ಟರ್ಕಿಗೆ ರಾಜತಾಂತ್ರಿಕ ಬಿಸಿ ಮುಟ್ಟಿಸುವುದು ಅತ್ಯವಶ್ಯಕ

ಟರ್ಕಿ ದೇಶ ಪಾಕ್‌ಗೆ ಯುದ್ಧೋಪಕರಣಗಳನ್ನು ಒದಗಿಸುವ ಮೂಲಕ ಭಾರತದ ವಿರುದ್ಧ ಸೆಡ್ಡು ಹೊಡೆದು ನಿಂತಿದೆ. ಇದಕ್ಕೆ ರಾಜತಾಂತ್ರಿಕವಾಗಿ ಬಿಸಿ ಮುಟ್ಟಿಸುವುದು ಅಗತ್ಯ. ನಮ್ಮ ಟರ್ಕಿ ಸಂಬಂಧ ಅತ್ಯಂತ ಹಳೆಯದು. ಆದರೂ ಟರ್ಕಿ ಧಾರ್ಮಿಕ ಕಾರಣಗಳಿಗಾಗಿ ಪಾಕ್ ಪರ ನಿಂತಿದೆ. ಇದು ಸರಿಯಾದ ಕ್ರಮವಲ್ಲ. ಮುಸ್ಲಿಂ ದೇಶಗಳೇ ಪಾಕ್ ವರ್ತನೆಯನ್ನು ಒಪ್ಪುತ್ತಿಲ್ಲ. ಈಗ ಎಲ್ಲ ಕಡೆ ಉಗ್ರವಾದಿಗಳ ವಿರುದ್ಧ ಸಮರವೇ ನಡೆಯುತ್ತಿದೆ. ಅಮೆರಿಕದಿಂದ ಹಿಡಿದು ಭದ್ರತಾ ಮಂಡಳಿಯಲ್ಲಿರುವ ೧೩ ದೇಶಗಳು ಪಾಕ್ ಉಗ್ರರಿಗೆ ನೆರವು ನೀಡುತ್ತಿರುವ ಬಗ್ಗೆ ಬಹಿರಂಗವಾಗಿ ಟೀಕಿಸುತ್ತಿರುವಾಗ ಟರ್ಕಿ ಬಹಿರಂಗವಾಗಿ ಪಾಕ್‌ಗೆ ಬೆಂಬಲ ವ್ಯಕ್ತಪಡಿಸಿರುವುದು ನಿಜಕ್ಕೂ ಆಶ್ಚರ್ಯ ತಂದಿದೆ. ಟರ್ಕಿ ಆರ್ಥಿಕ ಸ್ಥಿತಿ ಕೂಡ ಹೇಳಿಕೊಳ್ಳುವಷ್ಟು ಉತ್ತಮವಾಗಿಲ್ಲ. ಜಗತ್ತಿನಲ್ಲಿ ಬೆಳವಣಿಗೆ ಕಾಣುತ್ತಿರುವ ದೇಶಗಳಲ್ಲಿ ಇದು ೧೭ನೇ ಸ್ಥಾನದಲ್ಲಿದೆ. ನಮ್ಮದು ಮೂರನೇ ಸ್ಥಾನ. ಆದರೂ ಟರ್ಕಿ ತನ್ನ ನಿಲುವು ತೆಗೆದುಕೊಳ್ಳಲು ಸ್ವತಂತ್ರ. ಆರೀತಿ ನಿಲುವು ತಳೆಯುವಾಗ ರಾಜತಾಂತ್ರಿಕ ಸಂಬಂಧ, ವ್ಯಾಪಾರ-ವ್ಯವಹಾರ, ಪ್ರವಾಸೋದ್ಯಮ, ಸಾಂಸ್ಕೃತಿಕ ಸಂಬಂಧಗಳನ್ನು ಪರಿಗಣಿಸುವುದು ಅಗತ್ಯ. ಟಿರ್ಕಿಯಿಂದ ನಮಗೆ ಸೇಬು ಬರುತ್ತದೆ. ಅಮೃತಶಿಲೆ ಬರುತ್ತದೆ. ಒಟ್ಟು ೩ ಸಾವಿರಕೋಟಿ ರೂ.ವ್ಯವಹಾರ ನಡೆಯುತ್ತದೆ. ೪೦೦ ವಿವಿಧ ತಳಿಗಳ ಸೇಬು ಟರ್ಕಿಯಲ್ಲಿ ಬೆಳೆಯಬೇಕಾಗುತ್ತದೆ. ಚೀನಾ, ಚಿಲಿ, ವಿಯೆಟ್ನಾಂ ಹೊರತುಪಡಿಸಿದರೆ ಟರ್ಕಿ ಸೇಬು ಜಗದ್ವಿಖ್ಯಾತ. ಈಗ ಭಾರತದಲ್ಲಿ ಈ ಟರ್ಕಿ ಸೇಬಿನ ವಿರುದ್ಧ ಜನಾಕ್ರೋಶ ತಲೆ ಎತ್ತಿದೆ. ಟರ್ಕಿಗೆ ಭಾರತದಿಂದ ಪ್ರತಿ ವರ್ಷ ೩.೩ ಲಕ್ಷ ಪ್ರವಾಸಿಗರು ಹೋಗಿ ಬರುತ್ತಾರೆ. ಇದಕ್ಕೆ ಈಗ ೬ ವಾರಗಳಿಂದ ಹೊಡೆತ ಬಿದ್ದಿದೆ. ಪ್ರವಾಸಿಗರು ತಮ್ಮ ಪ್ರವಾಸವನ್ನು ರದ್ದುಪಡಿಸುತ್ತಿದ್ದಾರೆ. ಪ್ರವಾಸೋದ್ಯಮ ಟರ್ಕಿಗೆ ಒಂದು ವರಮಾನವೂ ಹೌದು. ಸಮಾಜದ ಕೆಳಸ್ತರದವರಿಗೆ ಪ್ರವಾಸಿಗರಿಂದ ದಿನನಿತ್ಯ ಹಣ ಸಿಗುತ್ತದೆ. ಇದಕ್ಕೆ ಕಲ್ಲು ಹಾಕಿದಂತೆ. ಸರ್ಕಾರ ಯಾವುದೇ ರಾಜತಾಂತ್ರಿಕ ತೀರ್ಮಾನ ಕೈಗೊಳ್ಳುವ ಮುನ್ನ ಎಚ್ಚರವಹಿಸುವುದು ಅಗತ್ಯ. ಪಾಕ್ ಕೆಲವು ವಿಷಯಗಳಲ್ಲಿ ಟರ್ಕಿ ಬೇಕಾಗಬಹುದು. ಭೂಕಂಪ ಸಂಭವಿಸಿದಾಗ ಪಾಕ್ ನೆರವು ನೀಡಿರಬಹುದು. ಭಾರತ ಕೂಡ ನೆರವು ನೀಡಿದೆ. ಆದರೆ ಪಾಕ್ ಉಗ್ರರಿಗೆ ನೆಲೆ ನೀಡುವುದನ್ನು ಟರ್ಕಿ ಸಮರ್ಥಿಸಿಕೊಳ್ಳುವುದು ಭವಿಷ್ಯಕ್ಕೆ ಅಪಾಯಕಾರಿ. ಧರ್ಮದ ಆಧಾರದ ಮೇಲೆ ರಾಜತಾಂತ್ರಿಕ ಸಂಬಂಧಗಳನ್ನು ಹೆಚ್ಚು ದಿನ ನಡೆಸಲು ಬರುವುದಿಲ್ಲ ಎಂಬುದನ್ನು ಮುಸ್ಲಿಂ ದೇಶಗಳು ಕಂಡು ಕೊಂಡಿವೆ. ಅಧುನಿಕತೆಯತ್ತ ತಿರುಗಿದ ದೇಶಗಳಿಗೆ ಧರ್ಮದ ಸೀಮಿತ ಅರ್ಥ ತಿಳಿದಿದೆ. ಅದರಿಂದ ಆ ದೇಶಗಳು ಪಾಕ್‌ನಿಂದ ದೂರ ಕಾಯ್ದುಕೊಳ್ಳುತ್ತಿವೆ, ಟರ್ಕಿ ಕೂಡ ಪಾಠ ಕಲಿಯುವುದು ಅಗತ್ಯ. ಜಗತ್ತು ಈಗ ಧರ್ಮದ ಮೇಲೆ ನಿಂತಿಲ್ಲ. ಹಣಕಾಸಿನ ಮೇಲೆ ದೇಶ-ದೇಶಗಳ ಸಂಬಂಧ ಏರ್ಪಡುತ್ತಿವೆ. ಸುಂಕದ ವಿಚಾರದಲ್ಲಿ ಅಮೆರಿಕ- ಚೀನಾ ದೇಶಗಳೇ ಒಪ್ಪಂದಕ್ಕೆ ಬರಲು ಸಿದ್ಧವಾಗಿರುವಾಗ ಯಾವ ತತ್ವಾದರ್ಶಗಳು ನಿಲ್ಲುವುದಿಲ್ಲ. ಅಮೆರಿಕಕ್ಕೆ ಉಕ್ರೇನ್‌ನಲ್ಲಿರುವ ಅಮೂಲ್ಯ ಖನಿಜ ಸಂಪತ್ತು ಪಡೆಯುವ ತವಕ. ಹೀಗಿರುವಾಗ ಟರ್ಕಿಯಂಥ ದೇಶಗಳು ಅಂತಾರಾಷ್ಟ್ರೀಯ ಮಟ್ಟದ ಆಗುಹೋಗುಗಳನ್ನು ಅರಿತು ನಡೆಯುವುದು ಒಳಿತು. ಪಾಕ್ ಉಗ್ರರ ಪರ ಯಾವ ದೇಶವೂ ನಿಲ್ಲುತ್ತಿಲ್ಲ. ಪಾಕ್ ದೇಶದ ಜನರೇ ಬೇರೆ. ಉಗ್ರರೇ ಬೇರೆ ಎಂಬುದು ಈಗ ಜಗತ್ತಿಗೆ ತಿಳಿಯುತ್ತಿದೆ. ಇಂತಹ ಸಂದರ್ಭದಲ್ಲಿ ಪಾಕ್ ಉಗ್ರರ ಪರ ನಿಲ್ಲುವುದು. ಅದಕ್ಕೆ ಟರ್ಕಿ ಬೆಂಬಲ ನೀಡುವುದು ರಾಜತಾಂತ್ರಿಕವಾಗಿ ಸರಿಯಾದ ಕ್ರಮವಲ್ಲ. ಇದನ್ನು ಇತರ ಮುಸ್ಲಿಂ ದೇಶಗಳು ಅರಿತು ದೂರ ಸರಿದಿವೆ. ಟರ್ಕಿಗೆ ಇದನ್ನು ರಾಜತಾಂತ್ರಿಕವಾಗಿ ಮನವರಿಕೆ ಮಾಡಿಕೊಡುವ ಕೆಲಸ ನಡೆಯಬೇಕಿದೆ. ಟರ್ಕಿಯಲ್ಲಿ ಭಾರತೀಯರೂ ಇದ್ದಾರೆ. ಎರಡು ದೇಶಗಳ ನಡುವೆ ಸುಮಧುರ ಬಾಂದವ್ಯ ಇತ್ತು. ಈಗ ಇದಕ್ಕೆ ಧಕ್ಕೆ ಬರುವ ಅಪಾಯ ಕಂಡು ಬರುತ್ತಿದೆ. ಭಾರತೀಯ ಪ್ರವಾಸಿಗರು ಟರ್ಕಿಯನ್ನು ಬಿಟ್ಟು ಬೇರೆ ದೇಶಕ್ಕೆ ಹೋಗಬಹುದು. ಅದರಿಂದ ಟರ್ಕಿಯ ಜನರಿಗೆ ನಷ್ಟ. ಅದನ್ನು ಅಲ್ಲಿಯ ಸರ್ಕಾರ ಭರಿಸುವುದು ಕಷ್ಟ. ಟರ್ಕಿಗೆ ಆರ್ಥಿಕವಾಗಿ ಬುದ್ಧಿ ಕಲಿಸುವುದು ಕಷ್ಟದ ಕೆಲಸವೇನಲ್ಲ. ರಾಜತಾಂತ್ರಿಕ ಸಂಬಂಧಗಳು ಅಂತಾರಾಷ್ಟ್ರೀಯ ಮಟ್ಟದಲ್ಲಾಗುವ ಬದಲಾವಣೆಗಳನ್ನು ಅವಲಂಬಿಸಿರುತ್ತದೆ. ಕೆಲವೇ ದಿನಗಳಲ್ಲಿ ಟರ್ಕಿ ತನ್ನ ನಿಲುವನ್ನು ಬದಲಿಸುವ ನಿರೀಕ್ಷೆ ಇದೆ. ಏಕೆಂದರೆ ಪಾಕ್ ಸಾಲದ ಸುಳಿಯಲ್ಲಿ ಸಿಲುಕಿದೆ. ಅದರಿಂದ ಟರ್ಕಿಗೆ ನಷ್ಟವೇ ಹೊರತು ಲಾಭವೇನೂ ಇಲ್ಲ. ಟರ್ಕಿ ಡ್ರೋನ್‌ಗಳಿಗೆ ಈಗ ಬೇಡಿಕೆ ಬಂದಿರಬೇಕು. ಅದು ನಾಳೆ ಬೇರೆ ದೇಶಗಳಿಗೆ ಕೊಡೋದಿಲ್ಲ ಎಂಬ ಷರತ್ತು ಎಲ್ಲಾದರೂ ಇದೆಯೇ? ಅಮೆರಿಕದ ಯುದ್ಧ ವಿಮಾನಗಳನ್ನು ಪಾಕ್ ಖರೀದಿ ಮಾಡಿದಾಗ ಷರತ್ತು ವಿಧಿಸಲಾಗಿತ್ತು. ಆದರೂ ಪಾಕ್ ನಮ್ಮ ವಿರುದ್ಧ ಅವುಗಳನ್ನು ಬಳಸಿತು. ಅದೇರೀತಿ ಟರ್ಕಿತನ್ನ ಡ್ರೋನ್‌ಗಳನ್ನು ಪಾಕ್ ವಿರೋಧಿ ದೇಶಗಳೂ ಖರೀದಿ ಮಾಡಬಹುದು. ಅದರಿಂದ ಯುದ್ಧ ಶಸ್ತ್ರಾಸ್ತ್ರಗಳು ಒಂದು ದೇಶಕ್ಕೆ ಸೀಮಿತವಾಗಿರುವುದಿಲ್ಲ. ಈಗ ಟರ್ಕಿಗೆ ಬುದ್ಧಿ ಹೇಳುವ ಕಾಲವಂತೂ ಬಂದಿದೆ.