ಹುಬ್ಬಳ್ಳಿಯಲ್ಲಿ ೫ ವರ್ಷದ ಬಾಲಿಕೆಯ ಮೇಲೆ ಅತ್ಯಾಚಾರ ಮತ್ತು ಕೊಲೆ ಪ್ರಕರಣ ನೋಡಿದ ಮೇಲೆ ಇಡೀ ಕರ್ನಾಟಕದಲ್ಲಿ ತಂದೆ-ತಾಯಿಗಳಲ್ಲಿ ತಲ್ಲಣ ಮೂಡಿದೆ. ಅದರಲ್ಲೂ ತಂದೆ-ತಾಯಿ ದುಡಿಯಲು ಹೋದಾಗ ಮಕ್ಕಳನ್ನು ಎಲ್ಲಿ ಬಿಡಬೇಕು ಎಂಬ ಸಮಸ್ಯೆ ಕಾಡುತ್ತಿದೆ. ಮಗುವನ್ನು ಬರ್ಬರ ಹತ್ಯೆ ಮಾಡಿದವನು ಬಿಹಾರದ ವಲಸಿಗ. ಅವನ ಪೈಶಾಚಿಕ ಕೃತ್ಯ ಗೃಹ ಇಲಾಖೆ ಮತ್ತು ಕಾರ್ಮಿಕ ಇಲಾಖೆಯನ್ನು ಬಡಿದೆಬ್ಬಿಸಿದೆ. ಪ್ರಜಾಪ್ರಭುತ್ವದಲ್ಲಿ ಯಾರು ಎಲ್ಲಿ ಬೇಕಾದರೂ ಜೀವಿಸಬಹುದು. ಯಾವುದೇ ಕೆಲಸವನ್ನು ಬೇಕಾದರೂ ಮಾಡಬಹುದು. ಅದರಿಂದ ವಲಸೆ ಬರುವುದನ್ನು ತಡೆಗಟ್ಟಲು ಬರುವುದಿಲ್ಲ. ಆದರೆ ನಿರ್ಬಂಧಗಳನ್ನು ಆಯಾ ರಾಜ್ಯ ಸರ್ಕಾರಗಳು ವಿಧಿಸಬಹುದು. ಬೆಂಗಳೂರು, ಮೈಸೂರು, ಹುಬ್ಬಳ್ಳಿ-ಧಾರವಾಡ, ಮಂಗಳೂರು, ಬೆಳಗಾವಿ ಮತ್ತಿತರ ನಗರಗಳಲ್ಲಿ ಹೊರ ರಾಜ್ಯದ ವಲಸೆ ಕಾರ್ಮಿಕರು ಹೆಚ್ಚಿನಸಂಖ್ಯೆಯಲ್ಲಿ ಬಂದಿದ್ದಾರೆ. ಅದರಲ್ಲಿ ಬಹುತೇಕರು ಬಂಗಾಳ, ಬಿಹಾರದವರು. ಅಲ್ಲದೆ ಮಿಜೊರಾಂ, ಭೂತಾನ್, ಬಾಂಗ್ಲಾ, ನೇಪಾಳದಿಂದ ಬಂದವರು ಇದ್ದಾರೆ. ಇವರಲ್ಲಿ ಬಹುತೇಕರು ದುಡಿಯಲು ಬಂದವರು. ಅವರು ಕ್ರಿಮಿನಲ್ ಕೆಲಸಗಳಲ್ಲಿ ಕೈಹಾಕುವುದಿಲ್ಲ. ಮತ್ತೆ ಕೆಲವರು ಅಪರಾಧಗಳಲ್ಲಿ ಶಾಮೀಲಾಗಿ ಸಿಕ್ಕಿಬೀಳುತ್ತಿದ್ದಾರೆ. ಇವರನ್ನು ಪತ್ತೆಹಚ್ಚುವುದು ಕಷ್ಟ. ಅವರಿಗೆ ನಿಗದಿತ ವಿಳಾಸ ಯಾವುದೂ ಇರುವುದಿಲ್ಲ. ಸಂಬಂಧಪಟ್ಟ ರಾಜ್ಯ ಸರ್ಕಾರಕ್ಕೆ ತಿಳಿಸಿದರೂ ಪ್ರಯೋಜನವಾಗುವುದಿಲ್ಲ. ಬೆಂಗಳೂರು ನಗರದಲ್ಲಿ ಶೇ. ೪೦ರಷ್ಟು ಇವರೇ ಇದ್ದಾರೆ ಎಂಬುದು ಗಮನಾರ್ಹ. ಈ ರೀತಿ ಹೊರರಾಜ್ಯದವರು ವಲಸೆ ಬರುವುದಕ್ಕೆ ಹಲವು ಕಾರಣಗಳಿವೆ. ಮೊದಲನೆಯದಾಗಿ ನಮ್ಮಲ್ಲಿ ಉದ್ಯೋಗ ಅವಕಾಶ ಅಧಿಕವಾಗಿದೆ. ಭಾಷೆ ಸಮಸ್ಯೆ ಇಲ್ಲ. ಯಾವ ಭಾಷೆಯಲ್ಲಿ ಮಾತನಾಡಿದರೂ ಜನ ಸಹಕರಿಸುತ್ತಾರೆ. ಎಲ್ಲ ರೀತಿಯ ಆಹಾರ ದೊರೆಯುವುದರಿಂದ ಜೀವನ ನಡೆಸುವುದು ಕಷ್ಟವಿಲ್ಲ. ಹೀಗಾಗಿ ಹೆಚ್ಚುಜನ ಕರ್ನಾಟಕಕ್ಕೆ ವಲಸೆ ಬರುವುದಕ್ಕೆ ಬಯಸುತ್ತಾರೆ. ಬೆಂಗಳೂರು ನಗರಕ್ಕೆ ಬಂಗಾಳದ ತುತ್ತತುದಿಯಿಂದ ಒಂದು ರೈಲು ಬರುತ್ತದೆ. ಅದು ವಾರಕ್ಕೊಮ್ಮೆ ಬರುವುದಾದರೂ ಅದರ ತುಂಬ ಕೂಲಿಕಾರರೇ ಇರುತ್ತಾರೆ. ಅವರು ಹೆಚ್ಚಿನ ಸಂಖ್ಯೆಯಲ್ಲಿ ಹೂಡಿ ರೈಲ್ವೆ ನಿಲ್ದಾಣದಲ್ಲಿ ಇಳಿದು ಸುತ್ತಮುತ್ತ ಇರುವ ಕಟ್ಟಡ ನಿರ್ಮಾಣ, ಕೈಗಾರಿಕೆಗಳಿಗೆ ಸೇರುತ್ತಾರೆ. ಹೆಂಗಸರು ಮನೆ ಕೆಲಸಕ್ಕೆ ಹೋಗುವುದರಿಂದ ಸಾಕಷ್ಟು ಸಂಬಳ ಬರುತ್ತದೆ. ಈಗ ಐಟಿಬಿಟಿಯಲ್ಲಿ ಗಂಡ-ಹೆಂಡತಿ ಕೆಲಸ ಮಾಡುವುದರಿಂದ ಮನೆಯಲ್ಲಿ ಕೆಲಸ ಮಾಡುವವರು ಬೇಕೇ ಬೇಕು. ಹೀಗಾಗಿನ ಅವರಿಗೆ ಎಲ್ಲ ಮನೆಗಳ ಪರಿಚಯ ಇರುತ್ತದೆ. ಇವರ ಪರಿಚಯ ಸ್ಥಳೀಯರಿಗೆ ಇರುವುದಿಲ್ಲ. ಒಂದು ಇವರು ಯಾವುದೇ ಕ್ರಿಮಿನಲ್ ಚಟುವಟಿಕೆಯಲ್ಲಿ ತೊಡಗಿಸಿಕೊಂಡರೂ ಗುರುತು ಹಿಡಿಯುವುದು ಕಷ್ಟ. ಈಗ ಬೆಂಗಳೂರಿನಲ್ಲಿ ಕೊಲೆ, ಸುಲಿಗೆ, ಅತ್ಯಾಚಾರ ಪ್ರಕರಣಗಳಲ್ಲಿ ಅಧಿಕಗೊಳ್ಳಲು ಇವರೇ ಕಾರಣ ಎಂಬ ಅನುಮಾನ ಪೊಲೀಸರಿಗೆ ಮೂಡಿದೆ. ಕಾರ್ಮಿಕ ಇಲಾಖೆ ಈ ವಿಷಯದಲ್ಲಿ ಸಮರೋಪಾದಿಯಲ್ಲಿ ಕ್ರಮ ಕೈಗೊಳ್ಳುವುದು ಅಗತ್ಯ. ವಲಸೆಗಾರರಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ೧೯೭೯ ರಲ್ಲೇ ಕಾಯ್ದೆ ಮಾಡಿದೆ. ಆದರೆ ರಾಜ್ಯ ಸರ್ಕಾರಗಳು ಇದರ ಬಗ್ಗೆ ಆಸಕ್ತಿ ತೋರಿಲ್ಲ.
ಹೊರ ರಾಜ್ಯದಿಂದ ಕೂಲಿಕಾರರು ಬಂದು ನೆಲೆಸುವುದಕ್ಕೆ ಹಲವು ಕಾರಣವಿದೆ. ಸ್ಥಳೀಯರು ಹೆಚ್ಚು ಪರಿಶ್ರಮದ ಕೆಲಸಗಳಿಗೆ ಬರಲು ಬಯಸುವುದಿಲ್ಲ. ಎಲ್ಲರಿಗೂ ಬೆವರು ಸುರಿಸದ ಉದ್ಯೋಗ ಬೇಕು. ಬೆಳಗ್ಗೆ 10 ರಿಂದ ಸಂಜೆ 5 ಗಂಟೆವರೆಗೆ ಮಾತ್ರ ಕೆಲಸ ಮಾಡುವವರು. ಹೊರ ರಾಜ್ಯದ ಕೂಲಿಕಾರರು ಹಾಗಲ್ಲ. ಹಗಲು ರಾತ್ರಿ ದುಡಿಯುತ್ತಾರೆ. ಸ್ಥಳೀಯರು ಒಂದು ವಾರದಲ್ಲಿ ಮಾಡುವ ಕೆಲಸವನ್ನು ಹೊರ ರಾಜ್ಯದವರು 3 ದಿನಗಳಲ್ಲಿ ಮಾಡಿ ಮುಗಿಸುತ್ತಾರೆ. ಹೀಗಾಗಿ ಗುತ್ತಿಗೆದಾರರು ಅವರನ್ನು ಕೆಲಸಕ್ಕೆ ತೆಗೆದುಕೊಳ್ಳಲು ಬಯಸುತ್ತಾರೆ. ಈಗ ಎಲ್ಲ ಕೆಲಸವನ್ನು ಕಾಮಗಾರಿ ಲೆಕ್ಕದಲ್ಲಿ ಗುತ್ತಿಗೆ ನೀಡುವುದರಿಂದ ಕೆಲಸ ಬೇಗ ಮುಗಿಸಿದರೆ ಹಣ ಬೇಗ ಸಿಗುತ್ತದೆ. ಸ್ಥಳೀಯರು ಬೇಗನೇ ಕೆಲಸ ಮುಗಿಸಲು ಬಯಸುವುದಿಲ್ಲ. ಅದರಿಂದ ಹೊರ ರಾಜ್ಯದವರಿಗೆ ಹೆಚ್ಚಿನ ಬೇಡಿಕೆ ಬಂದಿದೆ. ಹೀಗೆ ಬಂದು ಸೇರಿಕೊಂಡವರಲ್ಲಿ ಕೆಲವರು ಕ್ರಿಮಿನಲ್ ಕೆಲಸಗಳಲ್ಲಿ ತೊಡಗಿಸಿ ಕೊಂಡರೆ ಅವರನ್ನು ಪೊಲೀಸರು ಪತ್ತೆಹಚ್ಚುವುದು ಕಷ್ಟ. ಕಾರ್ಮಿಕ ಇಲಾಖೆ ಮತ್ತು ಗೃಹ ಇಲಾಖೆ ಜಂಟಿಯಾಗಿ ಕಾರ್ಯಾಚರಣೆ ಕೈಗೊಳ್ಳಬೇಕು, ಜಾರ್ಖಂಡ್‌ನಲ್ಲಿ ವಲಸೆ ಕಾರ್ಮಿಕರಿಗಾಗಿ ಸಹಾಯವಾಣಿ ತೆರೆಯಲಾಗಿದೆ. ಅಲ್ಲಿ ಇವರ ವಿವರಗಳನ್ನು ದಾಖಲಿಸುವ ಕೆಲಸ ನಡೆಯುತ್ತಿದೆ. ಕೊರೊನಾ ಕಾಲದಲ್ಲಿ ಇದು ಆರಂಭವಾಗಿದ್ದು ಈಗಲೂ ಮುಂದುವರಿದಿದೆ. ಆಧಾರ್ ಕಾರ್ಡ್ ಹಿಂದೆ ಉತ್ತಮ ಗುರುತಿನ ಚೀಟಿಯಾಗಿತ್ತು. ಈಗ ಅದೂ ಕೂಡ ತನ್ನ ಮಹತ್ವವನ್ನು ಕಳೆದುಕೊಂಡಿದೆ. ರೇಷನ್ ಕಾರ್ಡ್ ದೇಶಕ್ಕೆಲ್ಲ ಒಂದೇ ಮಾಡಿ ಅವರನ್ನು ಅದರ ಮೂಲಕ ಗುರುತಿಸಬಹುದು ಎಂದು ಕೇಂದ್ರ ಯೋಜಿಸಿತ್ತು. ಆದರೆ ಅದಕ್ಕೆ ರಾಜ್ಯಗಳ ಸಹಕಾರ ಸಿಗಲಿಲ್ಲ. ಪ್ರೋತ್ಸಾಹಧನ ನೀಡುವ ಮೂಲಕ ಎಲ್ಲ ವಲಸೆಗಾರರು ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳುವ ಹಾಗೆ ಮಾಡಿದರೆ ಮಾತ್ರ ಅವರ ಮೇಲೆ ಹಿಡಿತ ಸಾಧಿಸಬಹುದು.