ಅಮೆರಿಕ ಮತ್ತು ಚೀನಾ ನಡುವಿನ ವ್ಯಾಪಾರ ಸಮರ ಮತ್ತೊಂದು ತೀವ್ರ ಸ್ವರೂಪ ಪಡೆದುಕೊಂಡಿದ್ದು, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಚೀನಾಕ್ಕೆ ಸ್ಪಷ್ಟ ಮತ್ತು ಕಠಿಣ ಎಚ್ಚರಿಕೆಯೊಂದನ್ನು ರವಾನಿಸಿದ್ದಾರೆ. ನವೆಂಬರ್ 1ರೊಳಗೆ ವ್ಯಾಪಾರ ಒಪ್ಪಂದವನ್ನು ಅಂತಿಮಗೊಳಿಸದಿದ್ದರೆ, ಚೀನಾದಿಂದ ಆಮದಾಗುವ ಸರಕುಗಳ ಮೇಲೆ ಶೇ. 155ರಷ್ಟು ಅಗಾಧ ಪ್ರಮಾಣದ ಸುಂಕವನ್ನು ಹೇರುವುದಾಗಿ ಟ್ರಂಪ್ ಬೆದರಿಕೆ ಹಾಕಿದ್ದಾರೆ.
ಶ್ವೇತಭವನದಲ್ಲಿ ಆಸ್ಟ್ರೇಲಿಯಾದ ಪ್ರಧಾನಿ ಆಂಥೋನಿ ಅಲ್ಬನೀಸ್ ಅವರೊಂದಿಗಿನ ಸಭೆಯ ಸಂದರ್ಭದಲ್ಲಿ ಈ ಸ್ಫೋಟಕ ಹೇಳಿಕೆ ನೀಡಿದ ಟ್ರಂಪ್, “ಹಿಂದೆ ಹಲವು ದೇಶಗಳು ಅಮೆರಿಕದ ಲಾಭವನ್ನು ಪಡೆದುಕೊಂಡಿದ್ದವು, ಆದರೆ ಆ ದಿನಗಳು ಈಗ ಮುಗಿದಿವೆ. ನಮ್ಮೊಂದಿಗೆ ನ್ಯಾಯಯುತ ಒಪ್ಪಂದ ಮಾಡಿಕೊಳ್ಳಲು ಚೀನಾ ವಿಫಲವಾದರೆ, ನವೆಂಬರ್ 1 ರಿಂದ ಭಾರೀ ಬೆಲೆ ತೆರಬೇಕಾಗುತ್ತದೆ,” ಎಂದು ಗುಡುಗಿದ್ದಾರೆ.
ತಮ್ಮ ‘ಟ್ರುತ್ ಸೋಶಿಯಲ್’ ಖಾತೆಯಲ್ಲೂ ಈ ಬಗ್ಗೆ ಪೋಸ್ಟ್ ಮಾಡಿರುವ ಅವರು, ಅಸ್ತಿತ್ವದಲ್ಲಿರುವ ಸುಂಕದ ಜೊತೆಗೆ ಹೆಚ್ಚುವರಿ 100% ಸುಂಕ ವಿಧಿಸುವ ಇಂಗಿತವನ್ನು ವ್ಯಕ್ತಪಡಿಸಿದ್ದಾರೆ.
ಅಪರೂಪದ ಖನಿಜಗಳ ಮೇಲೆ ಚೀನಾದ ಹಿಡಿತ: ಟ್ರಂಪ್ ಈ ಬೆದರಿಕೆಯ ಹಿಂದೆ ಚೀನಾದ ಇತ್ತೀಚಿನ ನಡೆಯೂ ಒಂದು ಪ್ರಮುಖ ಕಾರಣವಾಗಿದೆ. ಜಾಗತಿಕ ಮಾರುಕಟ್ಟೆಯಲ್ಲಿ ನಿರ್ಣಾಯಕ ಪಾತ್ರ ವಹಿಸುವ 17 ಅಪರೂಪದ ಭೂಮಿಯ ಖನಿಜಗಳ ರಫ್ತಿನ ಮೇಲೆ ಚೀನಾ ಹೊಸ ನಿಯಮಗಳನ್ನು ಜಾರಿಗೊಳಿಸಿದೆ. ಈ ಖನಿಜಗಳು ಎಲೆಕ್ಟ್ರಾನಿಕ್ಸ್, ಎಲೆಕ್ಟ್ರಿಕ್ ವಾಹನಗಳು ಮತ್ತು ರಕ್ಷಣಾ ಉಪಕರಣಗಳ ತಯಾರಿಕೆಯಲ್ಲಿ ಅತ್ಯಗತ್ಯವಾಗಿವೆ.
ಹೊಸ ನಿಯಮದ ಪ್ರಕಾರ, ಯಾವುದೇ ದೇಶ ಅಥವಾ ಕಂಪನಿ ಚೀನಾದಿಂದ ಈ ಖನಿಜಗಳನ್ನು ಖರೀದಿಸಬೇಕಾದರೆ, ಚೀನಾ ಸರ್ಕಾರದ ರಫ್ತು ಪರವಾನಗಿ ಪಡೆಯುವುದು ಕಡ್ಡಾಯ. ಇದು ಜಾಗತಿಕ ಪೂರೈಕೆ ಸರಪಳಿಯ ಮೇಲೆ ಚೀನಾಕ್ಕೆ ಹೆಚ್ಚಿನ ನಿಯಂತ್ರಣವನ್ನು ನೀಡುತ್ತದೆ, ಇದು ಅಮೆರಿಕ ಮತ್ತು ಅದರ ಮಿತ್ರರಾಷ್ಟ್ರಗಳ ಕೈಗಾರಿಕೆ ಮತ್ತು ಭದ್ರತೆಗೆ ನೇರ ಸವಾಲಾಗಿದೆ.
ಈ ತಿಂಗಳಾಂತ್ಯದಲ್ಲಿ ದಕ್ಷಿಣ ಕೊರಿಯಾದಲ್ಲಿ ಚೀನಾ ಅಧ್ಯಕ್ಷ ಷಿ ಜಿನ್‌ಪಿಂಗ್ ಅವರನ್ನು ಭೇಟಿಯಾಗುವ ಸಾಧ್ಯತೆಯಿದ್ದು, ಈ ಸಭೆಯು ಉಭಯ ದೇಶಗಳ ನಡುವಿನ ಬಿಕ್ಕಟ್ಟನ್ನು ಶಮನಗೊಳಿಸಲಿದೆಯೇ ಅಥವಾ ವ್ಯಾಪಾರ ಯುದ್ಧವನ್ನು ಮತ್ತಷ್ಟು ಉಲ್ಬಣಗೊಳಿಸಲಿದೆಯೇ ಎಂಬುದು ತೀವ್ರ ಕುತೂಹಲ ಕೆರಳಿಸಿದೆ.