ಕಲಬುರಗಿ: ನಲ್ಲಿ ಮೂಲಕ ಗ್ರಾಮೀಣ ಭಾಗದಲ್ಲಿ ಮನೆ ಮನೆಗೆ ನೀರು ಪೂರೈಸುವ ಕೇಂದ್ರ ಸರ್ಕಾರದ `ಜಲಜೀವನ್ ಮಿಷನ್’ ಯೋಜನೆ ಜಿಲ್ಲೆಯಲ್ಲಿ ಸಂಪೂರ್ಣ ಹಳ್ಳ ಹಿಡಿದಿದ್ದು ಕೋಟ್ಯಂತರ ರೂ. ಹಣ ಲೂಟಿ ಹೊಡೆಯಲಾಗುತ್ತಿದೆ ಎಂದು ಆಳಂದ ಕ್ಷೇತ್ರದ ಮಾಜಿ ಶಾಸಕ ಬಿ.ಆರ್. ಪಾಟೀಲ್ ಆರೋಪಿಸಿದರು.
ಇಲ್ಲಿಯ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬಹುತೇಕ ಎಲ್ಲ ಕಡೆ ಕಾಮಗಾರಿಗಳು ಕಳಪೆಯಾಗಿದ್ದು, ಒಂದು ಕಡೆಯೂ ಇನ್ನೂ ಜನರ ಮನೆಗೆ ನೀರು ತಲುಪಿಲ್ಲ. ಭಾರಿ ಲೂಟಿಯೇ ನಡೆದಿದೆ. ಹಾಗಾಗಿ ಉನ್ನತ ಮಟ್ಟದಲ್ಲಿ ಸಮಗ್ರ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.
ಆಳಂದ ತಾಲೂಕಿನಲ್ಲಿ ಜಿ.ಪಂ. ಗ್ರಾಮೀಣ ಕುಡಿಯುವ ನೀರು ಸರಬರಾಜು ಉಪ ವಿಭಾಗದಡಿ ಕೈಗೊಳ್ಳಲಾದ ಕಾಮಗಾರಿಗಳು ಸಂಪೂರ್ಣ ಕಳಪೆಯಾಗಿವೆ. ಆಳಂದ ಕ್ಷೇತ್ರದ 127 ಮತ್ತು ಕಲಬುರಗಿ ಗ್ರಾಮೀಣ ಕ್ಷೇತ್ರ ವ್ಯಾಪ್ತಿಯ 33 ಸೇರಿದಂತೆ ಆಳಂದ ತಾಲೂಕಿನ 160 ಹಳ್ಳಿಗಳಲ್ಲಿ 160.89 ಕೋಟಿ ರೂ. ವೆಚ್ಚದಲ್ಲಿ ಈ ಯೋಜನೆ ಜಾರಿಗೊಂಡಿದೆ. ಎಲ್ಲಿಯೂ ಸರಿಯಾಗಿ ಕಾಮಗಾರಿ ನಡೆದಿಲ್ಲ. ಇದೊಂದು ಅವೈಜ್ಞಾನಿಕ ಕಾರ್ಯಕ್ರಮ. ನೀರಿನ ಮೂಲವನ್ನೇ ಕಂಡುಕೊಳ್ಳದೇ, ಅಂತರ್ಜಲ ಮಟ್ಟ ತಿಳಿದುಕೊಳ್ಳದೇ ಬೇಕಾಬಿಟ್ಟಿಯಾಗಿ ಜಾರಿಗೊಂಡಿದೆ, ಬೋರ್‌ವೆಲ್ ಕೊರೆದರೂ ನೀರು ಸಿಗುತ್ತಿಲ್ಲ, ಬಾವಿ ತೋಡಿದರೂ ನೀರು ಲಭ್ಯವಾಗುತ್ತಿಲ್ಲ ಎಂದು ಅವರು ದೂರಿದರು.
ಒಂದೆಡೆ ಕಳಪೆ ಕಾಮಗಾರಿ ನಡೆದಿದ್ದರೆ ಮತ್ತೊಂದೆಡೆ ಸಿ.ಸಿ. ರಸ್ತೆಗಳು ಹಾಳಾಗಿವೆ. ರಸ್ತೆಗಳನ್ನು ಅಗೆದು ಮಧ್ಯೆಯೇ ಪೈಪ್‌ಲೈನ್ ಹಾಕಿರುವುದರಿಂದ ರಸ್ತೆಗಳು ಹದಗೆಟ್ಟಿವೆ. ಅವುಗಳ ರಿಪೇರಿಗೆ ಯಾರೂ ಮುಂದಾಗಿಲ್ಲ. ರಸ್ತೆಗಳು ಹದಗೆಟ್ಟಿರುವುದರಿಂದ ವೃದ್ಧರು, ಮಹಿಳೆಯರು ಬೀಳುತ್ತಿದ್ದಾರೆ ಎಂದರು.
ಆಳಂದ ತಾಲೂಕಿನಲ್ಲಿ ಕೈಗೊಳ್ಳಲಾಗಿರುವ ಜಲಜೀವನ್ ಮಿಷನ್ ಕಾಮಗಾರಿಗಳ ಗುಣಮಟ್ಟ ಮತ್ತು ಅಳವಡಿಸಲಾದ ಪೈಪ್, ಮೀಟರ್ ಹಾಗೂ ನಲ್ಲಿಗಳ ಗುಣಮಟ್ಟ ಪರೀಕ್ಷಿಸಲು ರಾಜ್ಯ ಮಟ್ಟದ ಅಧಿಕಾರಿಯನ್ನು ನಿಯೋಜಿಸಿ ವರದಿ ಪಡೆದು ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
ಬಿಜೆಪಿಯವರ ಲೂಟಿ ಯೋಜನೆ
ಜಲಜೀವನ್ ಮಿಷನ್ ಬಿಜೆಪಿಯವರು ದುಡ್ಡು ಮಾಡಿಕೊಳ್ಳುವುದಕ್ಕಾಗಿಯೇ ತಂದಿರುವಂಥ ಯೋಜನೆಯಾಗಿಬಿಟ್ಟಿದೆ. ಜಿಲ್ಲೆಯ ಇತರೆ ಕ್ಷೇತ್ರಗಳಲ್ಲೂ ಇದೇ ಪರಿಸ್ಥಿತಿಯಿದೆ. ಹಗಲು ದರೋಡೆ ನಡೆದಿದೆ ಎಂದು ಬಿ.ಆರ್. ಪಾಟೀಲ್ ಆರೋಪಿಸಿದರು. ಬಿಜೆಪಿಯವರು ದುಡ್ಡು ಮಾಡಿಕೊಳ್ಳುವುದಕ್ಕೆ ಈ ಯೋಜನೆ ಇದ್ದಂತಿದೆ. ಇದೊಂದು ಆ ಪಕ್ಷಕ್ಕೆ ಬಂದಿರುವ ನಿಧಿಯಾಗಿದೆ ಎಂದು ಅವರು ಲೇವಡಿ ಮಾಡಿದರು. ಜಿ.ಪಂ. ಮಾಜಿ ಸದಸ್ಯ ಸಿದ್ಧರಾಮ ಪ್ಯಾಟಿ, ಗಣೇಶ ಪಾಟೀಲ್, ಈರಣ್ಣ ಝಳಕಿ ಇದ್ದರು.