ಸ್ವಾತಿ ಹತ್ಯೆ: ಸಮರ್ಪಕ ತನಿಖೆಗಾಗಿ ಸಿಬಿಐಗೆ ಕೊಡಿ

0
27

ಹಾವೇರಿ: ರಟ್ಟೀಹಳ್ಳಿ ತಾಲೂಕು ಮಾಸೂರಿನ ನರ್ಸ್ ಸ್ವಾತಿ ಬ್ಯಾಡಗಿ ಹತ್ಯೆ ಪ್ರಕರಣದ ಆರೋಪಿ ನಯಾಜ್‌ಗೆ ಹಲಗೇರಿ ಪೊಲೀಸರು ಸೆಲ್‌ನಲ್ಲಿ ಇರುವಾಗಲೇ ಮೊಬೈಲ್‌ನಲ್ಲಿ ಮಾತನಾಡಲು ಅವಕಾಶ ನೀಡುತ್ತಿದ್ದು, ನ್ಯಾಯ ಸಮ್ಮತ ತನಿಖೆಯ ಅನುಮಾನ ಕಾಡುತ್ತಿದೆ ಎಂದು ಸ್ವಾತಿ ಕುಟುಂಬಸ್ಥರು ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ಎದುರು ಅಳಲು ತೋಡಿಕೊಂಡರು.
ಸ್ವಾತಿ ದೊಡ್ಡಪ್ಪ ರಾಜಪ್ಪ ಬ್ಯಾಡಗಿ ಅವರು ಹಲಗೇರಿ ಠಾಣೆಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಆರೋಪಿ ನಯಾಜ್‌ಗೆ ಠಾಣೆ ಸೆಲ್‌ನಲ್ಲಿಯೇ ಮೊಬೈಲ್‌ನಲ್ಲಿ ಮಾತನಾಡುತ್ತಿರುವುದನ್ನು ಗಮನಿಸಿದ್ದರು. ಈ ಬಗ್ಗೆ ಪೊಲೀಸರನ್ನು ಪ್ರಶ್ನಿಸಿದಾಗ ಸೂಕ್ತ ಸ್ಪಂದನೆ ಸಿಕ್ಕಿಲ್ಲ. ಹೀಗಾಗಿ ಕುಟುಂಬಸ್ಥರಲ್ಲಿ ತನಿಖೆಯ ಬಗ್ಗೆ ಅನುಮಾನ ಕಾಡುತ್ತಿದೆ ಎಂದು ಸಚಿವರ ಗಮನಕ್ಕೆ ತಂದಿದ್ದಾರೆ.
ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲರು ಸ್ವಾತಿ ಬ್ಯಾಡಗಿ ಮನೆಗೆ ಭೇಟಿದಾಗ ಕುಟುಂಬಸ್ಥರು ಈ ಆರೋಪ ಮಾಡಿದರು. ನಮ್ಮ ಮಗಳ ಸಾವಿಗೆ ನ್ಯಾಯ ಸಿಗಬೇಕು, ಸಾವಿನ ತನಿಖೆಯನ್ನು ಸಿಬಿಐಗೆ ವಹಿಸಬೇಕು ಎಂದು ಆಗ್ರಹಿಸಿದರು.
ಈ ವೇಳೆ ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ಮಾತನಾಡಿ, ನಾವು ಮತ್ತು ಸ್ಥಳೀಯ ಶಾಸಕರು ಸೇರಿ ಈ ಪ್ರಕರಣದಲ್ಲಿ ನ್ಯಾಯ ಒದಗಿಸುವ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಭರವಸೆ ನೀಡಿದರು. ಈ ಪ್ರಕರಣದ ಪಾರದರ್ಶಕ ತನಿಖೆ ನಡೆಸಿ, ಆರೋಪಿಗೆ ಶಿಕ್ಷೆ ಕೊಡಿಸಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಸೂಚನೆ ನೀಡಿದರು.

Previous articleವ್ಯಕ್ತಿ ಅಪಹರಿಸಿ 20 ಲಕ್ಷ ರೂ. ದೋಚಿದ ದುಷ್ಕರ್ಮಿಗಳು
Next articleಪಿಐ ಹುದ್ದೆ ಸೃಜಿಸಲು ಗೃಹ ಸಚಿವರು ಅಂಕಿತ: ಶಾಸಕ ತುನ್ನೂರು