ಇನ್ಫಿ ಮೂರ್ತಿ, ಸುಬ್ರಮಣಿಯನ್ ದುಡಿಮೆ ಮಂತ್ರ ಆಶಯ ಮಾತ್ರ

ಇನ್ಫೋಸಿಸ್ ನಾರಾಯಣಮೂರ್ತಿ ಮತ್ತು ಎಸ್.ಎನ್. ಸುಬ್ರಮಣಿಯನ್ ವಾರಕ್ಕೆ ೭೦-೯೦ ಗಂಟೆ ದುಡಿಮೆ ಇರಬೇಕು ಎಂದು ಬಯಸಿರುವುದು ಕೇವಲ ಆಶಯವಷ್ಟೇ ಆದೇಶವಲ್ಲ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಒಪ್ಪಿತವಾಗಿರುವುದು ೮ ಗಂಟೆ ದುಡಿಮೆ. ಕೈಗಾರಿಕೆಗಳಲ್ಲೂ ಇದನ್ನೇ ಅನುಸರಿಸಲಾಗುತ್ತಿದೆ. ಇದನ್ನು ಹೆಚ್ಚಿಸಿದರೆ ಆರೋಗ್ಯದ ಮೇಲೆ ಪ್ರಭಾವ ಆಗಲಿದೆ ಎಂಬುದು ಹಲವರ ವಾದ. ಆದರೆ ಅನುಕೂಲ ಇರುವವರು ಮತ್ತು ದುಡಿಮೆಗೆ ಒಲವು ಇರುವವರು ಹೆಚ್ಚು ಗಂಟೆ ದುಡಿಯಬಹುದು. ನಾರಾಯಣ ಮೂರ್ತಿ ವಾರಕ್ಕೆ ೭೦ ಗಂಟೆ ದುಡಿಯಬೇಕು ಎಂದು ಸಲಹೆ ಮಾಡಿದ್ದರೆ ಸುಬ್ರಮಣಿಯನ್ ೯೦ ಗಂಟೆ ಎಂದು ಹೇಳಿದ್ದಾರೆ. ಇದಕ್ಕೆ ಎಲ್ಲ ರಂಗಗಳಿಂದಲೂ ಪರ- ವಿರೋಧ ಕಂಡು ಬಂದಿದೆ. ಕೆಲವರು ಸ್ವಾಗತಿಸಿದ್ದಾರೆ. ಮತ್ತೆ ಕೆಲವರು ಟೀಕಿಸಿದ್ದಾರೆ. ಆದರೆ ಸಲಹೆ ನೀಡಿದವರ ಮೂಲ ಉದ್ದೇಶ. ಜಗತ್ತಿನಲ್ಲಿ ಉತ್ಪಾದಕತೆ ಕಡಿಮೆ ಇರುವುದು ಭಾರತದಲ್ಲಿ ಮಾತ್ರ. ಕೆಲಸ ಮಾಡುವವರು ೮ ಗಂಟೆ ದುಡಿದರೂ ಉತ್ಪಾದಕತೆ ಅಧಿಕಗೊಂಡಿಲ್ಲ. ಅಂದರೆ ಗುಣಮಟ್ಟದ ಕೆಲಸ ನಡೆಯುತ್ತಿಲ್ಲ. ಅದರಿಂದ ವಾರಕ್ಕೆ ೭೦-೯೦ ಗಂಟೆ ದುಡಿಮೆಯಾದರೆ ಉತ್ಪಾದಕತೆ ಅಧಿಕಗೊಳ್ಳುತ್ತದೆ ಎಂಬುದು ಇಬ್ಬರ ವಾದ. ಆದರೆ ಅಂತಾಷ್ಟ್ರೀಯ ಮಟ್ಟದಲ್ಲಿ ದಿನಕ್ಕೆ ೮ ಗಂಟೆಗಿಂತ ಹೆಚ್ಚು ದುಡಿಮೆ ಒಳ್ಳೆಯದಲ್ಲ ಎಂಬ ಅಭಿಪ್ರಾಯವಿದೆ. ಅದರಲ್ಲೂ ಶ್ರಮದ ದುಡಿಮೆ ಇರುವ ಕಾರ್ಮಿಕರಿಗೆ ೮ ಗಂಟೆಯಿಂದ ಹೆಚ್ಚು ದುಡಿಯುವಂತೆ ಮಾಡುವುದು ಸರಿಯಾದ ಕ್ರಮವಲ್ಲ. ದಿನದ ೨೪ ಗಂಟೆಗಳಲ್ಲಿ ೮ ಗಂಟೆ ದುಡಿಮೆ, ೮ ಗಂಟೆ ವಿರಾಮ, ೮ ಗಂಟೆ ಮನರಂಜನೆ ಸೇರಿದಂತೆ ಸಾಮಾಜಿಕ ಚಟುವಟಿಕೆಗಳಿಗೆ ಎಂದು ಹೇಳಲಾಗಿದೆ. ೮ ಗಂಟೆ ವಿರಾಮವನ್ನು ನಿದ್ದೆ ಮತ್ತು ವಿರಾಮ ಕಡಿಮೆ ಮಾಡಲು ಬರುವುದಿಲ್ಲ. ಆದರೆ ೮ ಗಂಟೆ ಮನರಂಜನೆ ಮತ್ತಿತರ ಚಟುವಟಿಕೆ ಎಂಬುದನ್ನು ಕಡಿಮೆ ಮಾಡಬಹುದು ಎಂಬ ಅಭಿಪ್ರಾಯವಿದೆ. ಆದರೆ ಸಾಮಾಜಿಕ ಚಟುವಟಿಕೆಗಳು ಕಡಿಮೆಯಾದಲ್ಲಿ ಸಾಮಾಜಿಕ ಸ್ವಾಸ್ಥ್ಯ ಇಳಿಮುಖಗೊಳ್ಳುತ್ತದೆ. ಇದಕ್ಕೆ ಹಲವು ವರ್ಷಗಳಿಂದ ಅಧ್ಯಯನ ನಡೆಸಿ ತೀರ್ಮಾನಕ್ಕೆ ಬರಲಾಗಿದೆ.
ನಾರಾಯಣಮೂರ್ತಿ ಮತ್ತು ಸುಬ್ರಮಣಿಯನ್ ಇಬ್ಬರೂ ಹುಟ್ಟಿದಿಂದ ಶ್ರೀಮಂತರಲ್ಲ. ಸ್ವಂತ ದುಡಿಮೆಯಿಂದ ಹಣ ಗಳಿಸಿದವರು. ಅವರಿಗೆ ದುಡಿಮೆತ ಬೆಲೆ ಗೊತ್ತಿದೆ. ಅವರು ಎಲ್ಲ ದೇಶಗಳನ್ನು ನೋಡಿ ತಮ್ಮ ಅನುಭವದ ಮೇಲೆ ಹೇಳಿದ್ದಾರೆ. ೮ ಗಂಟೆ ದುಡಿಮೆ ಕಲ್ಪನೆ ೧೯೧೮ ರಲ್ಲಿ ಜರ್ಮನಿಯಲ್ಲಿ ಮೊದಲು ಜಾರಿಗೆ ಬಂದಿತು. ಕೈಗಾರಿಕೆಗಳಲ್ಲಿ ದುಡಿಯುವ ಕಾರ್ಮಿಕರಲ್ಲಿ ಕೆಲವು ತಮ್ಮ ಕೌಶಲ್ಯ ಹೆಚ್ಚಿಸಿಕೊಳ್ಳಲು ತರಬೇತಿಗೆ ಹೋಗುತ್ತಾರೆ. ಉಳಿದವರು ಹೆಚ್ಚಿನ ಅಧ್ಯಯನ-ಪದವಿ ಗಳಿಸಲು ಬಯಸುತ್ತಾರೆ. ಅದಕ್ಕೆ ಸಮಯ ಬೇಕು. ಕಚೇರಿಗಳಲ್ಲಿ ಕೆಲಸ ಮಾಡುವವರಿಗೆ ಮಾತ್ರ ಹೆಚ್ಚಿನ ಕೆಲಸದ ಅವಧಿ ಸೂಚಿಸಬಹುದು. ರೈತರಿಗೆ ಇದನ್ನು ಅನ್ವಯಿಸಲು ಬರುವುದಿಲ್ಲ. ದಿನಕ್ಕೆ ೧೦-೧೨ ಗಂಟೆ ಹೊಲದಲ್ಲಿ ದುಡಿಯುವವರೂ ಇದ್ದಾರೆ. ವೈದ್ಯರು, ವಕೀಲರು, ವಿಜ್ಞಾನಿಗಳು, ಕಲಾವಿದರಿಗೆ ಹೆಚ್ಚಿನ ದುಡಿಮೆ ಅವಧಿ ವಿಧಿಸುವ ಪ್ರಮೇಯ ಬರುವುದಿಲ್ಲ. ಅವರು ಈಗಾಗಲೇ ಕಾಲಮಿತಿ ಮೀರಿದ್ದಾರೆ. ಹುಟ್ಟಿನಿಂದ ಶ್ರೀಮಂತರಾದವರಿಗೆ ಈ ಮಾತು ರುಚಿಸುವುದಿಲ್ಲ. ಅವರು ಜೀವನದಲ್ಲಿ ಎಷ್ಟು ಸಂಪಾದಿಸಬೇಕೋ ಅದಕ್ಕಿಂತ ಹೆಚ್ಚು ಅವರ ಬಳಿ ಹಣ ಇರುತ್ತದೆ. ಅದರಿಂದ ಅವರಿಗೆ ಹೆಚ್ಚಿನ ಅವಧಿ ದುಡಿಯುವ ಹಂಬಲ ಇರುವುದಿಲ್ಲ. ಅದರಿಂದಲೇ ಅವರು ನಾರಾಯಣಮೂರ್ತಿ ಅವರ ಸಲಹೆಯನ್ನು ಸ್ವಾಗತಿಸುವುದಿಲ್ಲ. ಸರ್ಕಾರಿ ಕೆಲಸಗಳಲ್ಲಿ ಇದಕ್ಕೆ ಉತ್ತೇಜನ ನೀಡುವ ಯಾವ ಕ್ರಮಗಳೂ ಕಂಡು ಬರುವುದಿಲ್ಲ. ಖಾಸಗಿ ರಂಗದಲ್ಲಿ ಕಡಿಮೆ ಅವಧಿಯಲ್ಲಿ ಹೆಚ್ಚು ಕೆಲಸ ನಡೆದಲ್ಲಿ ಹಣ ಮತ್ತು ಕಾಲ ಉಳಿತಾಯವಾಗಲಿದೆ. ಅದಕ್ಕಾಗಿ ಅವರು ವಾರಕ್ಕೆ ದುಡಿಮೆ ಅವಧಿಯನ್ನು ಹೆಚ್ಚಿಸುವುದನ್ನು ಸ್ವಾಗತಿಸುತ್ತಾರೆ. ಯೌವನದಲ್ಲಿ ಹೆಚ್ಚು ಕಾಲ ದುಡಿಯಬಹುದು. ದೇಹ ಕೂಡ ಶ್ರಮವನ್ನು ಸಹಿಸಿಕೊಳ್ಳುತ್ತದೆ. ಆದರೆ ಹೆಚ್ಚುವರಿ ಶ್ರಮಕ್ಕೆ ತಕ್ಕಂತೆ ಸಂಬಳವೂ ಅಧಿಕಗೊಳ್ಳಬೇಕು. ದುಡಿಮೆಯ ಕಾಲದ ಹಣದ ಪಾವತಿಗೆ ಅನುಗುಣವಾಗಿರಬೇಕು. ನಾರಾಯಣಮೂರ್ತಿ ಕೂಡ ಹೆಚ್ಚು ಹಣ ಪಾವತಿಯಾಗಬೇಕು ಎಂಬುದನ್ನು ವಿರೋಧಿಸಿಲ್ಲ. ವಿದೇಶಗಳಲ್ಲಿ ಹಗಲು ಇರುಳು ದುಡಿಯಲು ಬೇಕಾದ ಸವಲತ್ತುಗಳನ್ನು ಖಾಸಗಿ ಸಂಸ್ಥೆಗಳು ಕಲ್ಪಿಸಿಕೊಡುತ್ತಿವೆ. ಆ ರೀತಿಯ ಸವಲತ್ತು ಕಲ್ಪಿಸಿಕೊಡದೇ ಕೇವಲ ದುಡಿಮೆಯ ಅವಧಿಯನ್ನು ಹೆಚ್ಚಿಸುವುದು ಸರಿಯಲ್ಲ. ಯಾರಿಗೆ ದುಡಿಯುವ ಶಕ್ತಿ ಮತ್ತು ಆಸಕ್ತಿ ಇದೆಯೋ ಅವರಿಗೆ ಅವಕಾಶ ಕಲ್ಪಿಸಿಕೊಡಬೇಕು. ಆಗ ಉತ್ಪಾದನೆ ಅದಿಕಗೊಂಡು ಆರ್ಥಿಕ ಬೆಳವಣಿಗೆಯ ವೇಗ ಅಧಿಕಗೊಳ್ಳುವುದರಲ್ಲಿ ಸಂದೇಹವಿಲ್ಲ. ಆದರೆ ಇದು ಶೋಷಣೆಗೆ ಒಂದು ಮಾರ್ಗವಾಗಬಾರದು. ಹಿಂದೆ ಕಾರ್ಮಿಕರಿಗೆ ಉತ್ತೇಜನ ನೀಡುವ ಮೂಲ ಉದ್ದೇಶ ಹೆಚ್ಚು ಕೆಲಸ ಮಾಡಿಸುವುದೇ ಆಗಿತ್ತು. ಕಾರ್ಮಿಕರಿಗೆ ಅಗತ್ಯ ಸೌಲಭ್ಯ ಕಲ್ಪಿಸುವುದರಲ್ಲಿ ನಾವು ಎಷ್ಟು ಹಿಂದುಳಿದಿದ್ದೇವೆ ಎಂಬುದನ್ನೂ ಪರಿಗಣಿಸಬೇಕು. ಕಾರ್ಮಿಕರಿಗೆ ಹೆಚ್ಚು ದುಡಿಯಲು ಬೇಕಾದ ವಾತಾವರಣ ಕಲ್ಪಿಸಿಕೊಡುವುದು ಬಹಳ ಮುಖ್ಯ.