ಕಂಪ್ಯೂಟರ್ ಮತ್ತು ಇಂಟರ್ನೆಟ್ ಬಂದ ಮೇಲೆ ಆನ್ಲೈನ್ ಕ್ರೀಡೆಗಳು ಅಧಿಕಗೊಂಡಿವೆ. ಇದರಿಂದ ಸಾವಿರಾರು ಜನ ಹಣ ಕಳೆದುಕೊಂಡು ಆತ್ಮಹತ್ಯೆಗೆ ಶರಣಾದ ದಾರುಣ ಘಟನೆಗಳು ನಡೆಯುತ್ತಿವೆ. ತಂತ್ರಜ್ಞಾನ ಬೆಳೆದಂತೆ ಅದನ್ನು ಸದುಪಯೋಗಪಡಿಸಿಕೊಳ್ಳುವುದು ಅಥವಾ ದುರುಪಯೋಗಪಡಿಸಿಕೊಳ್ಳುವುದು ಎರಡೂ ನಮ್ಮ ಕೈಯಲ್ಲೇ ಇದೆ. ಇದಕ್ಕೆ ಸ್ವಯಂ ನಿಯಂತ್ರಣ ಒಂದೇ ಮಾರ್ಗ. ಸ್ವಯಂ ನಿಯಂತ್ರಣ ಬರಬೇಕು ಎಂದರೆ ಅದರ ಬಗ್ಗೆ ಪೂರ್ಣ ಮಾಹಿತಿ ಇರಬೇಕು. ನಮ್ಮ ಯುವಕರಲ್ಲಿ ಬಹುತೇಕ ಜನ ಆನ್ಲೈನ್ ಕ್ರೀಡೆಗಳ ಗುಣ-ಅವಗುಣಗಳ ಬಗ್ಗೆ ತಿಳಿದುಕೊಳ್ಳುವ ಗೋಜಿಗೆ ಹೋಗುವುದೇ ಇಲ್ಲ. ಹಣ ಕಳೆದುಕೊಂಡು ಸಾಲ ಮಾಡಿ ಅದನ್ನು ತೀರಿಸಿಕೊಳ್ಳಲು ಸಾಧ್ಯವಾಗದೇ ಆತ್ಮಹತ್ಯೆಗೆ ಶರಣಾಗುವುದು ಇತ್ತೀಚೆಗೆ ಅಧಿಕಗೊಂಡಿದೆ. ಇದಕ್ಕೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹಲವು ಕ್ರಮಗಳನ್ನು ಕೈಗೊಂಡಿವೆ. ಆದರೂ ಆತ್ಮಹತ್ಯೆ ಪ್ರಕರಣ ಇಳಿಮುಖಗೊಂಡಿಲ್ಲ. ರಾಜ್ಯದಲ್ಲಿ ೩ ವರ್ಷಗಳಲ್ಲಿ ೯೧೯ ಜನ ಆತ್ಮಹತ್ಯೆಗೆ ಶರಣಾಗಿದ್ದಾರೆ. ಇದರ ಬಗ್ಗೆ ವಿಧಾನಸಭೆಯಲ್ಲಿ ಚರ್ಚೆ ಏನೋ ಆಗಿದೆ. ಆದರೆ ಪರಿಹಾರ ಕಂಡು ಬಂದಿಲ್ಲ. ಕರ್ನಾಟಕ, ಕೇರಳ ಮತ್ತು ತಮಿಳುನಾಡು ಸರ್ಕಾರಗಳು ಆನ್ಲೈನ್ ಗೇಮ್ ನಿಷೇಧಿಸಿ ಮಾಡಿದ್ದ ಶಾಸನಗಳನ್ನು ಆಯಾ ರಾಜ್ಯಗಳ ಹೈಕೋರ್ಟ್ ರದ್ದುಪಡಿಸಿವೆ. ನ್ಯಾಯಾಲಯ ತೀರ್ಪು ನೀಡುವಾಗ ಕೌಶಲ್ಯ ಇರುವ ಆನ್ಲೈನ್ ಕ್ರೀಡೆಗಳನ್ನು ನಿಲ್ಲಿಸಲು ಬರುವುದಿಲ್ಲ ಎಂದು ಹೇಳಿದೆ. ಆದರೆ ಕೌಶಲ್ಯದ ಹೆಸರಿನಲ್ಲೇ ಲೈಸನ್ಸ್ ಪಡೆಯುವ ಕೆಲಸ ನಡೆಯುತ್ತಿದೆ. ಕೌಶಲ್ಯ ಎಂದರೆ ಯಾವುದು, ಅದೃಷ್ಟ ಪರೀಕ್ಷೆ ಯಾವುದು ಎಂಬುದು ಸ್ಪಷ್ಟಗೊಳ್ಳಬೇಕು. ಆಗ ಆನ್ಲೈನ್ ಕ್ರೀಡೆಗಳನ್ನು ನಿಯಂತ್ರಿಸಬಹುದೇ ಹೊರತು ನಿಷೇಧಿಸಲು ಬರುವುದಿಲ್ಲ. ಲೈನಸ್ಸ್ ಪಡೆದ ಆನ್ಲೈನ್ ಕ್ರೀಡೆಗಳಿಗೆ ಜಿಎಸ್ಟಿ ಶೇ. ೨೮ ವಿಧಿಸಲಾಗಿದೆ. ಒಟ್ಟು ೪೯೧ ದಶಲಕ್ಷ ಜನ ಆನ್ಲೈನ್ ಕ್ರೀಡೆಯಲ್ಲಿ ತೊಡಗಿದ್ದಾರೆ ಎಂದು ಅಂದಾಜು ಮಾಡಲಾಗಿದೆ. ನಗದು ಮತ್ತು ನಗದುರಹಿತ ಆನ್ಲೈನ್ ಕ್ರೀಡೆ ಎಂದು ವಿಭಜಿಸಲಾಗಿದೆ. ಈಗ ಇದು ಉದ್ಯಮವಾಗಿ ಬೆಳೆಯುತ್ತಿದೆ. ಬೇರೆ ದೇಶಗಳಲ್ಲಿ ಇದರ ನಿಯಂತ್ರಣಕ್ಕೆ ಪ್ರತ್ಯೇಕ ಇಲಾಖೆ ಇದೆ. ನಮ್ಮಲ್ಲಿ ಯಾವ ಇಲಾಖೆಗೆ ಬರುತ್ತದೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ತಮ್ಮದೇ ಆದ ಕಾಯ್ದೆಗಳನ್ನು ರಚಿಸಿವೆ. ಕೇಂದ್ರ ಸರ್ಕಾರ ಐಟಿಬಿಟಿ ಕಾಯ್ದೆಗೆ ತಿದ್ದುಪಡಿ ತಂದಿದೆ. ರಾಜ್ಯಗಳು ಇವುಗಳನ್ನು ಸೈಬರ್ ಅಪರಾಧಗಳಲ್ಲಿ ಸೇರಿಸಿವೆ. ಆನ್ಲೈನ್ ಕ್ರೀಡೆಗಳಲ್ಲಿ ವಂಚನೆ ನಡೆದರೆ ಯಾರು ಕ್ರಮ ಕೈಗೊಳ್ಳುತ್ತಾರೆ ಎಂಬುದು ಸ್ಪಷ್ಟಗೊಂಡಿಲ್ಲ. ಈಗ ಹಣ ಕಳೆದುಕೊಳ್ಳುತ್ತಿರುವವರಿಗೆ ಕ್ರೀಡೆ ಆಡುವ ಉತ್ಸಾಹ ವಿರುತ್ತದೆಯೇ ಉಳಿದ ವಿಚಾರ ತಿಳಿದಿರುವುದಿಲ್ಲ. ಹಿಂದೆ ಮಟ್ಕಾ ದಂಧೆ ಇದೇರೀತಿ ನಡೆಯುತ್ತಿತ್ತು. ಕಾಲಕ್ರಮೇಣ ಕಡಿಮೆಯಾಯಿತು. ಈಗಲೂ ಕೆಲವು ಕಡೆ ಅನಧಿಕೃತವಾಗಿ ನಡೆಯುತ್ತಿದೆ. ಇಂಥ ಕೃತ್ಯಗಳನ್ನು ನಿಷೇಧಿಸಿದರು ಉಪಯೋಗವೇನೂ ಆಗುವುದಿಲ್ಲ. ಕದ್ದುಮುಚ್ಚಿ ನಡೆಸುವವರು ಇದ್ದೇ ಇರುತ್ತಾರೆ. ನಮ್ಮಲ್ಲಿ ಯಾವುದೇ ಅಪರಾಧವಾದರೂ ಪೊಲೀಸರೇ ಕ್ರಮ ಕೈಗೊಳ್ಳಬೇಕು. ಮಾಜಿಸ್ಟ್ರೇಟ್ ಅಧಿಕಾರ ಇರುವವರೇ ಶಿಕ್ಷೆ ವಿಧಿಸಬೇಕು. ಹೀಗಾಗಿ ಆನ್ಲೈನ್ ಕ್ರೀಡೆಗಳ ನಿಯಂತ್ರಣಕ್ಕೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸಮನ್ವಯದಿಂದ ಸಮಗ್ರವಾದ ಕಟ್ಟುನಿಟ್ಟಿನ ಕಾಯ್ದೆ ರಚಿಸಬೇಕಾದ ಅಗತ್ಯವಿದೆ. ತಂತ್ರಜ್ಞಾನ ಬೆಳೆದಂತೆ ಮನರಂಜನೆಯ ರೀತಿನೀತಿ ಬದಲಾಗುತ್ತದೆ. ಈಗ ಆನ್ಲೈನ್ ಕ್ರೀಡೆಗಳು ಜನಪ್ರಿಯಗೊಂಡಿವೆ. ಇವುಗಳ ಆಕರ್ಷಣೆ ಎಷ್ಟಿದೆ ಎಂದರೆ ಸಾಲ ಮಾಡಿ ಇದರಲ್ಲಿ ಹಣ ತೊಡಗಿಸಿದವರು ಬಹಳ ಜನ ಇದ್ದಾರೆ. ಹೀಗಾಗಿ ಆತ್ಮಹತ್ಯೆಗೆ ಶರಣಾಗುವುದು ಅಧಿಕಗೊಂಡಿದೆ. ಹಣದ ವ್ಯವಹಾರ ಇರುವ ಕಡೆ ಸರ್ಕಾರದ ಪ್ರತ್ಯಕ್ಷ ಅಥವಾ ಪರೋಕ್ಷ ನಿಯಂತ್ರಣ ಅನಿವಾರ್ಯ. ಸ್ವಯಂ ನಿಯಂತ್ರಣಕ್ಕೆ ಅವಕಾಶವಿದ್ದರೂ ಅದರ ಪಾಲನೆ ಕಷ್ಟ. ವಿದೇಶಗಳಲ್ಲಿ ಸ್ವಯಂ ನಿಯಂತ್ರಣ ವ್ಯವಸ್ಥೆ ಇದೆ. ಈಗ ಇದು ಮಾನಸಿಕ ವ್ಯಾಧಿಯಾಗಿ ಹರಡಿಕೊಳ್ಳುತ್ತಿದೆ. ಕೈಗೆ ಹಣ ಬಂದ ಕೂಡಲೇ ಆನ್ಲೈನ್ ಕ್ರೀಡೆಯಲ್ಲಿ ತೊಡಗಿಸುವ ಪರಿಪಾಠ ಬೆಳೆದಿದೆ. ಇದರಿಂದ ಯುವ ಪೀಳಿಗೆ ದಾರಿ ತಪ್ಪಲು ಕಾರಣವಾಗುತ್ತಿದೆ. ಗ್ರಾಮೀಣ ಜನರಿಗೆ ಕೃಷಿ ಹೊರತುಪಡಿಸಿದರೆ ಉಳಿದ ಯಾವ ವೃತ್ತಿಯ ಬಗ್ಗೆ ಮಾಹಿತಿ ಇರುವುದಿಲ್ಲ. ಕಡಿಮೆ ಅವಧಿಯಲ್ಲಿ ಹೆಚ್ಚು ಹಣ ಮಾಡಬಹುದು ಎಂಬ ಘೋಷಣೆಗಳಿಗೆ ಬಲಿಯಾಗಿ ಅಡ್ಡ ಹಾದಿಯನ್ನು ಹಿಡಿಯುತ್ತಾರೆ. ಹಿಂದೆ ಒಬ್ಬರು ಇಬ್ಬರು ಮೋಸ ಮಾಡುತ್ತಿದ್ದರು. ಅವರನ್ನು ಪೊಲೀಸರು ಪತ್ತೆಹಚ್ಚಿ ಬಂಧಿಸುತ್ತಿದ್ದರು. ಈಗ ಆನ್ಲೈನ್ ಆಗಿರುವುದರಿಂದ ಮೋಸದ ಬಲೆ ಬೀಸಿದ ವ್ಯಕ್ತಿ ಎಲ್ಲಿರುತ್ತಾನೆ ಎಂಬುದೇ ತಿಳಿಯುವುದಿಲ್ಲ. ಹೀಗಾಗಿ ಸರ್ಕಾರವೇ ನಿಯಂತ್ರಣ ಹೊಂದಬೇಕು. ಇದಕ್ಕಾಗಿ ಸೂಕ್ತ ಕಾಯ್ದೆ ರಚಿಸಬೇಕು. ಅದು ಅಂತಾರಾಷ್ಟ್ರೀಯ ಮಟ್ಟದಲ್ಲೂ ಅನ್ವಯವಾಗುವ ಹಾಗೆ ಇರಬೇಕು. ಬೇರೆ ದೇಶದವರು ನಮ್ಮ ದೇಶದವರನ್ನು ಮೋಸಗೊಳಿಸಿದರೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆಯೂ ಚಿಂತನೆ ನಡೆಸಬೇಕು. ಯುವಕರ ಹಣ ಮತ್ತು ಸಮಯ ಎರಡೂ ಇದರಲ್ಲಿ ವ್ಯರ್ಥವಾಗುತ್ತದೆ ಎಂಬುದನ್ನು ಮರೆಯುವಂತಿಲ್ಲ.