ಬೆಂಗಳೂರು: ಶಾಸಕ ಮುನಿರತ್ನ ಅವರನ್ನು ಬಂಧಿಸಿರುವುದು ದ್ವೇಷದ ರಾಜಕಾರಣ. ಧ್ವನಿ ಮುದ್ರಣ ಶಾಸಕರದ್ದೇ ಎಂದು ಸಾಬೀತಾದ ಬಳಿಕ ಬಂಧಿಸಬೇಕಿತ್ತು ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆ ಧ್ವನಿ ಮುದ್ರಣ ಅವರದ್ದೇ ಎಂಬುದನ್ನು ಖಚಿತಪಡಿಸಿಕೊಳ್ಳಲು ಅದನ್ನು ಪ್ರಯೋಗಾಲಯಕ್ಕೆ ಕಳುಹಿಸಬೇಕಿತ್ತು. ಎಫ್ಎಸ್ಎಲ್‌ಗೆ ಕಳುಹಿಸಿ, ತನಿಖೆ ಮಾಡಿ ಬಳಿಕ ಕ್ರಮ ಕೈಗೊಂಡಿದ್ದರೆ ನಾವ್ಯಾರೂ ಮಾತಾಡುತ್ತಿರಲಿಲ್ಲ. ಯಾವುದೇ ಪ್ರಕರಣದಲ್ಲಿ ಸತ್ಯವನ್ನು ಪರಿಶೀಲಿಸಬೇಕು. ಆದರೆ ಇಲ್ಲಿ ದೂರು ನೀಡಿದ ಕೂಡಲೇ ವಿಚಾರಣೆ ಮಾಡದೆ ನೋಟಿಸ್ ನೀಡದೆ ಬಂಧಿಸಲಾಗಿದೆ. ಇಲ್ಲಿ ಆತುರದ ಕ್ರಮವಾಗಿದ್ದು, ಏಕಾಏಕಿ ಬಂಧನವಾಗಿದೆ ಎಂದರು.