ಮರಾಠಿಯಲ್ಲೇ ಮಾತನಾಡಬೇಕೆಂದು ಪಿಡಿಒಗೆ ಧಮ್ಕಿ ಹಾಕಿದ ಎಂಇಎಸ್‌ ಪುಂಡ

0
47

ಬೆಳಗಾವಿ: ಮರಾಠಿಯಲ್ಲೇ ಮಾತನಾಡಬೇಕೆಂದು ಹೇಳಿ ನಾಡದ್ರೋಹಿ ಎಂಇಎಸ್ ಪುಂಡರು ಸರ್ಕಾರಿ ಕಚೇರಿಗಳಿಗೆ ನುಗ್ಗಿ ಅಧಿಕಾರಿಗಳಿಗೆ ಬೆದರಿಕೆ ಹಾಕುತ್ತಿರುವ ಘಟನೆಗಳು ಬೆಳಕಿಗೆ ಬರುತ್ತಿವೆ.
ರಾಜಕಾರಣಿಗಳ ದಿವ್ಯ ಮೌನದ ಹಿನ್ನೆಲೆಯಲ್ಲಿ ಗಡಿನಾಡ ಬೆಳಗಾವಿ ಜಿಲ್ಲೆಯಲ್ಲಿ ಇಂತಹ ಘಟನೆಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತ ಸಾಗುತ್ತಿವೆ. ಇದು ಕನ್ನಡಿಗರ ಆತಂಕಕ್ಕೆ ಕಾರಣವಾಗುತ್ತಿದೆ.
ಬಸ್ ಕಂಡಕ್ಟರ್, ಅಂಬೇವಾಡಿ ಗ್ರಾಮ ಪಂಚಾಯತಿ ಕಾರ್ಯದರ್ಶಿ ಮೇಲೆ ಎಂಇಎಸ್ ಪುಂಡರು ಹಲ್ಲೆ ಮಾಡಿದ ಪ್ರಕರಣ ಇನ್ನೂ ಹಸಿರಾಗಿರುವಾಗಲೇ ಕಿಣಯೇ ಪಂಚಾಯತಿ ಪಿಡಿಓಗೆ ಬೆದರಿಕೆ ಹಾಕಿದ ಘಟನೆ ಕನ್ನಡಿಗರ ಕಿಚ್ಚಿಗೆ ತುಪ್ಪ ಸುರಿದಂತಾಗಿದೆ.
ಬೆಳಗಾವಿ ತಾಲೂಕಿನ ಕಿಣಯೇ ಪಂಚಾಯತಿ ಕಚೇರಿಗೆ ನುಗ್ಗಿದ ಪುಂಡನೊಬ್ಬ ಪಿಡಿಓಗೆ ಮರಾಠಿ ಭಾಷೆಯಲ್ಲಿ ಮಾತನಾಡುವಂತೆ ಬೆದರಿಕೆ ಹಾಕಿದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಪಿಡಿಓ ನಾಗೇಂದ್ರ ಪತ್ತಾರ ಎಂಬುವರು ಆ ಪುಂಡನ ವರ್ತನೆಗೆ ಬೇಸತ್ತು, ಇದು ಕರ್ನಾಟಕ ಕನ್ನಡದಲ್ಲಿ ಮಾತನಾಡು ಎಂದು ಹೇಳಿದ್ದರು. ಒಂದು ಹಂತದಲ್ಲಿ ಪುಂಡನು ಅಲ್ಲಿ ವಿಡಿಯೋ ಮಾಡಿಕೊಳ್ಳುತ್ತಿದ್ದವನಿಗೆ ಹೊಡೆಯುವ ಬೆದರಿಕೆ ಕೂಡ ಹಾಕಿದ್ದ.
ಈ ಸುದ್ದಿ ತಿಳಿಯುತ್ತಿದ್ದಂತೆಯೇ ಕನ್ನಡ ಪರ ಸಂಘಟನೆಗಳು ಆ ಮರಾಠಿ ಭಾಷಿಕ ಪುಂಡನ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದವು. ಅಷ್ಟೇ ಅಲ್ಲ ಗ್ರಾಮ ಪಂಚಾಯತಿಗೆ ತೆರಳಿ ಪಿಡಿಓಗೆ ಸನ್ಮಾನ ಕೂಡ ಮಾಡಿದವು. ಈ ಘಟನೆ ಬಗ್ಗೆ ಬೆಳಗಾವಿ ಗ್ರಾಮೀಣ ಪೊಲೀಸರಿಗೆ ದೂರು ಸಹ ನೀಡಿದರು. ಕಿತ್ತೂರು ಕರ್ನಾಟಕ ಸೇನೆ, ಕರವೇ(ನಾರಾಯಣಗೌಡರ ಬಣ) ಮುಂತಾದ ಸಂಘಟನೆಗಳು ಎಂಇಎಸ್ ಪುಂಡರ ಕ್ರಮವನ್ನು ವ್ಯಾಪಕವಾಗಿ ಖಂಡಿಸಿವೆ.

Previous articleಅಪ್ರಾಪ್ತೆ ಮೇಲೆ ಅಪ್ರಾಪ್ತರಿಂದ ಅತ್ಯಾಚಾರ
Next articleಜಮೀನಿಗಾಗಿ ಎರಡು ಕುಟುಂಬಗಳ ನಡುವೆ ಹೊಡೆದಾಟ: ಮಹಿಳೆಗೆ ತೀವ್ರ ಗಾಯ