ಇಂದು ದ.ರಾ.ಬೇಂದ್ರೆ ಜನ್ಮದಿನ
೨೦ನೇ ಶತಮಾನದಲ್ಲಿ ಕನ್ನಡ ಕಾವ್ಯ ರಂಗದಲ್ಲಿ ಹೊಸದೊಂದು ದಾರಿಯನ್ನು ರೂಪಿಸಿದವರಲ್ಲಿ ದ.ರಾ. ಬೇಂದ್ರೆ ಒಬ್ಬರು. ಕನ್ನಡ ಭಾಷೆಯ ಸೌಂದರ್ಯ ಮತ್ತು ಅದರ ಕಾವ್ಯರೂಪವನ್ನು ತಮ್ಮ ಧಾರವಾಡ ಶೈಲಿಯ ಕನ್ನಡದ ಮೂಲಕ, ಸಾಂಪ್ರದಾಯಿಕ ಕವಿಗಳಿಂದ ಸಾಹಿತ್ಯದ ಮೇಲೆ ಹೇರಲಾದ ಮಿತಿಗಳನ್ನು ಮುರಿದು ತಮ್ಮದೇ ಆದ ರೀತಿಯಲ್ಲಿ ಧಾರ್ಮಿಕ ಮಹಾಕಾವ್ಯಗಳನ್ನು ಹೇಳಲು ಪ್ರಾರಂಭಿಸಿದವರು. ವರಕವಿ ದತ್ತಾತ್ರೇಯ ರಾಮಚಂದ್ರ ಬೇಂದ್ರೆಯವರ ಕಾವ್ಯನಾಮ ಅಂಬಿಕಾತನಯದತ್ತ. ೩೧-೦೧-೧೮೯೬ರಂದು ಧಾರವಾಡದಲ್ಲಿ ಜನಿಸಿದರು. ಬೇಂದ್ರೆ ಅವರದು ತುಂಬಾ ಬಡತನ ಕುಟುಂಬ ಆದರೆ ಮನೆಯಲ್ಲಿ ಉದಾತ್ತ ಚಿಂತನೆಗಳಿಗೆ ಕೊರತೆ ಇರಲಿಲ್ಲ. ತಂದೆ ರಾಮಚಂದ್ರ ಬೇಂದ್ರೆ, ತಾಯಿ ಅಂಬವ್ವ. ಇವರ ಪೂರ್ವಜರು ಮೂಲತಃ ಮಹಾರಾಷ್ಟ್ರದ ರತ್ನಗಿರಿ ಜಿಲ್ಲೆಯವರು. ಚಿಕ್ಕ ವಯಸ್ಸಿನಲ್ಲಿ ತಂದೆಯನ್ನು ಕಳೆದುಕೊಂಡು ತಾಯಿಯ ಮಾರ್ಗದರ್ಶನದಲ್ಲೇ ಬೆಳೆದರು. ಶಾಲಾ ಪಠ್ಯಗಳನ್ನು ಓದುವುದಕ್ಕೆ ಮನಸ್ಸಿಲ್ಲದಿದ್ದರೂ ಪಠ್ಯಕ್ಕೆ ಸಂಬಂಧಪಡದ ಇತರ ಪುಸ್ತಕಗಳನ್ನು ಓದುವುದೆಂದರೆ ಬಹು ಪ್ರೀತಿ. ತಾಯಿ ಅಜ್ಜಿಯರಿಗಾಗಿ ಗುರು ಚರಿತ್ರೆ'
ಶಿವಲೀಲಾಮೃತ’ಗಳನ್ನು ಓದಿ ಹೇಳುವಷ್ಟರಿಂದ ಅವರಿಗೆ ತೃಪ್ತಿಯಾಗುತ್ತಿರಲಿಲ್ಲ. ಯಾವುದೇ ಪುಸ್ತಕ ಕನ್ನಡದಲ್ಲಿರಲಿ, ಮರಾಠಿಯಲ್ಲಿರಲಿ ಬಿಡದೆ ಓದಿ ಮುಗಿಸುತ್ತಿದ್ದರು.
ಚಿಕ್ಕಪ್ಪನ ಸಹಾಯದಿಂದ ಧಾರವಾಡದಲ್ಲಿ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಣ, ಮೆಟ್ರಿಕ್ಯುಲೇಷನ್ ಮುಗಿಸಿ ಉನ್ನತ ಶಿಕ್ಷಣಕ್ಕಾಗಿ ಪುಣೆಯ ಫರ್ಗುಸನ್ ಕಾಲೇಜಿಗೆ ಸೇರಿದರು. ಪದವಿಯನ್ನು ಪಡೆದ ನಂತರ ಬೇಂದ್ರೆಯವರು ಧಾರವಾಡಕ್ಕೆ ಹಿಂದಿರುಗಿ ವಿಕ್ಟೋರಿಯಾ ಪ್ರೌಢಶಾಲೆಯಲ್ಲಿ ಅಧ್ಯಾಪಕ ವೃತ್ತಿಯನ್ನು ಪ್ರಾರಂಭಿಸಿದರು. ಅವರು ೧೯೧೯ರಲ್ಲಿ ರಾಣೆಬೆನ್ನೂರಿನ ಲಕ್ಷ್ಮೀಬಾಯಿ ಅವರನ್ನು ವಿವಾಹವಾದರು. ೧೯೨೫ರಿಂದ ೩೨ರವರೆಗೆ ಶಾಲೆ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸಿದರು. ಬೇಂದ್ರೆಯವರ ಸಂಸಾರ ಇದ್ದದ್ದು ಒಂದು ಪುಟ್ಟ ಬಾಡಿಗೆ ಮನೆಯಲ್ಲಿ. ಬರುತ್ತಿದ್ದ ಸ್ವಲ್ಪ ಆದಾಯದಲ್ಲಿ ಅವರು ಬದುಕು ಸಾಗಿಸುತ್ತಿದ್ದರು ನಾನು ಬಡವ ಆತ ಬಡವಿ ಒಲವೇ ನಮ್ಮ ಬದುಕು' ಎನ್ನುತ್ತಾರೆ ಬೇಂದ್ರೆ. ಬೇಂದ್ರೆ ದಂಪತಿಗೆ ಒಟ್ಟು ಒಂಬತ್ತು ಜನ ಮಕ್ಕಳು ಆದರೆ ಕೊನೆಗೆ ಉಳಿದದ್ದು ಮೂವರು ಮಾತ್ರ. ಪಾಂಡುರಂಗ, ಮಂಗಳಾ ಮತ್ತು ವಾಮನ. ಇಂತಹ ಸಂದರ್ಭದಲ್ಲಿ ಹುಟ್ಟಿದ ಹಾಡು
ನೀ ಹೀಂಗ ನೋಡಬ್ಯಾಡ ನನ್ನ ನೀ ಹೀಂಗ ನೋಡಿದರ ನನ್ನ ತಿರುಗಿ ನಾ ಹ್ಯಾಂಗ ನೋಡಲೇ ನಿನ್ನ’. ಇದೇ ಸಂದರ್ಭದಲ್ಲಿ ತಾಯಿಯೂ ಸಹ ತೀರಿಕೊಂಡರು. ಬೇಂದ್ರೆಯವರ ನರಬಲಿ' ಕವನ ಪ್ರಕಟವಾದಾಗ ಸರ್ಕಾರದ ವಿರುದ್ಧ ಬರೆದಿರುವ ಕವಿತೆಯೆಂದು ಅವರನ್ನು ಬೆಳಗಾವಿಯ ಹಿಂಡಲಗಾ ಜೈಲಿಗೆ ಬ್ರಿಟಿಷ್ ಸರ್ಕಾರ ಕಳಿಸಿದ್ದಲ್ಲದೆ ಕರ್ನಾಟಕದಲ್ಲಿ ಹಾಗೂ ಕನ್ನಡ ಮಾತನಾಡುವ ಪ್ರದೇಶದಲ್ಲಿ ಕೆಲಸ ಕೊಡಬಾರದೆಂಬ ಒಂದು ರಾಜಾಜ್ಞೆಯನ್ನು ಹೊರಡಿಸುತ್ತಾರೆ. ಹಾಗಾಗಿ ಮುಂದೆ ಮುಂಬೈ, ಪೂನಾಗಳಲ್ಲಿ ಕೆಲಸ ಮಾಡಬೇಕಾಗಿತ್ತು. ಆದರೆ ಬೇಂದ್ರೆಯವರು ಯಾವುದಕ್ಕೂ ಕೂಡ ಎದೆಗುಂದಲಿಲ್ಲ. ಇದೇ ಸಂದರ್ಭದಲ್ಲಿ ಮಾಸ್ತಿಯವರು ನಡೆಸುತ್ತಿದ್ದ
ಜೀವನ ಪತ್ರಿಕೆ’ಯಲ್ಲಿ ಬೇಂದ್ರೆಯವರು ಅಧಿಕೃತವಾಗಿ ಸಂಪಾದಕರಾಗಿ ಕಾರ್ಯನಿರ್ವಹಿಸಿದರು.
೧೯೪೧ರ ಹೊತ್ತಿಗೆ ಸರ್ಕಾರ ಬೇಂದ್ರೆಯವರ ಮೇಲೆ ಹೇರಲಾಗಿದ್ದ ನಿಷೇಧವನ್ನು ಹಿಂತೆಗೆದುಕೊಂಡಿತ್ತು. ಇದೇ ಸಂದರ್ಭದಲ್ಲಿ ಗದುಗಿನ ಪ್ರೌಢಶಾಲೆಯವರು ಮುಖ್ಯೋಪಾಧ್ಯಾಯ ಹುದ್ದೆಯನ್ನು ವಹಿಸಿಕೊಳ್ಳುವಂತೆ ಬೇಂದ್ರೆಯವರನ್ನು ಆಹ್ವಾನಿಸಿದರು. ಆದರೆ ಅದೇ ವರ್ಷ ಅವರನ್ನು ಕೆಲಸದಿಂದ ಬಿಡುಗಡೆ ಮಾಡಲಾಯಿತು. ಗದುಗಿನಿಂದ ಬೇಂದ್ರೆಯವರು ಅವರಿಗಾಗಿ ಪ್ರೀತಿಯ ಚಿಕ್ಕಪ್ಪ ಧಾರವಾಡದ ಸಾಧನಕೆರೆಯಲ್ಲಿ ಕಟ್ಟಿಕೊಟ್ಟಿದ್ದ ಮನೆಗೆ ಮರಳಿ ಬಂದರು. ಈ ಸಂದರ್ಭದಲ್ಲಿ ಹುಟ್ಟಿದ ಕವಿತೆ `ಬಾರೋ ಸಾಧನಕೇರಿಗೆ ಮರಳಿ ನಿನ್ನೆ ಊರಿಗೆ’.
ಕವಿಯಾಗಿ ಬೇಂದ್ರೆ ಅವರನ್ನು ನೋಡುವುದಾದರೆ ಕೃಷ್ಣಾಕುಮಾರಿ;ಗರಿ;ಮೂರ್ತಿ ಮತ್ತು ಕಾಮಕಸ್ತೂರಿ;ಸಖೀಗೀತ;ಉಯ್ಯಾಲೆ;ನಾದಲೀಲೆ; ಮೇಘದೂತ (ಕಾಳಿದಾಸನ ಸಂಸ್ಕೃತ ಮೇಘದೂತದ ಕನ್ನಡ ಅವತರಣಿಕೆ)ಹಾಡುಪಾಡು;ಗಂಗಾವತರಣ;ಸೂರ್ಯಪಾನ; ಹೃದಯಸಮುದ್ರ; ಮುಕ್ತಕಂಠ; ಚೈತ್ಯಾಲಯ; ಜೀವಲಹರಿ; ಅರಳುಮರಳು; ನಮನ; ಸಂಚಯ; ಉತ್ತರಾಯಣ; ಮುಗಿಲಮಲ್ಲಯಕ್ಷ ಯಕ್ಷಿ; ನಾಕುತಂತಿ; ಮರ್ಯಾದೆ; ಶ್ರೀಮಾತಾ; ಬಾ ಹತ್ತಿರ; ಇದು ನಭೋವಾಣಿ; ವಿನಯ; ಮತ್ತೆ ಶ್ರಾವಣ ಬಂತು; ಒಲವೇ ನಮ್ಮ ಬದುಕು; ಚತುರೋಕ್ತಿ ಮತ್ತು ಇತರ ಕವಿತೆಗಳು; ಪರಾಕಿ; ಕಾವ್ಯವೈಖರಿ; ತಾ ಲೆಕ್ಕಣಕಿ ತಾ ದೌತಿ; ಬಾಲಬೋಧೆ; ಚೈತನ್ಯದ ಪೂಜೆ; ಪ್ರತಿಬಿಂಬಗಳು; ಕವನ ಸಂಕಲನಗಳನ್ನು ರಚಿಸಿದ್ದಾರೆ.
ದೆವ್ವದ ಮನೆ, ಹಳೆಯ ಗೆಣೆಯರು, ಹೊಸ ಸಂಸಾರ, ಸಾಯೋ ಆಟ, ತಿರುಕರ ಪಿಡುಗು, ಗೋಲ್, ಹುಚ್ಚಾಟಗಳು, ಉದ್ಧಾರ, ಜಾತ್ರೆ, ನಗೆಯ ಹೊಗೆ, ಮಂದೀ ಮದಿವಿ, ಮಂದೀ ಮಕ್ಕಳು, ಮಂದೀ ಮನಿ, ಆ ಥರಾ ಈ ಥರಾ, ಶೋಭನಾ, ಮಕ್ಕಳು ಅಡಿಗೆ ಮನೆ ಹೊಕ್ಕರೆ ಮುಂತಾದ ನಾಟಕಗಳನ್ನು ರಚಿಸಿದ್ದಾರೆ. ಇವರು ಬರೆದ ಮರಾಠಿ ಕೃತಿಗಳೆಂದರೆ ಸಂವಾದ, ವಿಠ್ಠಲ ಸಂಪ್ರದಾಯ, ಶಾಂತಲಾ (ಕನ್ನಡದಿಂದ ಅನುವಾದ: ಮೂಲ: ಕೆ.ವಿ.ಅಯ್ಯರ್) ಸಂತ, ಮಹಂತ, ಪೂರ್ಣ ಶಂಭೂ ವಿಠ್ಠಲ, ವಿಠ್ಠಲ ಪಾಂಡುರಂಗ (ಕವನ ಸಂಗ್ರಹ)
ಇವರು ಬರೆದ ವಿಮರ್ಶೆ/ಗದ್ಯ ಕೃತಿಗಳೆಂದರೆ
ಸಾಹಿತ್ಯ ಮತ್ತು ವಿಮರ್ಶೆ, ಸಾಹಿತ್ಯ ಸಂಶೋಧನೆ, ವಿಚಾರ ಮಂಜರಿ, ಕವಿ ಲಕ್ಷ್ಮೀಶನ ಜೈಮಿನಿಭಾರತಕ್ಕೆ ಮುನ್ನುಡಿ, ಮಹಾರಾಷ್ಟ್ರ ಸಾಹಿತ್ಯ, ಕಾವ್ಯೋದ್ಯೋಗ, ಕನ್ನಡ ಸಾಹಿತ್ಯದಲ್ಲಿ ನಾಲ್ಕು ನಾಯಕರತ್ನಗಳು, ಸಾಹಿತ್ಯದ ವಿರಾಟ್ ಸ್ವರೂಪ, ಕುಮಾರವ್ಯಾಸ ಪುಸ್ತಿಕೆ, ನಿರಾಭರಣ ಸುಂದರಿ ಕಥಾಸಂಕಲನ ಹಾಗೂ ಇಂಗ್ಲಿಷ್‌ನಲ್ಲಿ ರಚಿಸಿರುವ ಕೃತಿಗಳು ಎ ಥಿಯರಿ ಆಫ್ ಇಮ್ಮೋರ್ಟಾಲಿಟಿ, ಲ್ಯಾಗ್ವೇಜ್-ಮ್ಯಾಥಮ್ಯಾಟಿಕ್ಸ್ ಅಂಡ್ ಟ್ರೂತ್. ಇವರ ಹಲವು ಕವನಗಳನ್ನು ಕುಲವಧು, ಚಕ್ರತೀರ್ಥ, ಅರಿಷಿಣ ಕುಂಕುಮ, ಬೆಳ್ಳಿಮೋಡ ಮತ್ತು ಶರಪಂಜರ ಮುಂತಾದ ಚಲನಚಿತ್ರಗಳಲ್ಲಿ ಅಳವಡಿಸಿಕೊಂಡಿದ್ದಾರೆ.
೧೯೫೮ ರಲ್ಲಿ ಅರಳು ಮರಳು ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಮರಾಠಿಯಲ್ಲಿ ರಚಿಸಿದ ಕೃತಿ ಸಂವಾದಕ್ಕೆ ಕೇಳ್ಕರ್ ಬಹುಮಾನ, ೧೯೬೮ರಲ್ಲಿ ಪದ್ಮಶ್ರೀ ಪ್ರಶಸ್ತಿ, ೧೯೭೩ರಲ್ಲಿ ನಾಕುತಂತಿ ಕೃತಿಗೆ ಜ್ಞಾನಪೀಠ ಪ್ರಶಸ್ತಿ, ಕರ್ನಾಟಕ ವಿಶ್ವವಿದ್ಯಾನಿಲಯ, ಮೈಸೂರು ವಿಶ್ವವಿದ್ಯಾನಿಲಯ, ವಾರಣಾಸಿ ಹಾಗೂ ಕಾಶಿ ವಿದ್ಯಾಪೀಠದಿಂದ ಗೌರವ ಡಾಕ್ಟರೇಟ್ ಪ್ರಶಸ್ತಿ ಹೀಗೆ ಸಾಲು ಸಾಲು ಪ್ರಶಸ್ತಿಗಳು ಲಭಿಸಿವೆ. ೧೯೮೧ ಅಕ್ಟೋಬರ್ ೨೬ರ ದೀಪಾವಳಿಯ ದಿನ ಕನ್ನಡದೊಂದು ದೀಪ ಆರಿ ಹೋಯಿತು.
– ಸಿದ್ದವನಹಳ್ಳಿ ವೀರೇಶ್ ಕುಮಾರ, ಉಪನ್ಯಾಸಕರು