ರಾಜ್ಯ ಸಚಿವ ಸಂಪುಟದ ಸಭೆ ಮಹದೇಶ್ವರ ಬೆಟ್ಟದಲ್ಲಿ ನಡೆದು ಬರುವ ಬಡ ಭಕ್ತಾದಿಗಳಿಗೆ ಹೆಚ್ಚಿನ ಸವಲತ್ತು ಕಲ್ಪಿಸಲು ತೀರ್ಮಾನಿಸಲಾಗಿದೆ. ಮದ್ಯ ಸೇವನೆಯನ್ನು ನಿಷೇಧಿಸಲಾಗಿದೆ. ಇದರೊಂದಿಗೆ ಪ್ಲಾಸ್ಟಿಕ್ ಮುಕ್ತ ಪ್ರದೇಶವಾಗಿ ಘೋಷಿಸುವ ಅಗತ್ಯವಿದೆ. ಈ ಬೆಟ್ಟ ಇರುವ ಚಾಮರಾಜ ನಗರ ಜಿಲ್ಲೆ ಅತ್ಯಂತ ಹಿಂದುಳಿದಿದ್ದು ಇನ್ನೂ ಕಾಡಿನಲ್ಲಿ ವಾಸಿಸುವ ಸೋಲಿಗರು ಮತ್ತಿತರ ಆದಿವಾಸಿಗಳಿದ್ದಾರೆ. ಅವರನ್ನು ಕಾಡಿನಿಂದ ನಾಡಿಗೆ ಕರೆದು ತರುವ ಕೆಲಸ ನಡೆಯಬೇಕಿದೆ. ಕಾಡಿನ ಮಧ್ಯೆ ಇರುವ ಚಂಗಡಿಯಲ್ಲಿ ೧೫೦ ಮನೆ, ಮೆಂದಾರೆಯಲ್ಲಿ ೮೦ ಮನೆಗಳು ಉಳಿದುಕೊಂಡಿವೆ. ಅಲ್ಲಿಯ ಜನ ನಾಡಿಗೆ ಬಂದು ವಾಸಿಸಲು ಸಿದ್ಧವಿದ್ದಾರೆ. ಅವರ ಸ್ಥಳಾಂತರಕ್ಕೆ ಯೋಜನೆ ಎಲ್ಲಾ ಸಿದ್ಧಗೊಂಡಿದೆ. ಇನ್ನೂ ಕಾರ್ಯಗತಗೊಂಡಿಲ್ಲ. ಈ ಸಚಿವ ಸಂಪುಟ ನಡೆದ ಮೇಲೆ ಇದಕ್ಕೆ ಚಾಲನೆ ಸಿಗಬಹುದು ಎಂದು ಭಾವಿಸಲಾಗಿದೆ. ರಾಜ್ಯ ಸರ್ಕಾರ ಒಟ್ಟು ೩೫೪೭ ಕೋಟಿ ರೂ. ಕಾಮಗಾರಿಗಳಿಗೆ ಅನುಮೋದನೆ ಕೊಟ್ಟಿದೆ. ಚಾಮರಾಜನಗರಕ್ಕೆ ಪೂರ್ಣ ಪ್ರಮಾಣದಲ್ಲಿ ಕುಡಿಯುವ ನೀರು ಮತ್ತು ಒಳಚರಂಡಿ ಸವಲತ್ತು ನೀಡುವ ಕೆಲಸವನ್ನು ೩೧೫ ಕೋಟಿ ರೂಗಳಲ್ಲಿ ಪೂರ್ಣಗೊಳಿಸಬೇಕಿದೆ. ಚಾಮರಾಜನಗರಕ್ಕೆ ಬಂದು ಹೋದರೆ ಅಧಿಕಾರ ಹೋಗುತ್ತದೆ ಎಂಬ ನಂಬಿಕೆಯನ್ನು ಸುಳ್ಳಾಗಿಸಿದವರು ಸಿದ್ದರಾಮಯ್ಯ. ೨೦ ಬಾರಿ ಇಲ್ಲಿಗೆ ಬಂದು ಎರಡು ಬಾರಿ ಸಿಎಂ ಆಗಿದ್ದಾರೆ. ಇದರಿಂದ ಈಗ ಇಲ್ಲಿಯ ಜನರಿಗೆ ಅಪವಾದದಿಂದ ತಪ್ಪಿಸಿಕೊಂಡಂತಾಗಿದೆ.
ಗುಂಡ್ಲುಪೇಟೆ ತಾಲೂಕು ೧೧೦ ಕೆರೆಗಳನ್ನು ಕಬಿನಿ ನೀರಿನಿಂದ ತುಂಬಿಸುವ ಯೋಜನೆಯನ್ನು ೪೭೫ ಕೋಟಿ ರೂಗಳಲ್ಲಿ ಕೈಗೊಳ್ಳುತ್ತಿರುವುದು ಪ್ರಮುಖ ಕೆಲಸ. ಆದಿವಾಸಿಗಳಿಗೆ ಶಿಕ್ಷಣ ಮತ್ತು ಆರೋಗ್ಯ ಬಹಳ ಮುಖ್ಯ. ಕೊಳ್ಳೇಗಾಲ ಆಸ್ಪತ್ರೆಯನ್ನು ಉತ್ತಮಪಡಿಸುತ್ತಿರುವುದು ಉತ್ತಮ ಯೋಜನೆ. ವೀರಪ್ಪನ್ ಇದ್ದಾಗ ಮಹದೇಶ್ವರಕ್ಕೆ ಬೆಟ್ಟಕ್ಕೆ ಹೋಗುವುದು ಕಷ್ಟವಾಗಿದೆ. ಈಗ ನೆಮ್ಮದಿಯ ವಾತಾವರಣ ಮೂಡಿದೆ. ಅದರಿಂದ ಮಹದೇಶ್ವರ ಬೆಟ್ಟವನ್ನು ತಿರುಪತಿ ಮಾದರಿಯಲ್ಲಿ ಉತ್ತಮಪಡಿಸಲು ಎಲ್ಲ ಅವಕಾಶಗಳಿವೆ. ಆದಾಯ ಕೂಡ ಉತ್ತಮವಾಗಿರುವುದರಿಂದ ಅಭಿವೃದ್ಧಿ ಕಾರ್ಯ ಕೈಗೊಳ್ಳುವುದಕ್ಕೆ ಎಲ್ಲ ಅವಕಾಶಗಳಿವೆ. ಬೆಂಗಳೂರು ಹೊರತುಪಡಿಸಿ ಬೇರೆ ಜಿಲ್ಲೆಗಳಲ್ಲಿ ಸಚಿವ ಸಂಪುಟ ಸಭೆ ನಡೆಸುವುದರಿಂದ ಸ್ಥಳೀಯ ಸಮಸ್ಯೆಗಳ ಬಗ್ಗೆ ಗಮನಹರಿಸುವುದಕ್ಕೆ ಸಹಕಾರಿಯಾಗುತ್ತದೆ. ಹಿಂದೆ ಕಲಬುರ್ಗಿಯಲ್ಲಿ ಸಚಿವ ಸಂಪುಟ ಸಭೆ ನಡೆದಿತ್ತು. ಮುಂದಿನ ದಿನಗಳಲ್ಲಿ ವಿಜಯಪುರದಲ್ಲಿ ಮತ್ತೊಂದು ಸಭೆ ನಡೆಸಲಾಗುವುದು ಎಂದು ಸಿಎಂ ಪ್ರಕಟಿಸಿದ್ದಾರೆ. ಈ ರೀತಿ ಸಭೆಗಳು ನಡೆದಾಗ ಸಚಿವರ ಗಮನಕ್ಕೆ ಹಲವು ಸಮಸ್ಯೆಗಳು ಬರುವುದು ಸಹಜ. ಚಾಮರಾಜನಗರ ಜಿಲ್ಲೆಯಲ್ಲಿ ಕಾಡಿನ ಪ್ರದೇಶ ಹೆಚ್ಚಾಗಿರುವುದರಿಂದ ಆನೆಗಳ ಕಾಟ ಹೆಚ್ಚು. ಇವುಗಳನ್ನು ನಿಯಂತ್ರಿಸಲು ರೈಲ್ವೆ ಕಂಬಿಗಳನ್ನು ಅಳವಡಿಸಲಾಗುತ್ತಿದೆ. ಇದಕ್ಕೆ ಈಗ ಹೆಚ್ಚಿನ ಅನುದಾನ ಬಿಡುಗಡೆ ಮಾಡಲಾಗಿದೆ. ಇಲ್ಲಿಯ ಸುವರ್ಣಾವತಿ ನದಿ ಮಳೆಗಾಲದಲ್ಲಿ ಹರಿದರೂ ಜಿಲ್ಲೆಯ ಎಲ್ಲ ಕೆರೆಗಳಿಗೆ ನೇರ ಹರಿಸುವ ವಿಶಿಷ್ಟ ವ್ಯವಸ್ಥೆಯನ್ನು ಹೊಂದಿದೆ. ನದಿಯಲ್ಲಿ ಪ್ರವಾಹ ಬಂದರೆ ಎಲ್ಲ ಕೆರೆಗಳು ತುಂಬಿ ಹರಿಯುತ್ತವೆ. ಇಲ್ಲಿರುವ ಕಾಡು ತಮಿಳುನಾಡು ಮತ್ತು ಕೇರಳಕ್ಕೆ ಸಂಪರ್ಕ ಕಲ್ಪಿಸುವುದರಿಂದ ವನ್ಯ ಜೀವಿಗಳಿಗೆ ಉತ್ತಮ ತಾಣವಾಗಿದೆ. ಗುಂಡ್ಲುಪೇಟೆ ಗಡಿಯಲ್ಲಿರುವುದೇ ಕೇರಳದ ವೈನಾಡು.
ಚಾಮರಾಜನಗರ ರೈಲ್ವೆ ಭೂಪಟದಲ್ಲಿ ರಾಜ್ಯದ ಕೊನೆಯ ನಿಲ್ದಾಣ. ಇಲ್ಲಿಂದ ಮೆಟ್ಟುಪಾಳ್ಯಂಗೆ ರೈಲು ಮಾರ್ಗ ವಿಸ್ತರಣೆಗೊಳ್ಳಬೇಕಿತ್ತು. ಅರಣ್ಯ ಇಲಾಖೆ ಅನುಮೋದನೆ ಕೊಡಲೇ ಇಲ್ಲ. ಈಗ ಚಾಮರಾಜನಗರ-ಕೊಳ್ಳೇಗಾಲ-ಕನಕಪುರ ಮಾರ್ಗವಾಗಿ ನೇರವಾಗಿ ಬೆಂಗಳೂರಿಗೆ ಸಂಪರ್ಕ ಕಲ್ಪಿಸುವ ಹೊಸ ರೈಲು ಮಾರ್ಗಕ್ಕೆ ಬೇಡಿಕೆ. ಅದಕ್ಕೆ ರಾಜ್ಯ ಸರ್ಕಾರ ಭೂಮಿ ಮತ್ತು ಅರ್ಧ ವೆಚ್ಚವನ್ನು ಭರಿಸಬೇಕಿದೆ. ಈಗಲೂ ಜನ ಇದನ್ನು ಈಡೇರಿಸುವಂತೆ ಕೇಳುತ್ತಲೇ ಬಂದಿದ್ದಾರೆ. ಈಗ ಸೋಮಣ್ಣ ರೈಲ್ವೆ ಸಚಿವರಾಗಿರುವುದರಿಂದ ಜನರಲ್ಲಿ ಆಶಾಭಾವನೆ ಮೂಡಿದೆ. ಕೊರೊನಾ ಕಾಲದಲ್ಲಿ ಚಾಮರಾಜನಗರ ಸರ್ಕಾರಿ ಆಸ್ಪತ್ರೆಯಲ್ಲಿ ಆಮ್ಲಜನಕದ ಕೊರತೆಯಿಂದ ೩೬ ಜನ ಸತ್ತರು. ಅವರ ಕುಟುಂಬದ ಒಬ್ಬರಿಗೆ ಸರ್ಕಾರಿ ನೌಕರಿ ನೀಡುವುದಾಗಿ ಇದೇ ಸರ್ಕಾರ ಭರವಸೆ ನೀಡಿತ್ತು. ಅದನ್ನು ಮುಂದಿನ ಸಭೆಯಲ್ಲಿ ತೀರ್ಮಾನಿಸುವುದಾಗಿ ಸಿಎಂ ಹೇಳಿದ್ದಾರೆ. ಅದಕ್ಕಾಗಿ ಚಾಮರಾಜನಗರ ಜನ ಮುಂದಿನ ಸಭೆಗಾಗಿ ಕಾಯುತ್ತಿದ್ದಾರೆ. ಬಿ. ರಾಚಯ್ಯ, ಮಹದೇವ ಪ್ರಸಾದ್ ಸಚಿವರಾಗಿ ಸಾಕಷ್ಟು ಅಭಿವೃದ್ಧಿಗೆ ಕಾರಣಕರ್ತರಾಗಿದ್ದರು. ಜಿಲ್ಲಾ ಕೇಂದ್ರವಾಗಿದ್ದರೂ ಇನ್ನೂ ಹೆಚ್ಚಿನ ಪ್ರಗತಿ ಕಂಡಿಲ್ಲ. ಈಗಲೂ ಇಲ್ಲಿಯ ಜನ ಮೈಸೂರನ್ನು ಆಶ್ರಯಿಸುವುದು ಅನಿವಾರ್ಯವಾಗಿದೆ. ಶಿಕ್ಷಣ ಮತ್ತು ಆರೋಗ್ಯದಲ್ಲಿ ಹೆಚ್ಚಿನ ಪ್ರಗತಿಗೆ ಇನ್ನೂ ಅವಕಾಶಗಳಿವೆ. ಬೆಂಗಳೂರಿನಿಂದ ರಾಷ್ಟ್ರೀಯ ಹೆದ್ದಾರಿಯೊಂದು ಹಾದು ಹೋಗಿರುವುದರಿಂದ ವಾಹನ ಸಂಚಾರ ಉತ್ತಮಗೊಳ್ಳಲು ಸಾಧ್ಯವಾಗಿದೆ. ಮಹದೇಶ್ವರ ಬೆಟ್ಟ-ಬಿಳಿಗಿರಿ ರಂಗನ ಬೆಟ್ಟ ಜಿಲ್ಲೆಯ ಪ್ರವಾಸಿ ತಾಣಗಳಾಗಿ ಪರಿವರ್ತನೆಗೊಳ್ಳಲು ಉತ್ತಮ ಅವಕಾಶಗಳಿವೆ. ಸಚಿವ ಸಂಪುಟ ಸಭೆಗಳು ಈ ರೀತಿ ರಾಜ್ಯದ ಗಡಿಭಾಗದಲ್ಲಿ ನಡೆದರೆ ಸರ್ಕಾರ ಅಲ್ಲಿಯ ಸಮಸ್ಯೆಗಳತ್ತ ಗಮನಹರಿಸಲು ಸಾಧ್ಯವಾಗಲಿದೆ.