ನವೆಂಬರ್ 1 ರಿಂದ ಎಲ್‌ಪಿಜಿ ಸಿಲಿಂಡರ್ ಬೆಲೆ ಇಳಿಕೆ? ಇಲ್ಲಿದೆ ಸಂಭಾವ್ಯ ದರ!

0
17

ದೇಶದ ಕೋಟ್ಯಂತರ ಗೃಹಬಳಕೆ ಎಲ್‌ಪಿಜಿ ಸಿಲಿಂಡರ್ ಗ್ರಾಹಕರಿಗೆ ಒಂದು ಆಶಾದಾಯಕ ಸುದ್ದಿ ಕೇಳಿಬರುತ್ತಿದೆ. ಸತತ ಹಣದುಬ್ಬರದಿಂದ ಕಂಗೆಟ್ಟಿರುವ ಜನರಿಗೆ, ನವೆಂಬರ್ 1 ರಿಂದ ಅಡುಗೆ ಅನಿಲದ ಬೆಲೆಯಲ್ಲಿ ಇಳಿಕೆಯಾಗುವ ಸಾಧ್ಯತೆ ದಟ್ಟವಾಗಿದೆ.

ಪ್ರತಿ ತಿಂಗಳ ಮೊದಲ ದಿನದಂದು ತೈಲ ಕಂಪನಿಗಳು ದರ ಪರಿಷ್ಕರಣೆ ಮಾಡುವುದರಿಂದ, ಮುಂದಿನ ವಾರ ಸಿಲಿಂಡರ್ ಬೆಲೆ ಅಗ್ಗವಾಗಬಹುದು ಎಂಬ ನಿರೀಕ್ಷೆ ಗರಿಗೆದರಿದೆ.

ಬೆಲೆ ಇಳಿಕೆ ಎಷ್ಟು?: ಅಧಿಕೃತವಾಗಿ ಯಾವುದೇ ಘೋಷಣೆ ಹೊರಬಿದ್ದಿಲ್ಲವಾದರೂ, ತೈಲ ಮಾರುಕಟ್ಟೆ ಮೂಲಗಳ ಪ್ರಕಾರ, 14.2 ಕೆಜಿ ತೂಕದ ಗೃಹಬಳಕೆ ಸಿಲಿಂಡರ್‌ನ ಬೆಲೆಯಲ್ಲಿ ಪ್ರತಿ ಸಿಲಿಂಡರ್‌ಗೆ ಸುಮಾರು ರೂ. 20 ರಷ್ಟು ಕಡಿತವಾಗುವ ಸಂಭವವಿದೆ.

ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿನ ದರ ಬದಲಾವಣೆಗಳು ಮತ್ತು ಇತರ ಅಂಶಗಳನ್ನು ಪರಿಗಣಿಸಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗುತ್ತದೆ. ಒಂದು ವೇಳೆ ಈ ಬೆಲೆ ಇಳಿಕೆ ನಿಜವಾದರೆ, ಇದು ಹಬ್ಬದ ಸಮಯದಲ್ಲಿ ಮಧ್ಯಮ ವರ್ಗದ ಕುಟುಂಬಗಳ ಮೇಲಿನ ಆರ್ಥಿಕ ಹೊರೆಯನ್ನು ತುಸು ಕಡಿಮೆ ಮಾಡಲಿದೆ.

ಪ್ರಮುಖ ನಗರಗಳಲ್ಲಿ ದರ ಎಷ್ಟಾಗಬಹುದು?: ಪ್ರಸ್ತುತ ದೇಶದ ಪ್ರಮುಖ ನಗರಗಳಲ್ಲಿ ಸಿಲಿಂಡರ್ ಬೆಲೆಗಳು ವಿಭಿನ್ನವಾಗಿವೆ. ಒಂದು ವೇಳೆ ರೂ. 20 ಇಳಿಕೆಯಾದರೆ, ಹೊಸ ದರಗಳು ಈ ಕೆಳಗಿನಂತಿರುವ ಸಾಧ್ಯತೆಯಿದೆ.

ದೆಹಲಿ: ಪ್ರಸ್ತುತ ದರ ರೂ.853 ಇದ್ದು, ಹೊಸ ದರ ರೂ.833 ಕ್ಕೆ ಇಳಿಯಬಹುದು.

ಕೋಲ್ಕತ್ತಾ: ಪ್ರಸ್ತುತ ದರ ರೂ.879 ಇದ್ದು, ಹೊಸ ದರ ರೂ.859 ಆಗಬಹುದು.

ಮುಂಬೈ: ಪ್ರಸ್ತುತ ದರ ರೂ.852 ಇದ್ದು, ಹೊಸ ದರ ರೂ.832 ಕ್ಕೆ ಇಳಿಕೆಯಾಗುವ ನಿರೀಕ್ಷೆಯಿದೆ.

ಚೆನ್ನೈ: ಪ್ರಸ್ತುತ ದರ ರೂ.868 ಇದ್ದು, ಹೊಸ ದರ ರೂ.848 ಆಗುವ ಸಾಧ್ಯತೆಯಿದೆ.

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಸದ್ಯದ ದರ ರೂ.855 ಇದ್ದು, ಇಳಿಕೆಯ ನಂತರ ₹835 ಕ್ಕೆ ಲಭ್ಯವಾಗಬಹುದು.

ಕಳೆದ ಕೆಲವು ತಿಂಗಳುಗಳಿಂದ ಸ್ಥಿರವಾಗಿದ್ದ ಅಥವಾ ಏರಿಕೆ ಕಾಣುತ್ತಿದ್ದ ಎಲ್‌ಪಿಜಿ ದರದಲ್ಲಿ ಸಣ್ಣ ಇಳಿಕೆಯಾದರೂ, ಅದು ಗ್ರಾಹಕರಿಗೆ ದೊಡ್ಡ ಮಟ್ಟದ ಸಮಾಧಾನ ತರಲಿದೆ. ಅಕ್ಟೋಬರ್ ತಿಂಗಳಿನಲ್ಲಿ ದರ ಬದಲಾವಣೆಯಾಗದ ಕಾರಣ, ನವೆಂಬರ್‌ನಲ್ಲಿ ಬೆಲೆ ಇಳಿಕೆಯಾಗಲಿದೆ ಎಂಬ ಭರವಸೆ ಹೆಚ್ಚಾಗಿದೆ. ಅಂತಿಮವಾಗಿ, ತೈಲ ಕಂಪನಿಗಳ ಅಧಿಕೃತ ಘೋಷಣೆಗಾಗಿ ನವೆಂಬರ್ 1ರ ಬೆಳಗಿನವರೆಗೂ ಕಾಯಬೇಕಿದೆ.

Previous articleಬಿಜೆಪಿ ಭ್ರಷ್ಟಾಚಾರ ಮಹಾಭಾರತಕ್ಕಿಂತ ದೊಡ್ಡದು: ಅಶೋಕ್ ವಿರುದ್ಧ ಖರ್ಗೆ ವಾಗ್ದಾಳಿ
Next articleಬಿಹಾರ ಕದನ ಕಣ: ಕರ್ಪೂರಿ ಠಾಕೂರ್ ತವರಲ್ಲಿ ಮೋದಿ-ನಿತೀಶ್ ಜೋಡಿ ಶಕ್ತಿ ಪ್ರದರ್ಶನ

LEAVE A REPLY

Please enter your comment!
Please enter your name here