ಮುಂಬೈ: ಸರಕು ಹಾಗೂ ಸೇವಾ ತೆರಿಗೆಯ ಪರಿಷ್ಕೃತ ದರಗಳು ಇನ್ನೇನು ವಾರದಲ್ಲಿ (ಸೆ. 22) ಜಾರಿಗೆ ಬರಲಿದ್ದು ಜಾಮ್‌ನಿಂದ ಶಾಂಪೂವರೆಗೆ ದಿನಸೀ ವಸ್ತುಗಳ ಬೆಲೆ ಕಡಿತಗೊಳ್ಳುವುದರಿಂದ ಗ್ರಾಹಕರಿಗೆ ಹೆಚ್ಚಿನ ಉಳಿತಾಯವಾಗಲಿದೆ.
ಹೀಗಾಗಿ ಅತಿಹೆಚ್ಚು ಖರ್ಚಾಗುವ ವಸ್ತುಗಳ ತಯಾರಿಕಾ ಕಂಪನಿಗಳು ಈಗ ಬೆಲೆ ಕಡಿತ ಯೋಜನೆಗಳನ್ನು ದೃಢೀಕರಿಸಲು ಆರಂಭಿಸಿವೆ. ಸರ್ಕಾರದ ಆದೇಶದಂತೆ ಕೆಲವು ಕಂಪನಿಗಳು ಜಾಹೀರಾತು ಮೂಲಕ ತಮ್ಮ ಉತ್ಪನ್ನಗಳ ಬೆಲೆ ಕಡಿತವನ್ನು ಘೋಷಿಸುತ್ತಿವೆ.
ಹೆಚ್ಚಿನ ಗ್ರಾಹಕರನ್ನು ಹೊಂದಿರುವ ಎಚ್‌ಯುಎಲ್ ಕಂಪನಿ ಈಗ ಪ್ಯಾಕೇಜ್ ಹಾಗೂ ಗಾತ್ರಗಳಿಗೆ ಅನುಸಾರ ತನ್ನ ಉತ್ಪನ್ನಗಳ ಬೆಲೆಯನ್ನು 5 ರೂ.ನಿಂದ 76 ರೂ. ವರೆಗೂ ಕಡಿತಗೊಳಿಸುವುದಾಗಿ ಪ್ರಕಟಿಸಿದೆ.
ಹೀಗಾಗಿ ಡೌವ್, ಲ್ಯಾಕ್ಮೆ, ಹಾರ್ಲಿಕ್ಸ್‌ನಂತಹ ಗೃಹೋಪಯೋಗಿ ವಸ್ತುಗಳು ಗ್ರಾಹಕರಿಗೆ ಕೈಗಟಕುವ ಬೆಲೆಯಲ್ಲಿ ದೊರೆಯಲಿದೆ. 400 ಗ್ರಾಮ್‌ಗಳಷ್ಟು ಹಾರ್ಲಿಕ್ಸ್ ವ್ಯೂಮೆನ್ ಪ್ಲಸ್ ಪಾನೀಯದ ಬೆಲೆ ಈಗ 320 ರೂ.ನಿಂದ 284 ರೂ.ಗೆ ಇಳಿಯಲಿದೆ.
ಲ್ಯಾಕ್ಮೆ 9 ಟು 5 ಕ್ಯಾಂಪೆಕ್ಟ್ ಬೆಲೆಯಲ್ಲಿ 76 ರೂ. ಗಳಷ್ಟು ಕಡಿತವಾಗಲಿದೆ. ಗ್ರಾಹಕ ವಸ್ತುಗಳ ಬೆಲೆಯಲ್ಲಿ 30ರಿಂದ 80 ರೂ. ಕಡಿತವಾಗುವುದರಿಂದ ಮಧ್ಯಮವರ್ಗದವರಿಗೆ ಇದುವರೆಗೆ ಕೈಗಟುಕದ ವಸ್ತುಗಳು ಖರೀದಿಸಲು ಸಾಧ್ಯವಾಗಲಿದೆ.
ಅತಿದೊಡ್ಡ ಪಿಎಂಡ್ ಜಿ ಕಂಪನಿ ಈಗ ಪ್ಯಾಂರ‍್ಸ್, ಪ್ಯಾಂಟಿನಿ, ವಿಕ್ಸ್‌ನಂತಹ ವಸ್ತುಗಳ ಬೆಲೆಯಲ್ಲಿ 3 ರೂ. ನಿಂದ100 ರೂ. ವರೆಗೆ ಕಡಿತ ಮಾಡುತ್ತಿದೆ. ಈ ಬೆಲೆ ಕಡಿತ ಸೆ. 22ರಿಂದ ಜಾರಿಗೆ ಬರಬೇಕಿದೆ. ಆದರೆ ಕೆಲವು ಕಂಪನಿಗಳು ಈಗಾಗಲೇ ಹೊಸ ಮಾರಾಟ ಬೆಲೆ ಇರುವ ಉತ್ಪನ್ನಗಳ ಉತ್ಪಾದನೆ ಶುರು ಮಾಡಿವೆ.
ಈ ನಡುವೆ ಸದ್ಯ ಮಾರಾಟಕ್ಕಿರುವ ಉತ್ಪನ್ನಗಳನ್ನು ತ್ವರಿತಗತಿಯಲ್ಲಿ ಮಾರುವ ಉದ್ದೇಶದಿಂದ ಎಚ್‌ಯುಎಲ್‌ನಂತಹ ಕಂಪನಿಗಳು ಗ್ರಾಹಕರಿಗೆ ಸೋಡಿ(ಡಿಸ್ಕೌಂಟ್) ಬೆಲೆಯಲ್ಲಿ ಮಾರುವ ಮೂಲಕ ತಮ್ಮ ಉತ್ಪನ್ನಗಳ ಖರೀದಿಗೆ ಹುರಿದುಂಬಿಸುತ್ತಿವೆ.
ಇದೇ ವೇಳೆ ಹಳೆಯ ಉತ್ಪನ್ನಗಳ ಪ್ಯಾಕ್ ಮೇಲೆ ಪರಿಷ್ಕೃತ ಎಂಆರ್‌ಪಿಗಳನ್ನು ಪ್ರದರ್ಶಿಸಲು ಸರ್ಕಾರ ಅವಕಾಶ ನೀಡಿರುವುದರಿಂದ ಕಂಪನಿಗಳು ಈಗ ತಮ್ಮ ಆಂತರಿಕ ಯೋಜನೆಯನ್ನು ತ್ವರಿತಗೊಳಿಸುತ್ತಿವೆ.
ಆದರೂ ಪ್ಯಾಕ್‌ಗಳಲ್ಲಿ ತುಂಬುವ ವಸ್ತುಗಳ ಪ್ರಮಾಣ(ಗ್ರಾಮ್) ಹೆಚ್ಚಳಕ್ಕೆ ಸರ್ಕಾರಕ್ಕೆ ಮನವಿ ಮಾಡಿರುವ ಕಂಪನಿಗಳು ಈ ಬಗ್ಗೆ ಸರ್ಕಾರದ ನಿರ್ದೇಶನವನ್ನು ನಿರೀಕ್ಷಿಸುತ್ತಿವೆ. 5 ಮತ್ತು 5 ರೂ. ಬೆಲೆಯ ಪ್ಯಾಕ್‌ಗಳ ಬೆಲೆ ಕಡಿತ ಕಾರ್ಯಸಾಧುವಲ್ಲ ಎಂದು ಕೆಲವು ಕಂಪನಿಗಳ ಪ್ರತಿನಿಧಿಗಳು ತೆರಿಗೆ ಇಲಾಖೆ ಅಧಿಕಾರಿಗಳಿಗೆ ಮನವರಿಕೆ ಮಾಡಿಕೊಟ್ಟಿದ್ದಾರೆ.