ಏಕೆ ಮಾತನಾಡುತ್ತಿಲ್ಲ?
ಕೈ ಕಾಲುಗಳಿಗೆ ಕೋಳ ಬಿಗಿದು, ಮಿಲಿಟರಿ ವಿಮಾನದಲ್ಲಿ ತುಂಬಿ ವಲಸಿಗರನ್ನು ಕಳುಹಿಸಲಾಯಿತಲ್ಲ, ಪ್ರಧಾನಿ ನರೇಂದ್ರ ಮೋದಿ ಏಕೆ ಮಾತನಾಡುತ್ತಿಲ್ಲ?
ಬಾಂಗ್ಲಾ ದೇಶದಲ್ಲಿ ಹಿಂದೂಗಳ ನರಮೇಧ, ದೇವಾಲಯಗಳ ಧ್ವಂಸ, ಧಾರ್ಮಿಕ ಮುಖ್ಯಸ್ಥರ ಮೇಲೆ ಅಮಾನುಷ ಅಮಾನವೀಯ ಹಲ್ಲೆ ನಡೆಯಿತಲ್ಲ, ಏಕೆ ಬಿಜೆಪಿ, ಪ್ರಧಾನಿ, ಗೃಹಮಂತ್ರಿ ಮೌನದಿಂದಿದ್ದಾರೆ?
ಮಾತಿಗಿಂತ ಮೌನ ಶಕ್ತಿಯುತ ಎನ್ನುತ್ತಾರೆ. ಆದರೆ ಮೌನ, ನಿರಾಸೆ, ಪಲಾಯನ, ವಿಚಲಿತ ಅಸ್ತ್ರವಾಯಿತೇ?
ಮಾತು-ಮೌನ ಎರಡಕ್ಕೂ ಪ್ರಬಲ ಶಕ್ತಿ ಇದೆ. ಆದರೆ, ಇತ್ತೀಚಿನ ದಿನಗಳಲ್ಲಿ ಯಾರು ಎಲ್ಲಿ ಯಾವಾಗ ಮಾತನಾಡಬೇಕೋ ಅವರು ಮಾತನಾಡುತ್ತಿಲ್ಲ. ಯಾರು, ಯಾವಾಗ ಮಾತನಾಡಬಾರದೋ ಅಲ್ಲಿ ಮಾತನಾಡಿ ಅಪ್ರಸ್ತುತರಾಗುತ್ತಿದ್ದಾರೆ!.
ಹೌದು, ಪ್ರಧಾನಿ ಮೋದಿ ಇವೆರಡೇ ಘಟನೆಗಳಲ್ಲ. ಹಲವಾರು ವೇಳೆ ಮೌನಕ್ಕೆ ಶರಣಾಗುತ್ತಾರೆ. ಅವರ ಮಂತ್ರಿಗಳಿಗೆ, ಪಕ್ಷದ ಪ್ರಮುಖರಿಗೆಲ್ಲ ಒಂದೋ ಸುಮ್ಮನಿರಿ ಎಂಬ ಅಣತಿ ನೀಡುತ್ತಾರೆ; ಇಲ್ಲ, ನೀವೇನಾದರೂ ಮಾತನಾಡಿ, ನಾನು ಮೌನವಾಗಿರುತ್ತೇನೆ ಎನ್ನುತ್ತಾರೆ!
ಮಾಜಿ ಪ್ರಧಾನಿ ಡಾ.ಮನಮೋಹನ ಸಿಂಗ್‌ರನ್ನು ಅವರ ಕಾಲದುದ್ದಕ್ಕೂ ಮೌನಿ ಪ್ರಧಾನಿ'ಎಂದೇ ಟೀಕಿಸಲಾಗುತ್ತಿತ್ತು. ಬಿಜೆಪಿಯ ಭೀಷ್ಮ ಎಲ್.ಕೆ.ಅಡ್ವಾಣಿ, ಈಗಿನ ಪ್ರಧಾನಿ ಮೋದಿಯವರಿಂದ ಹಿಡಿದು ರಾಜ್ಯ ರಾಷ್ಟ್ರ ನಾಯಕರೆಲ್ಲ ಸಿಂಗ್‌ರನ್ನು ಮೌನಿ ಬಾಬಾ ಎಂದು ಉಲ್ಲೇಖಿಸುತ್ತಿದ್ದರು. ಮನಮೋಹನ ಸಿಂಗ್ ಆಡಬೇಕಾದಷ್ಟೇ ಮಾತನಾಡಿ, ಮೌನವಾಗಿಯೇ ಸಾಧನೆಗೈದವರು. ಈಗ ಅವರ ಮೌನ, ಮೌನದ ಕಾರ್ಯ ಮತ್ತು ಚಿಂತನೆಗೆ ಮಹತ್ವ ಬಂದಿದೆ. ಏಕೆಂದರೆ ಇಂದಿನ ಪ್ರಧಾನಿಗಳು ತಮಗೆ ಅಪಥ್ಯವಾದ ಸಂಗತಿಗಳಿಗೆಲ್ಲ ಮೌನಕ್ಕೆ ಶರಣಾದುದು! ಮಣಿಪುರದಲ್ಲಿ ವರ್ಷಗಳಿಂದ ನರಮೇಧವಾಯಿತು. ಪ್ರಧಾನಿಗಳೇ ಮಣಿಪುರಕ್ಕೆ ಹೋಗಿ ಎಂದರೂ ಈವರೆಗೂ ಹೋಗಲಿಲ್ಲ. ಸಂಸತ್ತಿನಲ್ಲಿಯೂ ಒಂದಕ್ಷರ ಮಾತನಾಡಲಿಲ್ಲ. ರಾಷ್ಟ್ರಕ್ಕೆ ಖ್ಯಾತಿ ತಂದ ಕುಸ್ತಿ ಪಟುಗಳು ಆರೇಳು ತಿಂಗಳುಗಳ ಕಾಲ ಅಹೋರಾತ್ರಿ ಧರಣಿ ನಡೆಸಿದರು. ಜನಸಾಮಾನ್ಯರೆಲ್ಲ ಅತ್ಯಂತ ಭ್ರಷ್ಟ ರಾಜಕಾರಣಿಗಳೆಲ್ಲ ಬಿಜೆಪಿಗೆ ಸೇರಿಸಿಕೊಂಡು ವಾಷಿಂಗ್ ಮಷಿನ್ ಎಂದು ಕರೆದಾಗ; ಪ್ರತಿಪಕ್ಷಗಳ ನೇತಾರರ ಮೇಲೆ ಇಡಿ-ಐಟಿ ದಾಳಿ ನಡೆಸಿ ತಮ್ಮ ಪಕ್ಷದ ಭ್ರಷ್ಟರನ್ನು ರಕ್ಷಿಸುತ್ತಿರುವಾಗ; ರೈತರ ಮೇಲೆ ಅಶ್ರುವಾಯು ಪ್ರಯೋಗಿಸಿ ಅತ್ಯಂತ ನಿರ್ದಯಿಯಾಗಿ ಅವರ ಹೋರಾಟವನ್ನು ಹತ್ತಿಕ್ಕಿದಾಗ; ಅವರದೇ ಪಕ್ಷದ ಸಹವರ್ತಿಗಳು, ನಾಯಕರು ಅನೈತಿಕ-ಅಕ್ರಮ ದಂಧೆಯಲ್ಲಿ ಸಿಕ್ಕಾಗ ಪ್ರಧಾನಿ ಮೌನಕ್ಕೆ ಶರಣಾದರು!. ಹಾಗಂತ ಕಾಶ್ಮೀರದೊಳಗೆ ೩೭೦ ರದ್ದುಗೊಳಿಸಿದಾಗ, ಏಕರೂಪ ನಾಗರಿಕ ಸಂಹಿತೆ ಜಾರಿಗೊಳಿಸಲು ನಿಶ್ಚಯಿಸಿದಾಗ ಪ್ರಧಾನಿ ಬಾಯಿ ಮುಚ್ಚಲಿಲ್ಲ. ಚುನಾವಣಾ ರ‍್ಯಾಲಿಗಳಲ್ಲಿ ಪ್ರತಿಪಕ್ಷಗಳ ಬಗ್ಗೆ ಮೋದಿಯವರಷ್ಟು ವ್ಯಂಗ್ಯವಾಗಿ ಮತ್ತು ಆಕ್ರೋಶಭರಿತರಾಗಿ ಟೀಕಿಸಿದವರು ಇನ್ನೊಬ್ಬರಿಲ್ಲ. ಹಾಗಂತ ನರೇಂದ್ರ ಮೋದಿಯವರೇ ಎಲ್ಲವುಗಳಿಗೆ ಉತ್ತರಿಸಬೇಕಾಗಿಲ್ಲ.. ಹಾಗೆ ಹೇಳುತ್ತಲೂ ಇರಬಾರದು.. ಆದರೆ, ದೇಶ ಅಪೇಕ್ಷಿಸುವ.. (ನೇಶನ್ ವಾಂಟ್ಸ್ ಟು ನೋ...) ವಿಷಯಗಳಿಗೆ ಮಾತನಾಡಲೇ ಬೇಕಲ್ಲವೇ? ಮೋದಿಯವರು ಗುಜರಾತ್ ಮುಖ್ಯಮಂತ್ರಿ ಇದ್ದಾಗ ಕೇಂದ್ರದಿಂದ ಅನುದಾನ ತಾರತಮ್ಯದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದರೆ, ಈಗ ಬಿಜೆಪಿಯೇತರ ಸರ್ಕಾರಗಳು ಅನುದಾನದ ಬಗ್ಗೆ ಪ್ರಶ್ನಿಸಿದಾಗ ಮೌನಕೆ ಜಾರಿದರು. ವಂಶಪಾರಂಪರ‍್ಯ ರಾಜಕೀಯ ಟೀಕಿಸಿ ದೇಶಾದ್ಯಂತ ಪ್ರಚಾರ ನಡೆಸಿದ ಭಾಜಪ ಮತ್ತು ಪ್ರಧಾನಿಗಳೇ, ಅವರದೇ ಪಕ್ಷದ ವಂಶಾಡಳಿತಕ್ಕೆ ಅವಕಾಶ ಮಾಡಿಕೊಟ್ಟಾಗ ಮೌನ ತಾಳಿಲ್ಲವೇ? ಭ್ರಷ್ಟಾಚಾರ ವಿರೋಧಿಸಿ ಎನ್‌ಸಿಪಿ, ಜೆಡಿಎಸ್, ಕಾಂಗ್ರೆಸ್ ನಾಯಕರನ್ನು ಟೀಕಿಸಿದವರೇ ಮತ್ತೆ ತಮ್ಮ ಪಕ್ಷಕ್ಕೆ ಸೇರಿಸಿಕೊಂಡಾಗ ಮಾತಿಲ್ಲ.. ಸುಮ್ಮನಾದರಲ್ಲ, ಅಲ್ಲವೇ !? ಮಾತು-ಮೌನ ಕೇವಲ ಮೋದಿಯವರಿಗೆ, ಬಿಜೆಪಿಗೆ ಮಾತ್ರ ಸಂಬಂಧಿಸಿದ್ದಲ್ಲ... ಮಾತು ಮನೆ ಕೆಡೆಸಿತು ಎನ್ನುವುದಿದೆಯಲ್ಲ ಹಾಗೇ, ಕಳೆದ ಕರ್ನಾಟಕದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ಸಿನ ನಾಯಕರಿಂದ ಉದುರಿದ ತುಷ್ಟೀಕರಣದ ನುದಿಮುತ್ತುಗಳಿಗೆ, ಪಕ್ಷದ ಕಾರ್ಯಕರ್ತರೇ ಮೌನವಾಗಿರಲು ಇವರಿಗೇನು ಧಾಡಿ ಎಂದು ಕೇಳಿದ್ದರು. ಮೊನ್ನೆ ಮಲ್ಲಿಕಾರ್ಜುನ ಖರ್ಗೆಯವರೇ
ಕುಂಭಮೇಳದಲ್ಲಿ ಮಿಂದೆದ್ದರೆ ಬಡತನ ಹೋಗುತ್ತಾ, ಹೊಟ್ಟೆ ತುಂಬುತ್ತಾ’ ಎಂದು ಕೇಳಿದರು. ಖರ್ಗೆಯವರು ಮೌನವಾಗಿದ್ದರೆ ಎಂತಹ ಮಹತ್ವ ಇತ್ತಲ್ಲ ಅನ್ನಿಸಿತಲ್ಲವೇ? ಸ್ವತಃ ಕಾಂಗ್ರೆಸ್ಸಿನ ಅನೇಕ ಗಣ್ಯರು ಕುಂಭಮೇಳಕ್ಕೆ ತೆರಳಿ ಪವಿತ್ರ ಸ್ನಾನ ಮಾಡಿದರಲ್ಲವೇ!!.
ರಾಹುಲ್ ಗಾಂಧಿ ಮಾತು, ಮೌನದ ಬಗ್ಗೆ ಅಂತಹ ನಿರೀಕ್ಷೆಯನ್ನು ಜನ ಇಟ್ಟುಕೊಳ್ಳಲಿಲ್ಲ.. ಆದರೆ, ಇತ್ತೀಚೆಗೆ ರಾಹುಲ್ ಎತ್ತುತ್ತಿರುವ ಹಲವು ಪ್ರಶ್ನೆ ಸ್ವಲ್ಪ ಚುರುಕು ಹುಟ್ಟಿಸುತ್ತಿದ್ದರೂ, ಆಲೂಗಡ್ಡೆ ಹಾಕಿ ಅತ್ತ ಬಂಗಾರ ಬರುತ್ತೆ ಎಂಬ ಹಾಸ್ಯದಿಂದ ಮುಕ್ತರಾಗಿಲ್ಲ.. ಮಾತಿಗೆ ಮೊದಲು ಜಾಗೃತಿ ಬೇಕು.
ಎನ್‌ಡಿಎ ಆಧೀನಕ್ಕೆ ಬರುವ ಪೂರ್ವದಲ್ಲಿ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಕೇಂದ್ರದ ಮಲತಾಯಿ ಧೋರಣೆ ಬಗ್ಗೆ, ಒಕ್ಕೂಟ ವ್ಯವಸ್ಥೆಯ ಅವಸಾನಕ್ಕೆ ಬಿಜೆಪಿ- ಮೋದಿ ಹೆಸರೆತ್ತಿ ಗುಡುಗಿದ್ದರು. ಆರೋಗ್ಯ ವಿಮೆ ಮಹಾನಾಟಕ'ಎಂದು ಖಂಡಿಸಿದ್ದರು. ಈಗ ಇದಕ್ಕೇನಂತಾರೆ? ಮೌನಕ್ಕೆ ಶರಣು !! ವಿದೇಶಿ ಕಪ್ಪು ಹಣದ ಕುರಿತು ೨೦೧೪ರ ಪೂರ್ವ ಬಿಜೆಪಿ ನಾಯಕರು ಗುಡುಗಿದ್ದೇ ಗುಡುಗಿದ್ದು. ಆದರೆ ಹತ್ತು ವರ್ಷಗಳಿಂದ ಕಪ್ಪು ಹಣ ಕುರಿತು ಪ್ರಶ್ನಿಸಿದರೆ ಮೌನದ ಮೊರೆ. ಹೋಗಲಿ. ಈಗ ಗ್ಯಾರಂಟಿಗಳ ಕಾಲ. ಕರ್ನಾಟಕದ ಚುನಾವಣೆಯಲ್ಲಿ ಗ್ಯಾರಂಟಿಗಳನ್ನು ಘೋಷಣೆ ಮಾಡಿದಾಗ ಎಲ್ಲರೂ ಟೀಕಿಸಿದವರೇ. ರಾಜ್ಯಗಳು ದಿವಾಳಿಯಾಗುತ್ತವೆ. ಮೋಸ ಹೋಗಬೇಡಿ ಎಂದವರು, . ಈಗ ದೆಹಲಿಯಿಂದ ಹಿಡಿದು ಮಹಾರಾಷ್ಟçದ ತುದಿಯವರೆಗೆ ಎಲ್ಲ ರಾಜ್ಯಗಳಲ್ಲೂ ಗ್ಯಾರಂಟಿಯ ಪೈಪೋಟಿ. ಮಾತು ಎಷ್ಟು ತುಟ್ಟಿಯಲ್ಲವೇ? ರೂಪಾಯಿ ಮೌಲ್ಯ ಕುಸಿದು ಹೋಯಿತು... ಪೆಟ್ರೋಲ್ ದರ ಗಗನಕ್ಕೇರಿತು... ಸಿಲೆಂಡರ್ ಬಲು ತುಟ್ಟಿ ಎಂದು ಹತ್ತು ವರ್ಷದ ಹಿಂದೆ ಪ್ರತಿಭಟನೆ ನಡೆಸಿದವರಿಗೆಲ್ಲ ಮೌನ ಈಗ ಅಸ್ತç! ಮಾತು ಅನಗತ್ಯ ವಿವಾದಕ್ಕೆ ಕಾರಣವಾದೀತು ಎನ್ನುವುದನ್ನೂ ತಿಳಿದೂ ಮಾತನಾಡುವುದಿದೆಯಲ್ಲ ಅದು ಮಾತಿನ ತೆವಲಿಗಾಗಿ ಅಷ್ಟೇ. ತಮಿಳುನಾಡಿನ ಮಂತ್ರಿ ಉದಯನಿಧಿ ಸ್ಟಾಲಿನ್ ಸನಾತನ ಧರ್ಮದ ಬಗ್ಗೆ, ಗೋವಿನ ಬಗ್ಗೆ ಕೆಟ್ಟದಾಗಿ ಮಾತನಾಡಿದರು. ಆಗ ಜನ ಬೇಕಿತ್ತಾ ಇದು ಎಂದರು. ಡಿಎಂಕೆ ಮುಖ್ಯಸ್ಥ- ಅಲ್ಲಿಯ ಸಿಎಂ ಎಂ. ಕರುಣಾನಿಧಿ, ಸೇತು ಸಮುದ್ರ ಯೋಜನೆ ಬಗ್ಗೆ
ರಾಮನೇನು ಎಂಜಿನಿಯರಾ? ಯಾವ ಕಾಲೇಜಿಗೆ ಹೋಗಿದ್ದಾನೆ? ರಾಮಾಯಣ ಎನ್ನುವುದು ಕಾಲ್ಪನಿಕ ಕಥೆ’ ಎಂದು ಹೇಳಿದ್ದರು. ಈ ಅಪ್ರಸ್ತುತ ವಾದಕ್ಕೆ ಜನರೇ ರಾಮ ರಾಮ ಎಂದರು!.
ಈಗ ಕೆಲ ವರ್ಷಗಳ ಹಿಂದೆ ಖ್ಯಾತ ಸಾಹಿತಿ, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಯು.ಆರ್.ಅನಂತಮೂರ್ತಿ ದೇವರೆಂದರೆ ಕಲ್ಲು, ಬೆತ್ತಲೆ ಪೂಜೆ ಏಕೆ ಮಾಡಬಾರದು, ಪಂಜುರ್ಲಿ ಮೇಲೆ ಮೂತ್ರ ವಿಸರ್ಜನೆ ಮಾಡಿದರೆ ಏನೂ ಆಗಲ್ಲ ಎಂಬಿತ್ಯಾದಿ ಹೇಳಿಕೆಗಳನ್ನು ನೀಡಿದ್ದರು. ಗಣೇಶ ಒಬ್ಬ ಕ್ರೂರಿ ಎಂದು ಯೋಗೀಶ್ ಮಾಸ್ಟರ್ ವಿತಂಡವಾದ ಮಂಡಿಸಿದ್ದರು. ಇದರಿಂದ ಜನರ ಭಾವನೆಯ ಮೇಲೆ, ನಂಬಿಕೆಯ ಮೇಲೆ ಧಕ್ಕೆ ತರುವ, ಸಮಾಜದಲ್ಲಿ ಜನರ ಮನಸ್ಸು ಕೆರಳಿಸುವುದಾಯಿತೇ ವಿನಾ ಪ್ರಯೋಜನವೇನೂ ಆಗಲಿಲ್ಲ. ಡಾ.ಎಂ.ಎಂ.ಕಲಬುರ್ಗಿ ಕೂಡ ಶೂನ್ಯ ಪ್ರತಿಪಾದಕರಾಗಿ, ಯಾರದ್ದೋ ಕೆಂಗಣ್ಣಿಗೆ ಗುರಿಯಾಗಿ ಬಲಿಯೂ ಆದರು. ಮೌನಕ್ಕೆ ಯಾರೇ ಶರಣಾಗಲಿ. ಪ್ರಶ್ನಿಸುವವರು ಬಹಳ. ಕೆಲವರಿಗೆ ಅದೇ ದಂಧೆ. ಇನ್ನು ಕೆಲವು ಸಹಜವಾದದ್ದೇ. ಮೌನಕ್ಕಿರುವ ತಾಕತ್ತೇ ಅದು. ಆದರೆ ಬಳಕೆ ಬೇರೆ. ಯಾವ ರಂಗ ಅಂತಿಲ್ಲ. ಸಿನೆಮಾ, ಕ್ರೀಡೆ, ಸಾಮಾಜಿಕ, ಶೈಕ್ಷಣಿಕ... ಹಾಗಾಗಿಯೇ ಗಾಂಧೀಜಿ ಮೌನವನ್ನು ಪ್ರಬಲ ಅಸ್ತ್ರವನ್ನಾಗಿಸಿಕೊಂಡಿದ್ದರು. ಮೊನ್ನೆ ಕುಂಭಮೇಳದಲ್ಲಿ ಕಾಲ್ತುಳಿತವಾಯಿತು. ಈ ಬಗ್ಗೆ ಸಂಸತ್ತು ಕೂಡ ಮೂಕವಾಯಿತು. ಕುಂಭಮೇಳದ ಕಾಲ್ತುಳಿತದಲ್ಲಿ ಸತ್ತವರೆಷ್ಟು? ಉತ್ತರ ಪ್ರದೇಶದ ಮುಖ್ಯಮಂತ್ರಿ, ಸರ್ಕಾರ ಅಥವಾ ಕೇಂದ್ರದ ಗೃಹ ಮಂತ್ರಿ ಸ್ಪಷ್ಟವಾಗಿ ಹೇಳಿದ್ದರೆ ಎಲ್ಲರ ಬಾಯಿ ಮುಚ್ಚುತ್ತಿತ್ತು. ಈಗ ಇಡೀ ದೇಶವೇ ಪ್ರಶ್ನಿಸುತ್ತಿದೆ. ನೀವೇಕೆ ಮೌನ ತಾಳಿದ್ದೀರಿ? ಬಹಿರಂಗಪಡಿಸಿ. ಸ್ವತಃ ಸಂಸತ್ತಿನಲ್ಲಿ ಪ್ರಶ್ನಿಸಿದರು. ಊಹುಂ. ಇಂದಿನವರೆಗೆ ಸರಿಯಾದ ಅಂಕಿಸಂಖ್ಯೆಯನ್ನು ಹೇಳುತ್ತಿಲ್ಲ... ಸಂಸತ್ತಿನಲ್ಲಿ ಒಂದು ಶ್ರದ್ಧಾಂಜಲಿಯೂ ಮೃತರಿಗೆ ದೊರೆಯಲಿಲ್ಲ! ಈಗ ಮಾತು ಬೇಕಿತ್ತು.. ಮೌನವಲ್ಲ ಇಲ್ಲಿ ಮಾತು, ಮೌನ, ಅಭಿವ್ಯಕ್ತಿ ಎಲ್ಲವೂ ಎದ್ದು ಕಂಡಿತು !! ಮೌನ ಅಸ್ತ್ರವನ್ನಾಗಿಸಿಕೊಂಡಿದ್ದೇಕೆ? ಇದು ಈಗ ಎದ್ದಿರುವ ಪ್ರಶ್ನೆ. ಎಲ್ಲದಕ್ಕೂ ಮೌನ ಮುರಿಯಬೇಕು. ಮಾತನಾಡಬೇಕು. ಸ್ಪಷ್ಟನೆ ನೀಡಬೇಕು ಎಂದು ಅಪೇಕ್ಷಿಸುವುದು ತಪ್ಪು. ಹಾಗೆಯೇ ಸಾಧುವೂ ಅಲ್ಲ. ಆದರೆ ಕೆಲವು ವಿಷಯಗಳಲ್ಲಿ ಜವಾಬ್ದಾರಿಯುತ ವ್ಯಕ್ತಿಯಾಗಿ ಸ್ಪಷ್ಟನೆ ನೀಡಿ ಮಾತನಾಡಬೇಕು.
ಜನಗಣತಿ ನಡೆಯದೇ ಇರುವುದರಿಂದ ದೇಶದ ೧೪ ಕೋಟಿ ಜನ ಆಹಾರ ಭದ್ರತೆಯಿಂದ ವಂಚಿತರಾಗಿದ್ದಾರೆ’ ಎಂದು ಲೋಕಸಭೆಯಲ್ಲಿ ಪ್ರಶ್ನಿಸಿದ್ದಕ್ಕೂ ಮೌನ ತರವೇ?
ಸಾಮಾಜಿಕ ಸ್ತರದಲ್ಲೂ ಮಾತಿನ ಔಚಿತ್ಯ ಸದಾ ಮುನ್ನೆಲೆಗೆ ಬರುತ್ತಲೇ ಇರುತ್ತದೆ. ಮೊನ್ನೆಯ ಘಟನೆಯನ್ನೇ ನೋಡಿ. ಪ್ರಸಕ್ತ ದಿನಮಾನಗಳ ಹೆಸರಾಂತ ಯೂಟ್ಯೂಬರ್ ರಣವೀರ್ ಅಹ್ಲುವಾಲಿಯಾ ರಿಯಾಲಿಟಿ ಶೋ ಒಂದರಲ್ಲಿ ಆಡಿದ ಅಸಭ್ಯ-ಅಶ್ಲೀಲ ಮಾತುಗಳು ದೇಶದ ಪ್ರಜ್ಞಾವಂತರನ್ನು ಆಕ್ರೋಶಕ್ಕೆ ಒಳಗಾಗಿಸಿವೆ. ಸ್ವತಃ ಮಹಾರಾಷ್ಟ್ರ ಸರ್ಕಾರ ಖಂಡಿಸಿ ಎಫ್‌ಐಆರ್ ದಾಖಲಿಸಿದೆ. ಹಾಗೇ ಆಗಾಗ ದೇವರು-ಧರ್ಮದ ಬಗ್ಗೆ ಮಾತನಾಡಿ ಬರಿದೇ ಸುದ್ದಿಯಾಗುವ ಭಗವಾನ್ ಅವರ ಮಾತುಗಳಂತೂ ಎಲ್ಲರಿಗೂ ಗೊತ್ತಿರುವಂಥವೇ. ಇವರುಗಳು ಮೌನವಾಗಿದ್ದರೆ ಎಷ್ಟು ಚೆನ್ನ ಎಂದು ಇದರಿಂದ ವಿಧಿತವಾಗುತ್ತದೆ.
ನಿಜ. ಸಮಯ, ಸಂದರ್ಭ, ಅಗತ್ಯತೆ ಮತ್ತು ಜವಾಬ್ದಾರಿ ಅರಿತು ಮಾತನಾಡಬೇಕು. ಮೌನ ಧರಿಸಿ ತಮ್ಮ ಮುಖ ರಕ್ಷಿಸಿಕೊಳ್ಳುವಂತಾಗಬಾರದು. ಅಥವಾ ಮೌನದ ಮುಖವಾಡ ಧರಿಸಿ ಸ್ವರಕ್ಷಾ ತಂತ್ರವನ್ನೂ ಬಳಸಕೂಡದು. ಅಲ್ಲವೇ?