ಕಲಬುರಗಿ: ಚಿತ್ತಾಪುರ ತಾಲ್ಲೂಕಿನ ಲಾಡ್ಲಾಪುರ ಗ್ರಾಮದಲ್ಲಿ ಸಾರ್ವಜನಿಕರಿಗೆ ಕುಡಿಯುವ ನೀರು ಪೂರೈಕೆ ಮಾಡುವ ಓವರ್ ಹೆಡ್ ಟ್ಯಾಂಕ್ ನಲ್ಲಿ ಗುರುವಾರ 2 ನಾಗರ ಹಾವುಗಳು ಸತ್ತ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಸಾರ್ವಜನಿಕರ ತಲ್ಲಣಕ್ಕೆ ಕಾರಣವಾಗಿದೆ.
ಸಾರ್ವಜನಿಕರ ನಳಗಳ ಮೂಲಕ ನೀರು ತುಂಬಿಸುತ್ತಿದ್ದಾಗ ಹಾವಿನ ಪೊರೆಗಳು ಕಂಡು ಬಂದಿವೆ. ಇದು ಸುದ್ದಿಯಾಗುತ್ತಲೇ ಕೆಲ ಯುವಕರು ಟ್ಯಾಂಕ್ ಇಣುಕಿ ನೋಡಿದಾಗ ಎರಡು ಹಾವುಗಳು ಸತ್ತು ನೀರಿನಲ್ಲಿ ತೇಲಾಡುತ್ತಿರುವುದು ಗಮನಕ್ಕೆ ಬಂದಿದೆ.
ದಲಿತರ ಬಡಾವಣೆ, ಹನುಮಾನ ನಗರ, ನಿಜಾಮ್ ಬಂಡಿ ಏರಿಯಾ ಹಾಗೂ ಬಸ್ ಸ್ಟಾಂಡ್ ಏರಿಯಾಗಳಿಗೆ ಈ ನೀರು ಪೂರೈಕೆಯಾಗುತ್ತಿದ್ದು ಸಾರ್ವಜನಿಕರು ಕುಡಿಯಲು ಬಳಸುತ್ತಾರೆ. ಇದರಿಂದ ಬಡಾವಣೆಗಳ ಜನರು ಗಾಬರಿಗೊಂಡು ಸ್ಥಳೀಯ ಪಂಚಾಯಿತಿ ಟ್ಯಾಂಕ್ ಸ್ವಚ್ಛತೆಯಲ್ಲಿ ನಿರ್ಲಕ್ಷ ವಹಿಸಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದರು.