ವಿಜೋರಾಂಗೆ ರೈಲು ಸಂಪರ್ಕ ಸಿಕ್ಕಿದೆ. ಈಶಾನ್ಯ ರಾಜ್ಯಗಳ ಅಭಿವೃದ್ಧಿಗೆ ಒತ್ತು ನೀಡುತ್ತಿರುವ ಪ್ರಧಾನಿ ನರೇಂದ್ರ ಮೋದಿ ಶನಿವಾರ ಮಿಜೋರಾಂನ ಮೊದಲ ರೈಲು ಮಾರ್ಗವನ್ನು ಉದ್ಘಾಟಿಸಿದರು.
ಇದು ಐಜ್ವಾಲ್ ನಗರಕ್ಕೆ ನೇರ ರೈಲು ಸಂಪರ್ಕ ಕಲ್ಪಿಸುವ ಬಹುನಿರೀಕ್ಷಿತ ಯೋಜನೆಯಾಗಿದೆ. ಈ ಸಂದರ್ಭದಲ್ಲಿ, ಐಜ್ವಾಲ್‌ನಿಂದ ದೆಹಲಿ, ಗುವಾಹಟಿ ಮತ್ತು ಕೋಲ್ಕತ್ತಾಗೆ ತೆರಳುವ ಎಕ್ಸ್‌ಪ್ರೆಸ್ ರೈಲುಗಳಿಗೂ ಪ್ರಧಾನಿ ಹಸಿರು ನಿಶಾನೆ ತೋರಿದರು.
ಮಿಜೋರಾಂ ರಾಜಧಾನಿ ಐಜ್ವಾಲ್ ಕಡಿದಾದ ಬೆಟ್ಟಗಳು ಮತ್ತು ಆಳವಾದ ಕಣಿವೆಗಳಿಂದ ಆವೃತವಾಗಿದ್ದು ಇಲ್ಲಿ ರೈಲು ಮಾರ್ಗ ನಿರ್ಮಾಣವು ದೊಡ್ಡ ಸವಾಲಾಗಿತ್ತು. 11 ವರ್ಷಗಳ ಪರಿಶ್ರಮದ ನಂತರ, ಈಗ ಈ ಮಾರ್ಗ ಪೂರ್ಣಗೊಂಡಿದೆ.
ವಿಶೇಷವಾಗಿ, ಈ 51.38 ಕಿ.ಮೀ. ಉದ್ದದ ಮಾರ್ಗದಲ್ಲಿ ಒಟ್ಟು 45 ಸುರಂಗಗಳು ಮತ್ತು 55 ದೊಡ್ಡ ಸೇತುವೆಗಳನ್ನು ನಿರ್ಮಿಸಲಾಗಿದೆ. 1.86 ಕಿ.ಮೀ. ಉದ್ದದ ಸುರಂಗವು ಅತಿದೊಡ್ಡದಾಗಿದ್ದರೆ, 114 ಮೀಟರ್ ಎತ್ತರದ ಸೇತುವೆಯು ಯೋಜನೆಯ ಎಂಜಿನಿಯರಿಂಗ್ ವೈಶಿಷ್ಟ್ಯಗಳನ್ನು ಎತ್ತಿ ತೋರಿಸುತ್ತದೆ.
ಈಶಾನ್ಯ ರಾಜ್ಯಗಳಿಗೆ ಮಹತ್ವದ ಹೆಜ್ಜೆ: ಅರುಣಾಚಲ ಪ್ರದೇಶ ಹೊರತುಪಡಿಸಿ, ಈಶಾನ್ಯದ ಉಳಿದ ಆರು ರಾಜ್ಯಗಳ ರಾಜಧಾನಿಗಳಿಗೆ ರೈಲು ಸಂಪರ್ಕ ಕಲ್ಪಿಸುವ ಪ್ರಧಾನಿ ಮೋದಿ ಅವರ 2014ರ ಮಹತ್ವಾಕಾಂಕ್ಷಿ ಯೋಜನೆಗೆ ಇದು ಒಂದು ದೊಡ್ಡ ಮೈಲಿಗಲ್ಲು.
2016ರಲ್ಲಿ ಅಸ್ಸಾಂನಿಂದ ಮಿಜೋರಾಂನ ಬೈರಾಬಿವರೆಗೆ ಬ್ರಾಡ್‌ಗೇಜ್ ರೈಲು ಮಾರ್ಗ ನಿರ್ಮಾಣವಾಗಿತ್ತು. ಆಗ ಬೈರಾಬಿಗೆ ಬಂದ ಮೊದಲ ಸರಕು ರೈಲು ರಾಜ್ಯದಲ್ಲಿ ಸಂಚರಿಸಿದ ಮೊದಲ ರೈಲು ಎಂಬ ಹೆಗ್ಗಳಿಕೆಗೆ ಪಾತ್ರವಾಗಿತ್ತು. ಈಗ ಬೈರಾಬಿಯಿಂದ ಐಜ್ವಾಲ್‌ನ ಸೈರಾಂಗ್‌ವರೆಗೆ ಮಾರ್ಗ ವಿಸ್ತರಣೆಯಾಗಿದ್ದು, ಸರಕು ರೈಲುಗಳ ಜೊತೆಗೆ ಪ್ರಯಾಣಿಕರ ರೈಲುಗಳು ಸಹ ಸಂಚರಿಸಲಿವೆ.
ಈಶಾನ್ಯ ಗಡಿನಾಡು ರೈಲ್ವೆಯ ಅಧಿಕಾರಿ ಕಪಿಂಜಲ್ ಕೆ. ಶರ್ಮಾ ಮಾಹಿತಿ ನೀಡಿರುವ ಪ್ರಕಾರ, ಈ ಮಾರ್ಗವು ಐಜ್ವಾಲ್ ಮತ್ತು ಕೊಲಸಿಬ್ ಜಿಲ್ಲೆಗಳ ಮೂಲಕ ಹಾದುಹೋಗುತ್ತದೆ. ಒಟ್ಟು ರೂ. 8,070 ಕೋಟಿ ವೆಚ್ಚದಲ್ಲಿ ನಿರ್ಮಿಸಲಾದ ಈ ಮಾರ್ಗದಲ್ಲಿ ಬೈರಾಬಿ, ಹೋರ್ಟೋಕಿ, ಕವನ್‌ಪುವಿ, ಮುಅಲಾಂಗ್ ಮತ್ತು ಸೈರಾಂಗ್ ಎಂಬ ನಿಲ್ದಾಣಗಳು ಇವೆ.
ಗಂಟೆಗೆ 100 ಕಿ.ಮೀ. ವೇಗದಲ್ಲಿ ಸಾಗುವ ಸಾಮರ್ಥ್ಯವನ್ನು ಹೊಂದಿರುವ ಈ ರೈಲು ಮಾರ್ಗ, ಮಿಜೋರಾಂನ ಅಭಿವೃದ್ಧಿಗೆ ಹೊಸ ದಾರಿಗಳನ್ನು ತೆರೆಯಲಿದೆ. ಒಂದು ರೈಲು ಮಿಜೋರಾಂನ ಸುಂದರ ಕಣಿವೆಗಳ ಮೂಲಕ ಹಾದುಹೋಗುತ್ತಿರುವ ದೃಶ್ಯ. ಹಚ್ಚ ಹಸಿರಿನ ಬೆಟ್ಟಗಳು ಮತ್ತು ಸಣ್ಣ ಸೇತುವೆಗಳು ಹಿನ್ನೆಲೆಯಲ್ಲಿ ಕಾಣುತ್ತವೆ.