ಭಾರತ-ಅಮೆರಿಕ ವ್ಯಾಪಾರ ಒಪ್ಪಂದ ಅಂತಿಮ ಘಟ್ಟಕ್ಕೆ

0
48

ಭಾರತ ಮತ್ತು ಅಮೆರಿಕ ನಡುವಣ ವ್ಯಾಪಾರ ಒಪ್ಪಂದ ನಿರ್ಣಾಯಕ ಹಂತಕ್ಕೆ ತಲುಪಿದೆ. ಅತಿ ಶೀಘ್ರದಲ್ಲೇ ಒಪ್ಪಂದ ಏರ್ಪಡುವ ಸಾಧ್ಯತೆ ಇದೆ ಎಂದು ಭಾರತಕ್ಕೆ ಅಮೆರಿಕ ರಾಯಭಾರಿಯಾಗಿ ನಿಯುಕ್ತರಾಗಿರುವ ಸೆರ್ಗಿಯೋ ಗೋರ್ ಗುರುವಾರ ಸೆನೆಟ್‌ಗೆ ಸಂಬಂಧಿಸಿದ ವಿದೇಶಾಂಗ ಸಂಬಂಧಗಳ ಸಮಿತಿಗೆ ತಿಳಿಸಿದ್ದಾರೆ.

ಈ ಪಾಲುದಾರಿಕೆಯು ಅಮೆರಿಕವು ಜಗತ್ತಿನಲ್ಲಿ ಹೊಂದಿರುವ ಪ್ರಮುಖ ಬಾಂಧವ್ಯಗಳಲ್ಲೊಂದಾಗಿದೆ ಎಂದವರು ತಮ್ಮ ಸದಸ್ಯತ್ವ ದೃಢೀಕರಣಕ್ಕಾಗಿ ನಡೆದ ವಿಚಾರಣೆ ಸಮಯದಲ್ಲಿ ವಿವರಿಸಿದರು. ವ್ಯಾಪಾರ ಸಂಬಂಧಿ ಮಾತುಕತೆಗಾಗಿ ಅಧ್ಯಕ್ಷ ಟ್ರಂಪ್‌ ಮುಂದಿನ ವಾರ ಭಾರತೀಯ ನಿಯೋಗವನ್ನು ಆಹ್ವಾನಿಸಿದ್ದಾರೆ. ಬಹುಶ: ಮುಂದಿನ ಕೆಲವೇ ವಾರಗಳಲ್ಲಿ ಒಪ್ಪಂದ ಅಂತಿಮಗೊಳ್ಳಬಹುದೆಂದೂ ಹೇಳಿದ್ದಾರೆ.

ಮುಖ್ಯಾಂಶಗಳು
*ಮುಂದಿನ ವಾರ ಭಾರತ ನಿಯೋಗ ಅಮೆರಿಕಕ್ಕೆ
*ಕೆಲ ವಾರಗಳಲ್ಲಿ ಒಪ್ಪಂದ ಏರ್ಪಡುವ ಸಾಧ್ಯತೆ
*ಒಪ್ಪಂದಕ್ಕೆ ತೊಡಕಿನ ಅಂಶಗಳ ಬಗ್ಗೆ ಸಂಧಾನ

ಆಗಸ್ಟ್ 25ರಂದು ನಿಗದಿಯಾಗಿದ್ದ ದ್ವಿಪಕ್ಷೀಯ ವ್ಯಾಪಾರ ಮಾತುಕತೆ ಹಳಿ ತಪ್ಪಿದ ನಂತರ ಇತ್ತೀಚಿನ ವಾರಗಳಲ್ಲಿ ಎರಡೂ ದೇಶಗಳ ಮಧ್ಯೆ ರಾಜತಾಂತ್ರಿಕ ಬಾಂಧವ್ಯದಲ್ಲಿ ಏರುಪೇರು ಕಂಡುಬಂದಿತ್ತು. ತೀರಾ ಇತ್ತೀಚೆಗೆ ಅಧ್ಯಕ್ಷ ಟ್ರಂಪ್‌ ಪ್ರಧಾನಿ ನರೇಂದ್ರ ಮೋದಿಯವರನ್ನು ಹೊಗಳುತ್ತಾ ದ್ವಿಪಕ್ಷೀಯ ವ್ಯಾಪಾರ ಮಾತುಕತೆ ಮುಂದುವರಿಸುವ ಸೂಚನೆ ನೀಡಿದ್ದಾರೆ.

ಹೀಗಾಗಿ ಗೋರ್ ಹೇಳಿಕೆ ದ್ವಿಪಕ್ಷೀಯ ಬಾಂಧವ್ಯ ಮತ್ತೆ ಬಲಗೊಳ್ಳುವುದರ ಮುನ್ಸೂಚನೆಯಂತಿದೆ. ಭಾರತೀಯರೊಂದಿಗೆ ಸಂಧಾನ ನಡೆಸಲು ನಾವು ಈಗಿನಿಂದಲೇ ಸಂಪೂರ್ಣವಾಗಿ ಸಜ್ಜಾಗುತ್ತಿದ್ದೇವೆ. ಬರುವ ವಾರ ಭಾರತದ ವಾಣಿಜ್ಯೋದ್ಯಮ ಸಚಿವರಿಗೆ ಅಧ್ಯಕ್ಷರು ಆಹ್ವಾನಿಸಿದ್ದಾರೆ. ನಾವು ಈಗ ಒಪ್ಪಂದದಿಂದ ಬಹುದೂರವೇನೂ ಇಲ್ಲ. ಒಪ್ಪಂದಕ್ಕೆ ತೊಡಕಾಗಿರುವ ಅಂಶಗಳ ಕುರಿತು ಸಂಧಾನ ನಡೆಸುತ್ತಿದ್ದೇವೆ ಎಂದು ಗೋರ್ ವಿವರಿಸಿದರು.

ಒಪ್ಪಂದದಿಂದ ಭಾರತಕ್ಕೆ ಅನುಕೂಲ?: ಅಮೆರಿಕ ಜತೆ ಒಪ್ಪಂದದಿಂದ ಭಾರತವು ವಿದ್ಯುನ್ಮಾನ, ಟೆಲಿಕಾಂ, ವಿದ್ಯುತ್ ಉಪಕರಣಗಳ ಕ್ಷೇತ್ರದಲ್ಲಿ ಜಾಗತಿಕ ಉತ್ಪಾದನಾ ಕೇಂದ್ರವಾಗಿ ಅಭಿವೃದ್ಧಿ ಹೊಂದಲು ಅನುಕೂಲವಾಗುತ್ತದೆ ಎಂದು ನೀತಿ ಆಯೋಗದ ಸದಸ್ಯ ಡಾ. ಅರವಿಂದ ವೀರಮಣಿ ತಿಳಿಸಿದ್ದಾರೆ.

ವಾಣಿಜ್ಯ ಸಚಿವ ಪಿಯೂಷ್ ಗೋಯೆಲ್ ಹೇಳುವಂತೆ ಎರಡೂ ದೇಶಗಳ ನಡುವಣ ವ್ಯಾಪಾರ ಮಾತುಕತೆ ಸಕಾರಾತ್ಮಕ ದಿಕ್ಕಿನಲ್ಲೇ ಸಾಗಿದ್ದು ಇದುವರೆಗಿನ ಮಾತುಕತೆಯ ಫಲಿತಾಂಶ ಸಮಾಧಾನ ತಂದಿದ್ದು ನವೆಂಬರ್ ವೇಳೆಗೆ ವ್ಯಾಪಾರದ ಮೊದಲ ಹಂತ ಅಂತಿಮಗೊಳ್ಳಬಹುದು.

ವರ್ಷಾಂತ್ಯ ಟ್ರಂಪ್ ಭಾರತಕ್ಕೆ?: ಅಧ್ಯಕ್ಷ ಟ್ರಂಪ್ ಅವರು ಕ್ವಾಡ್ ಗುಂಪಿನ ನಾಯಕರೊಂದಿಗೆ ನಿರಂತರ ಸಂಪರ್ಕ ಹೊಂದಿದ್ದಾರೆ. ವರ್ಷದ ಕೊನೆಯಲ್ಲಿ ಭಾರತದಲ್ಲಿ ನಡೆಯಲಿರುವ ಕ್ವಾಡ್ ಸಭೆಗೆ ಅವರು ತೆರಳಬಹುದೆಂದು ಗೋರ್ ಸುಳಿವು ನೀಡಿದರು. ಭಾರತದಲ್ಲಿ ಕ್ವಾಡ್ ಶೃಂಗಸಭೆ ನಡೆಯುವುದಿದ್ದರೂ ಯಾವಾಗ ನಡೆಯುವುದೆಂದು ಇದುವರೆಗೂ ನಿಗದಿಯಾಗಿಲ್ಲ. ಕಳೆದ ಫೆಬ್ರವರಿಯಲ್ಲಿ ಪ್ರಧಾನಿ ಮೋದಿ ಅಮೆರಿಕಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಕ್ವಾಡ್ ಶೃಂಗಸಭೆಯಲ್ಲಿ ಭಾಗವಹಿಸುವಂತೆ ಟ್ರಂಪ್‌ಗೆ ಆಹ್ವಾನ ನೀಡಿದ್ದರು.

Previous articleಧರ್ಮಸ್ಥಳ ಕೇಸ್: ಕುಂಟುತ್ತಾ ಸಾಗಿದೆ ಎಸ್‌ಐಟಿ ವಿಚಾರಣೆ!
Next articleಮಳೆ ಹೆಲಿಕಾಪ್ಟರ್ ಬಿಟ್ಟು ಕಾರಲ್ಲಿ ಮಣಿಪುರಕ್ಕೆ ಮೋದಿ

LEAVE A REPLY

Please enter your comment!
Please enter your name here