ಸಾಮಾನ್ಯ ಜನರ ಬದುಕು ಸಂಕಷ್ಟಕ್ಕೀಡಾಗಿದೆ

0
13

ಬೆಂಗಳೂರು: ಕೇಂದ್ರದಲ್ಲಿ ನರೇಂದ್ರ ಮೋದಿ ಅವರು 10 ವರ್ಷಗಳ ಕಾಲ ಸಂವಿಧಾನದ ಧ್ಯೇಯೋದ್ದೇಶಗಳನ್ನು ಈಡೇರಿಸುವ ಪ್ರಯತ್ನವನ್ನೇ ಮಾಡಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಕುಷ್ಟಗಿಯಲ್ಲಿ ಆಯೋಜಿಸಿದ್ದ ಪ್ರಜಾಧ್ವನಿ – ಲೋಕಸಭಾ ಚುನಾವಣಾ ಪ್ರಚಾರ ಸಭೆಯಲ್ಲಿ ಭಾಗವಹಿಸಿ ಪಕ್ಷದ ಅಭ್ಯರ್ಥಿಯಾದ ರಾಜಶೇಖರ್ ಹಿಟ್ನಾಳ್ ಅವರಿಗೆ ಮತ ನೀಡಿ ಆಶೀರ್ವದಿಸುವಂತೆ ಮತದಾರರಲ್ಲಿ ಮನವಿ ಮಾಡಿರುವ ಅವರು ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿದ್ದು ರೈತರು, ಹಿಂದುಳಿದವರು, ಬಡವರು, ಅಲ್ಪಸಂಖ್ಯಾತರಿಗೆ ದೊಡ್ಡ ಅನ್ಯಾಯ ಮಾಡಿ ಅವರ ಬದುಕು ದುಸ್ತರಗೊಳಿಸಿದ್ದಾರೆ. ಬೆಲೆಯೇರಿಕೆ, ಹಣದುಬ್ಬರದಿಂದ ಸಾಮಾನ್ಯ ಜನರ ಬದುಕು ಸಂಕಷ್ಟಕ್ಕೀಡಾಗಿದೆ. ಈ ಪರಿಸ್ಥಿತಿ ಬದಲಾಗಬೇಕು ಎಂದಾದರೆ ಕಾಂಗ್ರೆಸ‌ಗೆ ಮತ ನೀಡಿ. ಸಮ್ಮಿಶ್ರ ಸರ್ಕಾರದಲ್ಲಿ ಮುಖ್ಯಮಂತ್ರಿಯಾಗಿ ಹೆಚ್ .ಡಿ. ಕುಮಾರಸ್ವಾಮಿ ಹಾಗೂ 3 ವರ್ಷ 10 ತಿಂಗಳು ಆಡಳಿತ ಮಾಡಿದ ಬಿಜೆಪಿ ಸರ್ಕಾರ ಏನೂ ಮಾಡಿಲ್ಲ. ಯಡಿಯೂರಪ್ಪ , ಬಸವರಾಜ ಬೊಮ್ಮಾಯಿ ಇಬ್ಬರೂ ಮುಖ್ಯಮಂತ್ರಿಗಳಾದರೂ ಅಭಿವೃದ್ಧಿಗೆ ಆದ್ಯತೆ ನೀಡಿಲ್ಲ. ಕರ್ನಾಟಕದಲ್ಲಿ ಲೂಟಿ ಹೊಡೆಯುತ್ತಿದ್ದರು. ಅದಕ್ಕಾಗಿಯೇ ರಾಜ್ಯ ಗುತ್ತಿಗೆದಾರರ ಸಂಘದವರು 40% ಸರ್ಕಾರ ಎಂದು ಕರೆದರು. ತನಿಖೆ ಮಾಡಿಸಿ, ನಾವು ಸಾಕ್ಷಿ ಕೊಡುತ್ತೇವೆಂದು ಸಂಘದವರು ಹೇಳಿದರೂ ಬಸವರಾಜ ಬೊಮ್ಮಾಯಿ ಅವರು ಒಪ್ಪಲಿಲ್ಲ. ನಾವು ಅಧಿಕಾರಕ್ಕೆ ಬಂದ ನಂತರ ಹಿಂದಿನ ಸರ್ಕಾರದ 40% ಕಮಿಷನ್ ಬಗ್ಗೆ ತನಿಖೆ ಮಾಡಲು ಆಯೋಗ ರಚನೆ ಮಾಡಿದ್ದೇವೆ. ಅವರು ತಪ್ಪಿತಸ್ಥರು ಎಂದು ಗೊತ್ತಾದರೆ ಖಂಡಿತವಾಗಿ ಕಠಿಣ ಕ್ರಮ ತೆಗೆದುಕೊಂಡು ಕರ್ನಾಟಕ ರಾಜ್ಯದ ರಕ್ಷಣೆ ಮಾಡುತ್ತೇವೆ. ಕಾಂಗ್ರೆಸ್ ಪಕ್ಷ ಕರ್ನಾಟಕದಲ್ಲಿ ಐದು ಗ್ಯಾರಂಟಿಗಳನ್ನು ಜಾರಿ ಮಾಡಿದ ಮೇಲೆ ಎ.ಐ.ಸಿ.ಸಿ ಕೂಡ ಗ್ಯಾರಂಟಿ ಗಳನ್ನು ಘೋಷಣೆ ಮಾಡಿದೆ. ಕಾಂಗ್ರೆಸ್ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದರೆ ಬಡ ಕುಟುಂಬದ ಮಹಿಳೆಗೆ 1 ಲಕ್ಷ ರೂಪಾಯಿ ಕೊಡುತ್ತೇವೆ ಎಂದು ಹೇಳಿದ್ದಾರೆ. ತಿಂಗಳಿಗೆ 8,500 ರೂ.ಗಳು ದೊರೆಯಲಿದೆ. ಕುಟುಂಬ ನಡೆಸಲು, ಜನರ ಕೊಳ್ಳುವ ಶಕ್ತಿ ಹೆಚ್ಚಿಸಲು ಈ ಘೋಷಣೆ ಮಾಡಲಾಗಿದೆ. ನಿರುದ್ಯೋಗಿ ಯುವಕರಿಗೆ 1 ಲಕ್ಷ ರೂ. ಹಾಗೂ ರೈತರ ಸಂಪೂರ್ಣ ಸಾಲ ಮನ್ನಾ ಮಾಡಲಾಗುವುದು. ಶಕ್ತಿ ಯೋಜನೆಯಡಿ ಇದುವರೆಗೆ 200 ಕೋಟಿ ಬಾರಿ ಮಹಿಳೆಯರು ಉಚಿತವಾಗಿ ಸರ್ಕಾರಿ ಬಸ್ಸುಗಳಲ್ಲಿ ಓಡಾಡಿದ್ದಾರೆ. ಶಕ್ತಿ ಯೋಜನೆಯ ಲಾಭವನ್ನು ಸ್ಮರಿಸಿ ಮಹಿಳೆಯರು ಪ್ರಶಂಸೆಯ ಮಾತುಗಳನ್ನಾಡುತ್ತಾರೆ. ಕಳೆದ ವಾರ ಫಲಾನುಭವಿ ಯುವತಿಯೊಬ್ಬಳು ಉಚಿತ ಟಿಕೇಟ್‌ಗಳಿಂದ ತಯಾರಿಸಿದ ಹಾರ ಹಾಕಿ ಧನ್ಯವಾದ ಅರ್ಪಿಸಿದಳು ಎಂದಿದ್ದಾರೆ.

Previous articleಮೋದಿ ಕಾಂಗ್ರೆಸ್‌ಗೆ ಬೈದಷ್ಟು ಒಳ್ಳೆಯದಾಗುತ್ತದೆ: ಖರ್ಗೆ
Next articleಮಾಜಿ ಡಿಸಿಎಂ ದಿ. ಎಂ.ಪಿ. ಪ್ರಕಾಶ್ ಪತ್ನಿ ರುದ್ರಾಂಬ ನಿಧನ