ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ಮನಕಲಕುವ ಘಟನೆಯೊಂದು ನಡೆದಿದ್ದು, 11 ವರ್ಷದ ಮಗಳು ಗಾಢ ನಿದ್ರೆಯಲ್ಲಿದ್ದಾಗಲೇ, ಆಕೆಯ ಪಕ್ಕದಲ್ಲಿ ಮಲಗಿದ್ದ ಪತ್ನಿಯ ಕತ್ತು ಹಿಸುಕಿ ಕೊಂದ ಪತಿಯೊಬ್ಬ, ನಂತರ ಅದನ್ನು ಆತ್ಮಹತ್ಯೆ ಎಂದು ಬಿಂಬಿಸಲು ಯತ್ನಿಸಿ ಸಿಕ್ಕಿಬಿದ್ದಿದ್ದಾನೆ. ಈ ಘೋರ ಕೃತ್ಯ ದೆಹಲಿಯ ಕೇಶವ ಪುರಂ ಪ್ರದೇಶದಲ್ಲಿ ನಡೆದಿದೆ.
ನಾಟಕ ಬಯಲಾಗಿದ್ದು ಹೇಗೆ?: ದೇವಸ್ಥಾನವೊಂದರಲ್ಲಿ ಪೂಜಾರಿಯಾಗಿ ಕೆಲಸ ಮಾಡುತ್ತಿದ್ದ ದಿನೇಶ್ ಶರ್ಮಾ ಎಂಬಾತ, ತನ್ನ ಪತ್ನಿ ಸುಷ್ಮಾ ಶರ್ಮಾ (40)ರನ್ನು ಕೊಲೆ ಮಾಡಿದ ಬಳಿಕ, ತಾನೇ ಪೊಲೀಸ್ ನಿಯಂತ್ರಣ ಕೊಠಡಿಗೆ ಕರೆ ಮಾಡಿದ್ದಾನೆ.
“ನನ್ನ ಪತ್ನಿ ಕೋಣೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ,” ಎಂದು ಆತ ಮಾಹಿತಿ ನೀಡಿದ್ದಾನೆ. ತಕ್ಷಣ ಸ್ಥಳಕ್ಕೆ ಧಾವಿಸಿದ ಪೊಲೀಸರಿಗೆ, ಕೋಣೆಯ ನೆಲದ ಮೇಲೆ ಸುಷ್ಮಾ ಮೃತದೇಹ ಬಿದ್ದಿರುವುದು ಕಂಡುಬಂದಿದೆ. ಅದೇ ಕೋಣೆಯಲ್ಲಿ, ಹಾಸಿಗೆಯ ಮೇಲೆ ಮಗಳು ಗಾಢ ನಿದ್ರೆಯಲ್ಲಿದ್ದಳು.
ಆದರೆ, ಸ್ಥಳ ಪರಿಶೀಲನೆ ನಡೆಸಿದ ಪೊಲೀಸರಿಗೆ ಇದು ಆತ್ಮಹತ್ಯೆಯಲ್ಲ ಎಂಬ ಬಲವಾದ ಅನುಮಾನ ಮೂಡಿದೆ. ದಿನೇಶ್‌ನನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆಗೆ ಒಳಪಡಿಸಿದಾಗ, ಆತ ತನ್ನ ಪಾಪಕೃತ್ಯವನ್ನು ಒಪ್ಪಿಕೊಂಡಿದ್ದಾನೆ. “ನಾನೇ ದಿಂಬಿನಿಂದ ಉಸಿರುಗಟ್ಟಿಸಿ ಆಕೆಯನ್ನು ಕೊಂದೆ,” ಎಂದು ಆತ ಬಾಯ್ಬಿಟ್ಟಿದ್ದಾನೆ.
ಕೊಲೆಗೆ ಕಾರಣವೇನು?: ಮೃತ ಸುಷ್ಮಾ ಸಹೋದರ ಅಶೋಕ್ ಕುಮಾರ್, ತಮ್ಮ ಭಾವ ದಿನೇಶ್ ಶರ್ಮಾ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. “ನನ್ನ ಭಾವನಿಗೆ ಬೇರೊಂದು ಮಹಿಳೆಯೊಂದಿಗೆ ಅಕ್ರಮ ಸಂಬಂಧವಿತ್ತು. ಇದೇ ಕಾರಣಕ್ಕೆ ಆತ ನನ್ನ ಸಹೋದರಿಯನ್ನು ಕೊಲೆ ಮಾಡಿದ್ದಾನೆ. ಹಲವು ವರ್ಷಗಳಿಂದ ಅಕ್ಕ ಈ ಬಗ್ಗೆ ನಮ್ಮ ಬಳಿ ನೋವು ತೋಡಿಕೊಳ್ಳುತ್ತಿದ್ದಳು,” ಎಂದು ಕಣ್ಣೀರಿಟ್ಟಿದ್ದಾರೆ.
“ಊಟದ ವಿಷಯಕ್ಕೆ ಸಣ್ಣ ಜಗಳವಾಗಿದ್ದು ನಿಜ, ಆದರೆ ಅದು ಕೊಲೆಗೆ ಕಾರಣವಲ್ಲ, ಕೇವಲ ಒಂದು ನೆಪವಷ್ಟೇ. ನಿಜವಾದ ಕಾರಣ ಆತನ ವಿವಾಹೇತರ ಸಂಬಂಧ,” ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.
ಪೊಲೀಸರ ವಿರುದ್ಧವೂ ಕುಟುಂಬಸ್ಥರ ಆಕ್ರೋಶ: ಕುಟುಂಬಸ್ಥರು ಪೊಲೀಸರ ಕಾರ್ಯವೈಖರಿ ಬಗ್ಗೆಯೂ ಅಸಮಾಧಾನ ವ್ಯಕ್ತಪಡಿಸಿದ್ದಾರೆ. “ರಾತ್ರಿ ಸುಮಾರು 12 ಅಥವಾ 1 ಗಂಟೆಗೆ ಕೊಲೆ ನಡೆದಿದೆ. ಆದರೆ ನಮಗೆ ಪೊಲೀಸರು ಬೆಳಿಗ್ಗೆ 6 ಗಂಟೆಗೆ ಮಾಹಿತಿ ನೀಡಿದ್ದಾರೆ. ಅವರು ಪ್ರಕರಣವನ್ನು ಮುಚ್ಚಿಹಾಕಲು ಯತ್ನಿಸುತ್ತಿದ್ದಾರೆ,” ಎಂದು ಮೃತರ ಸಹೋದರ ಅಶೋಕ್ ಕುಮಾರ್ ದೂರಿದ್ದಾರೆ.
ಸದ್ಯ, ಪೊಲೀಸರು ಆರೋಪಿ ದಿನೇಶ್‌ನನ್ನು ಬಂಧಿಸಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಬಾಬು ಜಗಜೀವನ್ ರಾಮ್ ಆಸ್ಪತ್ರೆಗೆ ರವಾನಿಸಿದ್ದಾರೆ. ಪತಿಯ ವಿಶ್ವಾಸದ್ರೋಹ ಮತ್ತು ಪಾಪಕೃತ್ಯದಿಂದಾಗಿ ಒಂದು ಸಂಸಾರವೇ ಬೀದಿಪಾಲಾಗಿದ್ದು, ತಾಯಿಯನ್ನು ಕಳೆದುಕೊಂಡ ಮುಗ್ಧ ಮಗಳ ಭವಿಷ್ಯ ಅತಂತ್ರವಾಗಿದೆ.






















