ನವದೆಹಲಿ: ದೀಪಾವಳಿ ಹಬ್ಬದ ಸಂಭ್ರಮದ ಮಧ್ಯೆ, ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಜನತೆಗೆ ಶುಭಾಶಯಗಳನ್ನು ತಿಳಿಸಿ, ವಿಭಿನ್ನ ರೀತಿಯಲ್ಲಿ ಹಬ್ಬವನ್ನು ಆಚರಿಸಿದರು. ಹಳೆ ದೆಹಲಿಯ ಪ್ರಸಿದ್ಧ ಘಂಟೆವಾಲಾ ಬೇಕರಿಗೆ ಭೇಟಿ ನೀಡಿ ಸ್ವತಃ ಸಿಹಿತಿಂಡಿಗಳನ್ನು ತಯಾರಿಸುವಲ್ಲಿ ಕೈಜೋಡಿಸಿದರು.
ಈ ಕುರಿತಂತೆ ರಾಹುಲ್ ಗಾಂಧಿ ಅವರು ತಮ್ಮ ಸಾಮಾಜಿಕ ಜಾಲತಾಣದಲ್ಲಿ ವೀಡಿಯೊ ಹಂಚಿಕೊಂಡಿದ್ದು ಹಳೆಯ ದೆಹಲಿಯ ಪ್ರಸಿದ್ಧ ಘಂಟೆವಾಲಾ ಬೇಕರಿಯಲ್ಲಿ ಇಮಾರ್ತಿ ಮತ್ತು ಬೇಸನ್ ಲಡ್ಡು ತಯಾರಿಸಲು ಪ್ರಯತ್ನಿಸಿದೆ. ಇಲ್ಲಿ ಸಿಹಿತಿಂಡಿಗಳನ್ನು ಸಾಂಪ್ರದಾಯಿಕ ರೀತಿಯಲ್ಲಿ ತಯಾರಿಸಲಾಗುತ್ತದೆ, ಅದರಲ್ಲಿ ಶ್ರಮ ಮತ್ತು ಪ್ರತಿಭೆಯಿದೆ ಎಂದು ಬರೆದುಕೊಂಡಿದ್ದಾರೆ.
ಘಂಟೆವಾಲಾ ಬೇಕರಿ, ಸುಮಾರು ಎರಡು ಶತಮಾನಗಳ ಇತಿಹಾಸ ಹೊಂದಿದ್ದು, ಭಾರತದ ಅತ್ಯಂತ ಹಳೆಯ ಸಿಹಿತಿಂಡಿ ಅಂಗಡಿಗಳಲ್ಲೊಂದು. ಪ್ರಸ್ತುತ ಈ ಅಂಗಡಿಯನ್ನು ಏಳನೇ ತಲೆಮಾರಿನ ಮಾಲೀಕರಾದ ಸುಶಾಂತ್ ಜೈನ್ ನಡೆಸುತ್ತಿದ್ದಾರೆ.
ರಾಹುಲ್ ಗಾಂಧಿ ಅವರೊಂದಿಗೆ ಮಾತನಾಡುವ ವೇಳೆ ಸುಶಾಂತ್ ಜೈನ್ ಅವರು ನಮ್ಮ ಕುಟುಂಬವು ಹಲವು ವರ್ಷಗಳಿಂದ ಘಂಟೆವಾಲಾ ಸಿಹಿತಿಂಡಿಗಳನ್ನು ವಿವಿಧ ಹಬ್ಬಗಳು ಮತ್ತು ಮದುವೆಗಳಲ್ಲಿ ಆರ್ಡರ್ ಮಾಡುತ್ತದೆ. ಈಗ ನಾವು ರಾಹುಲ್ ಗಾಂಧಿಯವರ ಮದುವೆಗೆ ಕಾಯುತ್ತಿದ್ದೇವೆ, ಆಗ ಅವರು ನಮ್ಮ ಅಂಗಡಿಯಿಂದ ಸಿಹಿತಿಂಡಿ ಆರ್ಡರ್ ಮಾಡಬಹುದು ಎಂದು ತಮಾಷೆಯಾಗಿ ಹೇಳಿದರು.
ಅವರು ತಮ್ಮ ಸಿಹಿತಿಂಡಿಗಳನ್ನು ಶುದ್ಧ ದೇಸಿ ತುಪ್ಪದಿಂದ ತಯಾರಿಸಲಾಗುತ್ತದೆ ಎಂದೂ, ಯಾವುದೇ ಕೃತಕ ಬಣ್ಣ ಅಥವಾ ರಾಸಾಯನಿಕಗಳನ್ನು ಬಳಸುವುದಿಲ್ಲ ಎಂದೂ ವಿವರಿಸಿದರು. ಘಂಟೆವಾಲಾದ ಸೋಹನ್ ಹಲ್ವಾ, ಬೇಸನ್ ಲಡ್ಡು, ಹಾಗೂ ಇಮಾರ್ಟಿ (ಜಿಲೇಬಿ)ಗಳೇ ಅತ್ಯಂತ ಜನಪ್ರಿಯ ಸಿಹಿತಿಂಡಿಗಳು.
ವೀಡಿಯೊ ಕೊನೆಯಲ್ಲಿ ರಾಹುಲ್ ಗಾಂಧಿ ಮತ್ತು ಸುಶಾಂತ್ ಜೈನ್ ಇಬ್ಬರೂ ಭಾರತೀಯ ಸಿಹಿತಿಂಡಿಗಳ ಸಂಸ್ಕೃತಿಯ ಬಗ್ಗೆ ಚರ್ಚಿಸುತ್ತಾ ದೀಪಾವಳಿ ಹಬ್ಬದ ಸಂಭ್ರಮ ಹಂಚಿಕೊಂಡರು.
It looks as if it is AI generated picture.