ಗೋವಾ: ಕರಾವಳಿ ನಗರಿ ಉಡುಪಿಯ ಶ್ರೀಕೃಷ್ಣನ ದರ್ಶನ ಪಡೆದ ಬಳಿಕ ಪ್ರಧಾನಿ ನರೇಂದ್ರ ಮೋದಿ ಇಂದು ನೇರವಾಗಿ ಗೋವಾಕ್ಕೆ ತೆರಳಲಿದ್ದು, ಅಲ್ಲಿ ಮತ್ತೊಂದು ಐತಿಹಾಸಿಕ ಧಾರ್ಮಿಕ ಕಾರ್ಯಕ್ರಮಕ್ಕೆ ಸಾಕ್ಷಿಯಾಗಲಿದ್ದಾರೆ.
ಗೋವಾ ಎಂದರೆ ಕೇವಲ ಪ್ರವಾಸಿ ತಾಣ ಎಂಬ ಹಣೆಪಟ್ಟಿಯನ್ನು ಕಳಚಿ, ಅದೀಗ ಆಧ್ಯಾತ್ಮಿಕ ಕೇಂದ್ರವಾಗಿಯೂ ಹೊರಹೊಮ್ಮುತ್ತಿದೆ. ಇದಕ್ಕೆ ಸಾಕ್ಷಿ ಎಂಬಂತೆ ಗೋವಾದ ಕಾಣಕೋಣದಲ್ಲಿ ನಿರ್ಮಾಣವಾಗಿರುವ ಜಗತ್ತಿನ ಅತೀ ಎತ್ತರದ ಶ್ರೀರಾಮನ ಬೃಹತ್ ಮೂರ್ತಿಯನ್ನು ಪ್ರಧಾನಿ ಮೋದಿ ಇಂದು ಲೋಕಾರ್ಪಣೆಗೊಳಿಸಲಿದ್ದಾರೆ.
ಶಿಲ್ಪಿ ರಾಮ್ ಸುತಾರ್ ಕೈಚಳಕ: ಗುಜರಾತ್‌ನ ಸರ್ದಾರ್ ಪಟೇಲ್ (ಏಕತಾ ಪ್ರತಿಮೆ) ಮತ್ತು ಬೆಂಗಳೂರಿನ ಕೆಂಪೇಗೌಡರ ಪ್ರತಿಮೆಗಳನ್ನು ವಿನ್ಯಾಸಗೊಳಿಸಿ ಜಗತ್ತಿನ ಗಮನ ಸೆಳೆದಿದ್ದ ಪದ್ಮಭೂಷಣ ಪುರಸ್ಕೃತ ಖ್ಯಾತ ಶಿಲ್ಪಿ ರಾಮ್ ಸುತಾರ್ ಅವರೇ ಈ ರಾಮನ ಮೂರ್ತಿಯನ್ನೂ ಕೆತ್ತಿದ್ದಾರೆ.
ಬರೋಬ್ಬರಿ 77 ಅಡಿ ಎತ್ತರದ ಈ ಕಂಚಿನ ಮೂರ್ತಿಯು ಬಿಲ್ಲಿನಾಕಾರದ ವಿನ್ಯಾಸ ಹೊಂದಿರುವ ‘ಆದರ್ಶ ಧಾಮ್’ನಲ್ಲಿ ಪ್ರತಿಷ್ಠಾಪನೆಗೊಂಡಿದೆ. ಇದನ್ನು ‘ದಕ್ಷಿಣದ ಅಯೋಧ್ಯೆ’ ಎಂದೇ ಕರೆಯಲಾಗುತ್ತಿದ್ದು, ಭಕ್ತರ ಪಾಲಿಗೆ ಹೊಸ ಪುಣ್ಯಕ್ಷೇತ್ರವಾಗಿ ಮಾರ್ಪಟ್ಟಿದೆ.
ಮಠಕ್ಕೆ 550 ವರ್ಷಗಳ ಸಂಭ್ರಮ: ಶ್ರೀ ಸಂಸ್ಥಾನ ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠಕ್ಕೆ 550 ವರ್ಷಗಳು ತುಂಬಿದ ಹಿನ್ನೆಲೆಯಲ್ಲಿ ಆಯೋಜಿಸಲಾದ ‘ಸಾರ್ಧ ಪಂಚ ಶತಮಾನೋತ್ಸವ’ದ ಪ್ರಮುಖ ಆಕರ್ಷಣೆ ಈ ಕಾರ್ಯಕ್ರಮ.
ಈ ಶುಭ ಸಂದರ್ಭದಲ್ಲಿ ಪ್ರಧಾನಿ ಮೋದಿ ಸ್ಮರಣಾರ್ಥ ವಿಶೇಷ ಅಂಚೆ ಚೀಟಿ ಹಾಗೂ ನಾಣ್ಯವನ್ನು ಬಿಡುಗಡೆ ಮಾಡಲಿದ್ದಾರೆ. ಅಷ್ಟೇ ಅಲ್ಲದೆ, ಆಧುನಿಕ ತಂತ್ರಜ್ಞಾನದ ಸ್ಪರ್ಶವಿರುವ ರಾಮಾಯಣ ಥೀಮ್ ಪಾರ್ಕ್, ರಾಮನ ಇತಿಹಾಸ ಸಾರುವ ಮ್ಯೂಸಿಯಂ ಹಾಗೂ 7ಡಿ ರಂಗಮಂದಿರಕ್ಕೂ ಚಾಲನೆ ನೀಡಲಿದ್ದಾರೆ. ಇದು ಯುವಜನತೆಗೆ ನಮ್ಮ ಸಂಸ್ಕೃತಿಯನ್ನು ಪರಿಚಯಿಸಲು ಸಹಕಾರಿಯಾಗಲಿದೆ.
ದಾಖಲೆ ಬರೆದ ರಾಮನಾಮ ಜಪ: ಮಠದ ಪೀಠಾಧಿಪತಿಗಳಾದ ಶ್ರೀಮದ್ ವಿದ್ಯಾಧೀಶತೀರ್ಥ ಶ್ರೀಪಾದರ ನೇತೃತ್ವದಲ್ಲಿ ಹಮ್ಮಿಕೊಳ್ಳಲಾದ ರಾಮನಾಮ ಜಪ ಅಭಿಯಾನವು ವಿಶ್ವ ದಾಖಲೆ ನಿರ್ಮಿಸಿದೆ. ದೇಶದ 120 ಕೇಂದ್ರಗಳಲ್ಲಿ 550 ಕೋಟಿ ಜಪ ಮಾಡುವ ಗುರಿ ಹೊಂದಲಾಗಿತ್ತು, ಆದರೆ ಭಕ್ತರ ಉತ್ಸಾಹದಿಂದಾಗಿ 590 ಕೋಟಿಗೂ ಅಧಿಕ ರಾಮನಾಮ ಜಪ ನಡೆದಿದೆ.
ಇನ್ನು ಉತ್ತರದ ಬದರಿನಾಥ ಕ್ಷೇತ್ರದಿಂದ ಹೊರಟಿದ್ದ ‘ಶ್ರೀರಾಮ ದಿಗ್ವಿಜಯ ರಥಯಾತ್ರೆ’ಯು 40 ದಿನಗಳ ಸಂಚಾರದ ನಂತರ ಪರ್ತಗಾಳಿ ಮಠ ತಲುಪಿದೆ. ಉತ್ಸವದ ಅಂಗವಾಗಿ ಪ್ರತಿದಿನ 55ರಂತೆ ಒಟ್ಟು 550 ಹೋಮ-ಹವನಗಳು ನಡೆಯುತ್ತಿದ್ದು, ಗೋವಾದ ವಾತಾವರಣ ರಾಮಮಯವಾಗಿದೆ.

























