ಬಳ್ಳಾರಿ: ಬಳ್ಳಾರಿ ತಾಲೂಕಿನ ಹಲಕುಂದಿ ಗ್ರಾಮದ ಬಳಿಯ ಕಲ್ಯಾಣ ಕೋಳಿ ಫಾರಂ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾರಿಗೆ ಸಂಸ್ಥೆಯ ಬಸ್ ಹರಿದು ಮೂವರು ಜನ ಹಾಸ್ಟೆಲ್ ವಿದ್ಯಾರ್ಥಿಗಳು ಸಾವನ್ನಪ್ಪಿರುವ ಘಟನೆ ತಡರಾತ್ರಿ ಸಂಭವಿಸಿದೆ.
ಬೆಂಗಳೂರಿನಿಂದ ಜೇವರ್ಗಿಗೆ ಹೊರಟಿದ್ದ ಬಸ್ ರಸ್ತೆ ದಾಟುತ್ತಿದ್ದ ಯುವಕರ ಮೇಲೆ ಹರಿದು ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಮೃತರನ್ನು ಮುರುಡಿಯ ಶಂಕರ್ (18), ಎಮ್ಮಿಗನೂರಿನ ಕನಕರಾಜ್ (19), ನಾಗೇನಹಳ್ಳಿಯ ಹೊನ್ನೂರ (22) ಎಂದು ಗುರುತಿಸಿದ್ದು, ಇವರು ಬಳ್ಳಾರಿ ನಗರದ ಎಸ್ಸಿ-ಎಸ್ಟಿ ಹಾಸ್ಟೆಲ್‌ನ ವಿದ್ಯಾರ್ಥಿಗಳಾಗಿದ್ದಾರೆ.
ಈ ಕುರಿತು ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಾಹನವಿಲ್ಲದೆ ಮಧ್ಯರಾತ್ರಿ ಅಲ್ಲಿ ವಿದ್ಯಾರ್ಥಿಗಳು ಇದ್ದುದರ ಬಗ್ಗೆ ಹಲವಾರು ಅನುಮಾನಗಳಿವೆ. ಅಲ್ಲದೆ ಕಳೆದ ಎರೆಡು ದಿನಗಳಿಂದ ಅವರು ಹಾಸ್ಟೆಲ್ ತೊರೆದಿದ್ದರು ಎನ್ನಲಾಗುತ್ತದೆ. ಈ ಬಗ್ಗೆ ಇನಷ್ಟು ಮಾಹಿತಿ ಪೊಲೀಸ್ ತನಿಖೆಯಿಂದ ತಿಳಿಯಬೇಕಿದೆ.


























