ದಾವಣಗೆರೆ: ಆರ್ ಸಿಬಿ ಸಂಭ್ರಮಾಚರಣೆಯಲ್ಲಿ ಕಾಲ್ತುಳಿತ್ತಕ್ಕೊಳಗಾದ ಪ್ರಕರಣವನ್ನು ಹೈಕೋರ್ಟ್ ನ ಹಾಲಿ ನ್ಯಾಯಾಧೀಶರ ಅಧ್ಯಕ್ಷತೆಯಲ್ಲಿ ತನಿಖೆ ನಡೆಸಬೇಕು ಮತ್ತು ಸಿಬಿಐಗೆ ವಹಿಸಬೇಕೆಂದು ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಒತ್ತಾಯಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗ ವಹಿಸಿರುವ ನಿವೃತ್ತ ನ್ಯಾಯಾಧೀಶರ ಅಧ್ಯಕ್ಷತೆಯ ಬಗ್ಗೆ ನಮಗೆ ನಂಬಿಕೆಯಿಲ್ಲ. ಹಾಗಾಗಿ, ಪ್ರಕರಣವನ್ನು ಹಾಲಿ ನ್ಯಾಯಾಧೀಶರಿಗೆ ವಹಿಸಬೇಕು ಎಂದು ಅವರು ಆಗ್ರಹಿಸಿದರು.
ರಾಜ್ಯದ ಕಾಂಗ್ರೆಸ್ ಸರ್ಕಾರ ಆರ್ಸಿಬಿ ತಂಡದೊಂದಿಗೆ ತಮ್ಮ ಕುಟುಂಬದವರು ಫೋಟೊ ತೆಗೆಸಿಕೊಳ್ಳಬೇಕು, ರೀಲ್ಸ್ ಮಾಡಬೇಕೆಂಬ ದುರುದ್ದೇಶದಿಂದ ತರಾತುರಿಯಲ್ಲಿ ಬೆಂಗಳೂರಿನಲ್ಲಿ ಈ ಕಾರ್ಯಕ್ರಮ ಆಯೋಜಿಸಿದ್ದರಿಂದಲೇ ಈ ಅವಘಡ ಸಂಭವಿಸಿದೆ. ನ್ಯಾಯಾಲಯವು ಸರ್ಕಾರಕ್ಕೆ ಛೀಮಾರಿ ಹಾಕಿದ್ದರಿಂದ ಐವರು ಪೊಲೀಸ್ ಅಧಿಕಾರಿಗಳನ್ನು ಅಮಾನತ್ತುಗೊಳಿಸಿ ತಾನು ನುಣುಚಿಕೊಳ್ಳಲು ಯತ್ನಿಸಿದೆ ಎಂದು ದೂರಿದರು.
ಘಟನೆಯಲ್ಲಿ ವಿದ್ಯಾರ್ಥಿಗಳು ಸೇರಿ ವರ್ಷದ ಹಿಂದಷ್ಟೇ ನೂತನವಾಗಿ ವಿವಾಹವಾಗಿದ್ದ ಮಹಿಳೆಯೊಬ್ಬಳು ಸೇರಿ ಹನ್ನೊಂದು ಜನರು ದಾರುಣವಾಗಿ ಸಾವನ್ನಪ್ಪಿದ್ದಾರೆ. ಅವರ ಕುಟುಂಬದವರಿಗೆ ೧ ಕೋಟಿ ಪರಿಹಾರ ನೀಡಬೇಕು ಮತ್ತು ಪ್ರಕರಣದ ನೈತಿಕ ಹೊಣೆ ಹೊತ್ತು ಸಿಎಂ ಸಿದ್ಧರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್ ಮತ್ತು ಗೃಹಸಚಿವ ಡಾ. ಜಿ.ಪರಮೇಶ್ವರ್ ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿದರು. ಪತ್ರಿಕಾಗೋಷ್ಠಿಯಲ್ಲಿ ಮಾಜಿ ಮೇಯರ್ ಬಿ.ಜಿ. ಅಜಯಕುಮಾರ್, ರಾಜು ವೀರಣ್ಣ, ಸುರೇಂದ್ರನಾಯ್ಕ್ ಮತ್ತಿತರರು ಹಾಜರಿದ್ದರು.