ಮೆಲ್ಬೋರ್ನ್: ಗೆಲುವು ಕಷ್ಟವಾಗಿತ್ತು, ಡ್ರಾ ಸನಿಹಕ್ಕೆ ಬಂದು ದೂರವಾಯಿತು. ಸೋಲು ಅನಿರೀಕ್ಷಿತ ಎಂಬಂತೆ ಭಾರತದ ಪಾಲಾಗಿದೆ. ಮೆಲ್ಬೋರ್ನ್ ಟೆಸ್ಟ್ನ ೫ನೇ ಹಾಗೂ ಅಂತಿಮ ದಿನದಾಟದ ಒನ್‌ಲೈನ್ ಸ್ಟೋರಿಯಿದು. ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯಲ್ಲಿ ಭಾರತ ಮೊದಲ ಟೆಸ್ಟ್ ಗೆದ್ದ ಬಳಿಕವೂ ಆಸ್ಟ್ರೇಲಿಯಾ ತಂಡ ೨ ಟೆಸ್ಟ್ ಪಂದ್ಯಗಳನ್ನು ಗೆಲ್ಲುವ ಮೂಲಕ ಸರಣಿಯಲ್ಲಿ ಮುನ್ನಡೆ ಸಾಧಿಸಿದೆ. ಕಳೆದ ೩ ಬಾರಿ ಬಿಜಿಟಿ ಸರಣಿ ಗೆದ್ದಿದ್ದ ಭಾರತಕ್ಕೆ, ಈಗ ೪ನೇ ಬಾರಿ ಗೆಲುವು ಕೈ ಬಿಟ್ಟು ಹೋಗಿದೆ. ಸಿಡ್ನಿ ಟೆಸ್ಟ್ ಗೆದ್ದು ಸರಣಿ ಸಮಬಲ ಸಾಧಿಸುವುದೊಂದೇ ಈಗ ಟೀಮ್ ಇಂಡಿಯಾಗೆ ಉಳಿದಿರುವ ಮುಂದಿನ ಹಾದಿ.
೨೦೧೧ರ ಬಾಕ್ಸಿಂಗ್ ಟೆಸ್ಟ್‌ನಲ್ಲಿ ಧೋನಿ ನಾಯಕತ್ವದ ಟೀಮ್ ಇಂಡಿಯಾ ೧೨೨ ರನ್‌ಗಳಿಂದ ಸೋತಿದ್ದೇ ಕೊನೆ, ಅದಾದ ೧೩ ವರ್ಷಗಳ ಬಳಿಕ ಭಾರತ ಎಂಸಿಜಿ ಟೆಸ್ಟ್ ಸೋತಿದೆ. ೨೦೧೪ರಲ್ಲಿ ಧೋನಿ ನಾಯಕತ್ವದ ತಂಡವೇ ಡ್ರಾ ಮಾಡಿಕೊಂಡು ಸಮಾಧಾನ ಪಟ್ಟಿಕೊಂಡಿದ್ದು, ಈಗ ರೋಹಿತ್ ಶರ್ಮಾರ ಕಳಪೆ ನಾಯಕತ್ವಕ್ಕೆ ಸೋಲನ್ನು ಅನುಭವಿಸಿದೆ.
ತ್ರಿವಳಿಗಳ ಪಲ್ಟಿ
೪ನೇ ಟೆಸ್ಟ್‌ನ ೪ನೇ ದಿನದಂತ್ಯಕ್ಕೆ ೨೨೮ ರನ್‌ಗಳಿಸಿ ೯ ವಿಕೆಟ್ ಕಳೆದುಕೊಂಡಿದ್ದ ಆಸ್ಟ್ರೇಲಿಯಾ, ೫ನೇ ದಿನ ಕೇವಲ ೬ ರನ್‌ಗಳನ್ನಷ್ಟೇ ಪೇರಿಸಿ, ಆಲೌಟ್ ಆಯಿತು. ಇದರಿಂದ ಭಾರತ ಗೆಲ್ಲಲು ೩೪೦ ರನ್ ಗುರಿಯಾಗಿ ಪಡೆಯಿತು. ಆದರೆ, ಭಾರತಕ್ಕೆ ಆಧಾರವಾಗಬೇಕಿದ್ದ ಪ್ರಮುಖರಾದ ಹಿರಿಯ ಆಟಗಾರರೆನ್ನಿಸಿಕೊಂಡಿದ್ದ ನಾಯಕ ರೋಹಿತ್ ಶರ್ಮಾ, ಕೆ.ಎಲ್.ರಾಹುಲ್ ಹಾಗೂ ವಿರಾಟ್ ಕೊಹ್ಲಿ ಮೊದಲ ಸೆಷನ್‌ನಲ್ಲೇ ವಿಕೆಟ್ ಕೈ ಚೆಲ್ಲಿದರು. ತಂಡದ ಮೊತ್ತ ೨೫ ರನ್‌ಗಳಿರುವಾಗ, ರೋಹಿತ್ ೯ ರನ್‌ಗಳಿಸಿ ಪ್ಯಾಟ್ ಕಮಿನ್ಸ್ಗೆ ಈ ಸರಣಿಯಲ್ಲೇ ೪ ಬಾರಿ ಔಟಾದರು. ಅಷ್ಟೇ ಅಲ್ಲದೇ ಅದೇ ಓವರ್‌ನಲ್ಲಿ ರಾಹುಲ್ ಕೂಡ ಶೂನ್ಯ ಸುತ್ತಿದರು. ಇದಾದ ಬಳಿಕ ಮೊದಲ ಇನ್ನಿಂಗ್ಸ್‌ನಲ್ಲಿ ವಿಕೆಟ್ ಸಿಗದ ಸ್ಟಾರ್ಕ್‌ಗೆ ವಿರಾಟ್ ಕೊಹ್ಲಿ ೫ ರನ್‌ಗಳಿಸಿ ಔಟಾದರು. ಅಲ್ಲಿಗೆ ಭಾರತ ಪಂದ್ಯವನ್ನು ಗೆಲ್ಲುವ ಆಸೆ ಬಿಟ್ಟು ಡ್ರಾ ಮಾಡಿಕೊಳ್ಳಲು ನಿರ್ಧರಿಸಿತು.
ಯಶಸ್ವಿ-ಪಂತ್ ಜೊತೆಯಾಟ
ಮೊದಲ ಸೆಷನ್‌ನಲ್ಲಿ ಜೊತೆಗೂಡಿದ ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್ ಹಾಗೂ ರಿಶಬ್ ಪಂತ್, ದೊಡ್ಡ ಹೊಡೆತಗಳಿಗೆ ಕೈ ಹಾಕದೇ, ಎಚ್ಚರಿಕೆಯ ಬ್ಯಾಟಿಂಗ್ ನಡೆಸಿದರು. ಇದರಿಂದ ಭೋಜನ ವಿರಾಮದ ನಂತರವೂ ಆಸ್ಟ್ರೇಲಿಯಾ ಪಾಲಿಗೆ ವಿಕೆಟ್ ಸಿಗಲಿಲ್ಲ. ೨೦೫ ಎಸೆತಗಳನ್ನು ಎದುರಿಸಿದ ಈ ಜೋಡಿ, ದಿನದಾಟದ ೨ನೇ ಸೆಷನ್‌ನಲ್ಲಿ ಸಂಪೂರ್ಣ ಮೇಲುಗೈ ಸಾಧಿಸಿದರು. ಅದರಲ್ಲೂ ರಿಶಬ್ ಪಂತ್ ಸ್ಫೋಟಕ ಬ್ಯಾಟಿಂಗ್‌ಗೆ ಕೈ ಹಾಕದೇ ಇದ್ದಿದ್ದು ಅಚ್ಚರಿ ತಂದಿಟ್ಟಿತು.
ಆದರೆ, ಚಹಾ ವಿರಾಮದ ನಂತರ ಭಾರತ ಮಾಡಿದ ತಪ್ಪುಗಳಿಂದ ಸೋಲಿಗೆ ಕಾರಣವಾಯಿತು. ಅರೆಕಾಲಿಕ ಬೌಲರ್ ಟ್ರಾವಿಸ್ ಹೆಡ್ ಎಸೆತವನ್ನು ಬೌಂಡರಿ ಬಾರಿಸಲು ಹೋದ ಪಂತ್, ಮಿಚೆಲ್ ಮಾರ್ಷ್ಗೆ ಕ್ಯಾಚ್ ನೀಡಿದರು. ಇವರ ಹಿಂದೆ ಬಂದ ರವೀಂದ್ರ ಜಡೇಜಾ ಕೂಡ ಕೇವಲ ೧೪ ಎಸೆತಗಳಲ್ಲಿ ೨ ರನ್ ಗಳಿಸಿ ಬೋಲಾಂಡ್ ಎಸೆದ ಬೌನ್ಸರ್‌ಗೆ ತಬ್ಬಿಬ್ಬಾಗಿ ಕ್ಯಾಚ್ ನೀಡಿದರು. ಮೊದಲ ಇನ್ನಿಂಗ್ಸ್‌ನ ಶತಕವೀರ ನಿತೀಶ್ ಕುಮಾರ್ ರೆಡ್ಡಿ ಕೂಡ ೧ ರನ್‌ಗಳಿಸಿ ಲಯನ್ ಸ್ಪಿನ್‌ಗೆ ವಿಕೆಟ್ ಒಪ್ಪಿಸಿದರು.
ಯಶಸ್ವಿ ಜೈಸ್ವಾಲ್ ವಿವಾದಾತ್ಮಕ ಔಟ್
ಏಕಾಂಗಿಯಾಗಿ ಹೋರಾಡುತ್ತಿದ್ದ ಯಶಸ್ವಿ ಜೈಸ್ವಾಲ್ ಈ ವೇಳೆ ಕಮಿನ್ಸ್ ಬೌಲಿಂಗ್‌ನಲ್ಲಿ ಬಂದ ಆಫ್‌ಸೈಡ್ ಬೌನ್ಸರ್ ಅನ್ನು ಬೌಂಡರಿ ಬಾರಿಸುವ ಯತ್ನ ಮಾಡಿದರು. ಆದರೆ, ಚೆಂಡು ವಿಕೆಟ್ ಕೀಪರ್ ಅಲೆಕ್ಸ್ ಕ್ಯಾರಿ ಗ್ಲೌಸ್‌ಗೆ ಸೇರಿಕೊಂಡಿತು. ಈ ವೇಳೆ ಆಸೀಸ್ ಆಟಗಾರರ ಅಪೀಲ್ ಅನ್ನು ಮೈದಾನದಲ್ಲಿದ್ದ ಅಂಪೈರ್ ತಿರಸ್ಕರಿಸಿದ್ದರು. ಆದರೆ, ಡಿಆರ್‌ಎಸ್‌ನಲ್ಲೂ ಚೆಂಡು ಬ್ಯಾಟ್‌ಗೆ ತಗುಲದೇ ಸಾಗಿದ್ದು ಸ್ಪಷ್ಟವಾಗಿದ್ದರೂ, ಥರ್ಡ್ ಅಂಪೈರ್ ಬಾಂಗ್ಲಾದೇಶದ ಶರ್ಫದ್ದುಲ್ಲಾ ಸೈಕಟ್ ಔಟೆಂದು ತೀರ್ಪು ನೀಡಿದರು. ಇದರಿಂದ ಜೈಸ್ವಾಲ್ ನಿರಾಸೆಗೊಂಡು ಪೆವಿಲಿಯನ್‌ನತ್ತ ಹೆಜ್ಜೆ ಹಾಕುವಂತಾಯಿತು.
ಇನ್ನೊಂದೆಡೆ ವಾಷಿಂಗ್ಟನ್ ಸುಂದರ್ ೪೫ ಎಸೆತಗಳನ್ನು ಆಡಿ ೫ ರನ್ ಗಳಿಸಿ ಡ್ರಾಗೆ ಯತ್ನಿಸಿದರೆ, ಮತ್ತೊಂದೆಡೆ ತಂಡದ ಬಾಲಂಗೋಚಿಗಳು ಪೆವಿಲಿಯನ್ ಪರೇಡ್ ನಡೆಸಿದರು. ಇದರಿಂದ ಕೇವಲ ೩೪ ರನ್‌ಗಳ ಅಂತರದಲ್ಲಿ ಭಾರತ ೭ ವಿಕೆಟ್ ಕಳೆದುಕೊಂಡು ಆಲೌಟ್ ಆಗುವ ಮೂಲಕ ಸೋಲುಂಡಿತು.
ಸಂಕ್ಷಿಪ್ತ ಸ್ಕೋರ್: ಆಸ್ಟ್ರೇಲಿಯಾ ೪೭೪ ಹಾಗೂ ೨೩೪ ರನ್. ಭಾರತ ೩೬೯ ಹಾಗೂ ೧೫೫ಕ್ಕೆ ಆಲೌಟ್. ಆಸ್ಟ್ರೇಲಿಯಾಗೆ ೧೮೪ ರನ್ ಜಯ. ಪಂದ್ಯಶ್ರೇಷ್ಠ: ಪ್ಯಾಟ್ ಕಮಿನ್ಸ್
ಸೋಲಿಗೆ ೫ ಕಾರಣಗಳು
೧) ೪ನೇ ದಿನದಾಟದಲ್ಲಿ ಯಶಸ್ವಿ ಜೈಸ್ವಾಲ್ ಕೈ ಚೆಲ್ಲಿದ ಪ್ರಮುಖ ಕ್ಯಾಚ್‌ಗಳು
೨) ಕೆ.ಎಲ್.ರಾಹುಲ್, ರೋಹಿತ್ ಶರ್ಮಾ & ವಿರಾಟ್ ವೈಫಲ್ಯ
೩) ಯಶಸ್ವಿ ಜೈಸ್ವಾಲ್ ವಿಚಾರದಲ್ಲಿ ಥರ್ಡ್ ಅಂಪೈರ್ ತಪ್ಪು ನಿರ್ಣಯ
೪) ೪ನೇ ದಿನದಾಟದಲ್ಲಿ ಆಸೀಸ್‌ನ ೧೦ನೇ ವಿಕೆಟ್ ಜೊತೆಯಾಟ
೫) ೨ನೇ ಇನ್ನಿಂಗ್ಸ್‌ನಲ್ಲಿತಾಳ್ಮೆ ವಹಿಸದೇ ರಿಶಬ್ ಪಂತ್ ಔಟಾಗಿದ್ದು.
೩.೫೦ ಲಕ್ಷ ಮಂದಿ
ಮೆಲ್ಬೋರ್ನ್ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯ ವೀಕ್ಷಿಸಲು ಜನಸಾಗರವೇ ಹರಿದು ಬಂದಿದೆ. ಕಳೆದ ೫ ದಿನಗಳಲ್ಲಿ ಒಟ್ಟು ೩ ಲಕ್ಷ ೫೦ ಸಾವಿರದ ೭೦೦ ಮಂದಿ ಸ್ಟೇಡಿಯಂನಲ್ಲಿ ಬಂದು ಪಂದ್ಯ ವೀಕ್ಷಿಸಿದ್ದಾರೆ. ಇದಕ್ಕೂ ಮುನ್ನ ೧೯೩೭ರ ಆಶಸ್ ಟೆಸ್ಟ್ ಸರಣಿಯಲ್ಲಿ ೩,೫೦,೫೩೫ ಮಂದಿ ಇದೇ ಸ್ಟೇಡಿಯಂನಲ್ಲಿ ಕೂತು ಪಂದ್ಯ ವೀಕ್ಷಿಸಿದ್ದರು. ಅಷ್ಟೇ ಅಲ್ಲದೇ, ಕೋಲ್ಕತ್ತಾದ ಈಡನ್ ಗಾರ್ಡನ್‌ನಲ್ಲಿ ನಡೆದ ೧೯೯೯ರ ಇಂಡೋ-ಪಾಕ್ ಪಂದ್ಯದಲ್ಲಿ ೪.೬೫ ಲಕ್ಷ ಮಂದಿ ನಂತರ ದಾಖಲಾದ ಅತ್ಯಧಿಕ ಮಂದಿ ಎಂದೂ ಕೂಡ ಈ ಪಂದ್ಯ ಕರೆಸಿಕೊಂಡಿದೆ.