ತಿರುಪತಿ ಕಾಲ್ತುಳಿತ ಸಾವು ಮುನ್ನೆಚ್ಚರಿಕೆ ಕ್ರಮ ಅಗತ್ಯ

ತಿರುಪತಿಗೆ ಪ್ರತಿದಿನ ೮೦ ಸಾವಿರದಿಂದ ೧ ಲಕ್ಷ ಜನ ಹೋಗಿ ಬಂದು ಮಾಡುತ್ತಾರೆ. ಆದರೆ ಎಂದೂ ಕಾಲ್ತುಳಿತ ಆಗಿರಲಿಲ್ಲ. ಸಾವಿರಾರು ಜನರನ್ನು ನಿಭಾಯಿಸುವ ಸಾಮರ್ಥ್ಯ ಟಿಟಿಡಿ ಆಡಳಿತ ಮಂಡಳಿಗೆ ಇದೆ. ಆದರೆ ಈ ಬಾರಿ ಎಲ್ಲಿ ಲೋಪ ಆಯಿತು ಎಂಬುದು ತಿಳಿದುಬಂದಿಲ್ಲ. ನ್ಯಾಯಾಂಗ ತನಿಖೆಯಿಂದ ನಿಜಾಂಶ ತಿಳಿಯುತ್ತದೆ. ಆದರೆ ತಿರುಪತಿ ನಮ್ಮ ರಾಜ್ಯದ ಬಹುತೇಕ ದೇವಾಲಯಗಳಿಗೆ ಮಾದರಿ. ಅಲ್ಲಿರುವ ವ್ಯವಸ್ಥೆಯನ್ನೇ ಈಗ ಎಲ್ಲ ಕಡೆ ಅನುಸರಿಸಲಾಗುತ್ತಿದೆ. ಅದರಿಂದ ಅಲ್ಲಿ ಯಾವ ಲೋಪವೂ ಆಗದಂತೆ ಎಚ್ಚರವಹಿಸುವುದು ಅಗತ್ಯ.
ತಿರುಪತಿಯಲ್ಲಿ ಪ್ರತಿವರ್ಷ ವೈಕುಂಠ ಏಕಾದಶಿಗೆ ಲಕ್ಷಾಂತರ ಜನ ಸೇರುವುದು ವಾಡಿಕೆ. ಆ ದಿನ ಉತ್ತರದ ಬಾಗಿಲಿನಲ್ಲಿ ದೇವರ ಮೂರ್ತಿ ಇರುವುದರಿಂದ ಅದೇ ದಿನ ಕೆಳಗೆ ಹೋದರೆ ಸ್ವರ್ಗ ಸಿಗುತ್ತದೆ ಎಂಬ ಭಾವನೆ. ಈ ರೀತಿ ಬರುವ ಜನ ಸಮೂಹಕ್ಕೆ ಎಲ್ಲ ವ್ಯವಸ್ಥೆ ಮಾಡಿಕೊಡುವುದು ಟಿಟಿಡಿ ಆಡಳಿತ ವರ್ಗದ ಕರ್ತವ್ಯ. ಈ ಬಾರಿ ೯೦ಕ್ಕೂ ಹೆಚ್ಚು ಕೌಂಟರ್‌ಗಳನ್ನು ಮಾಡಿ ೧.೨೦ ಲಕ್ಷ ಟೋಕನ್ ಹಂಚಲು ವ್ಯವಸ್ಥೆ ಮಾಡಿದ್ದರು. ಆದರೆ ಒಂದು ಕೌಂಟರ್‌ನಲ್ಲಿ ೫-೬ ಸಾವಿರ ಜನ ಒಟ್ಟಿಗೆ ನುಗ್ಗಿದ್ದರಿಂದ ಜನಜಂಗುಳಿ ಉಂಟಾಗಿ ಕಾಲ್ತುಳಿತದಲ್ಲಿ ೬ ಜನ ನಿಧನರಾಗಿದ್ದಾರೆ. ಈ ರೀತಿ ದುರಂತ ಎಂದೂ ನಡೆದಿರಲಿಲ್ಲ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.
ತಿರುಪತಿ ಮೊದಲಿನಿಂದ ಸಾವಿರಾರು ಜನ ಭಕ್ತರನ್ನು ನಿಭಾಯಿಸುವ ಸಾಮರ್ಥ್ಯ ಪಡೆದುಕೊಂಡಿದೆ. ವರ್ಷದ ಎಲ್ಲ ದಿನಗಳು ೨೪ ಗಂಟೆ ನಿರಂತರ ಭಕ್ತರು ಇರುವುದು ಇಲ್ಲಿಯ ವಿಶೇಷ. ಇಂಥ ಸ್ಥಳದಲ್ಲಿ ಕಾಲ್ತುಳಿತ ನಡೆದರೆ ಜನರಲ್ಲಿ ಭಯ ಮೂಡುವುದು ಸಹಜ. ಹೀಗಾಗಿ ಜನ ಬರಲು ಹಿಂಜರಿಯುವ ಪರಿಸ್ಥಿತಿ ಬರಲಿದೆ. ಆಂಧ್ರ ಸರ್ಕಾರ ಮೊದಲು ಜನರಲ್ಲಿ ಮೂಡಿರುವ ಅನುಮಾನಗಳನ್ನು ನಿವಾರಿಸಬೇಕು. ಈ ರೀತಿ ಘಟನೆ ಮರುಕಳಿಸದಂತೆ ಹೆಚ್ಚು ಮುನ್ನಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು. ಗಣ್ಯರು ಬಂದರೆ ಅವರಿಗೆ ಎಲ್ಲ ಸವಲತ್ತು ಕಲ್ಪಿಸಿಕೊಡುವ ಭರದಲ್ಲಿ ಪೊಲೀಸರು ಜನಸಾಮಾನ್ಯರಿಗೆ ತೊಂದರೆ ಕೊಡುವುದು ದಿನನಿತ್ಯ ನಡೆಯುತ್ತದೆ. ಇದನ್ನು ತಪ್ಪಿಸಬೇಕು. ಗಣ್ಯರಿಗೆ ಒಂದು ನಿಗದಿತ ವೇಳೆಯಲ್ಲಿ ಮಾತ್ರ ಅವಕಾಶ ಕೊಡಬೇಕು. ಇದರ ಬಗ್ಗೆ ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ ಧ್ವನಿ ಎತ್ತಿದ್ದಾರೆ. ಮುಂಬರುವ ದಿನಗಳಲ್ಲಾದರೂ ವಿಐಪಿಗಳಿಗೆ ಮಣೆ ಹಾಕುವುದು ಕಡಿಮೆಯಾದರೆ ಜನಸಾಮಾನ್ಯರಿಗೆ ಉತ್ತಮ ಸವಲತ್ತು ಕಲ್ಪಿಸಿಕೊಡಬಹುದು. ಟಿಟಿಡಿ ಅನುಸರಿಸುವ ಹಲವು ಕ್ರಮಗಳನ್ನು ಈಗ ಎಲ್ಲ ಕಡೆ ಪ್ರಮುಖ ದೇವಾಲಯಗಳಲ್ಲಿ ಅನುಕರಣೆ ಮಾಡಲಾಗುತ್ತಿದೆ. ಹೀಗಾಗಿ ತಿರುಪತಿ ಹಲವು ದೇವಾಲಯಗಳಿಗೆ ಮಾದರಿ. ಇಂಥ ಸ್ಥಳದಲ್ಲಿ ಸಾವು- ನೋವು ಸಂಭವಿಸಿದರೆ ಜನರಲ್ಲಿ ನಿರಾಶೆ ಮೂಡುವುದು ಸಹಜ. ಜನರ ನಂಬಿಕೆಗಳಿಗೆ ಚ್ಯುತಿ ಬಾರದಂತೆ ಸುರಕ್ಷಾ ಕ್ರಮಗಳನ್ನು ಕೈಗೊಳ್ಳುವುದು ಮುಖ್ಯ. ಟಿಟಿಡಿಯಲ್ಲಿ ಒಟ್ಟು ೭ ಸಾವಿರ ಕಾಯಂ ೧೪ ಸಾವಿರ ಹಂಗಾಮಿ ನೌಕರರು ಕೆಲಸ ಮಾಡುತ್ತಾರೆ. ಪ್ರತಿದಿನ ೪-೬ ಕೋಟಿ ರೂ. ಆದಾಯವಿದೆ. ಭಕ್ತರಿಗೆ ಪ್ರತಿದಿನ ೧೨ ಟನ್ ಅನ್ನ ವಿತರಣೆಯಾಗುತ್ತದೆ. ಇಂಥ ಬೃಹತ್ ಕೆಲಸದಲ್ಲಿ ಜನಜಂಗುಳಿಗೆ ಅವಕಾಶವಿಲ್ಲದಂತೆ ನೋಡಿಕೊಳ್ಳುವುದು ಕಷ್ಟದ ಕೆಲಸ. ಅದಕ್ಕೆ ಸೂಕ್ತ ಸಿಬ್ಬಂದಿಯನ್ನು ಹೊಂದಿರುವುದೂ ಮುಖ್ಯ. ಹಗಲು ರಾತ್ರಿ ಕೆಲಸ ಮಾಡುವ ನೌಕರರು ಇರಬೇಕು. ಹಿಂದೆ ತಿರುಪತಿ ಬೆಟ್ಟದಲ್ಲಿ ನೌಕರರು ವಾಸಿಸುತ್ತಿದ್ದರು. ಅವರನ್ನು ಕೆಳಗಿನ ನಗರಕ್ಕೆ ಸ್ಥಳಾಂತರಿಸಿ ಬೆಟ್ಟದಲ್ಲಿ ಭಕ್ತರಿಗೆ ಎಲ್ಲ ಸವಲತ್ತು ಕಲ್ಪಿಸಲಾಗಿದೆ. ಭಕ್ತರು ನೀಡುವ ದೇಣಿಗೆ ಮತ್ತು ದಾನ ಬೇರೆ ಕಡೆ ಬಳಸುವಂತಿಲ್ಲ. ಅದರಿಂದ ಜನಸಾಮಾನ್ಯರು ದೇವರಿಗೆ ನೀಡಿದ ಪ್ರತಿಯೊಂದು ರೂಪಾಯಿ ಜನರ ಕ್ಷೇಮಕ್ಕೆ ಬಳಕೆಯಾಗುತ್ತದೆ ಎಂಬುದು ಖಚಿತವಾಗಬೇಕು. ದೇಶದ ಅತ್ಯಂತ ಶ್ರೀಮಂತ ದೇವಾಲಯಗಳಲ್ಲಿ ತಿರುಪತಿ ಪ್ರಮುಖ ಎನ್ನುವುದರಲ್ಲಿ ಉತ್ಪ್ರೇಕ್ಷೆ ಏನೂ ಇಲ್ಲ. ಭಕ್ತರಿಗೆ ಸವಲತ್ತು ಕಲ್ಪಿಸಿಕೊಡಲು ಹಣದ ಕೊರತೆ ಏನೂ ಬರುವುದಿಲ್ಲ. ಅದರ ಸದ್ಬಳಕೆ ಆಗಬೇಕಷ್ಟೆ. ಜನಜಂಗುಳಿ ಘಟನೆ ಟಿಟಿಡಿ ಆಡಳಿತವರ್ಗವನ್ನು ಬಡಿದೆಬ್ಬಿಸಿದೆ. ಇಡೀ ವ್ಯವಸ್ಥೆಯಲ್ಲಿರುವ ಲೋಪದೋಷಗಳನ್ನು ಈಗಲೇ ಸರಿಪಡಿಸುವುದು ಅಗತ್ಯ.
ಎಲ್ಲ ರಾಜ್ಯಗಳಿಂದ ಭಕ್ತರು ಹೋಗುವ ಹಾಗೆ ಕರ್ನಾಟಕದಿಂದಲೂ ಪ್ರತಿವರ್ಷ ಹೋಗುವವರು ಇದ್ದೇ ಇದ್ದಾರೆ. ಅವರು ವಂಶಪಾರಂಪರ‍್ಯವಾಗಿ ತಿರುಪತಿ ದರ್ಶನ ಪಡೆಯುತ್ತ ಬಂದಿರುತ್ತಾರೆ. ಅವರಿಗೆ ತಿರುಪತಿಗೆ ಹೋಗಿ ಬರುವುದು ಪುಣ್ಯದ ಕೆಲಸ. ಇದಕ್ಕೆ ಅಡ್ಡಿ ಬಂದರೆ ಅವರು ಸಹಿಸುವುದಿಲ್ಲ. ಆಂಧ್ರ ಸರ್ಕಾರ ಈ ದೃಷ್ಟಿಯಿಂದ ಸುರಕ್ಷತಾ ಕ್ರಮಕೈಗೊಂಡು ಜನರಲ್ಲಿ ಹಿಂದೆ ಇದ್ದ ವಿಶ್ವಾಸವನ್ನು ಮತ್ತೆ ಗಳಿಸುವುದು ಮುಖ್ಯ. ಈಗ ಸಾರಿಗೆ ವ್ಯವಸ್ಥೆ ಉತ್ತಮಗೊಂಡಿರುವುದರಿಂದ ದೇಶದ ಯಾವುದೇ ಮೂಲೆಯಿಂದಲಾದರೂ ತಿರುಪತಿಗೆ ಬರಬಹುದು. ಹೀಗಾಗಿ ಭಕ್ತರ ಸಂಖ್ಯೆ ಅಧಿಕಗೊಳ್ಳುತ್ತ ಹೋಗುವುದು ಸಹಜ.