ಕೃಷ್ಣೆಯ ನದಿ ತೀರದಲ್ಲಿರುವವರ ಕೂಗು ದೆಹಲಿ ತಲುಪುವುದು ಕಷ್ಟ ಎಂದು ಹೇಳುವ ಕಾಲಇತ್ತು. ಈಗ ಬೆಂಗಳೂರಿಗೆ ಈ ಕೂಗು ತಲುಪುವುದೇ ಕಷ್ಟವಾಗಿದೆ. ಬಾಗಲಕೋಟೆಯಲ್ಲಿ ರೈತರು ಚಳವಳಿ ನಡೆಸುತ್ತಿದ್ದಾರೆ. ಬೆಂಗಳೂರಿನಲ್ಲಿ ಕುಳಿತಿರುವವರಿಗೆ ಅದು ಕೇಳಿಸುತ್ತಿಲ್ಲ. ಅಥವಾ ಕೇಳಿದರೂ ಕೇಳಿಸದಂತೆ ಜಾಣ ಕಿವುಡು ತೋರುತ್ತಿದ್ದಾರೆಯೇ ಎಂಬ ಅನುಮಾನ ಬರುತ್ತಿದೆ. ಈಗ ಯುಕೆಪಿ ಮೂರನೇ ಹಂತದ ಯೋಜನೆ ಕಾರ್ಯಗತವಾಗಬೇಕು. ಒಟ್ಟು ೧.೩೬ ಲಕ್ಷ ಎಕರೆ ಮತ್ತು ೨೦ ಹಳ್ಳಿಗಳು ಮುಳುಗಡೆಯಾಗುತ್ತದೆ. ಅಲ್ಲಿಯ ಜನರದು ಒಂದೇ ಕೂಗು ಭೂಮಿ ಮತ್ತು ಮನೆ ಎರಡನ್ನೂ ಒಂದೇ ಬಾರಿ ತೆಗೆದುಕೊಂಡು ನಮಗೆ ಪರಿಹಾರ ಕೊಟ್ಟುಬಿಡಿ. ನಾವು ಎಲ್ಲೋ ಹೇಗೋ ಜೀವನ ಮಾಡಿಕೊಳ್ಳುತ್ತೇವೆ. ಈ ಅತಂತ್ರ ಜೀವನ ಬೇಡ. ನಾವು ನಮ್ಮ ಭೂಮಿಯಲ್ಲಿ ಏನೂ ಬೆಳೆಯುವಂತಿಲ್ಲ. ನಮ್ಮ ಮನೆ ಸುಧಾರಿಸುವಂತಿಲ್ಲ. ನಮ್ಮ ಆಸ್ತಿಯ ಮೇಲೆ `ಯುಕೆಪಿ’ ಎಂದು ಬರೆದು ನಮ್ಮ ಜೀವನವನ್ನೇ ಕಸಿದುಕೊಂಡಿದ್ದೀರಿ. ಇದಕ್ಕಿಂತ ಎಲ್ಲವನ್ನೂ ನೀವೇ ಪಡೆದುಕೊಂಡುಬಿಡಿ. ಇಲ್ಲವೇ ಯೋಜನೆ ಕೈಬಿಟ್ಟಿದ್ದೇವೆ ಎಂದು ಹೇಳಿಬಿಡಿ. ನೀರಾವರಿ ಲಾಭ ಪಡೆಯುವವರು ಹಾಯಾಗಿದ್ದಾರೆ. ಮುಳುಗಡೆಯಾಗುವ ನಾವು ಹೋರಾಟ ನಡೆಸಬೇಕಾಗಿ ಬಂದಿರುವುದು ವಿಪರ್ಯಾಸ ಎಂದಿದ್ದಾರೆ.
ಇದು ನಿಜವೂ ಹೌದು. ಮೂರನೇ ಹಂತ ಪೂರ್ಣಗೊಂಡರೆ ೧೩೦ ಟಿಎಂಸಿ ಹೆಚ್ಚುವರಿ ನೀರು ಬರುತ್ತದೆ. ೧೫ ಲಕ್ಷ ಎಕರೆ ನೀರಾವರಿಯಾಗುತ್ತದೆ. ಇದಕ್ಕೆ ಆಲಮಟ್ಟಿ ಗೇಟನ್ನು ೫೨೪.೨೫೬ ಮೀಟರ್‌ಗೆ ಹೆಚ್ಚಿಸಬೇಕು. ಇದಕ್ಕೆ ಸರ್ಕಾರ ಸಿದ್ಧವಿಲ್ಲ. ೫೨೨ ಮೀಟರ್‌ಗೆ ಗೇಟ್ ಎತ್ತರಿಸುತ್ತೇವೆ. ಆಮೇಲೆ ಉಳಿದದ್ದನ್ನು ಮಾಡುತ್ತೇವೆ ಎಂದು ಅಧಿಕಾರಿಗಳು ಹೈಕೋರ್ಟ್‌ಗೆ ತಿಳಿಸಿದ್ದಾರೆ. ಅಂದರೆ ಸದ್ಯದಲ್ಲಿ ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಳ್ಳುವುದಿಲ್ಲ. ರೈತರ ಅತಂತ್ರ ಸ್ಥಿತಿ ಹೀಗೆ ಮುಂದುವರಿಯುತ್ತದೆ. ಮೂರನೇ ಹಂತದ ಯೋಜನೆಗೆ ಈಗ ೧ ಲಕ್ಷ ಕೋಟಿ ರೂ. ಬೇಕು. ಎರಡು ವರ್ಷಗಳ ಹಿಂದೆ ಇದೇ ಸರ್ಕಾರ ವಿಜಯಪುರದಲ್ಲಿ ಯುಕೆಪಿ ರೈತರ ಸಮಾವೇಶ ನಡೆಸಿ ಭರವಸೆ ನೀಡಿತ್ತು. ಇದನ್ನು ೬ನೇ ಗ್ಯಾರಂಟಿ ಎಂದು ಹೇಳಿತ್ತು. ಈಗ ನೆನಪಿನಿಂದ ಇವುಗಳು ಅಳಿಸಿಹೋಗಿದೆ. ಈ ರೀತಿ ನೊಂದ ರೈತರ ಬದುಕನ್ನು ಅಳಿಸಿಹಾಕಲು ಬರುವುದಿಲ್ಲ.
ಕೃಷ್ಣಾ ನದಿ ಎಂದ ಕೂಡಲೇ ಅಧಿಕಾರದಲ್ಲಿರುವ ಎಲ್ಲರಿಗೂ ಒಂದುರೀತಿಯ ಉದಾಸೀನ. ಕಳೆದ ೨೪ ವರ್ಷಗಳಿಂದ ಹೀಗೆ ನಡೆದುಕೊಂಡು ಬಂದಿದೆ. ಎಷ್ಟೋ ಸರ್ಕಾರಗಳು ಬದಲಾಗಿವೆ. ರಾಜಕೀಯ ಪಕ್ಷಗಳೂ ಹೋಗಿವೆ. ಏನೂ ಆಗಿಲ್ಲ. ನಮ್ಮ ಸಂಸದರು ದೆಹಲಿಗೆ ಹೋದ ಕೂಡಲೇ ರಾಜ್ಯದ ಹಿತವನ್ನೇ ಮರೆತುಬಿಡುತ್ತಾರೆ. ಇದಕ್ಕಿದ್ದಂತೆ ಅವರಲ್ಲಿ ರಾಷ್ಟ್ರೀಯ ಚಿಂತನೆ ಮೂಡಿಬಿಡುತ್ತದೆ. ರಾಜ್ಯದ ಬಗ್ಗೆ ಚಿಂತಿಸುವುದು ಸಂಕುಚಿತ ಮನೋಭಾವ ಎಂದು ಹಿತಬೋಧೆ ಮಾಡುವುದರಲ್ಲಿ ನಿರತರಾಗಿ ಬಿಡುತ್ತಾರೆ. ಇದು ಎಲ್ಲ ರಾಜಕೀಯ ಪಕ್ಷಗಳಿಗೆ ಅನ್ವಯಿಸುವ ಮಾತು. ಪ್ರಜಾಪ್ರಭುತ್ವದಲ್ಲಿ ಬಹುಮತದಿಂದ ಮೇಲೆ ಎಲ್ಲವೂ ನಡೆಯುತ್ತದೆ ಎಂದು ಹೇಳುತ್ತೇವೆ. ಉತ್ತರ ಕರ್ನಾಟಕದ ೮ ಜಿಲ್ಲೆಗಳ ಶಾಸಕರು ಹೆಚ್ಚಿನ ಸಂಖ್ಯೆಯಲ್ಲಿದ್ದರೂ ಕೃಷ್ಣಾ ನದಿ ಬಳಕೆಯ ಬಗ್ಗೆ ಒಂದೂ ನಿರ್ಣಯ ಕೈಗೊಳ್ಳಲು ಸಾಧ್ಯವಾಗಿಲ್ಲ. ಅದೇರೀತಿ ಸಂಸದರೂ ತಮ್ಮ ಇಚ್ಛಾಶಕ್ತಿಯನ್ನು ಒಮ್ಮೆಯೂ ಪ್ರದರ್ಶಿಸಿಲ್ಲ. ಎಲ್ಲಕ್ಕಿಂತ ಹೆಚ್ಚಾಗಿ ಕರ್ನಾಟಕದ ಜನರ ಒಕ್ಕೊರಲ ಧ್ವನಿ ಕೇಳಿ ಬಂದಿಲ್ಲ ಎಂಬುದು ನೋವಿನ ಸಂಗತಿ.
ನಮಗೆ ಎ ಮತ್ತು ಬಿ ಸ್ಕೀಮ್ ನಲ್ಲಿ ಬಂದಿರುವ ನೀರನ್ನು ಸರಿಯಾಗಿ ಬಳಸಿಕೊಂಡರೆ ೮ ಜಿಲ್ಲೆಗಳಲ್ಲಿ ೭೫ ಲಕ್ಷ ಎಕರೆಗಳಿಗೆ ನೀರು ಕೊಡಬಹುದು. ಅಲ್ಲದೆ ಅಂತರ್ಜಲ ಮಟ್ಟ ಅಧಿಕಗೊಳ್ಳುತ್ತದೆ. ಇದಕ್ಕೆ ೮೦ ಸಾವಿರ ಕೋಟಿ ರೂ. ಬೇಕು. ಒಂದೇ ಬಾರಿ ೧೫-೨೦ ಸಾವಿರ ಕೋಟಿ ರೂ. ನೀಡಿದರೆ ಕೆಲಸ ತ್ವರಿತಗತಿಯಲ್ಲಿ ಕೈಗೊಳ್ಳಬಹುದು. ಇದು ಉತ್ತರ ಕರ್ನಾಟಕ ಶಾಸಕರಿಗೆ ತಿಳಿಯದ ವಿಚಾರವೇನಲ್ಲ. ಅವರು ಮನಸ್ಸು ಮಾಡಿದರೆ ಈ ಕೆಲಸವನ್ನು ಸುಲಭವಾಗಿ ಮಾಡಬಹುದು. ಕೇಂದ್ರ ಸರ್ಕಾರ ಬಿ ಸ್ಕೀಮ್ ವಿವರವನ್ನು ಗೆಜೆಟ್‌ನಲ್ಲಿ ಪ್ರಕಟಿಸಬೇಕು. ಆಗ ನಾವು ಆಲಮಟ್ಟಿ ಗೇಟ್ ಎತ್ತರವನ್ನು ೫೧೯ ಮೀಟರ್‌ನಿಂದ ೫೨೪.೨೫೬ ಮೀಟರ್‌ಗೆ ಹೆಚ್ಚಿಸಬಹುದು. ದೇವೇಗೌಡರು ಪ್ರಧಾನಿಯಾಗಿದ್ದಾಗ ತ್ವರಿತ ನೀರಾವರಿ ಫಲಾನುಭವಿ ಯೋಜನೆ ಎಂದು ಪರಿಗಣಿಸಿ ೯೦೦ ಕೋಟಿ ರೂ. ನೀಡಿದ್ದರು. ಆ ರೀತಿ ಹಣ ಕೊಟ್ಟರೆ ಸಾಕು. ೮ ಜಿಲ್ಲೆಗಳ ಶಾಸಕರು ಮತ್ತು ಸಂಸದರು ಪಕ್ಷ ಬೇಧ ಮರೆತು ಒಂದುಕಡೆ ಸೇರಿ ಒಮ್ಮತ ತೀರ್ಮಾನ ಕೈಗೊಂಡಲ್ಲಿ ಉತ್ತರ ಕರ್ನಾಟಕದ ಜನರ ಬದುಕನ್ನು ಹಸನುಗೊಳಿಸಬಹುದು. ನಿಸರ್ಗ ನಮಗೆ ಉದಾರವಾಗಿ ಎಲ್ಲವನ್ನೂ ಕೊಟ್ಟಿದೆ. ಆದರೆ ನಮ್ಮ ಉದಾಸೀನಕ್ಕೆ ಸ್ವಯಂ ಚಿಕಿತ್ಸೆಯೊಂದೇ ಪರಿಹಾರ.