ಬ್ಯಾಲೆಟ್ ಪೇಪರ್ ಮುಖೇನ ಚುನಾವಣೆ ಹೊಸದಲ್ಲ: ವಿಶೇಷ ಸಂದರ್ಶನ

0
53

ಬ್ಯಾಲೆಟ್ ಪೇಪರ್ ಮುಖಾಂತರ ಮತದಾನ ನಡೆಸುವುದು ಹೊಸತೇನಲ್ಲ. ಈ ಹಿಂದೆ ಇದ್ದಂತಹ ವ್ಯವಸ್ಥೆ, ಈಗಲೂ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಆಯೋಗ ಮತಪತ್ರಗಳನ್ನೇ ಬಳಸುತ್ತದೆ. ಆದರೆ ಇತ್ತೀಚೆಗೆ ಇವಿಎಂಗಳ ಬಗ್ಗೆ ಆರೋಪ ಕೇಳಿ ಬರುತ್ತಿರುವ ಹಿನ್ನೆಲೆಯಲ್ಲಿ ಬ್ಯಾಲೆಟ್ ಪೆಪರ್‌ನತ್ತ ರಾಜ್ಯ ಸರ್ಕಾರ ಮರಳಿರುವುದು ತಪ್ಪೇನಲ್ಲ, ಆದರೆ ಯಾವುದೇ ಮಾದರಿಯಲ್ಲಾದರೂ ಚುನಾವಣೆ ನಡೆಸಲು ಕರ್ನಾಟಕ ಚುನಾವಣಾ ಆಯೋಗ ಸದಾ ಸನ್ನದ್ಧವಾಗಿರುತ್ತದೆ ಎಂದು ರಾಜ್ಯ ಚುನಾವಣಾ ಆಯುಕ್ತ ಜಿ.ಎಸ್.ಸಂಗ್ರೇಶಿ ಮುಖಾಮುಖಿ ಸಂದರ್ಶನದಲ್ಲಿ ತಿಳಿಸಿದರು.

ಕೆ.ವಿ.ಪರಮೇಶ್

ಬ್ಯಾಲೆಟ್ ಪೇಪರ್ ಮೂಲಕ ಚುನಾವಣೆ ನಡೆಸುವ ಸರ್ಕಾರದ ನಿರ್ಧಾರದ ಬಗ್ಗೆ ನೀವು ಏನಂತೀರಿ?

ಸರ್ಕಾರದ ತೀರ್ಮಾನವನ್ನು ಸ್ವಾಗತ ಮಾಡ್ತೇನೆ. ಪಾರದರ್ಶಕ ಮತ್ತು ನ್ಯಾಯೋಚಿತವಾಗಿ ಚುನಾವಣೆ ನಡೆಸುವ ನಿಟ್ಟಿನಲ್ಲಿ ಇಂತಹ ಒಂದು ಬದಲಾವಣೆ ಅಗತ್ಯವಿತ್ತು ಎನಿಸುತ್ತದೆ. ಹಾಗಾಗಿ ಸರ್ಕಾರ ಇದನ್ನು ಮನಗಂಡು ಮತದಾನಕ್ಕೆ ಉತ್ಸಾಹ ರೂಪ ಕೊಟ್ಟಿದೆ.

ಸ್ಥಳೀಯ ಸಂಸ್ಥೆಗಳ ಚುನಾವಣೆ ಘೋಷಿಸಿದರೆ ನಡೆಸಲು ಬ್ಯಾಲೆಟ್ ಪೇಪರ್ ವ್ಯವಸ್ಥೆಯಡಿ ಆಯೋಗ ಸಿದ್ಧವಾಗಿದೆಯಾ?

ಹೌದು, ನಾವು ಯಾವತ್ತೂ ಸಜ್ಜಾಗಿರುತ್ತೇವೆ. 2-3 ತಿಂಗಳ ಕಾಲಾವಕಾಶ ಬೇಕಾಗುತ್ತದೆ. ಕ್ಷೇತ್ರ ಪುನರ್ ವಿಂಗಡಣೆ ಹಾಗೂ ಮೀಸಲಾತಿ ವ್ಯವಸ್ಥೆಯನ್ನು ಪೂರ್ಣಗೊಳಿಸಿಕೊಟ್ಟರೆ ಆಯೋಗ ಚುನಾವಣೆ ನಡೆಸಲು ಯಾವುದೇ ಅಡ್ಡಿಯಿರುವುದಿಲ್ಲ.

ಇವಿಎಂಗೆ ಬದಲು ಮತಪತ್ರ ಬಳಸಿದರೆ ಸಿಬ್ಬಂದಿ ವ್ಯವಸ್ಥೆ ಜೊತೆಗೆ ಆಯೋಗಕ್ಕೆ ಆರ್ಥಿಕ ಹೊರೆಯಾಗಲಿದೆಯೇ?

ಸಿಬ್ಬಂದಿ ಸಮಸ್ಯೆ ಆಗಲಾರದು. ಇದಕ್ಕೆ ಜಿಲ್ಲಾಡಳಿತಗಳ ಸಹಕಾರ ಪಡೆಯುತ್ತೇವೆ. ಆದರೆ ಮತಪತ್ರ ಮುದ್ರಣ, ಮತಪಟ್ಟಿಗೆಗಳ ಖರೀದಿ, ಮತದಾರರ ಪಟ್ಟಿ ಪರಿಷ್ಕರಣೆಯಂತಹ ಪ್ರಕ್ರಿಯೆಗಳಿಗೆ ಖಂಡಿತವಾಗಿಯೂ ಹೆಚ್ಚಿನ ಹಣಕಾಸು ನೆರವು ಬೇಕಾಗುತ್ತದೆ.

ಎಷ್ಟು ಅನುದಾನ ಬೇಕಾಗಬಹುದು? ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುತ್ತೀರಾ?

ಸರ್ಕಾರವೇ ಪ್ರಸ್ತಾಪಿಸಿರುವ ಬ್ಯಾಲೆಟ್ ಪೇಪರ್ ಮುಖೇನ ಚುನಾವಣೆ. ಹಾಗಾಗಿ ಇದಕ್ಕೆ ಅಗತ್ಯವಿರುವ ವ್ಯವಸ್ಥೆಗಳನ್ನು ಒದಗಿಸಬೇಕಾದ್ದು ರಾಜ್ಯ ಸರ್ಕಾರದ ಕರ್ತವ್ಯವೇ ಆಗಿರುತ್ತದೆ. ಒಂದು ಅಂದಾಜಿನಂತೆ ಒಟ್ಟಾರೆ ಎಲ್ಲ ವ್ಯವಸ್ಥೆಗಳಿಗೆ ಕನಿಷ್ಟ 300-400 ಕೋಟಿ ರೂಪಾಯಿಗಳ ಅಗತ್ಯ ಬೀಳಬಹುದು. ಈ ಬಗ್ಗೆ ಶೀಘ್ರವೇ ಚುನಾವಣಾ ಆಯೋಗ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಿದೆ.

ವಿದ್ಯುನ್ಮಾನ ಮತಯಂತ್ರಗಳಿಗೂ ಇಂತಿಷ್ಟೇ ಎಂದು ಆಯುಷ್ಯವಿದೆಯಾ?

ಹೌದು, ನಮ್ಮಲ್ಲಿರುವ ಐವಿಎಂಗಳು ಸುಮಾರು 15 ವರ್ಷಗಳಷ್ಟು ಹಳೆಯದಾಗಿದೆ, ಹಾಗಾಗಿ ಬದಲಿಸುವ ಅನಿವಾರ್ಯತೆ, ಇದೆ. ಈ ಬಗ್ಗೆ ಶೀಘ್ರವೇ ಚುನಾವಣಾ ಆಯೋಗ ಉತ್ಪಾದಕ ಸಂಸ್ಥೆ ಬಿಇಎಲ್‌ಗೆ ಪತ್ರ ಬರೆಯಲಿದೆ.

ಮತಪೆಟ್ಟಿಗೆಗಳು (ಬೂತ್) ಆಯೋಗದಲ್ಲಿ ದಾಸ್ತಾನು ಇದ್ದಾವಾ ಹೇಗೆ?

ಇವಿಎಂ ವ್ಯವಸ್ಥೆ ಬಂದ ಬಳಿಕ ಸ್ವಲ್ಪಮಟ್ಟಿಗೆ ಪೆಟ್ಟಿಗೆಗಳು ನೇಪಥ್ಯಕ್ಕೆ ಸರಿದಿವೆ. ಜಿಲ್ಲಾಧಿಕಾರಿಗಳ ಹಾಗೂ ತಾಲೂಕು ಕಚೇರಿಗಳಲ್ಲಿ ಬೂತ್‌ಗಳಿದ್ದರೂ ಅವುಗಳ ನಿರ್ವಹಣೆ ಅಷ್ಟಾಗಿ ಇದ್ದಂತಿಲ್ಲ. ಈಗ ದೊಡ್ಡಪ್ರಮಾಣದಲ್ಲಿಯೇ ನಮಗೆ ಮತಪೆಟ್ಟಿಗೆಗಳು ಬೇಕಿರುವ ಕಾರಣ ಸುರಕ್ಷತೆ ದೃಷ್ಟಿಯಿಂದ ಹೊಸದಾಗಿಯೇ ಖರೀದಿ ಮಾಡಬೇಕಾಗುತ್ತದೆ. ಈ ಬಗ್ಗೆ ಶೀಘ್ರವೇ ಪರಿಶೀಲಿಸಿ ಮಾಹಿತಿ ಪಡೆಯುತ್ತೇನೆ.

ಹೊಸದಾಗಿ ಮತದಾರರಪಟ್ಟಿ ಪರಿಷ್ಕರಣೆ ಸುದೀರ್ಘ ಸಮಯ ತೆಗೆದುಕೊಳ್ಳಬಹುದಲ್ಲವೇ?

ಹೌದು, ಮಿನಿಮಮ್ 2 ರಿಂದ 4 ತಿಂಗಳು ಬೇಕಾಗಬಹುದು. ಗ್ರೇಟರ್ ಬೆಂಗಳೂರು ಪ್ರಾಧಿಕಾರ ವ್ಯಾಪ್ತಿಯ 5 ಪಾಲಿಕೆಗಳಲ್ಲದೆ, ರಾಜ್ಯದ ನಗರಸ್ಥಳೀಯ ಸಂಸ್ಥೆಗಳು ಮತ್ತು ಪಂಚಾಯತ್ ಮಟ್ಟದಲ್ಲಿಯೂ ನೂತನವಾಗಿಯೇ ಮತದಾರರಪಟ್ಟಿ ಪರಿಷ್ಕರಣೆ ಆಯೋಗದಿಂದಲೇ ನಡೆಯಬೇಕಾಗುತ್ತದೆ. ಪಾರದರ್ಶಕವಾಗಿ ಆಗಬೇಕಿರುವ ಕಾರಣಕ್ಕೆ ಖಂಡಿತವಾಗಿ ಸ್ವಲ್ಪ ಸಮಯಾವಕಾಶ ಬೇಕಾಗುತ್ತದೆ. ಇದರಿಂದ ಚುನಾವಣೆ ಅಲ್ಪ ವಿಳಂಬವಾಗಬಹುದು.

ಯುವಜನಾಂಗಕ್ಕೆ ಅರಿವಿದೆ ಅನ್ನಿಸುತ್ತದೆಯಾ?

ಮೂರ್ನಾಲ್ಕು ದಶಕಗಳಿಂದ ಬಹುತೇಕ ಎಲ್ಲರೂ ಇವಿಎಂಗೆ ಹೊಂದಿಕೊಂಡಂತಿದೆ. ಆದರೆ ಬ್ಯಾಲೆಟ್ ಸಂಪೂರ್ಣ ನಿಂತಿಲ್ಲ, ಈ ಬಾರಿ ಮತಪತ್ರಗಳ ಮುಖೇನ ಚುನಾವಣೆ ನಡೆಸಬೇಕಿರುವ ಕಾರಣಕ್ಕೆ ಮೊದಲ ಬಾರಿಗೆ ಮತದಾನ ಮಾಡುವವರು ಹಾಗೂ ಯುವಜನಾಂಗಕ್ಕೆ ಈ ಬಗ್ಗೆ ಜಾಗೃತಿ ಮೂಡಿಸುವ ಕೆಲಸವನ್ನೂ ಆಯೋಗ ಹಾಕಿಕೊಳ್ಳಲಿದೆ. ಬದಲಾಗುತ್ತಿರುವ ವ್ಯವಸ್ಥೆಯಡಿ ಪಾರದರ್ಶಕ ಮತ್ತು ನ್ಯಾಯ ಸಮ್ಮತ ಚುನಾವಣೆ ನಡೆಸುವುದು ನಿಜಕ್ಕೂ ಒಂದು ಸವಾಲು. ಆದರೆ ಸಮರ್ಥವಾಗಿ ಇದನ್ನು ನಿರ್ವಹಿಸುವ ವಿಶ್ವಾಸವೂ ನಮ್ಮಲ್ಲಿದೆ.

Previous articleಕೈಯಲ್ಲಿ ಮೊಬೈಲ್ ಹಿಡಿದು ಮುಂಬೈ ನಗರಕ್ಕೆ ಬಾಂಬ್ ಬೆದರಿಕೆ ಹಾಕಿದ್ದ ಭೂಪ
Next articleMovie Review: ಪರಮಶ್ರೇಷ್ಠ ಪ್ರೀತಿಗೆ ಏಳುಮಲೆ ಸಾಕ್ಷಿ

LEAVE A REPLY

Please enter your comment!
Please enter your name here