ನ್ಯೂಯಾರ್ಕ್: ಭಾನುವಾರ ನಡೆದ ವಿಶ್ವ ರಾಪಿಡ್ ಚಾಂಪಿಯನ್‌ಶಿಪ್ ಫೈನಲ್ ಪಂದ್ಯದಲ್ಲಿ ಇಂಡೋನೇಷ್ಯಾದ ಐರಿನ್ ಸುಕಂದರ್ ಅವರನ್ನು ಮಣಿಸುವ ಮೂಲಕ ಭಾರತದ ಮಹಿಳಾ ಗ್ರ್ಯಾಂಡ್ ಮಾಸ್ಟರ್ ಕೊನೆರು ಹಂಪಿ ಎರಡನೇ ಬಾರಿ ಚಾಂಪಿಯನ್ ಆಗಿ ಹೊರಹೊಮ್ಮಿದ್ದು, ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ. ೨೦೧೯ರಲ್ಲಿ ಹಂಪಿ ಜಾರ್ಜಿಯಾದಲ್ಲಿ ನಡೆದ ಟೂರ್ನಿ ಗೆದ್ದಿದ್ದರು. ಇದಾದ ಬಳಿಕ ಚೀನಾದ ಜು ವೆಂಜುನ್ ನಂತರ ಒಂದಕ್ಕಿಂತ ಹೆಚ್ಚು ಬಾರಿ ಪ್ರಶಸ್ತಿಯನ್ನು ಗೆದ್ದ ಎರಡನೇ ಆಟಗಾರ ಹಾಗೂ ಮೊದಲ ಭಾರತೀಯ ಎಂಬ ಖ್ಯಾತಿಗೆ ಒಳಗಾಗಿದ್ದಾರೆ. ೩೭ ವರ್ಷದ ಹಂಪಿ ೧೧ ಅಂಕಗಳಲ್ಲಿ ೮.೫ ಅಂಕಗಳನ್ನು ಪಡೆದು ಚಾಂಪಿಯನ್ ಎನ್ನಿಸಿಕೊಂಡರು.
ಪ್ರಧಾನಿ ಮೋದಿ ಪ್ರಶಂಸೆ
ಮಹಿಳಾ ವಿಶ್ವ ರಾಪಿಡ್ ಚೆಸ್ ಚಾಂಪಿಯನ್‌ಶಿಪ್ ಪ್ರಶಸ್ತಿಯನ್ನು ಗೆದ್ದ ನಂತರ ಗ್ರ‍್ಯಾಂಡ್‌ಮಾಸ್ಟರ್ ಕೊನೆರು ಹಂಪಿ ಅವರನ್ನು ಪ್ರಧಾನಿ ನರೇಂದ್ರ ಮೋದಿ ಪ್ರಶಂಸಿಸಿದ್ದು, ಈ ಐತಿಹಾಸಿಕ ಗೆಲುವಿನಿಂದ ಲಕ್ಷಾಂತರ ಮಂದಿಗೆ ಸ್ಫೂರ್ತಿ ಬಂದಿದೆ' ಎಂದಿದ್ದಾರೆ.
ಈ ವಿಜಯವು ವಿಶೇಷವಾಗಿದ್ದು, ಹಂಪಿ ಎರಡನೇ ಬಾರಿ ವಿಶ್ವ ರಾಪಿಡ್ ಚಾಂಪಿಯನ್‌ಶಿಪ್ ಪ್ರಶಸ್ತಿ ಗೆದ್ದಿದ್ದಾರೆ. ಆ ಮೂಲಕ ಈ ಅದ್ಭುತ ಸಾಧನೆಯನ್ನು ಸಾಧಿಸಿದ ಏಕೈಕ ಭಾರತೀಯಳಾಗಿದ್ದಾಳೆ’ ಎಂದು ಸಾಮಾಜಿಕ ಜಾಲತಾಣದಲ್ಲಿ ವರ್ಣಿಸಿದ್ದಾರೆ.