ಇಸ್ರೋ 100ನೇ ಉಡಾವಣೆ; ಸ್ವದೇಶಿ `ಜಿಪಿಎಸ್’ ಕನಸು

ಇಸ್ರೋ ಸಂಸ್ಥೆ ಇದುವರೆಗೆ ೧೦೦ ಉಡಾವಣೆಗಳನ್ನು ಕೈಗೊಂಡು ಜಗತ್ತಿನ ಗಮನ ಸೆಳೆದಿದೆ. ಈಗ ಹೊಸ ಪೀಳಿಗೆಯ ಉಪಗ್ರಹಗಳನ್ನು ಉಡಾವಣೆ ಮಾಡುವ ಬೃಹತ್ ಸಾಹಸವನ್ನು ಕೈಗೊಂಡಿದೆ. ಇದರ ಮೂಲ ಉದ್ದೇಶ ಈಗ ನಾವು ಬಳಸುತ್ತಿರುವ ಜಿಪಿಎಸ್ ಮಾರ್ಗಸೂಚಿಯನ್ನು ನಿಖರತೆ ಮತ್ತು ವಿವರಗಳಲ್ಲಿ ಮೀರಿಸುವ ಎನ್‌ವಿಎಸ್-೨ ಉಪಗ್ರಹ ಈಗ ಬಾಹ್ಯಾಕಾಶವನ್ನು ತಲುಪಿದೆ. ಇದೂವರೆಗೆ ಸಂಪರ್ಕಕ್ಕೆ ಬಳಕೆಯಾಗುತ್ತಿದ್ದ ಉಪಗ್ರಹದ ಕೆಲಸವನ್ನು ಹೊಸ ಉಪಗ್ರಹ ವಹಿಸಿಕೊಳ್ಳಲಿದೆ. ಇದು ಒಟ್ಟು ೭ ಉಪಗ್ರಹಗಳು. ಇವುಗಳು ಭಾರತದ ಮೇಲೆ ಇರುತ್ತದೆ. ಭಾರತದ ಭೂಭಾಗವಲ್ಲದೆ ಸುತ್ತ ೧೫೦೦ ಕಿಮೀ ವ್ಯಾಪ್ತಿಯಲ್ಲಿ ಸಾರಿಗೆ, ನೌಕಾಯಾನ, ವಿಮಾನಯಾನ ಸೇರಿದಂತೆ ಎಲ್ಲದ್ದಕ್ಕೂ ನೆರವು ನೀಡುತ್ತದೆ. ಅತಿ ಕಡಿಮೆ ೨೦ ಮೀಟರ್ ಅಂತರದಿಂದ ಚಿತ್ರಗಳನ್ನು ನೀಡಬಲ್ಲುದು. ಅರಣ್ಯ ಮತ್ತು ಕಣಿವೆ ಪ್ರದೇಶಗಳಲ್ಲಿ ಜಿಪಿಎಸ್ ಸಂಕೇತಗಳು ಅಸ್ಪಷ್ಟವಾಗಿದ್ದವು. ಅಲ್ಲದೆ ಜಿಪಿಎಸ್ ಅಮೆರಿಕಕ್ಕೆ ಸೇರಿದ್ದು ಜಗತ್ತಿನಲ್ಲಿ ಎಲ್ಲ ದೇಶಗಳೂ ಬಳಸುತ್ತಿವೆ. ಈಗ ರಷ್ಯಾ, ಯೂರೋಪ್, ಚೀನಾ ಸೇರಿದಂತೆ ಪ್ರಮುಖ ದೇಶಗಳು ತಮ್ಮದೇ ಆದ ಮಾರ್ಗದರ್ಶಿ ಉಪಗ್ರಹಗಳನ್ನು ಹೊಂದಿವೆ. ಈಗ ಭಾರತ ಈ ಸಾಲಿಗೆ ಸೇರಿದೆ. ಇದರಿಂದ ನಮ್ಮದೇ ಆದ ಸಂಪರ್ಕ ಜಾಲ ನಮ್ಮ ದೇಶದ ಮೇಲೆ ಇರುತ್ತದೆ. ಇದರಿಂದ ಕೃಷಿ, ಸಾರಿಗೆ, ವಿಮಾನ ಯಾನ, ನೌಕಾಯಾನ ನೈಸರ್ಗಿಕ ವಿಕೋಪ, ಸೇನೆ ಚಟುಟಿಕೆಗಳಿಗೆ ಉಪಯೋಗವಾಗಲಿದೆ. ಇದರ ವಿವರ ನ್ಯಾನೋ ಸೆಕೆಂಡ್‌ಗಿಂತ ಕಡಿಮೆ. ಹೀಗಾಗಿ ಸ್ಥಳ ಮತ್ತು ಸಮಯ ಅತ್ಯಂತ ಸ್ಪಷ್ಟವಾಗಿ ತಿಳಿಯುತ್ತದೆ.
ಹೋಮಿ ಭಾಭಾ, ಸತೀಶ್ ಧವನ್, ಯು.ಆರ್. ರಾವ್. ಅಬ್ದುಲ್ ಕಲಾಂ ಸೇರಿದಂತೆ ಹಲವು ದಿಗ್ಗಜರು ಕಟ್ಟಿದ ಈ ಸಂಸ್ಥೆ ಈಗ ಬೃಹದಾಕಾರವಾಗಿ ಬೆಳೆದಿದೆ. ಮುಂದಿನ ದಿನಗಳಲ್ಲಿ ಇನ್ನೂ ಎತ್ತರಕ್ಕೆ ಏರುವುದರಲ್ಲಿ ಸಂದೇಹವಿಲ್ಲ. ಇದೂವರೆಗೆ ೧೦೦ ಉಡಾವಣೆಗಳಲ್ಲಿ ೫೪೮ ಉಪಗ್ರಹಗಳನ್ನು ಬಾಹ್ಯಾಕಾಶ ತಲುಪುವಂತೆ ಮಾಡಲಾಗಿದ್ದು ಒಟ್ಟು ಗಗನದಲ್ಲಿ ೧೨೦ ಟನ್ ಭಾರದ ಸಂಪರ್ಕ ಸಾಧನಗಳು ಕೆಲಸ ಮಾಡುತ್ತಿವೆ. ಇನ್ನು ೫ ವರ್ಷಗಳಲ್ಲಿ ಇದು ಮತ್ತೆ ೧೦೦ ಉಡಾವಣೆ ಕೈಗೊಳ್ಳುವ ಉದ್ದೇಶ ಹೊಂದಿದೆ. ವಿದೇಶಗಳಿಗೆ ಸೇರಿದ ೪೩೩ ಉಪಗ್ರಹಗಳನ್ನು ಇದೂವರೆಗೆ ಗಗನಕ್ಕೆ ಸೇರ್ಪಡೆ ಮಾಡಲಾಗಿದೆ. ಇಸ್ರೋ ಇದೂವರೆಗೆ ಸಂಪರ್ಕ ಉಪಗ್ರಹ ಉಡಾವಣೆಯಲ್ಲದೆ ಬಾಹ್ಯಾಕಾಶ ಅಧ್ಯಯನ, ಮಂಗಳ ಗ್ರಹ ಅನ್ವೇಷಣೆ, ಚಿಂದ್ರಯಾದ, ಆದಿತ್ಯ ಯಾನವನ್ನೂ ಕೈಗೊಂಡಿದೆ. ಮುಂದಿನ ದಿನಗಳಲ್ಲಿ ಅತಿ ಭಾರದ ಉಪಗ್ರಹಗಳನ್ನು ಉಡಾವಣೆ ಮಾಡಲಿದ್ದು, ಇವುಗಳು ಭೂಮಿ ಸಮೀಪ ಇರಲಿದ್ದು ಎಲ್ಲ ಕಾಲಕ್ಕೂ ಮಾರ್ಗದರ್ಶನ ನೀಡಲಿದೆ. ಇದಕ್ಕಾಗಿ ೯೧ ಮೀಟರ್ ಎತ್ತರದ ರಾಕೆಟ್ ಬಳಸಲಾಗುವುದು. ಮುಂದಿನ ಪೀಳಿಗೆಯ ಉಡಾವಣೆ ವಾಹಕ ಮೂರು ಹಂತಗಳಲ್ಲಿ ಬಾಹ್ಯಾಕಾಶ ತಲುಪಲಿದೆ. ೨೦೩೧ಕ್ಕೆ ಇದು ಸಿದ್ಧಗೊಳ್ಳಲಿದೆ. ಪಿಎಸ್‌ಎಲ್‌ವಿ, ಜಿಎಸ್‌ಎಲ್‌ವಿ, ಎಲ್‌ವಿಎಂ೩ ಉಡಾವಣೆ ವಾಹಕಗಳನ್ನೂ ಮೀರಿಸಿದ ವಾಹಕ ಬರಲಿದೆ.
ಇಸ್ರೋ ಮೊದಲಿನಿಂದಲೂ ತನ್ನದೇ ಆದ ಹಾದಿಯಲ್ಲಿ ಸಾಗುತ್ತ ಬಂದಿದೆ. ರಷ್ಯಾ, ಚೀನಾ, ಅಮೆರಿಕ ಸೇರಿದಂತೆ ದೊಡ್ಡ ದೇಶಗಳಿಗೆ ಹೆಚ್ಚಿನ ಆರ್ಥಿಕ ಸಂಪನ್ಮೂಲವಿದೆ. ಆದರೂ ಇಸ್ರೋ ಕಡಿಮೆ ವೆಚ್ಚದಲ್ಲಿ ಉಪಗ್ರಹ ಉಡಾವಣೆ ಮಾಡಬಹುದು ಎಂಬುದನ್ನು ತೋರಿಸಿಕೊಟ್ಟಿದೆ. ಚಂದ್ರಯಾನ ಇಡೀ ಜಗತ್ತನ್ನೇ ಬೆರಗುಗೊಳಿಸಿರುವುದಂತೂ ನಿಜ. ನಮ್ಮ ಬಾಹ್ಯಾಕಾಶ ವಿಜ್ಞಾನಿಗಳು ವಿದೇಶಗಳಿಗೆ ಹೋಗಿ ಕಲಿತು ಬಂದವರಲ್ಲ. ನಮ್ಮ ವಿಜ್ಞಾನಿಗಳೇ ಈಗ ಪ್ರಮುಖ ದೇಶಗಳಿಗೆ ಮಾರ್ಗದರ್ಶನ ನೀಡುವಷ್ಟು ಸಾಮರ್ಥ್ಯ ಪಡೆದಿದ್ದಾರೆ. ಈಗ ಹೊಸ ಪೀಳಿಗೆಯ ವಿಜ್ಞಾನಿಗಳು ತರಬೇತಿ ಪಡಯುತ್ತಿರುವುದು ಸಂತಸದ ಸಂಗತಿ. ನಮ್ಮಲ್ಲಿ ತರಬೇತಿ ಪಡೆದವರು ಈಗ ವಿದೇಶಗಳಲ್ಲಿ ಕೆಲಸ ಮಾಡುತ್ತಿರುವುದು ಸಂತಸದ ಸಂಗತಿ. ಇಸ್ರೋ ಸ್ಥಾಪಿಸಿದ ಈ ಪರಂಪರೆ ಇನ್ನೂ ಮುಂದುವರಿಯಬೇಕು ಎಂದರೆ ಯುವ ಪೀಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಬಾಹ್ಯಾಕಾಶ ಅಧ್ಯಯನಕ್ಕೆ ಬರಬೇಕು. ಎಲ್ಲರೂ ತಂತ್ರಜ್ಞಾನದತ್ತ ಮನಸೋತು ಹೆಚ್ಚಿನ ಸಂಬಳಕ್ಕಾಗಿ ಹೋಗುತ್ತಿದ್ದಾರೆ. ಆದರೆ ಇಸ್ರೋ ಸಂಸ್ಥೆಯಲ್ಲಿ ಕೆಲಸ ಮಾಡುವುದು ಈಗ ಪ್ರತಿಷ್ಠೆಯ ಪ್ರಶ್ನೆಯಾಗಿದೆ. ಅಲ್ಲದೆ ಇಸ್ರೋ ಈಗ ತನ್ನದೇ ಆದಾಯ ಹೊಂದುತ್ತಿರುವ ಸಂಸ್ಥೆಯಾಗಿದ್ದು, ಸರ್ಕಾರದ ಅನುದಾನದ ಮೇಲೆ ಅವಲಂಬಿಸುವುದು ಸದ್ಯದಲ್ಲೇ ತಪ್ಪಲಿದೆ. ಜಗತ್ತಿನಲ್ಲಿರುವ ಬಹುತೇಕ ಸಣ್ಣ ಸಣ್ಣ ದೇಶಗಳಿಗೆ ಉಪಗ್ರಹ ಉಡಾವಣೆ ಕಷ್ಟದ ಕೆಲಸ. ಈಗ ಭಾರತ ಈ ದೇಶಗಳಿಗೆ ಸಂಪರ್ಕ ಉಪಗ್ರಹ ಹೊಂದುವಂತೆ ಮಾಡುತ್ತಿದೆ. ಕಡಿಮೆ ವೆಚ್ಚದಲ್ಲಿ ಸಂಪರ್ಕ ಉಪಗ್ರಹಗಳನ್ನು ಹೊಂದುವುದರಿಂದ ಜಗತ್ತಿನಲ್ಲಿ ಸಂಪರ್ಕ ಕ್ರಾಂತಿಯಾಗಲು ಕಾರಣವಾಗಿದೆ. ಸಾರಿಗೆ ಮತ್ತು ಸಂಪರ್ಕ ಕ್ಷೇತ್ರದಲ್ಲಿ ಉಪಗ್ರಹ ಸಂಪರ್ಕ ದಾಪುಗಾಲು ಇಡಲು ಇಸ್ರೋ ಪ್ರಮುಖ ಕಾರಣ ಎಂಬುದರಲ್ಲಿ ಸಂದೇಹವಿಲ್ಲ.