ವರ್ಷದೊಳಗೆ ಖಾಸಗಿ ತೆಕ್ಕೆಗೆ ಹುಬ್ಬಳ್ಳಿ ವಿಮಾನ ನಿಲ್ದಾಣ

ಹುಬ್ಬಳ್ಳಿ ವಿಮಾನ ನಿಲ್ದಾಣ

ಹುಬ್ಬಳ್ಳಿ: ಕಾರ್ಪೋರೇಟ್ ಸ್ಪರ್ಶ ಮತ್ತು ಅಂತಾರಾಷ್ಟ್ರೀಯ ಗುಣಮಟ್ಟದೊಂದಿಗೆ ಅಭಿವೃದ್ಧಿಯಾಗುತ್ತಿರುವ ಹುಬ್ಬಳ್ಳಿ ವಿಮಾನ ನಿಲ್ದಾಣ ಖಾಸಗಿ ತೆಕ್ಕೆಗೆ ಹೋಗುವ ದಿನಗಳು ಸಮೀಪಿಸುತ್ತಿವೆ. ಕೇಂದ್ರ ಸರ್ಕಾರದ ಪ್ರಸಕ್ತ ನೀತಿಯ ಅನುಸಾರ ದೇಶದ ಕೆಲವು ಪ್ರಮುಖ ವಿಮಾನ ನಿಲ್ದಾಣಗಳನ್ನು ವರ್ಷದ ಒಳಗೆ ಖಾಸಗಿಯವರಿಗೆ ನೀಡಲಾಗುತ್ತಿದ್ದು, ಹುಬ್ಬಳ್ಳಿಯೂ ಈ ಪಟ್ಟಿಯಲ್ಲಿದೆ.
ರಾಷ್ಟ್ರೀಯ ಸ್ವತ್ತುಗಳ ನಗದೀಕರಣ (ನ್ಯಾಷನಲ್ ಮಾನೆಟೈಸೇಷನ್ ಪೈಪ್‌ಲೈನ್) ಯೋಜನೆಯಡಿ ಮೋದಿ ಸರ್ಕಾರ ಈ ಖಾಸಗೀಕರಣವನ್ನು ಆರಂಭಿಸಿದೆ. ಈ ಬಾರಿಯ ಕೇಂದ್ರ ಬಜೆಟ್‌ನಲ್ಲಿ ಪ್ರಸ್ತಾಪಿಸಿರುವಂತೆ, ಯೋಜನೆಯಡಿ ಮುಂದಿನ ಐದು ವರ್ಷಗಳಲ್ಲಿ ೧೦ ಲಕ್ಷ ಕೋಟಿ ರೂಪಾಯಿಗಳ ಆದಾಯವನ್ನು ಸರ್ಕಾರಕ್ಕೆ ನಿರೀಕ್ಷಿಸಲಾಗಿದೆ.
ಈ ಹಿನ್ನೆಲೆಯಲ್ಲಿ ವಿಮಾನ ನಿಲ್ದಾಣಗಳ ಖಾಸಗೀಕರಣವು ಖಾಸಗಿ ಮತ್ತು ಸಾರ್ವಜನಿಕ ಸಹಭಾಗಿತ್ವದಲ್ಲಿ (ಪಿಪಿಪಿ) ನಡೆಯಲಿದೆ ಎಂಬುದಾಗಿ ಮೂಲಗಳು ಈಗಾಗಲೇ ಸ್ಪಷ್ಟಪಡಿಸಿವೆ.
ಬೆಂಗಳೂರು, ಮಂಗಳೂರು, ಮೈಸೂರು, ಹುಬ್ಬಳ್ಳಿ, ಬೆಳಗಾವಿ, ಕಲಬುರ್ಗಿ ಮತ್ತು ಶಿವಮೊಗ್ಗ ಪ್ರಸ್ತುತ ರಾಜ್ಯದ ಏಳು ವಿಮಾನ ನಿಲ್ದಾಣಗಳು. ಈ ಪೈಕಿ ಬೆಂಗಳೂರು ಮತ್ತು ಮಂಗಳೂರು ಅಂತಾರಾಷ್ಟ್ರೀಯ ಸ್ತರದವುಗಳಾಗಿದ್ದರೆ, ಹುಬ್ಬಳ್ಳಿ ದೇಸಿ ವಲಯದ ಪ್ರಮುಖ ಮತ್ತು ದೊಡ್ಡ ನಿಲ್ದಾಣ.
ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ(ಕೆಐಎ) ಹಾಗೂ ಮಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳು ಈಗಾಗಲೇ ಖಾಸಗಿ ತೆಕ್ಕೆಯಲ್ಲಿ, ಅಂದರೆ ಪಿಪಿಪಿ ಮಾದರಿಯಲ್ಲಿ ಕಾರ್ಯನಿರ್ವಹಿಸುತ್ತಿವೆ. ಬಿಐಎಂಎಲ್ ಕಂಪನಿಯು ಕೆಐಎ ಉಸ್ತುವಾರಿ ಹೊತ್ತಿದ್ದರೆ, ಮಂಗಳೂರು ಅದಾನಿ ಸಂಸ್ಥೆಯ ಕೈಯಲ್ಲಿದೆ.
ಹುಬ್ಬಳ್ಳಿ ವಿಮಾನ ನಿಲ್ದಾಣವನ್ನು ಇನ್ನೊಂದು ವರ್ಷದಲ್ಲಿ ಖಾಸಗೀಕರಣ ಮಾಡಿ, ಪಿಪಿಪಿ ಮಾದರಿಯಲ್ಲಿ ನಿರ್ವಹಣೆಗೆ ನೀಡಬೇಕು ಎಂಬುದು ಕೇಂದ್ರ ಸರ್ಕಾರದ ಉದ್ದೇಶವಾಗಿದೆ. `೨೦೨೬ರ ಮಾರ್ಚ್ ಒಳಗೆ ಖಾಸಗೀಕರಣ ಪ್ರಕ್ರಿಯೆ ಪೂರ್ಣಗೊಳ್ಳಲಿದೆ’ ಎಂಬುದಾಗಿ ಮೂಲಗಳು ಹೇಳುತ್ತಿವೆ.
ಅದಾನಿ ಏರ್‌ಪೋರ್ಟ್ ಹೋಲ್ಡಿಂಗ್ಸ್ ಲಿಮಿಟೆಡ್ (ಎಎಎಚ್‌ಎಲ್) ಸಂಸ್ಥೆ ಸೇರಿ ಅನೇಕ ಸಂಸ್ಥೆಗಳು ಬಿಡ್ಡಿಂಗ್‌ಗೆ ಉತ್ಸುಕವಾಗಿವೆ ಎಂಬ ಮಾತು ಕೇಳಿಬರುತ್ತಿದೆ. ಹುಬ್ಬಳ್ಳಿ ವಿಮಾನ ನಿಲ್ದಾಣವೂ ಪಿಪಿಪಿ ಮಾದರಿಯಲ್ಲಿ ಖಾಸಗಿ ತೆಕ್ಕೆಗೆ ಹೋದ ನಂತರ ರಾಜ್ಯದ ಮೂರು ಪ್ರಮುಖ ನಿಲ್ದಾಣಗಳು ಖಾಸಗೀಕರಣಗೊಂಡಂತೆ ಆಗಲಿದೆ.

ಪಿಪಿಪಿ ಯಾವ ರೀತಿ ?
ರಾಷ್ಟ್ರೀಯ ಸ್ವತ್ತುಗಳ ನಗದೀಕರಣ ಯೋಜನೆಯಡಿ ಪಿಪಿಪಿ ಮಾದರಿಯನ್ನು ಹೇಗೆ ಅನ್ವಯಿಸಲಾಗುತ್ತದೆ ಎನ್ನುವ ಪ್ರಶ್ನೆ ಮತ್ತು ಈ ಸಂಬಂಧಿ ವಿವಾದಗಳು ತುಂಬ ವರ್ಷಗಳಿಂದ ಇವೆ. `ವಿಮಾನ ನಿಲ್ದಾಣಗಳ ಖಾಸಗೀಕರಣ ಎಂದರೆ ಪೂರ್ಣವಾಗಿ ಖಾಸಗಿ ಸಂಸ್ಥೆಗಳಿಗೆ ಮಾರುವುದು ಎಂದಲ್ಲ. ನಿರ್ದಿಷ್ಟ ೫೦ ವರ್ಷಗಳ ಅವಧಿಗೆ ನಿಲ್ದಾಣಗಳ ನಿರ್ವಹಣೆ ಗುತ್ತಿಗೆಯನ್ನು ನೀಡುವುದು. ಆದರೆ ನಿಲ್ದಾಣದ ಭೂಮಿಯ ಮಾಲೀಕತ್ವ ಕೇಂದ್ರ ಸರ್ಕಾರದ್ದೇ (ವಿಮಾನ ನಿಲ್ದಾಣಗಳ ಪ್ರಾಧಿಕಾರ) ಆಗಿರುತ್ತದೆ’ ಎಂಬುದಾಗಿ ಕೇಂದ್ರ ಸರ್ಕಾರ ಸಂಸತ್ತಿನಲ್ಲಿ ಹೇಳಿದೆ. ಆದರೆ ಐವತ್ತು ವರ್ಷದ ಗುತ್ತಿಗೆ ಎಂಬುದೇ ಭವಿಷ್ಯದ ಹಲವು ಅಂಶಗಳಿಗೆ ಉತ್ತರ ನೀಡುವುದರಿಂದ ಪ್ರತಿಪಕ್ಷಗಳ ವಲಯದಲ್ಲಿ ವಿವಾದದ ಕಾವು ಆರುತ್ತಿಲ್ಲ !

ಇತರ ನಿಲ್ದಾಣಗಳು
ಮುಂಬರುವ ಮಾರ್ಚ್ ಅಂತ್ಯದ ವೇಳೆಗೆ ಖಾಸಗೀಕರಣಗೊಳ್ಳಲಿರುವ ಇತರ ವಿಮಾನ ನಿಲ್ದಾಣಗಳೆಂದರೆ, ಅಮೃತಸರ, ವಾರಾಣಸಿ, ಭುವನೇಶ್ವರ, ಇಂದೋರ್, ರಾಯಪುರ, ತಿರುಚಿನಾಪಳ್ಳಿ, ಕುಷೀನಗರ, ಗಯಾ ಮತ್ತು ತಿರುಪತಿ.