ಬದಲಾದ ದೃಷ್ಟಿ

ನಾನು ಎಷ್ಟೋ ಬಾರಿ ಬೆರಗುಪಟ್ಟಿದ್ದೇನೆ. ಕೆಲವು ಸಾಧಕರಿಗೆ ಸಾಧಿಸಿದ ದೃಷ್ಟಿ ಎಲ್ಲರಿಗೂ ಏಕೆ ಸಾಧ್ಯವಾಗುವುದಿಲ್ಲ? ಸೇಬುಹಣ್ಣಿನ ಗಿಡ ಹುಟ್ಟಿದಾಗಿನಿಂದ ಮರವಾದಾಗ ಅದರ ಹಣ್ಣುಗಳು ಪಕ್ವವಾದ ಮೇಲೆ ಬೀಳುತ್ತಲೇ ಇವೆ. ಅವು ಅನೇಕರ ತಲೆಯ ಮೇಲೂ ಬಿದ್ದಿರಬಹುದು. ಕೆಲವರು ಅನಾಯಾಸವಾಗಿ ಹಣ್ಣು ದೊರಕಿತಲ್ಲ ಎಂದು ಸಂತೋಷದಿಂದ ತಿಂದಿರಬೇಕು. ಮತ್ತೆ ಕೆಲವರು, ಅದು ತಮ್ಮ ತಲೆಯ ಮೇಲೆಯೇ ಬೀಳಬೇಕಿತ್ತೇ ಎಂದು ಬೇಜಾರು ಮಾಡಿಕೊಂಡಿರಬಹುದು. ಕೆಲವರು ಹಣ್ಣು ತಲೆಯ ಮೇಲೆ ಬೀಳುವ ಉಸಾಬರಿಯೇ ಬೇಡ ಎಂದು ಅಲ್ಲಿಂದೆದ್ದು ಹೋಗಿರಲೂಬಹುದು. ಆದರೆ ಅದು ನ್ಯೂಟನ್‌ನ ತಲೆಯ ಮೇಲೆ ಬಿದ್ದಾಗ ಅವನಿಗೆ ಅದೊಂದು ಅದ್ಭುತ ಚಿಂತನೆಯೆಂದು ತೋರಿತು. ಹಣ್ಣು ಕೆಳಗೇ ಏಕೆ ಬಿತ್ತು? ಮೇಲೆ ಏಕೆ ಹಾರಿಹೋಗಲಿಲ್ಲ? ಹೌದಲ್ಲ, ಮೇಲೆ ಹೋದ ಪ್ರತಿಯೊಂದು ವಸ್ತು ಮರಳಿ ನೆಲಕ್ಕೇ ಬಂದು ಬೀಳುತ್ತದೆ. ಯಾವ ಶಕ್ತಿ ವಸ್ತುಗಳನ್ನು ಹಿಡಿದು ಕೆಳಗೆ ಎಳೆಯುತ್ತಿರಬಹುದು? ಹೀಗೆಲ್ಲ ಚಿಂತಿಸಿದ ನ್ಯೂಟನ್ ಗುರುತ್ವಾಕರ್ಷಣ ತತ್ವವನ್ನು ಪ್ರತಿಪಾದಿಸಿದ. ಮೇಲೆ ತೂರಿದ ಪ್ರತಿಯೊಂದು ವಸ್ತು ಕೆಳಗೆ ಬರಲೇಬೇಕೆಂಬುದನ್ನು ಪ್ರಪಂಚದ ಎಲ್ಲರೂ ಗಮನಿಸಿಯೇ ಇರುತ್ತಾರೆ. ಆದರೆ ಅದರ ಹಿಂದೆ ಒಂದು ಸಿದ್ಧಾಂತವಿರಬೇಕು ಎಂದು ಹೊಳೆದದ್ದು ನ್ಯೂಟನ್‌ನಿಗೆ ಮಾತ್ರ. ಅದೇ ಬದಲಾದ ದೃಷ್ಟಿ. ಅವನ ನೋಡುವ ದೃಷ್ಟಿ ಕೊಂಚ ಬದಲಾದೊಡನೆ ಸಾಮಾನ್ಯವೆನ್ನಿಸಿದ್ದು ಅಸಾಮಾನ್ಯವಾಗಿತ್ತು.
ನನಗೆ ಅನ್ನಿಸುತ್ತದೆ, ನಾವು ಬಹಳ ಜನ ಕಣ್ಣು ಮುಚ್ಚಿಕೊಂಡೇ ನೋಡುತ್ತೇವೆ. ನೋಡುವ ಕ್ರಿಯೆ ಅತ್ಯಂತ ಯಾಂತ್ರ‍್ರಿಕವಾಗಿರುತ್ತದೆ. ಅದರಲ್ಲಿ ಕೊಂಚ ಆಸಕ್ತಿ, ಕುತೂಹಲ, ಪ್ರಶ್ನೆ ಮಾಡುವ ಮನೋಭಾವ ಸೇರಿಕೊಂಡರೆ ಅತ್ಯಂತ ಸಾಧಾರಣ ಘಟನೆಯ ಹಿಂದೆ ಒಂದು ಸುಂದರ ತತ್ವ ಇರುವುದು ಗೋಚರಿಸೀತು.
ನಾನು ಬಾಲ್ಯದಲ್ಲಿ ಶಾಲೆಯಲ್ಲಿ ಭೂಗೋಲವನ್ನು ಕಲಿಯುತ್ತಿದ್ದಾಗ ಗುರುಗಳು ಸಮುದ್ರಗಳ ಬಗ್ಗೆ ಹೇಳುತ್ತಿರು. ಸಪ್ತಸಮುದ್ರಗಳ ಬಗ್ಗೆ ವಿವರಿಸಿ ನಂತರ ಮತ್ತೆರಡು ಸಮುದ್ರಗಳಿವೆ ಎಂದು ತಿಳಿಸಿದರು. ಅವೆರಡು ಮೃತ ಸಮುದ್ರ (dead sea) ಮತ್ತು ಗೆಲಿಲೀ ಸಮುದ್ರ (Sea of Galilee) ಗಳು ಎಂದಾಗ ನನಗೆ ತುಂಬ ಕುತೂಹಲವಾಗಿ ಕೇಳಿದೆ, ಮೃತ ಸಮುದ್ರ ಎಂದರೇನು ಸರ್? ಮನುಷ್ಯರು ಸಾಯುತ್ತಾರೆ, ಪ್ರಾಣಿಗಳು, ಸಸ್ಯಗಳು ಸಾಯುತ್ತವೆ. ಆದರೆ ಸಮುದ್ರ ಹೇಗೆ ಸಾಯುತ್ತದೆ ಸರ್?. ಅವರೊಬ್ಬ ಅತ್ಯಂತ ಪ್ರಾಮಾಣಿಕ ಶಿಕ್ಷಕರು. ತಮ್ಮ ಎರಡೂ ಕೈಗಳನ್ನು ಮೇಲೆತ್ತಿ, ತಿರುವಿ, ನನಗೂ ಗೊತ್ತಿಲ್ಲಪ್ಪ. ಪುಸ್ತಕದಲ್ಲಿ ಅದು ಮೃತ ಸಮುದ್ರ ಎಂದು ಬರೆಯುತ್ತಾರೆ. ಅದು ಹೇಗೆ ಸತ್ತಿತ್ತು, ಯಾಕೆ ಸತ್ತಿತು ಮತ್ತು ಸತ್ತಿತು ಎಂದರೇನು, ಅದು ಈಗ ಇಲ್ಲವೇ? ಹೀಗೆ ನೂರೆಂಟು ಪ್ರಶ್ನೆಗಳು ನನಗೂ ಕಾಡುತ್ತಿವೆ. ಉತ್ತರಕ್ಕಾಗಿ ಹುಡುಕಾಡುತ್ತಿದ್ದೇನೆ. ತಿಳಿದ ತಕ್ಷಣ ನಿನಗೂ ತಿಳಿಸುತ್ತೇನೆ ಎಂದರು. ಆಗ ಬೆರಳೊತ್ತಿದೊಡನೆ ಓಡಿ ಬಂದು, ಕ್ಷಣಾರ್ಧದಲ್ಲಿ ಉತ್ತರ ಕೊಡುವ ಗೂಗಲ್ ಸೇವಕ ಇರಲಿಲ್ಲವಲ್ಲ!
ಮುಂದೆ ಎಷ್ಟೋ ವರ್ಷಗಳ ನಂತರ ನಾನು ಸಂಶೋಧನೆಯ ಕಾರ್ಯಕ್ಕಾಗಿ ಇಸ್ರೇಲಿಗೆ ಹೋದಾಗ, ಹತ್ತಿರದಲ್ಲೇ ಮೃತ ಸಮುದ್ರ ಇರುವುದು ಹೊಳೆಯಿತು. ಅದನ್ನು ನೋಡಲು ಅಲ್ಲಿಯ ಒಬ್ಬ ಜೊತೆಗಾರನನ್ನು ಕರೆದುಕೊಂಡು ಹೋದೆ. ಆ ಸಮುದ್ರ ನಿಜವಾಗಿಯೂ ಸತ್ತು ಹೋಗಿದೆ! ಅದಿನ್ನು ಎಷ್ಟೋ ಕಿಲೋಮೀಟರ್ ದೂರವಿರುವಾಗಲೇ ಒಂದು ತರಹದ ಹಾಳು ಹಾಳು ಬಿಂತೆ ತೋರುತ್ತಿತ್ತು, ನೆಲದ ಮೇಲೆಲ್ಲ ಒಂದು ತರಹದ ಸಿಮೆಂಟ್ ಬಿಂತೆ ಕಾಣುತ್ತಿತ್ತು. ಇನ್ನೂ ಹತ್ತಿರ ಹೋದಂತೆ, ಯಾವ ಗಿಡಮರಗಳೂ ಇಲ್ಲ, ಪಕ್ಷಿಗಳ ಹಾರಾಟವಿಲ್ಲ, ಒಂದು ರೀತಿಯ ಹುಳಿ ವಾಸನೆಯ ಬಿಸೀಗಾಳಿ ಮುಖಕ್ಕೆ ಬಡಿಯುತ್ತಿತ್ತು. ಸಮುದ್ರದ ತೀರವನ್ನು ತಲುಪಿದೆವು. ವಿಸ್ತಾರವಾದ ಜಲರಾಶಿ. ಹಾಗೆ ನೋಡಿದರೆ ಅದು ಸಮುದ್ರವೇ ಅಲ್ಲ. ಅದೊಂದು ದೊಡ್ಡ ಕೆರೆ. ಅದು ಸುಮಾರು ಆರು ನೂರು ಚದರ ಕಿಲೋಮೀಟರ್‌ದಷ್ಟು ವಿಸ್ತಾರವಾರಿಂದ ಅದನ್ನು ಸಮುದ್ರವೆಂದೇ ಕರೆಯುತ್ತಾರೆ. ಈ ಸಮುದ್ರದಲ್ಲಿ ಒಂದು ಮೀನಿಲ್ಲ, ಯಾವ ಜಲಚರ ಪ್ರಾಣಿಯೂ ಇಲ್ಲ. ಇದರ ಸುತ್ತಮುತ್ತ ಮರ, ಗಿಡಗಳು, ಬಳ್ಳಿಗಳು ಕಾಣುವುದಿಲ್ಲ. ನೀರು ವಿಪರೀತ ಉಪ್ಪು, ಉಪ್ಪಿನ ಅಂಶ ಪ್ರತಿಶತ ಮೂವತ್ತೈದರಷ್ಟಿರುವುದರಿಂದ, ನೀವು ನೀರಲ್ಲಿ ಕಾಲು ಚಾಚಿ ಮಲಗಿದರೂ ಮುಳುಗುವುದಿಲ್ಲ. ಆದರೆ ನಿಮ್ಮ ಚರ್ಮಕ್ಕೇನಾದೀತು ಎಂಬುದು ನಿಮ್ಮ ಕರ್ಮ.

ಈ ಸಮುದ್ರ ನಿಧಾನಕ್ಕೆ ಕರಗಿ ಹೋಗುತ್ತಿದೆಯಂತೆ. ೧೯೩೦ರಲ್ಲಿ ಸಾವಿರದ ಐವತ್ತು ಚದರ ಕಿಲೋಮೀಟರ್ ವಿಸ್ತಾರವಿ ಅದು ಈಗ ಆರುನೂರು ಚದರ ಕಿಲೋಮೀಟರ್‌ಗೆ ಇಳಿದಿದೆ. ಸಾವಿನಂಚಿಗೆ ಸರಿಯುತ್ತಿರುವ ಈ ಮೃತ ಸಮುದ್ರವನ್ನು ಜೀವಂತವಾಗಿಡಲು ಅಲ್ಲಿಯವರು ಪ್ರಯತ್ನಿಸುತ್ತಿದ್ದರೆ. ಈ ಸಮುದ್ರದಿಂದ ಉತ್ತರಕ್ಕೆ ಸುಮಾರು ಎಪ್ಪತ್ತೈದು ಕಿಲೋಮೀಟರ್ ದೂರದಲ್ಲಿರುವುದು ಗೆಲಿಲೀ ಸಮುದ್ರ ಅದೂ ಸಮುದ್ರವಲ್ಲ. ಅದು ಸುಮಾರು ನೂರಾ ಅರವತ್ತು ಚದರ ಕಿಲೋಮೀಟರ್ ಪ್ರದೇಶವನ್ನು ಆವರಿಸಿದೆ. ಆಶ್ಚರ್ಯವೆಂದರೆ ಈ ಸಮುದ್ರ ತುಂಬ ಜೀವಂತವಾಗಿದೆ! ಇದರಲ್ಲಿ ಸಾವಿರಾರು ಜಾತಿಯ ಮೀನು, ಜಲಚರಗಳಿವೆ, ಸುತ್ತಲೂ, ಹೂವು, ಹಣ್ಣುಗಳ, ಗಿಡಮರಗಳ ಸಾಲುಸಾಲೇ ಇವೆ. ಏಸೂ ಕ್ರಿಸ್ತನ ಅನುಯಾಯಿಗಳಿಗೆ ಇದೊಂದು ಪವಿತ್ರ ಸ್ಥಳ. ಈ ಸಮುದ್ರದ ನೀರಿನ ಮೇಲೆಯೇ ಕ್ರಿಸ್ತ ನಡೆದು ಹೋದದ್ದು, ಉಕ್ಕೇರಿದ ಸಮುದ್ರವನ್ನು ಶಾಂತಗೊಳಿಸಿದ್ದು ಮತ್ತು ಇದರ ದಂಡೆಯ ಮೇಲೆ ಐದು ಸಾವಿರ ಜನರಿಗೆ ಊಟಕ್ಕೆ ಹಾಕಿದ್ದು.
ಇವೆರಡನ್ನೂ ನೋಡಿದ ಮೇಲೆ ನನ್ನ ತಲೆಯಲ್ಲಿ ವಿಚಾರ ಕೊರೆಯತೊಡಗಿತು. ಭೂಗೋಲವನ್ನು ಸರಿಯಾಗಿ ನೋಡಿದೆ. ಮತ್ತಷ್ಟು ಆಶ್ಚರ್ಯವಾಯಿತು. ಯಾಕೆಂದರೆ ಎರಡೂ ಸಮುದ್ರಗಳಿಗೆ ನೀರನ್ನು ಪೂರೈಸುವುದು ಒಂದೇ ನದಿ ಜೋರ್ಡಾನ್.
ಮೂಲ ಒಂದೇ ಅದರೂ ಗೆಲಿಲೀ ಸಮುದ್ರದ ನೀರು ಸಿಹಿಯಾಗಿ ಯಾಕೆ ಉಳಿಯಿತು ಮತ್ತು ಮೃತಸ ಮುದ್ರ ಯಾಕೆ ನಿರ್ಜೀ ವವಾಗಿ ಉಪ್ಪಾ ಯಿತು? ಇದು ನನ್ನ ಚಿಂತೆ. ಮತ್ತಷ್ಟು ಗಮನಿಸಿದೆ. ಜೋರ್ಡಾನ್ ನದಿ ಹರಿದು ಎಡಭಾಗದಲ್ಲಿ ತಿರುಗುವಾಗ ಅದರ ಒಂದು ದೊಡ್ಡ ಭಾಗ ಗೆಲಿಲೀ ಸಮುದ್ರವನ್ನು ಸೇರುತ್ತದೆ. ಆ ನೀರು ಸಮುದ್ರದಲ್ಲಿ ಸುತ್ತಾಡಿ ಮತ್ತೆ ಮರಳಿ ಜೋರ್ಡಾನ್ ನದಿಯನ್ನೇ ಸೇರಿಕೊಳ್ಳುತ್ತದೆ. ಅದು ಮುಂದುವರೆದು ಹರಿದು ಮೃತ ಸಮುದ್ರದ ಪಾಲಾಗುತ್ತದೆ. ಈ ಮೃತಸಮುದ್ರದ ಮೂರು ಕಡೆಗೂ ಬೆಟ್ಟಗಳಿರುವುದರಿಂದ ನೀರು ಮುಂದೆಲ್ಲೂ ಸಾಗದು. ಪ್ರತಿವರ್ಷ ಹೊಸ ನೀರು ಬರುವಾಗ ಅದು ತನ್ನೊಂದಿಗೆ ಉಪ್ಪನ್ನು ತರುತ್ತದೆ. ಸಮುದ್ರದಲ್ಲಿಯ ನೀರು ಸೂರ್ಯನ ಬಿಸಿಲಿಗೆ ಆವಿಯಾಗಿ ಹೋಗುವಾಗ ಉಳಿದ ನೀರಿನಲ್ಲಿ ಉಪ್ಪಿನಂಶ ಹೆಚ್ಚಾಗುತ್ತಲೇ ಹೋಗುತ್ತದೆ. ಹಾಗಾಗಿ ಅದು ಈಗ ಪ್ರತಿಶತ ಮೂವತ್ತೈದಕ್ಕೆ ಬಂದಿದೆ. ಹೀಗೆಯೇ ಮುಂದುವರೆದರೆ ಅದೊಂದು ಕೇವಲ ಉಪ್ಪಿನ ಗಣಿಯಾದೀತು. ಆದರೆ ಗೆಲಿಲೀ ಸಮುದ್ರವೇಕೆ ಉಪ್ಪಾಗಲಿಲ್ಲ? ಭೂಗೋಲದಿಂದ ಮನಸ್ಸನ್ನು ತಿರುಗಿಸಿ ಬೇರೊಂದು ದೃಷ್ಟಿಯಿಂದ ನೋಡಿದಾಗ ನನಗೆ ಅದೊಂದು ಬಹುದೊಡ್ಡ ಮೌಲಿಕವಾದ, ಅಧ್ಯಾತ್ಮಿಕ ತತ್ವ ಎನ್ನಿಸಿತು.
ನನಗೆ ಹೊಳೆದ ಕಾರಣವಿಷ್ಟೆ. ಗೆಲಿಲೀ ಸಮುದ್ರ ಜೋರ್ಡಾನ್ ನದಿಯ ನೀರನ್ನು ಪಡೆಯುವುದು ಮಾತ್ರವಲ್ಲ, ಅದನ್ನು ಮರಳಿ ನದಿಗೇ ಸೇರಿಸಿ ಬಿಡುತ್ತದೆ. ಆದರೆ ಮೃತ ಸಮುದ್ರ ಕೇವಲ ನದಿಯ ನೀರನ್ನು ಪಡೆಯುತ್ತಲೇ ಹೋದರೂ, ಮರಳಿ ನದಿಗಾಗಲೀ, ಮತ್ತೆಲ್ಲಿಯಾದರೂ ಕೂಡದೆ ತನ್ನ ಬಳಿಯೇ ಇಟ್ಟುಕೊಳ್ಳುತ್ತದೆ. ಹೌದಲ್ಲ! ಯಾವುದು ಪಡೆದನ್ನು ಮರಳಿ ಕೊಡುತ್ತದೋ ಅದು ಜೀವಂತವಾಗಿರುತ್ತದೆ, ಚೇತೋಹಾರಿಯಾಗುತ್ತದೆ. ಯಾವುದು ಬರೀ ಪಡೆಯುತ್ತ, ಕೊಡದೇ ಉಳಿಯುತ್ತದೋ ಅದು ಮೃತವಾಗುತ್ತದೆ, ಪ್ರಯೋಜನ ಹೀನವಾಗುತ್ತದೆ, ಭಾರವಾಗುತ್ತದೆ. ನಮ್ಮ ಬದುಕೂ ಹಾಗೇ ಅಲ್ಲವೆ? ನಮ್ಮ ಸುತ್ತಮುತ್ತ ಸ್ವಲ್ಪ ಗಮನಿಸಿ. ಯಾರು ಪ್ರಪಂಚದಿಂದ ಪಡೆದನ್ನು ಮರಳಿ ಕೊಟ್ಟಿದ್ದರೋ, ಅವರೆಲ್ಲ ದೊಡ್ಡವರಾಗಿದ್ದಾರೆ. ಜಿಪುಣರಂತೆ ದೊರೆತನ್ನೆಲ್ಲ ತುಂಬಿಕೊಂಡು ಹೊರಗೆ ಹಂಚದೆ ಉಳಿದವರೆಲ್ಲ ಯಾರ ನೆನಪಿನಲ್ಲೂ ಉಳಿಯದೆ ಕರಗಿ ಹೋಗಿದ್ದಾರೆ. ನಾವು ಬೆಳೆಯುತ್ತಾ, ಪರಿವಾರದಿಂದ, ಶಿಕ್ಷಣದಿಂದ, ಸಮಾಜದಿಂದಲೇ ಪಡೆಯುತ್ತಲೇ ಹೋಗುತ್ತೇವೆ. ಪಡೆದರ ಕೆಲಭಾಗವನ್ನಾದರೂ ಮರಳಿ ಸಮಾಜಕ್ಕೆ ಕೊಡದೆ ಇರೆ ನಮ್ಮ ಬದುಕೂ ಮೃತಸಮುದ್ರದಂತಾಗುತ್ತದೆ. ಅದಕ್ಕೇ ಬಸವಣ್ಣ, ಕೊಟ್ಟದ್ದು ತನಗೆ, ಬಚ್ಚಿಟ್ಟದ್ದು ಪರರಿಗೆ ಎಂದದ್ದು. ಈಶಾವಾಸ್ಯ ಉಪನಿಷತ್ತು ಕೂಡ, ತೇನ ತ್ಯಕ್ತೇನ ಭುಂಜೀಥಾ ಎನ್ನುತ್ತದೆ. ಇದರರ್ಥ ಬದುಕಿನಿಂದ ಪಡೆದನ್ನು ಕೃತಜ್ಞತೆಯಿಂದ ಮರಳಿ ಕೊಡಬೇಕು. ಕೊಟ್ಟು ತಾನೂ ಉಣ್ಣಬೇಕು. ಇದೊಂದು ಅತ್ಯಂತ ಉನ್ನತವಾದ ಭಾವ. ಕೊಟ್ಟರೆ ತಾವು ಉಣ್ಣುವುದೇನು ಎಂಬುದು ಕೆಲವರ ಚಿಂತೆ! ಜ್ಞಾನಿಗಳಿಗೆ ಮಾತ್ರ ಗೊತ್ತು, ಕೊಟ್ಟಷ್ಟು ವೃದ್ಧಿಯಾಗುತ್ತದೆ. ಬಾವಿಯಿಂದ ನೀರನ್ನು ಎಳೆದಷ್ಟೂ ಹೆಚ್ಚು ಬರುತ್ತದೆ, ಹಂಚಿದಷ್ಟೂ ಜ್ಞಾನ ಹೆಚ್ಚಾಗುತ್ತದೆಂಬುದು ಗುರುವಿಗೆ ಗೊತ್ತು, ಹಾಡಿದಷ್ಟೂ ತನ್ನ ಸಂಗೀತದ ಶಕ್ತಿ ವೃದ್ಧಿಯಾಗುವುದೆಂಬುದು ಸಂಗೀತಗಾರರನಿಗೆ ಗೊತ್ತು, ತಾನು ಬೆವರು ಹರಿಸಿ ದುಡಿಸಿದಷ್ಟು ದೇಹಶಕ್ತಿ ಹೆಚ್ಚಾಗುವುದು ಎನ್ನುವುದು ಆಟಗಾರನಿಗೆ ತಿಳಿದಿದೆ. ಮೃತ ಸಮುದ್ರದ ಸಾವಿಗೆ, ಗೆಲಿಲೀ ಸಮುದ್ರದ ಉಳಿವಿಗೆ ಕಾರಣವೇನು ಎಂಬುದು ನನಗೆ ಹೊಳೆದಾಗ, ಅದೊಂದು ಬದುಕಿಗೆ ಪಾಠವಾಯಿತು.
ಹೀಗೆ ಘಟನೆಗಳನ್ನು ಸ್ವಲ್ಪ ಆಳದಲ್ಲಿ, ಸ್ವಲ್ಪ ಬೇರೆ ರೀತಿಯಲ್ಲಿ ಗ್ರಹಿಸಿದಾಗ, ಕಂಡದ್ದು ತುಂಬ ಬೇರೆಯಾಗಿಯೇ ಹೊಳೆಯುತ್ತದೆ.