ಸಂಚಾರಿ ನಿಯಮ ಉಲ್ಲಂಘಿಸಿ ದಂಡದ ಬಾಕಿ ಉಳಿಸಿಕೊಂಡಿರುವ ವಾಹನ ಸವಾರರಿಗೆ ರಾಜ್ಯ ಸರ್ಕಾರ ಮತ್ತು ಪೊಲೀಸ್ ಇಲಾಖೆ ಮಹತ್ವದ ಸಿಹಿ ಸುದ್ದಿಯ ಜೊತೆಗೆ ಖಡಕ್ ಎಚ್ಚರಿಕೆಯನ್ನೂ ನೀಡಿದೆ. ಸಂಚಾರಿ ನಿಯಮ ಉಲ್ಲಂಘನೆಯ ದಂಡವನ್ನು ಪಾವತಿಸಲು ಸರ್ಕಾರವು ಮತ್ತೊಮ್ಮೆ ಶೇ. 50ರಷ್ಟು ರಿಯಾಯಿತಿ (50% Discount) ಘೋಷಿಸಿದ್ದು, ವಾಹನ ಸವಾರರು ಈ ಸುವರ್ಣಾವಕಾಶವನ್ನು ತಪ್ಪದೇ ಬಳಸಿಕೊಳ್ಳಬೇಕಿದೆ.
ಹೆಲ್ಮೆಟ್ ರಹಿತ ಪ್ರಯಾಣ, ತ್ರಿಬಲ್ ರೈಡಿಂಗ್, ಚಾಲನೆ ವೇಳೆ ಮೊಬೈಲ್ ಬಳಕೆ, ಸಿಗ್ನಲ್ ಜಂಪ್, ಅತೀ ವೇಗ ಅಥವಾ ರ್ರ್ಯಾಶ್ ಡ್ರೈವಿಂಗ್ (Rash Driving), ಬಿ.ಆರ್.ಟಿ.ಎಸ್ (BRTS) (ಹುಬ್ಬಳ್ಳಿ – ಧಾರವಾಡ ) ಮಾರ್ಗದಲ್ಲಿ ಸಂಚಾರ, ನೋ ಪಾರ್ಕಿಂಗ್ ಮತ್ತು ಫುಟ್‌ಪಾತ್ ಪಾರ್ಕಿಂಗ್ ಸೇರಿದಂತೆ ಯಾವುದೇ ರೀತಿಯ ಸಂಚಾರಿ ನಿಯಮ ಉಲ್ಲಂಘನೆಯ ಪ್ರಕರಣಗಳು ನಿಮ್ಮ ವಾಹನದ ಮೇಲಿದ್ದರೆ, ಈಗಲೇ ಪರಿಶೀಲಿಸಿಕೊಳ್ಳಿ. ಅನೇಕ ಬಾರಿ ನಮಗೇ ತಿಳಿಯದಂತೆ ಕ್ಯಾಮರಾಗಳಲ್ಲಿ ದಂಡ ದಾಖಲಾಗಿರುತ್ತದೆ. ಆದ್ದರಿಂದ ಒಮ್ಮೆ ಚೆಕ್ ಮಾಡಿಕೊಳ್ಳುವುದು ಒಳಿತು.
ದಿನಾಂಕ 12/12/2025 ರ ವರೆಗೆ ಮಾತ್ರ: ಈ ರಿಯಾಯಿತಿ ಆದೇಶವು ದಿನಾಂಕ 12/12/2025 ರ ವರೆಗೆ ಮಾತ್ರ ಜಾರಿಯಲ್ಲಿರುತ್ತದೆ. ಈ ಅವಧಿಯ ನಂತರವೂ ದಂಡ ಪಾವತಿಸದಿದ್ದರೆ, ಹಳೆಯ ದಂಡವನ್ನು ಪೂರ್ಣ ಪ್ರಮಾಣದಲ್ಲಿ ಕಟ್ಟಬೇಕಾಗುತ್ತದೆ.
ಅಷ್ಟೇ ಅಲ್ಲದೇ, ಬಾಕಿ ಉಳಿಸಿಕೊಂಡಿರುವ ಸವಾರರಿಗೆ ಪೊಲೀಸರೇ ನೇರವಾಗಿ ನಿಮ್ಮ ಮನೆ ಬಾಗಿಲಿಗೆ ಬಂದು ನೋಟೀಸ್ ನೀಡಲಿದ್ದಾರೆ. ಅಂತಹ ಮುಜುಗರದ ಸನ್ನಿವೇಶವನ್ನು ತಪ್ಪಿಸಲು ಮತ್ತು ನಿಮ್ಮ ಜೇಬಿನ ಹೊರೆ ಇಳಿಸಿಕೊಳ್ಳಲು ಇದೊಂದು ಉತ್ತಮ ಅವಕಾಶವಾಗಿದೆ.
ಸಾರ್ವಜನಿಕರು ಕೊನೆಯ ದಿನಾಂಕದವರೆಗೂ ಕಾಯದೇ, ಇಂದೇ ಹತ್ತಿರದ ಪೊಲೀಸ್ ಠಾಣೆ, ಕರ್ನಾಟಕ ಒನ್ ಅಥವಾ ಆನ್‌ಲೈನ್ ಪೋರ್ಟಲ್ ಮೂಲಕ ತಮ್ಮ ದ್ವಿಚಕ್ರ, ತ್ರಿಚಕ್ರ ಹಾಗೂ ಇತರೆ ವಾಹನಗಳ ಮೇಲಿನ ಕೇಸ್ ಬಗ್ಗೆ ಮಾಹಿತಿ ಪಡೆದು, ರಿಯಾಯಿತಿ ದರದಲ್ಲಿ ದಂಡ ಪಾವತಿಸಿ ನಿರಾಳರಾಗಿ ಎಂದು ಪೊಲೀಸ್ ಇಲಾಖೆ ಸಾರ್ವಜನಿಕರಲ್ಲಿ ಮನವಿ ಮಾಡಿದೆ.ಅರ್ಧ ದಂಡ ಕಟ್ಟಿ, ಪೂರ್ತಿ ಕೇಸ್ ಮುಗಿಸಿಕೊಳ್ಳಿ, ಕಾನೂನು ಪಾಲಿಸಿ!


























