಾಣದ ಪ್ರತಿಭಟನೆಯೊಂದಿಗೆ ಎಚ್ಚರಿಕೆ ನಡೆಯಲಿದೆ ಎಂದರು.
ಫಯಾಜ್‌ಖಾನ್ ಮಾತನಾಡಿ, ಗೋವು ನಮಗೆ ನೀಡಿದ ಹಾಲು, ತುಪ್ಪ ಸ್ವಸ್ಥ ಆರೋಗ್ಯವನ್ನು ನೀಡಿದರೆ ಗೋ ಮಾಂಸ ಸೇವನೆ ಆರೋಗ್ಯಕ್ಕೆ ಒಳ್ಳೆಯದಲ್ಲ. ಗೋವುಗಳಿಂದ ನಮಗೆ ಹದಿನಾರು ಸಂಸ್ಕಾರಗಳು ಬರುತ್ತವೆ. ಇಂಥ ಗೋ ಹತ್ಯೆಯ ಮೂಲಕ ಬಹುಸಂಖ್ಯಾತ ಹಿಂದೂಗಳನ್ನು ಅವಮಾನಿಸುವ ಕಾನೂನನ್ನು ಸರ್ಕಾರ ಹಿಂದಕ್ಕೆ ಪಡೆದುಕೊಳ್ಳಲಿ.
ಕಾಂಗ್ರೆಸ್ ಪಕ್ಷ ಸುಳ್ಳು ಹಂಚುವ ಕಾರ್ಯವನ್ನು ಬಿಟ್ಟು ಬಿಡಬೇಕಾಗಿದೆ. ಒಡೆದ ಹೃದಯಗಳನ್ನು ಬೆಸೆಯುವ ಕಾರ್ಯವನ್ನು ಕೈಗೊಳ್ಳಬೇಕಾಗಿದೆ. ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರ ಉಚಿತ ಭಾಗ್ಯಗಳನ್ನು ನೀಡಿ ಅಧಿಕಾರಕ್ಕೆ ಬಂದಿದೆ. ಆರು ತಿಂಗಳಿನ ನಂತರ ಸರ್ಕಾರವೂ ಕೂಡಾ ಉಚಿತವಾಗಿ ದೊರೆಯಲಿದೆ. ರಾಷ್ಟ್ರ ಭಕ್ತರ ಪಾಠಗಳನ್ನು ಪಠ್ಯದಿಂದ ಬಿಟ್ಟಿದ್ದು ಬಹುದೊಡ್ಡ ತಪ್ಪು ಎಂದು ಫೈಜಖಾನ್ ಕಾಂಗ್ರೆಸ್ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತ ಪಡಿಸಿದರು. ಹುಲ್ಯಾಳದ ಜ್ಞಾನ ಯೋಗಾಶ್ರಮದ ಹರ್ಷಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಶಾಸಕ ಸಿದ್ದು ಸವದಿ, ಶಿವಾನಂದ ಗಾಯಕವಾಡ ಉಪಸ್ಥಿತರಿದ್ದರು.
