ವಿವೇಕ ಭಾರತ-ಸುಭಾಷ ಸೇನಾಪತ್ಯ

ಜನವರಿ ೧೨ರಂದು ದೇಶದಾದ್ಯಂತ ಸ್ವಾಮಿ ವಿವೇಕಾನಂದರ ಜಯಂತಿಯನ್ನು ಆಚರಿಸಲಾಯಿತು. ಜನವರಿ ೨೩ರಂದು ನೇತಾಜಿ ಸುಭಾಶ್ಚಂದ್ರ ಭೋಸರ ಜಯಂತಿ ಇದೆ. ಭಾರತದ ಈ ಎರಡು ಮಹಾನ್ ಚೇತನಗಳು ದೇಶಕ್ಕಾಗಿ ಮಾಡಿದ ಸೇವೆ ಅನನ್ಯವಾದುದು. ಒಬ್ಬರು ವೀರ ಸನ್ಯಾಸಿಯಾದರೆ ಇನ್ನೊಬ್ಬರು ವೀರ ಸೇನಾನಿ. ವಿವೇಕಾನಂದರು ತಾಯಿ ಭಾರತಮಾತೆಯ ದಾಸ್ಯದ ಸಂಕೋಲೆಗಳನ್ನು ತೊಡೆದುಹಾಕಲು ಬ್ರಿಟಿಷರ ವಿರುದ್ಧ ಹೋರಾಡಲು ಸ್ವಾತಂತ್ರ್ಯ ಹೋರಾಟಗಾರರಿಗೆಲ್ಲ ಪ್ರೇರಣೆ ನೀಡಿದರು. ಸುಭಾಶ್ಚಂದ್ರ ಭೋಸರು ವಿವೇಕಾನಂದರಿಂದ ಪ್ರೇರಣೆ ಪಡೆದು ಸ್ವಾತಂತ್ರ್ಯ ಹೋರಾಟಕ್ಕೆ ತಮ್ಮನ್ನು ತಾವು ಸಮರ್ಪಿಸಿಕೊಂಡರು. ಈರ್ವರೂ ಭಾರತಮಾತೆಯ ಸುಪುತ್ರರಲ್ಲಿ ಅನೇಕ ಸಾಮ್ಯತೆಗಳೂ ಕಂಡುಬರುತ್ತವೆ. ಒಬ್ಬರು ವಿವೇಕದ ಆನಂದ ಮೂರ್ತಿಯಾದರೆ ಇನ್ನೊಬ್ಬರು ವಿವೇಕ ಸೂರ್ಯನ ಬೆಳಕನ್ನೇ ಪ್ರತಿಫಲಿಸಿದ ಸುಭಾಶ ಚಂದ್ರ'ರಾಗಿದ್ದಾರೆ. ಬ್ರಿಟಿಷರು ತಾವು ಭಾರತಕ್ಕೆ ಬಂದುದ್ದಕ್ಕೆ ಮತ್ತು ಅದನ್ನು ವಶಪಡಿಸಿಕೊಂಡು ಆಳುತ್ತಿರುವುದಕ್ಕೆ ಜಗತ್ತಿಗೆಲ್ಲ ಬೇರೆ ಕಾರಣವನ್ನೇ ಕೊಟ್ಟಿದ್ದರು. ಭಾರತೀಯರೆಲ್ಲ ದಟ್ಟ ದರಿದ್ರರು, ಅಶಿಕ್ಷಿತರು, ಅನಾಗರಿಕರು, ಮೈಗೆಲ್ಲ ಬೂದಿ ಬಳೆದುಕೊಂಡು ಕಾಡಿನಲ್ಲಿ ಒಂಟಿಗಾಲ ಮೇಲೆ ನಿಂತು ತಪಸ್ಸನ್ನು ಮಾಡುವವರು, ಹಾವುಗಳನ್ನು ಆಡಿಸುವವರು ಎಂದು ಏನೆಲ್ಲ ತಪುö್ಪ ಗ್ರಹಿಕೆಯನ್ನು ಜಗತ್ತಿನ ತುಂಬ ಹರಡಿದ್ದರು. ಕಷ್ಟದಲ್ಲಿ ಸಿಲುಕಿ ಒದ್ದಾಡುತ್ತಿರುವ ಅವರ ಉದ್ಧಾರಕ್ಕಾಗಿಯೇ ತಾವು ಭಾರತವನ್ನು ಆಳುತ್ತಿರುವುದಾಗಿಯೂ ಭಾರತೀಯರ ನೈಜ ಅಭಿವೃದ್ಧಿ ತಮ್ಮಿಂದ ಮಾತ್ರ ಸಾಧ್ಯ ಅದಕ್ಕಾಗಿ ಭಾರತಕ್ಕೆ ಕ್ರಿಸ್ತನ ಅವಶ್ಯಕತೆ ಇದ್ದು ಮತಪ್ರಚಾರಕ್ಕೆ ಪಾದ್ರಿಗಳನ್ನು ಕಳಿಸುತ್ತಿದ್ದೇವೆ ಎಂದಿದ್ದರು.ಪಾಪ’ದ ಭಾರತೀಯರನ್ನು ಪಾಪಮುಕ್ತರನ್ನಾಗಿ ಮಾಡಲು ಧರ್ಮಪ್ರಚಾರ ಮತ್ತು ಮತಾಂತರ ಮಾಡುವುದನ್ನು ಬ್ರಿಟಿಷರು ಸಮರ್ಥಿಸಿಕೊಂಡಿದ್ದರು. ಇದನ್ನೆಲ್ಲ ಅರಿತ ಸ್ವಾಮೀಜಿ ಜಗತ್ತಿನ ನೂರಾರು ದೇಶಗಳಲ್ಲಿರುವ ಈ ತಪ್ಪು ಗ್ರಹಿಕೆಯನ್ನು ನಿವಾರಿಸಿ, ಭಾರತದ ನೈಜ ಶಕ್ತಿ, ಆಧ್ಯಾತ್ಮ, ಇತಿಹಾಸ ಪರಂಪರೆಗಳನ್ನು ಜಗದ ಮುಂದೆ ತೆರೆದಿಡಲು ನಿರ್ಧರಿಸಿದರು. ಅದಕ್ಕಾಗಿ ಚಿಕಾಗೋದಲ್ಲಿ ೧೮೯೩ರ ಸೆಪ್ಟೆಂಬರ್‌ನಲ್ಲಿ ನಡೆಯಲಿದ್ದ ವಿಶ್ವಧರ್ಮ ಸಮ್ಮೇಳನದಲ್ಲಿ ಭಾಗವಹಿಸಲು ಸಂಕಲ್ಪವನ್ನು ಮಾಡಿದರು. ವಿದೇಶಿ ಪ್ರವಾಸ ಮತ್ತು ಸಮುದ್ರಯಾನ ನಿಷಿದ್ಧದ ಹೊರತಾಗಿಯೂ, ಆ ನಿಯಮಗಳನ್ನು ಮುರಿದಾದರೂ ಸರಿ ಭಾರತಮಾತೆಯ ನೈಜ ಪ್ರಭಾವಕ್ಕೆ ಅಡರಿರುವ ಗ್ರಹಣವನ್ನು ನಿವಾರಿಸುವುದು ಅವರ ಅತ್ಯಂತ ಆದ್ಯತೆಯ ವಿಷಯವಾಗಿತ್ತು.
ಸುಭಾಶ್ಚಂದ್ರ ಭೋಸ್ ಸ್ವಾಭಿಮಾನದ, ಕ್ಷಾತ್ರ ತೇಜದ ಮತ್ತು ಕುದಿಯುವ ಬಿಸಿರಕ್ತದ ದೇಶಭಕ್ತರಾಗಿದ್ದರು. ಮುಳ್ಳನ್ನು ಮುಳ್ಳಿನಿಂದಲೇ ತಗೆಯುವ ರಣನೀತಿಯವರಾಗಿದ್ದರು. ನಮ್ಮ ಸ್ವಾತಂತ್ಯ್ರಕ್ಕಾಗಿ ನಾವೇಕೆ ಬ್ರಿಟಿಷರಿಗೆ ಅಂಗಲಾಚಬೇಕು? ಅವರ ಮುಂದೆ ಕೈ ಒಡ್ಡಿ ಬೇಡಬೇಕು? ಅದು ನಮ್ಮ ಹಕ್ಕು. ಅದನ್ನು ರಕ್ತ ಚೆಲ್ಲಿಯಾದರೂ ಶೂರತನದಿಂದ ಸಂಪಾದಿಸಬೇಕು.'' ಎಂಬುದು ಅವರ ವಿಚಾರಧಾರೆಯಾಗಿತ್ತು. ಅದಕ್ಕಾಗಿ ಅವರು ವೇಷ ಮರೆಸಿಕೊಂಡು ಬ್ರಿಟಿಷರ ಗೃಹಬಂಧನದಿಂದ ಪಾರಾಗಿ ಪಾಕ್, ಅಫಘಾನಗಳ ಮೂಲಕ, ರಶಿಯಾ, ಜರ್ಮನ್, ಜಪಾನ್‌ಗಳಿಗೆ ಹೋದರು. ಲಕ್ಷಾಂತರ ಸೈನಿಕರನ್ನು ಸಂಘಟಿಸಿದರು. ಇಂಡಿಯನ್ ನ್ಯಾಷನಲ್ ಆರ್ಮಿಯನ್ನು ಸ್ಥಾಪಿಸಿದರು. ಬ್ರಿಟಿಷರ ವಿರುದ್ಧ ದಂಡೆತ್ತಿ ಬಂದರು. ಬರ್ಮಾ ದೇಶದ ಮೂಲಕ ದಾಳಿ ನಡೆಸಿದರು. ಅರುಣಾಚಲವನ್ನು ಪ್ರವೇಶಿಸಿ ಭಾರತದ ವಿಜಯಪತಾಕೆಯನ್ನು ಹಾರಿಸಿದರು. ದೇಶದ ಮೊದಲ ಪ್ರಧಾನಿಯನ್ನಾಗಿ ಜಪಾನ್, ಜರ್ಮನ್‌ಗಳು ಅವರನ್ನು ಗುರುತಿಸಿದರು, ಗೌರವಿಸಿದರು. ಸ್ವಾಮಿ ವಿವೇಕಾನಂದರು ಜಗತ್ತಿನ ಮೂಲೆ ಮೂಲೆಗಳಿಂದ ಬಂದ ವಿವಿಧ ಜಾತಿ, ಮತ, ಪಂಥ, ಧರ್ಮ, ನಂಬಿಕೆ ಮತ್ತು ಸಿದ್ಧಾಂತಗಳನ್ನು ಪ್ರತಿನಿಧಿಸಿದ ೪೦೦೦ ವಿದ್ವನ್ಮಣಿಗಳು, ಮೇಧಾವಿಗಳು, ಸಂತರು, ಪಾದ್ರಿಗಳು, ಫಕೀರರು ಮತ್ತು ಮೌಲ್ವಿಗಳು ಭಾಗವಹಿಸಿದ್ದ ವಿಶ್ವಧರ್ಮ ಸಮ್ಮೇಳನದಲ್ಲಿ ತಮ್ಮ ೨ ನಿಮಿಷದ ಭಾಷಣದಿಂದಲೇ ವಿಶ್ವವಿಜೇತರಾದರು. ಭಾರತೀಯರೆಂದರೆ ಆಳಿಸಿಕೊಳ್ಳಲೇ ಯೋಗ್ಯರು. ತಮ್ಮನ್ನು ತಾವು ಆಳಿಕೊಳ್ಳಲಾರರು ಎಂದು ತುಚ್ಛವಾಗಿ ಕಾಣುತ್ತಿದ್ದ ಜರ್ಮನಿಯ ಸರ್ವಾಧಿಕಾರಿ ಹಿಟ್ಲರ್ ಮತ್ತು ಇಟಲಿ ದೇಶದ ಮುಸಲೋನಿ ಅವರು ಭಾರತದ ಭರವಸೆಯ ನಾಯಕನನ್ನು ಸುಭಾಶ್ಚಂದ್ರ ಭೋಸರಲ್ಲಿ ಕಂಡರು. ಯಾವೊಬ್ಬ ಭಾರತೀಯನಿಗಿಂತಲೂ ಸುಭಾಷರನ್ನು ಅತ್ಯಂತ ಗೌರವದಿಂದ ಕಂಡರು ಹಾಗೂ ನಡೆದುಕೊಂಡರು. ಕೋಟ್ಯಂತರ ಭಾರತೀಯರನ್ನು ಉದ್ದೇಶಿಸಿ ವಿದೇಶಿ ನೆಲ ಜಪಾನ್‌ನಿಂದ ರೇಡಿಯೋದಲ್ಲಿ ಭಾಷಣ ಮಾಡಿದರು. ಸುಭಾಶ್ಚಂದ್ರ ಭೋಸರು ಭರವಸೆಯನ್ನು ಕಳೆದುಕೊಂಡು ನಿರಾಶರಾಗಿದ್ದ ಭಾರತೀಯರಲ್ಲಿ ಹೊಸ ಆಸೆ, ಉತ್ಸಾಹ ಮತ್ತು ಆತ್ಮವಿಶ್ವಾಸವನ್ನು ಮೂಡಿಸಿದರು. ವಿದೇಶದಲ್ಲಿ ಅವರದೇ ವೇದಿಕೆಗಳಲ್ಲಿ ಅವರ ಆತಿಥ್ಯದ ಮೇರೆಗೆ ಹೋಗಿ ಅವರನ್ನೇ ಉದ್ಧೇಶಿಸಿ ಮಾತನಾಡಿ ಅವರ ತಪ್ಪನ್ನು ಎತ್ತಿ ತೋರಿಸುವ ಪ್ರಚಂಡ ಧೈರ್ಯವನ್ನು ವಿವೇಕಾನಂದರು ತೋರಿದರು. ವಿದೇಶಗಳ ಪ್ರವಾಸ ಮಾಡಿ, ಅಲ್ಲಿಯ ನೇತಾರರ ಸಹಾಯ ಪಡೆದು, ಬ್ರಿಟಿಷರ ಬಗೆಗೆ ಅವರಿಗಿದ್ದ ಸಿಟ್ಟು, ವೈರತ್ವವನ್ನೇ ಉಪಯೋಗಿಸಿಕೊಂಡು, ಜನ, ಧನ, ಅಧಿಕಾರದ ಬೆಂಬಲ ಪಡೆದು ಸೈನ್ಯ ಕಟ್ಟಿದವರು ಸುಭಾಶ್ಚಂದ್ರರು. ನನಗೆ ಉಕ್ಕಿನ ನರಗಳುಳ್ಳ, ಕಬ್ಬಿಣದ ಸ್ನಾಯುಗಳುಳ್ಳ.. ನೂರು ಯುವಕರನ್ನು ಕೊಡಿ ಭಾರತದ ಚಿತ್ರವನ್ನೇ ಬದಲಿಸಿ ಬಿಡುತ್ತೇನೆ” ಎಂದು ವಿವೇಕಾನಂದರು ಘರ್ಜಿಸಿದರು. ಸ್ವಾತಂತ್ರ÷್ಯ ಹಾಗೇ ಸಿಗದು, ನೀವು ನನಗೆ ರಕ್ತ ಕೊಡಿ. ನಾನು ನಿಮಗೆ ಸ್ವಾತಂತ್ರ÷್ಯ ಕೊಡುತ್ತೇನೆ'' ಎಂದು ನೇತಾಜಿ ಗುಡುಗಿದರು. ಬಾಲ್ಯದಿಂದಲೂ ಮುಕ್ತಿ, ಮೋಕ್ಷಕ್ಕಾಗಿ ದೇವರನ್ನು ನೋಡಲು ಬಯಸಿದವರು ವಿವೇಕರು. ಆದರೆ ರಾಮಕೃಷ್ಣ ಪರಮಹಂಸರ ಭೇಟಿಯ ನಂತರ ವೈಯಕ್ತಿಕ ಮೋಕ್ಷದ ಸ್ವಾರ್ಥ ತ್ಯಾಗ ಮಾಡಿ, ತಾಯಿ ಭಾರತೀಯ ದಾಸ್ಯ ಬಿಡಿಸಲು ಮತ್ತು ಅವಳ ಸೇವೆ ಮಾಡಲು ಬರುವುದಾದರೆ ತಾನು ಸಾವಿರ ಸಲವಾದರೂ ಜನ್ಮ ತಳೆದು ಬರುತ್ತೇನೆ. ನನಗೆ ಮೋಕ್ಷ ಬೇಡವೆನ್ನುತ್ತಾರೆ. ದಾಖಲೆಯ ೮ ತಿಂಗಳ ತಯಾರಿಯಿಂದಲೇ ಮೊದಲ ಪ್ರಯತ್ನದಲ್ಲೇ ಐಸಿಎಸ್ ಪರೀಕ್ಷೆಯನ್ನು ೪ನೇ ರ‍್ಯಾಂಕಿನೊಂದಿಗೆ ಪಾಸ್ ಮಾಡಿದವರು ಸುಭಾಷ. ಈ ಅರ್ಹತೆಯಿಂದಾಗಿ ಕಲ್ಕತ್ತದ ಜಿಲ್ಲಾಧಿಕಾರಿ ಹುದ್ದೆ ಕೈ ಮಾಡಿ ಕರೆದರೂ,ನಾನು ಐಸಿಎಸ್ ಪರೀಕ್ಷೆ ಪಾಸ್ ಮಾಡಿದ್ದು ನನ್ನ ಸಾಮರ್ಥ್ಯವನ್ನು ಸಾಬೀತುಪಡಿಸುವುದಕ್ಕೆ ಹೊರತು, ಜಿಲ್ಲಾಧಿಕಾರಿಯಾಗಿ ಬ್ರಿಟಿಷರ ಬೂಟುಗಾಲು ನೆಕ್ಕುವುದಕಲ್ಲ” ಎಂದು ವೀರೋಚಿತವಾಗಿ ಧಿಕ್ಕರಿಸುತ್ತಾರೆ.
ಕುರುಕ್ಷೇತ್ರ ಯುದ್ಧದಲ್ಲಿ ಧೃತಿಗೆಟ್ಟ ಅರ್ಜುನ ಬಿಲ್ಲು ಬಾಣ ಬಿಸಲು ಯುದ್ಧ ಮಾಡಲೊಲ್ಲೆನೆಂದು ನಿಂತಾಗ ಶ್ರೀ ಕೃಷ್ಣನು ತನ್ನ ವಿರಾಟ ರೂಪದರ್ಶನ ಮಾಡಿಸುತ್ತಾನೆ. ನೀನು ನೆಪಮಾತ್ರ ಆಗುವುದೆಲ್ಲ ತನ್ನ (ದೇವನ) ಇಚ್ಛೆಯಂತೆ. ಸ್ವಜನ, ಬಂಧುಗಳು, ಸ್ನೇಹಿತರೆನ್ನದೇ ಧರ್ಮದ ಪಕ್ಷಪಾತಿಯಾಗು'' ಎನ್ನುತ್ತಾನೆ. ತಮ್ಮ ಹಿರಿಮೆ, ಗರಿಮೆ, ಪರಾಕ್ರಮ, ಅನನ್ಯತೆಗಳನ್ನು ಮರೆತು ಬ್ರಿಟಿಷರ ದಾಸ್ಯದಲ್ಲಿ ಸಿಲುಕಿ ಘೋರ ಅಂಧಕಾರದಲ್ಲಿದ್ದ ಭಾರತೀಯರಿಗೆ ಸ್ವಾಮಿ ವಿವೇಕಾನಂದರು ಜಾಗೃತಿಗೊಳಿಸುತ್ತಾರೆ. ಮಲಗಿದ ಅವರ ದೇಶಭಕ್ತಿ, ಸ್ವಾಭಿಮಾನವನ್ನು ಕೆರಳಿಸುತ್ತಾರೆ. ಅವರತನವನ್ನು ಬಡಿದೆಬ್ಬಿಸುತ್ತಾರೆ. ಗೀತೋಪದೇಶ ಮಾಡಿ `ಎಲ್ಲ ತನ್ನಿಂದಲೇ' ಎಂಬ ಅರ್ಜುನನ ಅಜ್ಞಾನವನ್ನು ಶ್ರೀಕೃಷ್ಣ ಹೋಗಲಾಡಿಸುತ್ತಾನೆ. ಇಲ್ಲಿ ವಿವೇಕಾನಂದರು ಸಾವಿರ ವರುಷಗಳ ಪರಕೀಯ ಆಕ್ರಮಣದಿಂದ ಕ್ಲೆಬ್ಯವನ್ನು ತೊರೆದು ಸಾಹಸವನ್ನು ಮೆರೆಸುವಂತೆ ಭಾರತೀಯರನ್ನು ಹುರಿದುಂಬಿಸುತ್ತಾರೆ. ಭಾರತಕ್ಕೆ ಸ್ವಾತಂತ್ರ್ಯ ಬರುವ ಸಂದರ್ಭದಲ್ಲಿ ೧೯೪೭ರಲ್ಲಿ ಕ್ಲಿಮೆಂಟ್ ಆಟ್ಲೀ ಅವರು ಇಂಗ್ಲೆಂಡಿನ ಪ್ರಧಾನಿಯಾಗಿದ್ದರು. ಮುಂದೊಂದು ದಿನ ಅವರು ಪಶ್ಚಿಮ ಬಂಗಾಳದ ರಾಜ್ಯಪಾಲರಾಗಿದ್ದ ಚಕ್ರವರ್ತಿ ಅವರ ಅಹ್ವಾನದಂತೆ ಕಲ್ಕತ್ತಾಗೆ ಬಂದಾಗ ಪ್ರಶ್ನೆಯೊಂದಕ್ಕೆ ಖಾಸಗಿಯಾಗಿ ಉತ್ತರಿಸುತ್ತಾರೆ. ಚಕ್ರವರ್ತಿ ಅವರದುಬ್ರಿಟಿಷರು ನಿಜಕ್ಕೂ ಸತ್ಯಾಗ್ರಹ, ಉಪವಾಸಗಳಿಗೆ ಅಂಜಿ ಸ್ವಾತಂತ್ರ್ಯ ಕೊಟ್ಟರಾ?” ಅನ್ನುವ ಕುತೂಹಲದ ಪ್ರಶ್ನೆ ಚಕ್ರವರ್ತಿಯವರದಾಗಿತ್ತು. ಅದಕ್ಕೆ ನಸುನಕ್ಕ ಆಟ್ಲೀ. ಅದರ ಪ್ರಭಾವ ತುಂಬಾ ಕಡಿಮೆ. ನಾವು ನಿಜಕ್ಕೂ ಗಾಬರಿಗೊಂಡದ್ದು ೧೮೫೭ರಲ್ಲಿ ತಮ್ಮ ಎಲ್ಲ ಭೇದ-ಭಾವ ಮರೆತು ಇಡೀ ದೇಶದಾದ್ಯಂತ ಭಾರತೀಯ ಆಡಳಿತಗಾರರು ಒಟ್ಟಿಗೆ ಬ್ರಿಟಿಷರ ವಿರುದ್ಧ ಬಂಡೆದ್ದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮಕ್ಕೆ. ಇನ್ನೊಂದು ಅಂದರೆ ಭಾರತದಿಂದ ಹೊರಗಿದ್ದು, ವಿದೇಶದಲ್ಲಿ ಲಕ್ಷಾಂತರ ಸೈನಿಕರ ಆಜಾದ್ ಹಿಂದ್ ಘೌಜ್‌ನ್ನು ಕಟ್ಟಿದ ಸುಭಾಸ್ಚಂದ್ರ ಬೋಸ್‌ರ ಬಗ್ಗೆ ನಮಗೂ ನಿಜಕ್ಕೂ ಭಯವಾಗಿತ್ತು. ಹೀಗಾಗಿ ಇನ್ನು ನಮ್ಮ ಆಡಳಿತ ಮುಂದುವರೆಸಲು ಅಸಾಧ್ಯವೆಂದು ಮನಗಂಡು ಗೌರವಯುತವಾಗಿ ಇಂಗ್ಲೆಂಡಿಗೆ ತೆರಳಲು ಅನಿವಾರ್ಯವಾಗಿ ಭಾರತವನ್ನು ಸ್ವಾತಂತ್ರ್ಯಗೊಳಿಸಬೇಕಾಯಿತು ಎಂದರು. ಇದರಿಂದ ಸುಭಾಶ್ಚಂದ್ರ ಬೋಸ್‌ರ ಹೋರಾಟದ ಬಿಸಿ ಬ್ರಿಟಿಷರಿಗೆ ಅದೆಷ್ಟು ತಾಗಿತ್ತೆಂದು ಗೊತ್ತಾಗುತ್ತದೆ. ಒಂದು ಕಾಲಕ್ಕೆ ಕ್ರಾಂತಿಕಾರಿಗಳಾದ ಶ್ರೀ ಅರವಿಂದ ಘೋಷ ಹೇಳುತ್ತಾರೆ.ವಿವೇಕಾನಂದರು ಅಪಾರವಾದ ಶಕ್ತಿಯ ಗಣಿ. ಪುರುಷರಲ್ಲಿ ಪುರುಷ ಸಿಂಹ. ಇಂದಿಗೂ ಅವರ ಅದಮ್ಯವಾದ ಕಾರ್ಯಶೀಲತೆ ಜಾಗೃತವಾಗಿರುವುದನ್ನು ಕಾಣಬಹುದು”.
ಎಲ್ಲವೂ ವಿರಾಟ ರೂಪಿಯಾದ ಶ್ರೀಕೃಷ್ಣನಲ್ಲಿರುವಂತೆ ವಿವೇಕಾನಂದರ ಮೈಮನದ ತುಂಬ ಭಾರತವಿದೆ. ಹೀಗಾಗಿ ಭಾರತವನ್ನು ಅರಿಯಬೇಕಿದ್ದರೆ ಸ್ವಾಮೀಜಿಯನ್ನು ಅಧ್ಯಯನ ಮಾಡಿ. ಅಲ್ಲಿ ಎಲ್ಲವೂ ರಚನಾತ್ಮಕವಾಗಿದೆ. ಯಾವುದೂ ಋಣಾತ್ಮಕವಾಗಿಲ್ಲ'' ಎಂದು ರವೀಂದ್ರನಾಥ ಠಾಕೂರರೆನ್ನುತ್ತಾರೆ.ಸ್ವಾಮಿ ವಿವೇಕಾನಂದರ ಕೃತಿಗಳ ಆಮೂಲಾಗ್ರ ಓದಿನಿಂದ ಭಾರತದ ಬಗೆಗಿದ್ದ ನನ್ನ ಪ್ರೀತಿ ಸಾವಿರ ಪಟ್ಟು ಹೆಚ್ಚಿತು” ಎಂದು ಗಾಂಧೀಜಿ ಹೇಳುತ್ತಾರೆ. ಸ್ವಾಮೀಜಿ ತಮ್ಮ ನುಡಿಗಳಿಂದ ನಮ್ಮ ದೇಶದ ಜನ ಹಿಂದೆಂದೂ ಕಾಣದ ಆತ್ಮಗೌರವ, ಆತ್ಮವಿಶ್ವಾಸ ಹಾಗೂ ಆತ್ಮಬಲಗಳನ್ನು ಪಡೆದರೆಂದು ಸ್ವತಃ ಸುಭಾಷ್‌ಚಂದ್ರ ಬೋಸ್ ಹೇಳುತ್ತಾರೆ.
ಚಕ್ರವರ್ತಿ ರಾಜಗೋಪಾಲಚಾರಿ ಅವರು ಒಂದು ಹೆಜ್ಜೆ ಮುಂದೆ ಹೋಗಿ ಹೇಳುತ್ತಾರೆ “ಸ್ವಾಮಿ ವಿವೇಕಾನಂದರು ಹಿಂದೂಧರ್ಮವನ್ನು ರಕ್ಷಿಸಿದರು. ಭಾರತವನ್ನು ರಕ್ಷಿಸಿದರು. ಅವರು ಬರದೇ ಇದ್ದಿದ್ದರೆ ನಾವು ನಮ್ಮ ಧರ್ಮವನ್ನು ಕಳೆದುಕೊಳ್ಳುತ್ತಿದ್ದೆವು. ಅಲ್ಲದೆ ನಮಗೆ ಸ್ವಾತಂತ್ರ್ಯವೂ ದೊರೆಯುತ್ತಿರಲಿಲ್ಲ”. ಈ ಮಾತುಗಳು ಸ್ವಾತಂತ್ರ್ಯ ಹೋರಾಟಗಾರರೆಲ್ಲರೂ ಸ್ವಾಮಿ ವಿವೇಕಾನಂದರಿಂದ ಅದೆಷ್ಟು ಪ್ರಭಾವಿತರಾಗಿದ್ದರೆಂದು ತಿಳಿಯುತ್ತದೆ.
ವಿವೇಕ-ಸುಭಾಷರ ಜೋಡಿಯನ್ನು ಒಂದು ದೃಷ್ಟಿಯಲ್ಲಿ ಮಹಾಭಾರತದ ಕೃಷ್ಣ-ಅರ್ಜುನರಂತೆ ನೋಡಬಹುದು. ಕುರುಕ್ಷೇತ್ರದ ರಣರಂಗದಲ್ಲಿ ಧರ್ಮ ರಕ್ಷಣೆಯ ವಿಷಯ ಬಂದಾಗ ಸೋದರರು, ಸಂಬಂಧಿಗಳು, ಗುರು-ಹಿರಿಯರು ಎನ್ನುವುದು ನಗಣ್ಯ. ಅವರು ಧರ್ಮದ ಪರವಾಗಿದ್ದಾರೋ ಅಥವಾ ಅಧರ್ಮದ ಹಾದಿಯಲ್ಲಿದ್ದಾರೋ ಎನ್ನುವುದಷ್ಟೇ ಮುಖ್ಯವೆನ್ನುತ್ತಾರೆ. ಭಾರತೀಯರೆಲ್ಲ ತಮ್ಮ ಕೀಳರಿಮೆಯನ್ನು ತೊರೆದು, ತಮ್ಮತನವನ್ನು ಮೆರೆಯಬೇಕು. ಹೇಡಿತನ ಬಿಟ್ಟು ವೀರರಸವನ್ನು ಪ್ರದರ್ಶಿಸಬೇಕು, ಸ್ವಾಭಿಮಾನಿಗಳಾಗಬೇಕೆಂದರು.