ಶ್ರೀರಂಗಪಟ್ಟಣ: ತಾಲ್ಲೂಕಿನ ತಡಗವಾಡಿ ಗ್ರಾಮದಲ್ಲಿ ಮದ್ದೂರು ಕೆಪಿ ದೊಡ್ಡಿ ಸಂಪೂರ್ಣ ಅಂತಾರಾಷ್ಟ್ರೀಯ ಕೃಷಿ ಮತ್ತು ತೋಟಗಾರಿಕೆ ತಂತ್ರಜ್ಞಾನ ಸಂಸ್ಥೆ ವತಿಯಿಂದ ಅಂತಿಮ ವರ್ಷದ ಬಿಎಸ್ಸಿ(ಹಾನ್ಸ್) ಕೃಷಿ ವಿದ್ಯಾರ್ಥಿಗಳ ಗ್ರಾಮೀಣ ಕೃಷಿ ಕಾರ್ಯಗಾರವು ಯಶಸ್ವಿಯಾಗಿ ನೆರವೇರಿತು.
ಗ್ರಾಮದ ಜಮೀನೊಂದರಲ್ಲಿ ಕಳೆದ ಮೂರು ತಿಂಗಳದ ವಿವಿಧ ತಳಿಯ ಏಕದಳ ಹಾಗೂ ದ್ವಿದಳ ಬೆಳೆಗಳನ್ನು ಬೆಳೆದು ರೈತರಿಗೆ ಬೆಳೆಯುವ ಪದ್ದತಿ, ಬಿತ್ತನೆ ವಿಧಾನ ಹಾಗೂ ನೀರಿನ ಪ್ರಮಾಣದ ಬಗ್ಗೆ ತಾವು ಬೆಳೆದಿರುವ ಬೆಳಗಳನ್ನು ಮಾದರಿಯಾಗಿ ತೋರಿಸಿ ರೈತರಿಗೆ ಸಮಗ್ರ ಮಾಹಿತಿ ನೀಡಿದರು.
ಸುಮಾರು ಹದಿನೈದು ಗುಂಟೆ ಜಾಗದಲ್ಲಿ ಬೆಳೆಯಲಾಗಿದ್ದ ಅವರೆ, ಬೀನ್ಸ್, ತೊಗರಿ, ಅಲಸಂಧಿ, ಜೋಳ, ರಾಗಿ, ಭತ್ತ, ಸಜ್ಜೆ, ಬಿಳಿರಾಗಿ, ಅರ್ಕ, ಕೊರಲೆ, ಸೀಮೆ, ಕಾಡುಕೊತ್ತಂಬರಿ, ಬ್ರಾಹ್ಮಿ, ಒಂದೆಲಗ, ನೆಲ ಬೇವು, ಸುಗಂಧ ಮಾಲ, ಮಧುನಾಸಿನಿ, ನಿತ್ಯ ಪುಷ್ಪ, ಬಟಾಣಿ, ಬೆಂಡೆಕಾಯಿ, ಚೊಟ್ಟು, ಬದನೆಕಾಯಿ, ನೀಲ್ ಕೋಲ್, ಮೂಲಂಗಿ, ಟೊಮ್ಯಾಟೋ ಸೇರಿದಂತೆ ಹಲವು ಔಷಧ ಗಿಡಗಳನ್ನು ಕಡಿಮೆ ನೀರು ಬಳಸಿ ಹೆಚ್ಚು ಫಲವತ್ತಾಗಿ ಬೆಳೆಯುವ ಪದ್ದತಿಯನ್ನು ವಿದ್ಯಾರ್ಥಿಗಳು ತಾವು ಬೆಳೆದಿರುವ ಬೆಳೆಗಳ ಸ್ಯಾಂಪಲ್ ಅನ್ನು ಪ್ರದರ್ಶಿಸಿ ಮಾಹಿತಿ ನೀಡಿದರು.

ತಾಲ್ಲೂಕು ಕೃಷಿ ಸಹಾಯಕ ನಿರ್ದೇಶಕ ಹರ್ಷ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ರೈತರು ಭತ್ತ ಬೆಳೆದರೆ ಮುಂದಿನ ಬೆಳೆ ಭತ್ತವನ್ನೇ ಬೆಳೆಯುವುದು ಬೇಡ. ಕಬ್ಬು ಬೆಳೆದರೆ ಮದಿನ ಬೆಳೆ ಕಬ್ಬನ್ನೇ ಬೆಳೆಯುವುದು ಬೇಡ. ರಾಗಿ ಬೆಳೆದರೆ ಮುಂದಿನ ಬೆಳೆ ರಾಗಿಯನ್ನೇ ಬೆಳೆಯುವುದು ಬೇಡ. ಇಲ್ಲಿ ವಿದ್ಯಾರ್ಥಿಗಳು ಬೆಳೆದಿರುವ ಏಕದಳ, ದ್ವಿದಳ ಹಾಗೂ ಔಷಧ ಗುಣವುಳ್ಳ ಬೆಳೆಗಳನ್ನು ಬೆಳೆದು ಭೂಮಿಯ ಫಲವತ್ತತೆಯನ್ನು ಹೆಚ್ಚಿಸಿಕೊಳ್ಳುವುದರ ಜೊತೆಗೆ ಹೆಚ್ಚು ಲಾಭದಾಯಕ ಬೆಳೆಗಳನ್ನು ಬೆಳೆಯುವಂತೆ ರೈತರಿಗೆ ಸಲಹೆ ನೀಡಿದರು.
ಸಂಪೂರ್ಣ ಕೃಷಿ ವಿದ್ಯಾ ಸಂಸ್ಥೆಯ ಡೀನ್ ಬಿ.ಎನ್. ಜ್ಞಾನೇಶ್ ಮಾತನಾಡಿ, ಈ ಶಿಬಿರದ ಉದ್ದೇಶ ರೈತರು ಲಾಭದಾಯಕ ಕೃಷಿಯತ್ತ ಮಾಡಬೇಕೆಂಬುದು ಸಂಸ್ಥೆಯ ಉದ್ದೇಶವಾಗಿದೆ. ವಿದ್ಯಾರ್ಥಿಗಳು ಹಾಗೂ ಸಂಸ್ಥೆಯ ಮುಖ್ಯಸ್ಥರು ಅಭಿವೃದ್ಧಿ ಪಡಿಸಿರುವ ವಿವಿಧ ಬಗೆಯ ಬೆಳೆಗಳು ರೈತರಿಗೆ ವರಧಾನವಾಗಲಿದೆ. ರೈತರು ಈ ಶಿಬಿರದ ಮಾಹಿತಿಯನ್ನು ಸದ್ಬಳಕೆ ಮಾಡಿಕೊಂಡು ಉತ್ತಮ ಕೃಷಿಕರಾಗಬೇಕೆಂದು ಮನವಿ ಮಾಡಿದರು.
ಸಂಸ್ಥೆಯ ಶಿಬಿರದ ಸಂಯೋಜಕಿ ಡಾ. ಸುಧಾ.ಸಿ.ಕೆ ಮಾತನಾಡಿ, ವಿದ್ಯಾರ್ಥಿಗಳು ಇಲ್ಲೇ ಉಳಿದು ಸತತ ಅನ್ವೇಷಣೆಯ ಪ್ರಯತ್ನದ ಫಲವಾಗಿ ಇಲ್ಲಿ ವಿವಿಧ ತಳಿಗಳ ಬೆಳೆಗಳನ್ನು ಬೆಳೆದು ತೋರಿಸಿದ್ದಾರೆ. ರೈತರು ಒಂದೇ ಬೆಳೆಯನ್ನು ಬೆಳೆದು ನಷ್ಟ ಅನುಭವಿಸುವ ಬದಲು ಕಡಿಮೆ ನೀರನ್ನು ಬಳಸಿ ವಿವಿಧ ಬೆಳೆಗಳನ್ನು ಬೆಳೆದು ಲಾಭದ ಜೊತೆಗೆ ಮಣ್ಣಿನ ಫಲವತ್ತತೆಯನ್ನು ಹೆಚ್ಚಿಸಿಕೊಳ್ಳಬೇಕು ಎಂದು ರೈತರಿಗೆ ಮನವಿ ಮಾಡಿದರು.
ಈ ವೇಳೆ ಸಂಸ್ಥೆಯ ಪ್ರಾಧ್ಯಾಪಕ ನಿರಂಜನ್ ಮೂರ್ತಿ, ಮಂಡ್ಯ ಕೃಷಿ ಸಹಾಯಕ ನಿರ್ದೇಶಕ ವಿಜೇಂದ್ರ ಹೆಗ್ಗಡೆ, ಸಂಸ್ಥೆಯ ಸಂಶೋಧನಾ ನಿರ್ದೇಶಕ ಬೈರೇಗೌಡ ಸೇರಿದಂತೆ ಸಂಸ್ಥೆಯ ಪ್ರಮುಖರು, ವಿದ್ಯಾರ್ಥಿಗಳು ಹಾಗೂ ಈ ಭಾಗದ ಸುಮಾರು ಐವತ್ತಕ್ಕೂ ಹೆಚ್ಚು ರೈತರು ಉಪಸ್ಥಿತರಿದ್ದರು.
